ADVERTISEMENT

ಹೊಸ ವರ್ಷಕ್ಕೆ ರುಚಿಕರ ಕೇಕ್

ನಮ್ಮೂರ ಊಟ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2015, 19:30 IST
Last Updated 25 ಡಿಸೆಂಬರ್ 2015, 19:30 IST
ಫ್ರೂಟ್ ಕೇಕ್
ಫ್ರೂಟ್ ಕೇಕ್   

ಹೊಸ ವರ್ಷದ ಆಚರಣೆಗೆ ಕೇಕ್‌ ಇದ್ದರೇ ಚೆಂದ. ಬೇಕರಿಯಲ್ಲಿ ಸಿಗುವ ಕೇಕ್‌ಗಳನ್ನು ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ತಯಾರಿಸಿದರೆ ಅದರ ಮಜವೇ ಬೇರೆ. ಸುಲಭದಲ್ಲಿ ತಯಾರಿಸಬಹುದಾದ ಕೆಲವು ಕೇಕ್‌ಗಳ ರೆಸಿಪಿಗಳನ್ನು ನೀಡಿದ್ದಾರೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಬೇಕರಿ ಹಾಗು ಮೌಲ್ಯವರ್ಧನಾ ಕೇಂದ್ರದ ಡಾ. ಎಸ್. ಶಂಷಾದ್ ಬೇಗಂ.

ಫ್ರೂಟ್ ಕೇಕ್
ಸಾಮಗ್ರಿ: ಮೈದಾ 150 ಗ್ರಾಂ, ಸಕ್ಕರೆ ಪುಡಿ 100 ಗ್ರಾಂ, ವನಸ್ಪತಿ 100 ಗ್ರಾಂ, ಬೇಕಿಂಗ್ ಪುಡಿ ಕಾಲು ಟೀ ಚಮಚ, ಮೊಟ್ಟೆ 2, ಕಾಫಿಪುಡಿ 1 ಟೇಬಲ್‌ ಚಮಚ, ವೆನಿಲ್ಲಾ ಎಸೆನ್ಸ್‌ ಕೆಲವು ಹನಿಗಳು, ಕ್ಯಾರಮಲ್ 2 ಟೇಬಲ್ ಚಮಚ, ಮಿಕ್ಸಡ್ ಸ್ಪೈಸ್ ಕಾಲು ಟೇಬಲ್‌ ಚಮಚ, ನಿಂಬೆ ಹಣ್ಣಿನ ಸಿಪ್ಪೆಪುಡಿ ಕಾಲು ಟೇಬಲ್‌ ಚಮಚ, ನಿಂಬೆ ಹಣ್ಣಿನ ರಸ 1ದೂಡ್ಡ ಚಮಚ, ಬೇಕಿಂಗ್ ಪುಡಿ ಕಾಲು ಟೇಬಲ್‌ ಚಮಚ, ಉಪ್ಪು 1 ಚಮಚ, ಒಣ ಹಣ್ಣುಗಳು (ಚೆರ್ರಿ, ದ್ರಾಕ್ಷಿ, ಗೋಡಂಬಿ. ಟುಟಿ ಫ್ರೂಟಿ) 250 ಗ್ರಾಂ. 

ವಿಧಾನ: ದ್ರಾಕ್ಷಿ, ಚೆರ್ರಿ ಹಾಗೂ ಟುಟಿ ಪ್ರೂಟಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯರಿ ನೀರನ್ನು ಬೇರ್ಪಡಿಸಿ ಒಂದು ಪಾತ್ರೆಯಲ್ಲಿ ನಿಂಬೆ ಹಣ್ಣಿನ ರಸ ಹಾಗೂ ಮಿಕ್ಸಡ್ ಸ್ಪೈಸ್‌ಅನ್ನು ಬೆರೆಸಿ ಚೆನ್ನಾಗಿ ಮಿಶ್ರಮಾಡಿ ಒಂದು ರಾತ್ರಿ ಇಡಿ. ಮೈದಾ ಹಿಟ್ಟು, ಉಪ್ಪು ಮತ್ತು ಬೇಕಿಂಗ್ ಪುಡಿಯನ್ನು ಜೊತೆಯಲ್ಲಿ ಚೆನ್ನಾಗಿ ಜರಡಿ ಮಾಡಿ. ಇದ್ದಕೆ ಚೂರು ಮಾಡಿದ ಹಣ್ಣುಗಳನ್ನು ಸೇರಿಸಿ ಚೆನ್ನಾಗಿ ಬೆರಸಿ ಗೋಡಂಬಿ ಸಹ ಬೆರೆಸಿ.

