ADVERTISEMENT

ಹತ್ತಾರು ಅಡುಗೆ; ನೂರೆಂಟು ರುಚಿ!

ಉಮಾ ಅನಂತ್
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಅಡುಗೆ ಮಾಡುವುದು ಒಂದು ಕಲೆ. ತಾವು ಮಾಡಿದ ವಿಶೇಷ ಅಡುಗೆ ಮಾಡುವ ಬಗೆ ಜನರೊಂದಿಗೆ ಹಂಚಿಕೊಳ್ಳುವುದು ಹೇಗೆ..? ಇದಕ್ಕಾಗಿಯೇ ಅಡುಗೆ ಪುಸ್ತಕಗಳು ಬೇಕು.

ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಗಳಿಗೆ ಅಡುಗೆ ಬಗ್ಗೆ ಕೊಂಚ ಜ್ಞಾನವೂ ಇಲ್ಲ. ಆಗ ಆಕೆಗೆ ಅಡುಗೆ ಪುಸ್ತಕವೇ ನಿಜವಾದ ಗೈಡ್‌. ಇಂದಿನ ಧಾವಂತದ ಬದುಕಿನಲ್ಲಿ ಅಡುಗೆ ಮಾಡುತ್ತ ಕುಳಿತುಕೊಳ್ಳುವಷ್ಟು ಸಮಯವಿರುವುದಿಲ್ಲ. ಬೇಗ ಬೇಗ ಆಗುವಂಥ ಅಡುಗೆಗಳು ಯಾವವು? ದಿನಕ್ಕೊಂದು ಬಗೆ ಅಡುಗೆ ಮಾಡಬೇಕು, ರುಚಿಯೂ ಆಗಿರಬೇಕು, ಆರೋಗ್ಯವೂ ಕೆಡಬಾರದು. ಇಂಥ ಅಡುಗೆ ಮಾಡುವುದು ಹೇಗೆ? ಮನೆಯಲ್ಲಿ ಹತ್ತಾರು ಬಗೆ ತರಕಾರಿಗಳಿವೆ. ಇದರಲ್ಲಿ ಯಾವುದನ್ನು ಆಯ್ದುಕೊಂಡು ಏನು ಅಡುಗೆ ಮಾಡಬಹುದು? ಈ ಎಲ್ಲ ಪ್ರಶ್ನೆಗಳಿಗೆ ‘ಅಡುಗೆ ಬರಹಗಾರ್ತಿ’ ಲೀಲಾ ಮಂಜುನಾಥ್‌ ಒಟ್ಟು ಹತ್ತು ವಿಭಿನ್ನ ಪುಸ್ತಕ ಬರೆಯುವ ಮೂಲಕ ಅಡುಗೆ ಪ್ರಿಯರ ಗಮನ ಸೆಳೆದಿದ್ದಾರೆ.

ಹತ್ತು ಪುಸ್ತಕ; ನೂರಾರು ಅಡುಗೆ
‘ಮದುವೆ ಆಗಿ ಗಂಡನ ಮನೆ ಹೋದ ಹೊಸತರಲ್ಲಿ ಅನ್ನ ಸಾರು ಕೂಡ ಮಾಡಲು ಬರುತ್ತಿರಲಿಲ್ಲ. ಪತ್ರಿಕೆಗಳಲ್ಲಿ ಬರುತ್ತಿದ್ದ

ಹೊಸ ರುಚಿ ಓದುವುದು, ಪ್ರಯೋಗ ಮಾಡುವುದು. ಸುಮಾರು 15 ವರ್ಷಗಳಷ್ಟು ಹಿಂದಿನ ಕತೆ ಇದು. ಆಗ ನಾವು ರಾಜರಾಜೇಶ್ವರಿ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಮನೆಯ ಪಕ್ಕದಲ್ಲಿ ಇನ್ನೊಂದು ಮನೆ ನಿರ್ಮಾಣ ನಡೆಯುತ್ತಿತ್ತು.

ಅಲ್ಲಿನ ಕೂಲಿ ಕಾರ್ಮಿಕ ಮಕ್ಕಳಿಗೆ ಮನೆಯಲ್ಲಿದ್ದ ತಿಂಡಿ ಕೊಡಲೆಂದು ಹೋದಾಗ ಆಯ ತಪ್ಪಿ ಐದಾರು ಅಡಿ ಎತ್ತರದಿಂದ ಜಾರಿ ಬಿದ್ದೆ. ಬೆನ್ನಿಗೆ ಬಲವಾಗಿ ಏಟು ಬಿತ್ತು. ಈ ನೋವನ್ನು ಸುಧಾರಿಸಿಕೊಂಡ ಒಂದೆರಡು ವಾರಗಳಲ್ಲಿ ಮತ್ತೊಂದು ಆಘಾತ. ಗೆಳತಿಯೊಬ್ಬಳ ಮನೆಗೆ ಹೋಗಿ ಹಿಂದಿರುಗುತ್ತಿದ್ದಾಗ ಸಂಜೆ ಕಳ್ಳನೊಬ್ಬ ಕತ್ತಿಗೆ ಕೈಹಾಕಿ ಸರ ಎಳೆಯಲು ಯತ್ನಿಸಿದ.

ಅವನ ಕಪಾಳಕ್ಕೆ ಒಂದು ಹೊಡೆದಾಗ ಆತ ನನ್ನನ್ನು ತಳ್ಳಿದ. ಆ ರಭಸಕ್ಕೆ ನಾನು ಬಂಡೆಯ ಮೇಲೆ ಅಂಗಾತ ಬಿದ್ದೆ.

