ADVERTISEMENT

ಸಂಕ್ರಾಂತಿಗೆ ಬಗೆ ಬಗೆ ಅಡುಗೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಸಿಹಿ ಕುಂಬಳಕಾಯಿ ಪಲ್ಯ
ಸಿಹಿ ಕುಂಬಳಕಾಯಿ ಪಲ್ಯ   

ಸಿಹಿ ಕುಂಬಳಕಾಯಿ ಪಲ್ಯ
ಬೇಕಾಗುವ ಸಾಮಗ್ರಿ: ಸಿಹಿ ಕುಂಬಳಕಾಯಿ ಒಂದೂವರೆ ಕಪ್, ತೆಂಗಿನ ಕಾಯಿ ತುರಿ ಅರ್ಧ ಕಪ್, ಎಣ್ಣೆ ಎರಡು ಚಮಚ, ಹಸಿಮೆಣಸಿನಕಾಯಿ 3, ಕೆಂಪು ಮೆಣಸಿನಕಾಯಿ 2, ಉದ್ದಿನ ಬೇಳೆ 2 ಚಮಚ, ಕಡಲೇಬೇಳೆ 2 ಚಮಚ, ಸಾಸಿವೆ 1 ಚಮಚ, ಕರಿಬೇವು, ಕೊತ್ತಂಬರಿ ಸ್ವಲ್ಪ, ಅರಿಶಿನ ಪುಡಿ ಸ್ವಲ್ಲ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಸಿಹಿ ಕುಂಬಳಕಾಯಿಯ ಸಿಬ್ಬೆಯನ್ನು ತೆಗೆದು ಸಣ್ಣ ಆಕಾರದಲ್ಲಿ ಕತ್ತರಿಸಿಕೊಳ್ಳಿ, ಬಾಣಲೆಯಲ್ಲಿ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ, ಸಾಸಿವೆ, ಉದ್ದು, ಕಡಲೇ ಬೇಳೆ, ಇಂಗು, ಅರಿಶಿನ ಪುಡಿ ಮತ್ತು ಮೆಣಸನ್ನು ಹಾಕಿ.

ಕಡಲೇಬೇಳೆ ಬಣ್ಣ ಬದಲಾಗುತ್ತಿದ್ದಂತೆ ಬಾಣಲೆಗೆ ಸಿಹಿ ಕುಂಬಳಕಾಯಿ ಮತ್ತು ಸ್ವಲ್ಪ ನೀರು ಹಾಕಿ. ಇದು ಬೆಂದ ನಂತರ, ರುಚಿಗೆ ತಕ್ಕಷ್ಟು ಉ‍ಪ್ಪು ಹಾಕಿ. ತೆಂಗಿನ ತುರಿ, ಕೊತ್ತಬಂಬರಿ ಮತ್ತು ಕರಿಬೇವನ್ನು ಹಕಿ. ಈಗ ಸಿಹಿ ಕುಂಬಳಕಾಯಿ ಪಲ್ಯ ರೆಡಿ. ಇದನ್ನು ಅನ್ನ, ರೊಟ್ಟಿ, ಚಪಾತಿ ಜತೆಗೆ ನೆಂಚಿಕೊಂಡು ತಿಂದರೆ ರುಚಿ ಹೆಚ್ಚು.

ADVERTISEMENT

*

ರವಾ ಪೊ೦ಗಲ್
ಬೇಕಾದ ಪದಾರ್ಥ:
ಹೆಸರು ಬೇಳೆ ಅರ್ಧ ಕಪ್, ರವೆ ಅರ್ಧ ಕಪ್, ಗೋಡಂಬಿ ಸಣ್ಣ ಬಟ್ಟಲು, ಶುಂಠಿ ದೊಡ್ಡ ಚೂರು, ಮೆಣಸಿನ ಕಾಯಿ 2, ಕಾಳು ಮೆಣಸು ಒಂದು ಸಣ್ಣ ಚಮಚ, ಜೀರಿಗೆ ಒಂದು ಚಮಚ, ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ಹೆಸರುಬೇಳೆಯನ್ನು ಕೆಂಪಗೆ ಹುರಿದುಕೊಂಡು, ಒಂದು ಕಪ್ ನೀರಿನಲ್ಲಿ ಹಾಕಿ ಕುಕ್ಕರ್‌ನಲ್ಲಿ ಎರಡು ವಿಷಲ್ ಹಾಕಿ ಬೇಯಿಸಿ. ನಂತರ ರವೆಯನ್ನು ಹುರಿದುಕೊಳ್ಳಿ, ನಂತರ ತವಾದಲ್ಲಿ ಒಂದು ಚಮಚ ತುಪ್ಪ ಹಾಕಿ ಅದು ಬಿಸಿಯಾಗುವ ವೇಳೆಗೆ ಅದಕ್ಕೆ ಕಾಳು ಮೆಣಸು ಮತ್ತು ಜೀರಿಗೆ ಹಾಕಿ. ನಂತರ ಗೋಡಂಬಿ, ತುರಿದ ಶುಂಠಿಯನ್ನು ಹಾಕಿ. ಇದಕ್ಕೆ ಉದ್ದಕ್ಕೆ ಹೆಚ್ಚಿಕೊಂಡ ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಚೆನ್ನಾಗಿ ಕೈಯಾಡಿಸಿ. ಈ ಮಿಶ್ರಣಕ್ಕೆ ಬೇಯಿಸಿಟ್ಟುಕೊಡ ಹೆಸರುಬೇಳೆ ಮತ್ತು ಸ್ವಲ್ಪ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನೀರು ಕುದಿಯತೊಡಗಿದಾಗ ಅದಕ್ಕೆ ಹುರಿದಿಟ್ಟುಕೊಂಡ ರವೆ ಹಾಕಿ. ಉಪ್ಪಿಟ್ಟಿನ ಹದಕ್ಕೆ ಬಂದಾಗ ಇಳಿಸಿ. ಈಗ ರುಚಿಕರವಾದ ರವಾ ಪೊಂಗಲ್ ತಿನ್ನಲು ಸಿದ್ಧ.

