ADVERTISEMENT

ಲಘು ತಿನಿಸಿನ ಆಹಾರ ವೈವಿಧ್ಯ

ನಳಪಾಕ

ವಿದ್ಯಾಶ್ರೀ ಎಸ್.
Published 23 ಸೆಪ್ಟೆಂಬರ್ 2016, 19:30 IST
Last Updated 23 ಸೆಪ್ಟೆಂಬರ್ 2016, 19:30 IST
ಲಘು ತಿನಿಸಿನ ಆಹಾರ ವೈವಿಧ್ಯ
ಲಘು ತಿನಿಸಿನ ಆಹಾರ ವೈವಿಧ್ಯ   

ಬೆಂಗಳೂರಿನ ಐಟಿಸಿ ಮೈ ಫಾರ್ಚೂನ್‌ನಲ್ಲಿ ಸೌಸ್‌ ಶೆಫ್‌ ಆಗಿ ಕೆಲಸ ಮಾಡುತ್ತಿರುವ ಮನೋಜ್‌ ಸಿಂಗ್‌ ಯುರೋಪಿಯನ್‌ ಅಡುಗೆಶೈಲಿಯಲ್ಲಿ ಪಳಗಿದವರು. ಪಾಕಶಾಸ್ತ್ರ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವವನ್ನು ಇವರು ಹೊಂದಿದ್ದಾರೆ. ಮೆಡಿಟರೇನಿಯನ್‌ ಖಾದ್ಯಗಳನ್ನು ತಯಾರಿಸುವಲ್ಲಿ ಇವರು ಪರಿಣತರು.

ಮೆಕ್ಸಿಕೊ ಮತ್ತು ಇಂಡಿಯನ್‌ ರುಚಿಯ ಸಮ್ಮಿಳಿತವನ್ನು ಹೊಂದಿರುವ ಲಘು ಉಪಾಹಾರಗಳಾದ ಕಾಠೀಸ್‌ ಮತ್ತು ರ್‍ಯಾಪ್ಸ್‌ ರೆಸಿಪಿಯನ್ನು ಇವರು ಪರಿಚಯಿಸಿದ್ದಾರೆ.

ಮೆಕ್ಸಿಕೊ ಮತ್ತು ಭಾರತದಲ್ಲಿ ಒಂದೇ ಬಗೆಯ ವಾತಾವರಣವಿದೆ. ಜೊತೆಗೆ ಅಲ್ಲಿಯವರು ಕೂಡ ನಮ್ಮಂತೆ ಅಡುಗೆಗೆ ಕೊತ್ತಂಬರಿ ಮತ್ತು ಜೀರಿಗೆಯನ್ನು ಬಳಸುತ್ತಾರೆ. ಈ ಎರಡು ದೇಶದ ಜನರು ಸವಿಯುವ ಆಹಾರದಲ್ಲಿ ಸಾಕಷ್ಟು ಸಾಮ್ಯತೆಯಿದೆ. ಹಾಗಾಗಿ ಈ ಎರಡು ದೇಶದ ಆಹಾರದ ಸಮ್ಮಿಳಿತವನ್ನು ರ್‍ಯಾಪ್ಸ್‌ ಮತ್ತು ಕಾಠೀಸ್‌ನಲ್ಲಿ ಪರಿಚಯಿಸಲಾಗಿದೆ ಎನ್ನುವ ಇವರು ಅದರ ರೆಸಿಪಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
  