ಮೊಟ್ಟೆ ಹಾಗೂ ವೆನಿಲ್ಲಾ ಎಸೆನ್ಸ್‌ಅನ್ನು ಚೆನ್ನಾಗಿ ಕಲಿಸಿಕೊಳ್ಳಿ. ವನಸ್ಪತಿಯನ್ನು ಸಾಟಿಮಾಡಿ ನಂತರ ಸ್ವಲ್ಪ ಸ್ವಲ ಪ್ರಮಾಣದಲ್ಲಿ ಸಕ್ಕರೆ ಪುಡಿಯನ್ನು ಬೆರೆಸಿ ಸಾಟಿಮಾಡಿ, ತದನಂತರ  ಕಲೆಸಿದ ಮೊಟ್ಟೆಯನ್ನು ಸ್ವಲ್ಪ ಸ್ವಲ್ಪವಾಗಿ ಸಾಟಿಯೊಳಗೆ ಸೇರಿಸಿ ಚೆನ್ನಾಗಿ ಬೆರಸಿ.  ಇದ್ದಕೆ  ಮೈದಾ ಮಿಶ್ರಣವನ್ನು ಸಾಟಿ ಜೊತೆ ಬೆರೆಸಿ. ಕಾಫಿಪುಡಿ ಮತ್ತು ಕ್ಯಾರಮಲ್‌ಗಳನ್ನು ಸೇರಿಸಿ ಬೆರೆಸಿ. ಹೀಗೆ ಬೆರೆಸಿದ ಮಿಶ್ರಣವನ್ನು ಸ್ವಲ್ಪ ವನಸ್ಪತಿ ಸವರಿ ಬಟರ್ ಪೇಪರ್ ಹಾಕಿದ ಕೇಕ್ ತಟ್ಟೆಯಲ್ಲಿ ಹಾಕಿ  ಮೈಕ್ರೋ ಓವನ್‌ನಲ್ಲಿ 160ಡಿಗ್ರಿ ಸೆಲ್ಸಿಯಸ್‌ ಶಾಖದಲ್ಲಿ ಸುಮಾರು ಒಂದು ಗಂಟೆ ಬೇಯಿಸಿ. ಸಂಪೂರ್ಣವಾಗಿ ತಣ್ಣಗಾದ ನಂತರ ಫ್ರುಟ್ ಕೇಕ್‌ನ್ನು ಕತ್ತರಿಸಿ ಸೇವಿಸಿ.
***
ಬಾಳೆಹಣ್ಣಿನ ಕೇಕ್
ಸಾಮಗ್ರಿ: ಮೈದಾ 220 ಗ್ರಾಂ, ಸಕ್ಕರೆ ಪುಡಿ 220 ಗ್ರಾಂ, ವನಸ್ಪತಿ150  ಗ್ರಾಂ, ಬೇಕಿಂಗ್ ಪುಡಿ ಅರ್ಧ ಟೀ ಚಮಚ, ಮೊಟ್ಟೆ 2, ಹಾಲು  100ಎಂ.ಎಲ್‌, ಬಾಳೆಹಣ್ಣಿನ ಎಸೆನ್ಸ್‌ ಕೆಲವು ಹನಿಗಳು, ಮಿಕ್ಸಡ್ ಸ್ಪೈಸ್‌ ಕಾಲು ಟೀ ಚಮಚ, ಬೇಕೀಂಗ್ ಸೋಡ ಕಾಲು ಟೀ ಚಮಚ, ಗೋಡಂಬಿ 50 ಗ್ರಾಂ, ಬಾಳೆಹಣ್ಣು 1.

ವಿಧಾನ: ಮೈದಾ ಹಿಟ್ಟು ಮತ್ತು ಬೇಕಿಂಗ್ ಪುಡಿಯನ್ನು ಜೊತೆಯಲ್ಲಿ ಚೆನ್ನಾಗಿ ಜರಡಿ ಹಿಡಿಯಿರಿ. ಮೊಟ್ಟೆ ಹಾಗೂ ಬಾಳೆಹಣ್ಣಿನ ಎಸೆನ್ಸ್‌ಅನ್ನು ಚೆನ್ನಾಗಿ ಕಲೆಸಿಕೊಳ್ಳಿ. ವನಸ್ಪತಿ ಹಾಗೂ ಸಕ್ಕರೆ ಪುಡಿಯನ್ನು, ಬೇಕಿಂಗ್ ಸೋಡ ಜೊತೆ ಚೆನ್ನಾಗಿ ಸಾಟಿಮಾಡಿ. ನಂತರ ಕಲೆಸಿದ ಮೊಟ್ಟೆಯನ್ನು ಸ್ವಲ್ಪ ಸ್ವಲ್ಪವಾಗಿ ಸಾಟಿಯೊಳಗೆ ಸೇರಿಸಿ ಚೆನ್ನಾಗಿ ಬೇರಸಿ. ಬಾಳೆಹಣ್ಣನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ಮೈದಾ ಹಿಟ್ಟಿನ ಜೊತೆ ಮಿಶ್ರ ಮಾಡಿ ಇದನ್ನು ಸಾಟಿ ಜೊತೆ ಸೇರಿಸಿ, ಗೋಡಂಬಿ ಚೂರುಗಳನ್ನು ಮಿಶ್ರ ಮಾಡಿ. ಹೀಗೆ ಬೆರೆಸಿದ ಮಿಶ್ರಣವನ್ನು ಸ್ವಲ್ಪ ವನಸ್ಪತಿ ಸವರಿ ಬಟರ್ ಪೇಪರ್ ಹಾಕಿದ ಕೇಕ್ ತಟ್ಟೆಯಲ್ಲಿ ಹಾಕಿ. ಮೈಕ್ರೋ ಓವನ್‌ನಲ್ಲಿ 160ಡಿಗ್ರಿಯಿಂದ 170 ಡಿಗ್ರಿ ಸೆಲ್ಸಿಯಸ್‌ ಶಾಖದಲ್ಲಿ 25ರಿಂದ 30 ನಿಮಿಷಗಳ ಕಾಲ ಬೇಯಿಸಿ. ಸಂಪೂರ್ಣವಾಗಿ ತಣ್ಣಗಾದ ನಂತರ ಬಾಳೆಹಣ್ಣಿನ ಕೇಕ್‌ನ್ನು ಕತ್ತರಿಸಿ ಸೇವಿಸಿ.
***
ಚಾಕಲೇಟ್ ಬ್ರೌನೀಸ್
ಸಾಮಗ್ರಿ:
ಮೈದಾ 300 ಗ್ರಾಂ, ಸಕ್ಕರೆ ಪುಡಿ 300ಗ್ರಾಂ, ವನಸ್ಪತಿ 270 ಗ್ರಾಂ, ಬೇಕಿಂಗ್ ಪುಡಿ ಅರ್ಧ ಟೀ ಚಮಚ, ಮೊಟ್ಟೆ 5, ಹಾಲಿನ ಪುಡಿ 30ಗ್ರಾಂ, ವೆನಿಲ್ಲಾ ಎಸೆನ್ಸ್‌ ಕೆಲವು ಹನಿಗಳು, ಬೇಕಿಂಗ್ ಸೋಡ ಅರ್ಧ ಟೀ ಚಮಚ, ಗೋಡಂಬಿ 150 ಗ್ರಾಂ, ಉಪ್ಪು ಒಂದು ಚಿಟಿಕೆ, ನೀರು, ಕೋಕೋ ಪೌಡರ್ 50 ಗ್ರಾಂ.

ವಿಧಾನ: ಮೈದಾ ಹಿಟ್ಟು, ಉಪ್ಪು, ಕೋಕೋ ಪೌಡರ್ ಮತ್ತು ಬೇಕಿಂಗ್ ಪುಡಿಗಳನ್ನು ಜೊತೆಯಲ್ಲಿ ಚೆನ್ನಾಗಿ ಜರಡಿ ಮಾಡಿ. ಮೊಟ್ಟೆ ಹಾಗೂ ವೆನಿಲ್ಲಾ ಎಸೆನ್ಸ್‌ಗಳನ್ನು ಚೆನ್ನಾಗಿ ಕಲೆಸಿಕೊಳ್ಳಿ. ಮೈದಾ ಮಿಶ್ರಣವನ್ನು ಸಾಟಿ ಜೊತೆ ಬೆರೆಸಿ ನೀರಿನ ಜೊತೆ ಬೇಕಾಗುವ ಹದಕ್ಕೆ ಬೆರೆಸಿ. ಇದಕ್ಕೆ ಗೋಡಂಬಿ ಚೂರುಗಳನ್ನು ಮಿಶ್ರಣ ಮಾಡಿ. ಬೇಕಿಂಗ್ ಸೋಡವನ್ನು ಸ್ವಲ್ಪ ನೀರಿನಲ್ಲಿ ಕರಗಿಸಿ ಮಿಶ್ರಣಕ್ಕೆ ಬೆರೆಸಿ. ಹೀಗೆ ಬೆರೆಸಿದ ಮಿಶ್ರಣವನ್ನು ಸ್ವಲ್ಪ ವನಸ್ಪತಿ ಸವರಿದ ಬಟರ್ ಪೇಪರ್ ಅನ್ನು ಕೇಕ್ ತಟ್ಟೆಯಲ್ಲಿ ಹಾಕಿ ಮೈಕ್ರೋ ಓವನ್‌ನಲ್ಲಿ 180 ಡಿಗ್ರಿ ಸೆಲ್ಸಿಯಸ್‌ ಶಾಖದಲ್ಲಿ 25 ರಿಂದ 30 ನಿಮಿಷಗಳ ಕಾಲ ಬೇಯಿಸಿ. ಸಂಪೂರ್ಣವಾಗಿ ತಣ್ಣಗಾದ ನಂತರ  ಚಾಕಲೇಟ್ ಬ್ರೌನೀಸ್ (ಕೇಕ್‌ನ್ನು) ಕತ್ತರಿಸಿ ಸೇವಿಸಿ.
***
ಸ್ಪಾಂಜ್ ಕೇಕ್
ಸಾಮಗ್ರಿ: ಮೈದಾ 200 ಗ್ರಾಂ, ಸಕ್ಕರೆ ಪುಡಿ 200 ಗ್ರಾಂ, ವನಸ್ಪತಿ 200ಗ್ರಾಂ, ಬೇಕಿಂಗ್ ಪುಡಿ ಕಾಲು ಟೀ ಚಮಚ, ಮೊಟ್ಟೆ 4, ಹಾಲು 100 ಎಂ.ಎಲ್‌, ವೆನಿಲ್ಲಾ ಎಸೆನ್ಸ್ ಕೆಲವು ಹನಿಗಳು.

ADVERTISEMENT

ವಿಧಾನ: ಮೈದಾ ಹಿಟ್ಟು ಮತ್ತು ಬೇಕಿಂಗ್ ಪುಡಿಯನ್ನು ಜೊತೆಯಲ್ಲಿ ಚೆನ್ನಾಗಿ ಜರಡಿ ಹಿಡಿಯಿರಿ. ಮೊಟ್ಟೆ ಹಾಗೂ ವೆನಿಲ್ಲಾ ಎಸೆನ್ಸ್‌ಅನ್ನು ಚೆನ್ನಾಗಿ ಕಲೆಸಿಕೊಳ್ಳಿ. ವನಸ್ಪತಿಯನ್ನು ಸಾಟಿಮಾಡಿ ಮಾಡಿ (ಕ್ರೀಮಿಂಗ್) ನಂತರ ಸ್ವಲ್ಪ ಸ್ವಲ ಪ್ರಮಾಣದಲ್ಲಿ ಸಕ್ಕರೆ ಪುಡಿಯನ್ನು ಬೆರೆಸಿ ಸಾಟಿಮಾಡಿ, ತದನಂತರ  ಕಲಿಸಿದ ಮೊಟ್ಟೆಯನ್ನು ಸ್ವಲ್ಪ ಸ್ವಲ್ಪವಾಗಿ ಸಾಟಿಯೊಳಗೆ ಸೇರಿಸಿ ಚೆನ್ನಾಗಿ ಬೆರಸಿ. ನಂತರ ಇದ್ದಕೆ ಮೈದಾ ಹಿಟ್ಟನ್ನು ನಿಧಾನವಾಗಿ ಬೆರೆಸಿ ತಕ್ಕಷ್ಟು ಹಾಲನ್ನು ಸೇರಿಸಿ.

ಹದವಾದ ಹಿಟ್ಟು ಸೌಟಿನಲ್ಲಿ ಹಿಡಿದರೆ ಕೆಳಗೆ ಬೀಳುವ ತನಕ ಹಾಲು ಬೆರಸಬೇಕು. ಹೀಗೆ ಬೆರೆಸಿದ ಮಿಶ್ರಣವನ್ನು  ಸ್ವಲ್ಪ ವನಸ್ಪತಿ ಸವರಿ ಬಟರ್ ಪೇಪರ್ ಹಾಕಿದ ಕೇಕ್ ತಟ್ಟೆಯಲ್ಲಿ ಹಾಕಿ. ಮೈಕ್ರೋ ಓವನ್‌ನಲ್ಲಿ  180 ಡಿಗ್ರಿ ಸೆಲ್ಸಿಯಸ್‌ ಶಾಖದಲ್ಲಿ 25 ರಿಂದ 30 ನಿಮಿಷಗಳ ಕಾಲ ಬೇಯಿಸಿ. ಸಂಪೂರ್ಣವಾಗಿ ತಣ್ಣಗಾದ ನಂತರ ಸ್ಪಾಂಜ್ ಕೇಕ್‌ನ್ನು ಕತ್ತರಿಸಿ ಸೇವಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.