ADVERTISEMENT

ನಾಟಿ ಕೋಳಿ ಸಾರಿನೊಂದಿಗೆ ನುಣುಪಾದ ಬಿಸಿ ಮುದ್ದೆ...

ರಸಾಸ್ವಾದ

ರಮೇಶ ಕೆ
Published 15 ಜನವರಿ 2017, 16:36 IST
Last Updated 15 ಜನವರಿ 2017, 16:36 IST
ಚಿತ್ರ: ಆರ್‌. ಶ್ರೀಕಂಠ ಶರ್ಮಾ
ಚಿತ್ರ: ಆರ್‌. ಶ್ರೀಕಂಠ ಶರ್ಮಾ   

ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿರುವ ಬಾಲಕಿಯ ಚಿತ್ರದ ಎದುರು ನಾಲ್ಕು ಮಂದಿ ಸ್ನೇಹಿತರು ಮಂಡ್ಯ ಶೈಲಿಯ ಬಾಡೂಟ ಮಾಡುತ್ತಿದ್ದರು. ನಾಟಿ ಕೋಳಿ ಮಾಂಸದ ಬಿರಿಯಾನಿ ಜೊತೆಗೆ ಇದ್ದದ್ದು ನಾಟಿ ಚಿಕನ್‌ ಫ್ರೈ. ಬಹಳಷ್ಟು ಮಂದಿ ಆರ್ಡರ್‌ ಮಾಡುತ್ತಿದ್ದದ್ದು ನಾಟಿ ಕೋಳಿ ಸಾರು ಜೊತೆಗೆ ಬಿಸಿಬಿಸಿ ರಾಗಿಮುದ್ದೆಯನ್ನು.

ಜೆ.ಪಿ.ನಗರದ 7ನೇ ಹಂತದಲ್ಲಿರುವ ‘ನ್ಯೂ ಪ್ರಶಾಂತ್‌ ಹೋಟೆಲ್‌’ನಲ್ಲಿ ನಾಟಿಕೋಳಿ ಸಾರು ಹಾಗೂ ನುಣುಪಾಗಿರುವ ಮುದ್ದೆಯನ್ನು ಹೆಚ್ಚು ಜನರು ಇಷ್ಟಪಡುತ್ತಾರೆ. ಪಕ್ಕಾ ಮಂಡ್ಯ, ಹಾಸನ ಭಾಗಗಳ ಹಳ್ಳಿ ಸೊಗಡಿನ ಮಾಂಸಾಹಾರ ಇಲ್ಲಿ ಸಿಗುತ್ತದೆ.

ಗಾಂಧಿನಗರದಲ್ಲಿ ಆರಂಭವಾದ ಹೋಟೆಲ್‌  ಬಸವೇಶ್ವರ ನಗರ, ಜಯನಗರ, ತ್ಯಾಗರಾಜನಗರ, ವಿದ್ಯಾರಣ್ಯಪುರ, ಟಿ.ದಾಸರಹಳ್ಳಿ ಹಾಗೂ ಜೆ.ಪಿ.ನಗರದಲ್ಲೂ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡಿದೆ.

ಮನ ಸೆಳೆವ ವಿನ್ಯಾಸ
ಕ್ಯಾಷ್‌ ಕೌಂಟರ್‌ ಅನ್ನೂ ಹಳ್ಳಿಗಳ ಮನೆಗಳಂತೆ ಸಿಂಗಾರ ಮಾಡಿದ್ದಾರೆ. ಭತ್ತದ ಹುಲ್ಲಿನ ಛಾವಣಿಯ ಕೌಂಟರ್‌ ಆಕರ್ಷಣೀಯವಾಗಿದೆ. ಬಾಗಿಲು, ಹೋಟೆಲ್‌ನ ಒಳಗೆ ಬಣ್ಣ ಬಣ್ಣದ ಲಾಟೀನುಗಳನ್ನು ನೇತು ಹಾಕಿದ್ದಾರೆ. ಗ್ರಾಮೀಣ ಭಾಗದ ಅಡುಗೆಮನೆಗಳ ಮೂಲೆಯಲ್ಲಿ ಜೋಡಿಸಿಡುವಂತೆ ಉಪ್ಪಿನಕಾಯಿ ಜಾಡಿ ಹಾಗೂ ಮಡಕೆಗಳನ್ನು ಇಲ್ಲೂ ಸಾಲಾಗಿ ಜೋಡಿಸಿಟ್ಟಿದ್ದಾರೆ.