*

ತರಕಾರಿ ಪೊಂಗಲ್
ಬೇಕಾಗುವ ಸಾಮಗ್ರಿ:
ಹೆಸರುಬೇಳೆ  ಮುಕ್ಕಾಲು ಕಪ್, ಅಕ್ಕಿ ಒಂದು ಕಪ್, ಕ್ಯಾರೆಟ್ ಬೀನ್ಸ್, ಕ್ಯಾಪ್ಸಿಕಂ ಸಣ್ಣಗೆ ಹಚ್ಚಿದ್ದು ಒಂದೂವರೆ ಕಪ್, ಹಸಿಮೆಣಸಿನಕಾಯಿ ಮೂರು, ಒಗ್ಗರಣೆಗೆ ಎಣ್ಣೆ ಅಥವಾ ತುಪ್ಪ, ಎರಡು ಚಿಟಿಕೆ ಅರಿಶಿನ ಪುಡಿ, ಜೀರಿಗೆ, ಸಾಸಿವೆ, ಇಂಗು, ಹೆಚ್ಚಿದ ಈರುಳ್ಳಿ ಸ್ವಲ್ಪ, ಗೋಡಂಬಿ, ಶುಂಠಿ, ನಿಂಬೆಹಣ್ಣು ಒಂದು, ತೆಂಗಿನ ತುರಿ ಕಾಲು ಕಪ್

ಮಾಡುವ ವಿಧಾನ: ಹೆಸರುಬೇಳೆಯನ್ನು ಹದವಾದ ಉರಿಯಲ್ಲಿ ಹೊಂಬಣ್ಣಕ್ಕೆ ಬರುವತನಕ ಹುರಿದುಕೊಳ್ಳಿ, ಇದಕ್ಕೆ ನೀರು ಸೇರಿಸಿ ಬೇಳೆಯನ್ನು ತೊಳೆಯಿರಿ. ಇದಕ್ಕೆ ಅಕ್ಕಿ, ಅರಿಶಿನ ಪುಡಿ, ಹೆಚ್ಚಿದ ತರಕಾರಿಗಳು ಮತ್ತು ನೀರು ಸೇರಿಸಿ ಕುಕ್ಕರ್‌ನಲ್ಲಿಟ್ಟು ಬೇಯಿಸಿಕೊಳ್ಳಿ (ಮೂರು ವಿಷಲ್ ಸಾಕು). ಈ ಮಿಶ್ರಣಕ್ಕೆ ಹಸಿಮೆಣಸಿನಕಾಯಿ, ಶುಂಠಿ, ನಿಂಬೆಹಣ್ಣು, ಕರಿಬೇವು, ತೆಂಗಿನ ತುರಿ, ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಹಾಲು ಬೇಡದಿದ್ದರೆ ನೀರು ಹಾಕಿಕೊಳ್ಳಬಹುದು. ಈ ಮಿಶ್ರಣವನ್ನು ಚೆನ್ನಾಗಿ ಕುದಿ ಬರುವತನಕ ಬಿಸಿ ಮಾಡಿ ನಂತರ ಇಳಿಸಿ, ಇದಕ್ಕೆ ಜೀರಿಗೆ, ಸಾಸಿವೆ, ಇಂಗಿನ ಒಗ್ಗರಣೆ ಹಾಕಿ. ಈಗ ತರಕಾರಿ ಪೊಂಗಲ್ ತಿನ್ನಲು ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.