ಪರಿಣಾಮ ಸ್ಲಿಪ್‌ ಡಿಸ್ಕ್‌. ವೈದ್ಯರ ಭೇಟಿ, ಆಸ್ಪತ್ರೆ ಅಲೆದಾಟ ಶುರು. ಒಂದು ಸಣ್ಣ ಸರ್ಜರಿಯೂ ಆಯಿತು. ಆರು ತಿಂಗಳು ಹಾಸಿಗೆಯಲ್ಲೇ ಇದ್ದೆ. ಆಗ ಗಂಡ, ಮಗನಿಗೆ ಊಟಕ್ಕೆ ಏನು ಮಾಡುವುದು ಎಂಬ ಚಿಂತೆ. ನಾನು ಗಂಡನಿಗೆ ಹೇಳಿದ್ದಿಷ್ಟು. ನನಗೆ ಗೊತ್ತಿರುವ ಅಡುಗೆ ಬರೆದು ಕೊಡುತ್ತೇನೆ. ನೀವು ಮಾಡಿ’ ಎಂದು. ಅಲ್ಲಿಂದ ಸಿಂಪಲ್‌ ಅಡುಗೆ ಮಾಡುವುದು ಹೇಗೆ ಎಂಬುದನ್ನು ಬರೆಯಲಾರಂಭಿಸಿದೆ. ನಾಲ್ಕು ರೆಸಿಪಿ ಬರೆದು ಮಕ್ಕಳಿಗೆ ತೋರಿಸಿದಾಗ ‘ಇನ್ನೂ ಡಿಟೈಲ್‌ ಆಗಿ ಬರೆ’ ಎಂದರು. ಬರೆಯುವುದು, ಹರಿದು ಹಾಕುವುದು.. ಹೀಗೆ ಮಾಡಿ ಮಾಡಿ ಪುಸ್ತಕ ಬರೆಯುವಷ್ಟು ರೆಸಿಪಿ ಬರೆದೆ.

ಬರಹ ಒಂದು ಹಿಡಿತಕ್ಕೆ ಬಂತು. ಹೊಸ ಹೊಸ ಅಡುಗೆ ಕಲಿತೆ. ಅದಕ್ಕೊಂದು ಪುಸ್ತಕ ರೂಪ ಕೊಟ್ಟೆ. ನನಗೆ ಚಿಕಿತ್ಸೆ

ADVERTISEMENT

ನೀಡಿದ ಡಾ. ಜನಾರ್ದನ್‌ ಅವರ ಬಳಿ ನನ್ನ ಚೊಚ್ಚಿಲ ಪುಸ್ತಕ ‘30 ದಿನಕ್ಕೆ 300 ಬಗೆ ಅಡುಗೆ’ ಅನ್ನು ಬಿಡುಗಡೆ ಮಾಡಿಸಿದೆ. ಆಮೇಲೆ ನಾನು ಹಿಂತಿರುಗಿ ನೋಡಲಿಲ್ಲ. ಅದರ ಪರಿಣಾಮ ಇದೀಗ ಎಲ್ಲವೂ ವಿಭಿನ್ನವಾಗಿರುವ ಅಡುಗೆಗಳ ಪುಸ್ತಕ. ಬ್ಯಾಚುಲರ್ಸ್ ಭೋಜನ, ಬ್ರೇಕ್‌ಫಾಸ್ಟ್‌ ಮತ್ತು ಸ್ನ್ಯಾಕ್ಸ್ ಸ್ಪೆಷಲ್‌, ಚಟ್‌ಪಟ್‌ ಅಡುಗೆ, ಸಿಂಪಲ್‌ ಚಾಟ್ಸ್ ಮತ್ತು ಜ್ಯೂಸ್‌, ಗ್ರೇವಿ ಖಜಾನ, ಒನ್‌ಸ್ಪೂನ್‌ ಆಯಿಲ್‌ ಅಡುಗೆಗಳು, ದಿನಕ್ಕೊಂದು ರೈಸ್‌ಬಾತ್‌, ನೂರೊಂದು ಸಾಂಬಾರ್‌ ಸ್ಪೆಷಲ್, 101 ತರಕಾರಿ, ನೂರಾರು ಅಡುಗೆ...’ ಹೀಗೆ ಒಟ್ಟು 10 ಪುಸ್ತಕ ಬರೆದೆ.’ ಇದು ಲೀಲಾ ಮಂಜುನಾಥ್‌ ಅವರು ಅಡುಗೆ ಪುಸ್ತಕ ಬರೆಯಲು ಕಾರಣವಾದ ಬಗೆಯನ್ನು ವಿವರಿಸಿದ ರೀತಿ.

ಲೇಖಕರಾಗಿರುವ ಪತಿ ಹರಿಹರಪುರ ಮಂಜುನಾಥ್‌ ಅವರ ಪ್ರೋತ್ಸಾಹವೂ ಈ ಎಲ್ಲ ವೈವಿಧ್ಯಮಯ ಪುಸ್ತಕ ರಚನೆಗೆ ಸಹಕಾರಿಯಾಯಿತು. ಎಲ್ಲ ಪುಸ್ತಕಗಳು ಅಡುಗೆ ಪ್ರಿಯರಿಗೆ, ಹೊಸದಾಗಿ ಕಲಿಯುವವರಿಗೆ, ಮದುವೆಯಾಗಿ ಗಂಡನ ಮನೆಗೆ ಹೋಗುವವರಿಗೆ, ದಿನ ದಿನವೂ ರುಚಿರುಚಿಯಾಗಿ ತಿನ್ನಬೇಕು

ಎನ್ನುವವರಿಗೆ  ಉಪಯುಕ್ತವಾಗಿದೆ ಎನ್ನುತ್ತಾರೆ ಅವರು.
(ಮಾಹಿತಿಗೆ:- 9945710003)

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.