ನಾಟಿ ಚಿಕನ್ ಫ್ರೈ, ಚಿಲ್ಲಿ ಚಿಕನ್‌, ನಾಟಿ ಚಿಕನ್‌ ಪೆಪ್ಪರ್‌ ಫ್ರೈ, ಚಿಕನ್‌ ಕಬಾಬ್‌, ಕಿಕನ್‌ 65, ನಾಟಿ ಕೋಳಿ ಸಾರು, ನಾಟಿ ಚಿಕನ್‌ ಬಿರಿಯಾನಿ... ಹೀಗೆ ಹಲವಾರು ಮಾಂಸಾಹಾರಿ ತಿನಿಸುಗಳ ವೈವಿಧ್ಯವಿದೆ.

‘ಎಲ್ಲಾ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಬೆಲೆ ನಿಗದಿಪಡಿಸಲಾಗಿದೆ. ಮಟನ್‌ನಲ್ಲಿ ಬಿರಿಯಾನಿ, ಕುರ್ಮಾ, ಚಾಪ್ಸ್‌, ಫ್ರೈ, ಡ್ರೈ, ಮಟನ್‌ ರೋಸ್ಟ್‌, ಬೋಟಿ ಫ್ರೈ ಖೀಮಾ ಬಾಲ್ ಫ್ರೈ, ತಲೆ ಮಾಂಸ ಇದೆ. ನಾನ್‌ವೆಜ್‌ ಅಲ್ಲದೇ ಸಸ್ಯಾಹಾರದಲ್ಲೂ ಸಾಕಷ್ಟು ವೈವಿಧ್ಯದ ತಿನಿಸುಗಳಿವೆ’ ಎನ್ನುತ್ತಾರೆ ಮಾಲೀಕರಾದ ಹರ್ಷಾ ವಿ.

ತಂದೂರಿ ವಿಶೇಷ
ದಕ್ಷಿಣ ಕರ್ನಾಟಕ ಭಾಗದ ಮಾಂಸಾಹಾರ ಅಲ್ಲದೇ ತಂದೂರಿಯಲ್ಲೂ ಅನೇಕ ತಿನಿಸುಗಳನ್ನು ಈ ಶಾಖೆಯಲ್ಲಿ ಪರಿಚಯಿಸಲಾಗಿದೆ. ತಂದೂರಿ ಚಿಕನ್‌, ಕಲ್ಮಿ ಕಬಾಬ್‌, ಚಿಕನ್ ಟಿಕ್ಕ, ಕಾಲಿ ಮಿರ್ಚಿ ಟಿಕ್ಕ, ಮೇಥಿ ಕಬಾಬ್‌, ಮಲೈ ಟಿಕ್ಕ, ಹರಿಯಾಲಿ ಕಬಾಬ್‌, ಅಫ್ಘಾನಿ ಕಬಾಬ್‌ ಮುಖ್ಯವಾಗಿವೆ.

ಗಾಂಧಿನಗರದ ಶಾಖೆಯಲ್ಲಿ ಮಾಡಿದ ಮಸಾಲೆಯನ್ನೇ ಎಲ್ಲಾ ಶಾಖೆಗಳಿಗೂ ಕಳುಹಿಸಲಾಗುತ್ತದೆ. ಹಾಗಾಗಿ ನ್ಯೂ ಪ್ರಶಾಂತ್‌ ಹೋಟೆಲ್‌ನ ಯಾವುದೇ ಶಾಖೆಗೆ ಹೋದರೂ ಒಂದೇ ರುಚಿ ಇರುತ್ತದೆ.  ಮಂಡ್ಯದ ಬಾಣಸಿಗರೇ ಇಲ್ಲಿ ಅಡುಗೆ ತಯಾರಿಸುತ್ತಾರೆ. 80 ಮಂದಿ ಕುಳಿತು ಊಟ ಮಾಡುವಷ್ಟು ಆಸನಗಳಿವೆ.  ಒಂದು ಮುದ್ದೆಗೆ ₹25, ಚಪಾತಿಗೆ ₹20. ನಾಟಿ ಚಿಕನ್ ಬಿರಿಯಾನಿಗೆ ₹210.... ಹೀಗೆ ಪ್ರತಿಯೊಂದು ತಿನಿಸಿಗೂ ಪ್ರತ್ಯೇಕ ದರ ನಿಗದಿಪಡಿಸಿದ್ದಾರೆ.

‘ಇಲ್ಲಿ ಮಾಡುವ ರಾಗಿ ಮುದ್ದೆಯನ್ನು ಹೆಚ್ಚಿನ ಗ್ರಾಹಕರು ಇಷ್ಟಪಡುತ್ತಾರೆ. ಗಂಟಿಲ್ಲದಂತೆ ಮೃದುವಾಗಿ ಮಾಡುವುದರಿಂದ ನಾಟಿ ಕೋಳಿ ಸಾರಿನೊಂದಿಗೆ ಊಟ ಮಾಡಲು ಚೆನ್ನಾಗಿರುತ್ತದೆ. ಬಾಳೆ ಎಲೆಯಲ್ಲಿ ಊಟ ಬಡಿಸುತ್ತೇವೆ. ಮಸಾಲೆ, ಎಣ್ಣೆ ಹೆಚ್ಚಾಗಿ ಬಳಸುವುದಿಲ್ಲ, ಆರೋಗ್ಯದ ಕಡೆಯೂ ಗಮನ ನೀಡುತ್ತೇವೆ.

ಜೊತೆಗೆ ಉತ್ತರ ಭಾರತದ ತಿನಿಸುಗಳನ್ನು ನಮ್ಮಲಿ ಮಾಡುತ್ತೇವೆ. ಮೂರು ಕಿ.ಮೀ ದೂರದವರೆಗೂ ಉಚಿತವಾಗಿ ಮನೆಬಾಗಿಲಿಗೆ ಊಟವನ್ನು ತಲುಪಿಸುವ ವ್ಯವಸ್ಥೆಯಿದೆ’ ಎನ್ನುತ್ತಾರೆ ಹರ್ಷಾ ವಿ. 

ರೆಸ್ಟೊರೆಂಟ್‌: ನ್ಯೂ ಪ್ರಶಾಂತ್ ಹೋಟೆಲ್
ವಿಶೇಷತೆ: ಮಂಡ್ಯ ಶೈಲಿ ಮಾಂಸಾಹಾರ
ಸಮಯ: ಮಧ್ಯಾಹ್ನ 12.30ರಿಂದ 4.30 ಹಾಗೂ ಸಂಜೆ 7ರಿಂದ ರಾತ್ರಿ 11.
ಒಬ್ಬರಿಗೆ: ₹500
ಸ್ಥಳ: ನಂ 92, ಡಿಎಸ್ಎನ್ ಪ್ಲಾಜಾ, 1ನೇ ಮಹಡಿ, 1ನೇ ಮುಖ್ಯರಸ್ತೆ, ಬಿಗ್‌ ಬಜಾರ್‌ ಸಮೀಪ, ಜೆ.ಪಿ.ನಗರ 7ನೇ ಹಂತ.
ಸ್ಥಳ ಕಾಯ್ದಿರಿಸಲು: 99022 19219

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT