ADVERTISEMENT

ಸಿರಿಧಾನ್ಯ ಆಹಾರ ವೈವಿಧ್ಯ

​ಪ್ರಜಾವಾಣಿ ವಾರ್ತೆ
Published 26 ಮೇ 2017, 19:30 IST
Last Updated 26 ಮೇ 2017, 19:30 IST
ಸಿರಿಧಾನ್ಯ ಆಹಾರ ವೈವಿಧ್ಯ
ಸಿರಿಧಾನ್ಯ ಆಹಾರ ವೈವಿಧ್ಯ   

ಸಿಹಿ ಪೊಂಗಲ್‌
ಬೇಕಾದ ಪದಾರ್ಥಗಳು: ಹೆಸರುಬೇಳೆ –125 ಗ್ರಾಂ, ಅಕ್ಕಿ 250 ಗ್ರಾಂ (ನವಣೆ, ಸಾಮೆ, ಆರ್ಕ) ಬೆಲ್ಲ–200ಗ್ರಾಂ, ತುಪ್ಪ– 5ಚಮಚ, ಏಲಕ್ಕಿ–3, ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ, ಕೊಬ್ಬರಿ ತುರಿ ಸ್ವಲ್ಪ.

ವಿಧಾನ: ಹೆಸರುಬೇಳೆ ಮತ್ತು ಅಕ್ಕಿಯನ್ನು ಹುರಿದುಕೊಂಡು, ತೊಳೆದ ನಂತರ ಒಂದಕ್ಕೆ ಮೂರರಷ್ಟು ನೀರು ಹಾಕಿ ಬೇಯಿಸಿಕೊಳ್ಳಬೇಕು, ಬೆಲ್ಲವನ್ನು ಒಂದು ಕಪ್  ನೀರಿಗೆ ಹಾಕಿ  ಕರಗಿಸಿ, ಸೋಸಿಕೊಳ್ಳಬೇಕು, ನಂತರ ಬೇಯಿಸಿದ ಬೇಳೆ, ಅಕ್ಕಿಯನ್ನು ಬೆಲ್ಲದ ನೀರಿಗೆ  ಹಾಕಿ ಬೇಯಿಸಿ.

ಒಂದು ಬಟ್ಟಲಿಗೆ ತುಪ್ಪಹಾಕಿ, ಕಾದ ತುಪ್ಪಕ್ಕೆ ದ್ರಾಕ್ಷಿ, ಗೋಡಂಬಿ ಹಾಕಿ  ಹುರಿದು ಪೊಂಗಲ್‌ಗೆ ಹಾಕಿ. ಹಾಗೆಯೇ, ಏಲಕ್ಕಿ ಪುಡಿ, ಕೊಬ್ಬರಿ ತುರಿ ಹಾಕಿ ಬೆರೆಸಿದರೆ ರುಚಿಯಾದ ಸಿಹಿ ಪೊಂಗಲ್ ತಯಾರು.

ADVERTISEMENT

**

ರಾಗಿಹುಳಿ–ಸಿಹಿ ಪಾನೀಯ
ಬೇಕಾಗುವ ಪದಾರ್ಥಗಳು:
2 ಟೇಬಲ್ ಚಮಚ ರಾಗಿಹಿಟ್ಟು, ಒಂದು ಟೇಬಲ್ ಚಮಚ ಹುಣಸೆ ರಸ, ಒಂದು ಟೇಬಲ್ ಚಮಚ ಬೆಲ್ಲ, ಕಾಲು ಟೀ ಚಮಚ ಏಲಕ್ಕಿ ಪುಡಿ

ವಿಧಾನ: ಈ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಒಂದು ಬಟ್ಟಲು ನೀರಿಗೆ ಹಾಕಿ ಮಿಶ್ರಣ ಮಾಡಿ ಉಪಯೋಗಿಸಬಹುದು. ಇದು ಹುಳಿ ಮಿಶ್ರಿತ ರುಚಿ
ಹೊಂದಿರುತ್ತದೆ.

**

ನವಣೆ ಉಪ್ಪಿಟ್ಟು

ಬೇಕಾದ ಪದಾರ್ಥಗಳು: ಹುರಿದ ರವೆ–250 ಗ್ರಾಂ (ನವಣೆ, ಸಾಮೆ, ಜೋಳ ಮತ್ತು ಆರ್ಕ ರವೆ), ಈರುಳ್ಳಿ–2, ಟೊಮೆಟೊ–1, ಹಸಿಮೆಣಸಿನಕಾಯಿ–2 ಅಥವಾ 3, ಬೀನ್ಸ್ –10, ಕ್ಯಾರೆಟ್–1, ಬಟಾಣಿ–ಸಣ್ಣಕಪ್, ಎಣ್ಣೆ,ತುಪ್ಪ –2–3ಸ್ಪೂನ್, ಮೆಂತ್ಯೆ, ಕೊತ್ತಂಬರಿ, ಪುದೀನಾ, ಕರಿಬೇವು– ಎಲ್ಲವೂ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕಾಯಿತುರಿ.

ವಿಧಾನ: ಒಗ್ಗರಣೆಗೆ ಎಣ್ಣೆ ಇಟ್ಟು ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು, ಹಸಿಮೆಣಸಿನಕಾಯಿ, ಹಾಕಿ ಒಗ್ಗರಣೆ ಮಾಡಿ,
ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ, ಸಣ್ಣಗೆ ಕತ್ತರಿಸಿದ ತರಕಾರಿ, ಸೊಪ್ಪು ಹಾಕಿ ಬಾಡಿಸಿ ನಂತರ ಟೊಮೆಟೊ ಹಾಕಿ ಬಾಡಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.

ಆಮೇಲೆ ಎರಡೂವರೆ ಪ್ರಮಾಣದಲ್ಲಿ ನೀರನ್ನು ಹಾಕಿ ಕುದಿಸಿ ನಂತರ ಹುರಿದ ರವೆಯನ್ನು ಹಾಕಿ ತಿರುಗಿಸಿ, 5 ನಿಮಿಷ ಸಣ್ಣ ಉರಿಯಲ್ಲಿ ಇಡಿ. ನಂತರ ಕಾಯಿತುರಿ, ಕೊತ್ತಂಬರಿ ಸೊಪ್ಪು, ತುಪ್ಪ ಹಾಕಿದರೆ ರುಚಿ ಹಾಗೂ ಪೌಷ್ಟಿಕವಾದ ಉಪ್ಪಿಟ್ಟು ಸಿದ್ಧ.

**

ಪುಳಿಯೋಗರೆ

ಬೇಕಾದ ಪದಾರ್ಥಗಳು: ಉದುರುಉದುರಾಗಿರುವ ಅನ್ನ 1ಕಪ್ (ನವಣೆ, ಸಾಮೆ, ಆರ್ಕ), ಪುಳಿಯೋಗರೆ ಮಿಕ್ಸ್‌, ಅಗತ್ಯಕ್ಕೆ ತಕ್ಕಷ್ಟು ಇಂಗು, ಸಾಸಿವೆ, ಕರಿಬೇವು ಸ್ವಲ್ಪ, ಒಣ ಮೆಣಸಿನಕಾಯಿ–3, ಕೊಬ್ಬರಿತುರಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಎಳ್ಳು 2 ಟೀ ಚಮಚ, ಎಣ್ಣೆ–ಟೀ ಚಮಚ

ವಿಧಾನ: ಉದುರು ಉದುರಾಗಿ ಮಾಡಿದ ಅನ್ನ ಸಿದ್ಧಪಡಿಸಿಕೊಳ್ಳಿ.

ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಇಂಗು, ಒಣ ಮೆಣಸಿನಕಾಯಿ, ಕರಿಬೇವು, ಒಗ್ಗರಣೆ ಹಾಕಿ. ಎಣ್ಣೆಯಲ್ಲಿ ಶೇಂಗಾ ಬೀಜ ಕರಿದುಕೊಳ್ಳಿ, ನಂತರ ಪುಳಿಯೋಗರೆ ಮಿಕ್ಸ್, ಸ್ವಲ್ಪ ಸಾಂಬಾರ್ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಕೊಬ್ಬರಿತುರಿ, ಹುರಿದು ದಪ್ಪಗೆ ಮಾಡಿದ ಎಳ್ಳು ಇವೆಲ್ಲವನ್ನೂ ಅನ್ನಕ್ಕೆ ಹಾಕಿ ಚೆನ್ನಾಗಿ ಕಲಸಿದರೆ ರುಚಿಯಾದ ಪುಳಿಯೋಗರೆ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.