ಮುರ್ಗ್‌ ಕುರಚನ್‌ ಕಾಠಿ
ಬೇಕಾಗುವ ಪದಾರ್ಥಗಳು: 
ಎಣ್ಣೆ 30 ಎಂಎಲ್‌, ಜೀರಿಗೆ 2 ಗ್ರಾಂ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ 15 ಗ್ರಾಂ, ಕತ್ತರಿಸಿದ ಈರುಳ್ಳಿ 30 ಗ್ರಾಂ, ಟೊಮೆಟೊ ಗ್ರೇವಿ 50 ಗ್ರಾಂ, ಉಪ್ಪು 3 ಗ್ರಾಂ, ಅಚ್ಚಖಾರದ ಪುಡಿ 3 ಗ್ರಾಂ, ಬೇಯಿಸಿದ ಚಿಕ್ಕ ಕೋಳಿ ತುಂಡುಗಳು 150 ಗ್ರಾಂ, ಕತ್ತರಿಸಿದ ಕೊತ್ತಂಬರಿ ಸೊಪ್ಪು 10 ಗ್ರಾಂ, ಕತ್ತರಿಸಿದ ಟೊಮೆಟೊ ಮತ್ತು ಕ್ಯಾಪ್ಸಿಕಂ 30 ಗ್ರಾಂ, ರುಮಾಲಿ ರೋಟಿ ಒಂದು, ಮೊಟ್ಟೆ ಒಂದು, ಪುದೀನಾ ಚಟ್ನಿ 50 ಎಂಎಲ್.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಬಿಸಿ ಆದ ನಂತರ ಜೀರಿಗೆ, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌, ಕತ್ತರಿಸಿದ ಈರುಳ್ಳಿ, ಟೊಮೆಟೊ, ಉಪ್ಪು, ಖಾರದ ಪುಡಿ ಹಾಕಬೇಕು. ಇದು ಫ್ರೈ ಆದ ನಂತರ ಚಿಕನ್‌, ಕೊತ್ತಂಬರಿ ಮತ್ತು ಟೊಮೆಟೊ ಗ್ರೇವಿಯನ್ನು ಹಾಕಬೇಕು. ಕೊನೆಯಲ್ಲಿ ತೆಳುವಾಗಿ ಕತ್ತರಿಸಿದ ಟೊಮೆಟೊ ಮತ್ತು ಕ್ಯಾಪ್ಸಿಕಂ ಅನ್ನು ಇದಕ್ಕೆ ಸೇರಿಸಬೇಕು. ಈ ಮಿಶ್ರಣವನ್ನು ರೊಮಾಲಿ ರೋಟಿಯ ರೋಲ್‌ ಒಳಗೆ ತುಂಬಬೇಕು. ಇದನ್ನು ಗ್ರಿಲ್‌ ಮಾಡಬೇಕು. ಸಲಾಡ್‌ ಮತ್ತು ಪುದೀನಾ ಚಟ್ನಿಯೊಂದಿಗೆ ಇದನ್ನು ಸವಿದರೆ ರುಚಿಯಾಗಿರುತ್ತದೆ.

ವಿಂಟರ್‌ ವೆಗ್ಗಿ ಡಿಲೈಟ್‌ 
ಬೇಕಾಗುವ ಪದಾರ್ಥಗಳು: 
ಟೊರ್‌ಟಿಲಾ ಎರಡು, ಹುರಿದ ತರಕಾರಿಗಳು 120 ಗ್ರಾಂ, ಹೂಕೋಸಿನ ಎಲೆ ಎರಡು, ಕಾಜುನ್ ಮಸಾಲೆ 5 ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು, ಹುಳಿಯಾದ ಕ್ರೀಮ್‌ 50 ಎಂ.ಎಲ್, ಟೊಮೆಟೊ ಸಾಲ್ಸಾ 100 ಗ್ರಾಂ.

ಮಾಡುವ ವಿಧಾನ; ಕಾಜುನ್ ಮಸಾಲೆಯೊಂದಿಗೆ ತರಕಾರಿಗಳನ್ನು ಸ್ವಲ್ಪ ಹೊತ್ತು ಮಿಕ್ಸ್‌ ಮಾಡಿ ಇಡಬೇಕು. ಇದನ್ನು ಗ್ರಿಲ್‌ ಮಾಡಬೇಕು. ನಂತರ ಓವನ್‌ನಲ್ಲಿ ಹುರಿಯಬೇಕು. ಟೊರ್ಟಿಲಾವನ್ನು ಬಿಸಿ ಮಾಡಿಕೊಳ್ಳಬೇಕು. ತರಕಾರಿಗಳನ್ನು ಹೂಕೋಸಿನ ಎಲೆಯ ಮೇಲೆ ಹರಡಬೇಕು. ಇದರ ಮೇಲೆ ಹುಳಿ ಕ್ರೀಮ್‌ ಹಾಕಬೇಕು. ಟೊರ್ಟಿಲಾದ ಒಳಗೆ ಈ ಮಿಶ್ರಣವನ್ನು ಹಾಕಿ ರೋಲ್‌ ಮಾಡಬೇಕು. ಟೊಮೆಟೊ ಸಾಲ್ಸ ಜೊತೆಗೆ ಬಿಸಿಯಾಗಿ ತಿನ್ನಲು ಇದು ರುಚಿಯಾಗಿರುತ್ತದೆ.

ಚಿಕ್ಕನ್‌ ಹವಾಯಿನ್‌ ರ‍್ಯಾಪ್‌ 
ಬೇಕಾಗುವ ದಾರ್ಥಗಳು: ಬೋನ್‌ಲೆಸ್‌ ಕೋಳಿಯ ಎದೆಯ ಭಾಗ 150 ಗ್ರಾಂ, ಅನಾನಸ್‌ ತುಂಡುಗಳು 30 ಗ್ರಾಂ, ಬೆಲ್‌ ಪೆಪ್ಪರ್‌ 50 ಗ್ರಾಂ, ಕತ್ತರಿಸಿದ ಈರುಳ್ಳಿ ಒಂದು, ಮಯೋನೈಸ್‌ ಕ್ರೀಮ್‌ 20 ಗ್ರಾಂ, ಟೊಮೆಟೊ ಸಾಲ್ಸ 100 ಗ್ರಾಂ, ರಿಫೈಂಡ್‌ ಫ್ಲೋರ್‌ ಟೋರ್ಟಿಲಾ 2, ಉಪ್ಪು ರುಚಿಗೆ ತಕ್ಕಷ್ಟು, ಬಿಳಿ ಕಾಳುಮೆಣಸಿನ ಪುಡಿ ಒಂದು ಗ್ರಾಂ.

ಮಾಡುವ ವಿಧಾನ: ಕೋಳಿಮಾಂಸವನ್ನು ಬೇಯಿಸಿ ಅದು ತಣ್ಣಗಾಗಲು ಬಿಡಬೇಕು. ಒಂದೇ ಆಕಾರಕ್ಕೆ ಈ ತುಂಡುಗಳನ್ನು ಕತ್ತರಿಸಬೇಕು. ಇದಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿ, ಅನಾನಸ್‌ ಹೋಳು, ಕ್ಯಾಪ್ಸಿಕಂ, ಈರುಳ್ಳಿ ಮತ್ತು ಮಯೋನೈಸ್‌ ಕ್ರೀಮ್‌ ಹಾಕಿ ಚೆನ್ನಾಗಿ ಕಲಸಬೇಕು.

ಕೋಳಿತುಂಡುಗಳೊಂದಿಗೆ ಈ ಮಿಶ್ರಣ ಚೆನ್ನಾಗಿ ಬೆರೆಯುವವರೆಗೂ ಕಲಸಬೇಕು. ಹೂಕೋಸಿನ ಎಲೆಯ ಮೇಲೆ ಈ ಮಿಶ್ರಣವನ್ನು ಹಾಕಿ ಟೊರ್ಟಿಲಾವನ್ನು ರೋಲ್‌ ಮಾಡಬೇಕು. ಟೊಮೆಟೊ ಸಾಲ್ಸ ಜೊತೆಗೆ  ಇದು ತಿನ್ನಲು ಹಿತವಾಗಿರುತ್ತದೆ.

ರ‍್ಯಾಪ್‌ಗಳನ್ನು ತಯಾರಿಸುವುದು ಹೀಗೆ...
*ರೋಲ್‌ಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.
*ಮೈದಾ, ಆಲ್‌ಪರ್ಪಸ್‌ ಹಿಟ್ಟು, ಜೋಳದ ಗಂಜಿ, ರುಚಿಗೆ ತಕ್ಕಷ್ಟು ಉಪ್ಪನ್ನು ನೀರಿನಲ್ಲಿ ಕಲಸಿಕೊಳ್ಳಬೇಕು. ಇದು ದೋಸೆಯ ಹದಕ್ಕಿಂತ ತೆಳುವಾಗಿರಬೇಕು. ಈ ಹಿಟ್ಟನ್ನು ತವಾದ ಮೇಲೆ ಹುಯ್ಯಬೇಕು. ಇದು ಬೆಂದ ನಂತರ ತಣ್ಣಗಾಗುವವರೆಗೂ ತೆಗೆದಿಡಬೇಕು. ನಂತರ ಚಿಕನ್‌ ಅಥವಾ ತರಕಾರಿಗಳಿಂದ ತಯಾರಿಸಿಕೊಂಡಿರುವ ಫಿಲ್ಲಿಂಗ್‌ಗಳನ್ನು ಅದರ ಒಳಗೆ ತುಂಬಬೇಕು.  ರೋಲ್‌ಗಳನ್ನು ಸರಿಯಾದ ಹದಕ್ಕೆ ತಯಾರಿಸಿಕೊಳ್ಳಬೇಕು. ಇಲ್ಲದಿದ್ದರೆ ಅದು ಒಡೆಯುವ ಸಾಧ್ಯತೆ ಇರುತ್ತದೆ.
* ರ‍್ಯಾಪ್ಸ್ ಮತ್ತು ರೋಲ್ಸ್‌ಗಳು ಟೊಮೆಟೊ ಮತ್ತು ಚಿಲ್ಲಿ ಸಾಸ್‌ಗಳೊಂದಿಗೆ ಸವಿಯಲು ರುಚಿಯಾಗಿರುತ್ತದೆ.
* ಎಲ್ಲಾ ತರಕಾರಿಗಳು ಇರುವುದರಿಂದ ಡಯೆಟ್‌ ಮಾಡುವವರಿಗೂ ಇದು ಹೇಳಿಮಾಡಿಸಿದ ತಿನಿಸು. ಇದನ್ನು ಹೆಚ್ಚು ಸೇವಿಸದಿರುವುದು ಒಳಿತು.
*ನಿಮ್ಮಗಿಷ್ಟವಾದ ತರಕಾರಿಗಳನ್ನು ಬಳಸಿ ರೋಲ್‌ ಮಾಡಬಹುದು. ಮಕ್ಕಳಿಗೂ ಇಷ್ಟವಾಗುವಂತೆ ಇದನ್ನು ಅಲಂಕರಿಸಬಹುದು.
*ಸಂಜೆ ವೇಳೆ ಟೀ ಜೊತೆಗೆ ಸವಿಯಲು ಹಿತವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT