ADVERTISEMENT

ಅಂಜಿಕೆ ಎಂಬ ಹಿಂಜರಿಕೆ

ಸವಿತ ಸಚ್ಚಿದಾನಂದ, ಸಖರಾಯಪಟ್ಟಣ
Published 14 ಫೆಬ್ರುವರಿ 2017, 19:30 IST
Last Updated 14 ಫೆಬ್ರುವರಿ 2017, 19:30 IST
ಅಂಜಿಕೆ ಎಂಬ ಹಿಂಜರಿಕೆ
ಅಂಜಿಕೆ ಎಂಬ ಹಿಂಜರಿಕೆ   

ಒಮ್ಮೆ ಸ್ನೇಹಿತರೆಲ್ಲಾ ಸೇರಿ ಪಿಕ್‌ನಿಕ್‌ಗೆ ಹೋಗಿದ್ದಾಗ ಎಲ್ಲರೂ ಸೇರಿ ‘ಪಾಸಿಂಗ್ ದ ಬಾಲ್’ ಆಟ ಆಡಲು ನಿರ್ಧರಿಸಿದೆವು. ಆಟದ ನಿಯಮದ ಪ್ರಕಾರ ಹಾಡು ನಿಲ್ಲುವವರೆಗೂ ಚೆಂಡನ್ನು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಪಾಸ್ ಮಾಡಬೇಕು; ಹಾಡು ನಿಂತಾಗ ಚೆಂಡು ಯಾರ ಬಳಿ ಇರುತ್ತದೋ ಅವರು ತಮ್ಮಲ್ಲಿರುವ ಕಲೆ ಅಥವಾ ಪ್ರತಿಭೆಯನ್ನು ಪ್ರದರ್ಶಿಸಬೇಕು.

ಈ ಆಟದಲ್ಲಿ ನಾನು ಚೆಂಡನ್ನು ಆದಷ್ಟು ಬೇಗ ಬೇರೆಯವರ ಕೈಗೆ ಸಾಗಹಾಕಲು ಹವಣಿಸುತ್ತಿದ್ದೆ, ಏಕೆಂದರೆ ಈ ಆಟದಲ್ಲಿ ನನಗೆ ಗೆಲ್ಲಬೇಕೆನ್ನುವ ಉದ್ದೇಶಕ್ಕಿಂತ ನನ್ನ ಸರದಿ ಬಂದರೆ ಎಲ್ಲರ ಮುಂದೆ ಹೇಗೆ ಹಾಡು ಹೇಳುವುದು ಎಂಬ ಅಂಜಿಕೆಯೇ ನನ್ನೊಳಗಿರುವ ಪ್ರತಿಭೆಯನ್ನು ಹೊರಹಾಕಲು ತಡೆಯುತ್ತಿತ್ತು. ಈ ರೀತಿಯ ಅಂಜಿಕೆ ಸಾಕಷ್ಟು ಮಂದಿಯ ಅನುಭವಕ್ಕೆ ಬಂದಿರುತ್ತದೆ. ತಮ್ಮಲ್ಲಿ ಅಗಾಧ ಪ್ರತಿಭೆಯಿದ್ದರೂ ಅದನ್ನು ಹೊರಹಾಕಲು ಹೆದರುತ್ತಾರೆ.

ಭಯ, ನಾಚಿಕೆ, ಅಂಜಿಕೆ – ಇವೆಲ್ಲ ನಮ್ಮ ಸುಪ್ತ ಮನಸ್ಸಿನ ಆಂತರಿಕ ದೌರ್ಬಲ್ಯಗಳು; ಯಾವುದೇ ಕೆಲಸವನ್ನು ಧೈರ್ಯವಾಗಿ ಮುನ್ನುಗ್ಗಿ ಮಾಡಲು ಆಗದಂತೆ ನಮಗೆ ನಾವೇ ನಿರ್ಮಿಸಿಕೊಂಡಿರುವ ತಡೆಗೋಡೆಗಳು. ಭಯ ಅಥವಾ ಹೆದರಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾದರೂ ಕೆಲವರಲ್ಲಿರುವ ಅತಿಯಾದ ಅಂಜಿಕೆಯಿಂದಾಗಿ ಎಷ್ಟೋ ಒಳ್ಳೆಯ ವಿಚಾರಗಳು ಮನಸ್ಸೆಂಬ ಗೂಡಿನಿಂದ ಬೆಳಕಿಗೆ ಬರದೆ ಅಲ್ಲೇ ಮುರುಟಿಹೋಗುತ್ತದೆ.

‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ಯಾವುದೇ ಕ್ಷೇತ್ರದಲ್ಲಾಗಲಿ ಕೆಲವರು ಅತಿಯಾಗಿ ಹೆದರಿ, ಈಗ ಸಿಕ್ಕಿರುವ ಅವಕಾಶವನ್ನು ‘ನನ್ನಿಂದ ನಿಭಾಯಿಸಲು ಆಗುತ್ತದೆಯಾ?’ ಎಂಬ ನಕಾರಾತ್ಮಕ ಪ್ರಶ್ನೆಯನ್ನು ತಮ್ಮೊಳಗೆ ಹಾಕಿಕೊಂಡು, ಪ್ರಯತ್ನದಿಂದ ಹಿಂದಕ್ಕೆ ಸರಿದು ಪಲಾಯನವಾದಿಗಳಾಗುತ್ತಾರೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಆತ್ಮಸ್ಥೈರ್ಯದ ಕೊರತೆಯಿಂದ ‘ಭಯ’ ಎಂಬ ಎರಡಕ್ಷರದ ಪದಕ್ಕೆ ಹೆದರಿ ಒಂದು ಹೆಜ್ಜೆ ಹಿಂದೆ ಇಟ್ಟರೆ ನೂರು ಜನ ನಮ್ಮನ್ನು ತುಳಿದು ಮುಂದೆ ಸಾಗಿಬಿಡುತ್ತಾರೆ.

ADVERTISEMENT

ಅಂಜಿಕೆ ಮತ್ತು ನಾಚಿಕೆ – ಇವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.  ಕೆಲವರಿಗೆ ವೇದಿಕೆ ಮೇಲೆ ಹೋಗುವುದೆಂದರೆ ಭಯ ಮತ್ತು ಜನರು ಆಡಿಕೊಳ್ಳುವರೆಂಬ ನಾಚಿಕೆ. ಒಳ್ಳೆಯ ಭಾಷಣಕಾರರೋ ಅಥವಾ ಗಾಯಕರಾಗಿದ್ದರೂ ವೇದಿಕೆ ಹತ್ತಿದರೆಂದರೆ ಕೈ ಕಾಲು ನಡುಕ ಶುರುವಾಗುತ್ತದೆ. ಮೈಕಿನ ಮುಂದೆ ನಿಂತೊಡನೆ ಬಾಯಿಂದ ಪದಗಳೇ ಹೊರಡದಂತಾಗಿ ಒಂದು ರೀತಿಯ ಸಭಾಕಂಪನ (stage fear) ಆವರಿಸುತ್ತದೆ. ಇದರಿಂದ ಅವರು ಎಷ್ಟೇ ತಯಾರಾಗಿದ್ದರೂ ಯಾವುದನ್ನು ಅಚ್ಚುಕಟ್ಟಾಗಿ ನಿಭಾಯಿಸಲಾಗದೆ ಅವರ ಪರಿಶ್ರಮವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.

ಇದು ನಮಗೆ ನಾವೇ ತಂದುಕೊಂಡ ಆಂತರ್ಯದ ಭಯ; ಇನ್ನು ಕೆಲವರು ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಧೈರ್ಯವಾಗಿ ಹೊರಟಿರುತ್ತಾರೆ; ಆದರೆ ಹೊರಗಿನವರು ಋಣಾತ್ಮಕ ಹೇಳಿಕೆಗಳಿಂದ ಹೆದರಿಸಿ ಅವರ ಕಾಲೆಳೆಯುತ್ತಾರೆ. ಉದಾಹರಣೆಗೆ, ಯಾರಾದರೂ ಸ್ವಂತ ಉದ್ದಿಮೆ ಮಾಡಲು ಹೊರಟಿದ್ದಾರೆ – ಎಂದಿಟ್ಟುಕೊಳ್ಳಿ.

ಆಗ ಅವರಿಗೆ ‘ವ್ಯಾಪಾರದಲ್ಲಿ ನಷ್ಟವಾದರೆ?’ ‘ಒಳ್ಳೆಯ ಬೆಲೆ ಸಿಗದಿದ್ದರೆ?’ ‘ಹಾಕಿದ ಬಂಡವಾಳವೂ ಬಾರದಿದ್ದರೆ?’ – ಹೀಗೆ ಪ್ರಶ್ನೆಗಳ ಸರಮಾಲೆಯನ್ನೇ ಹಾಕಿ ಅವರ ಆತ್ಮವಿಶ್ವಾಸವನ್ನೇ ಕುಗ್ಗುವಂತೆ ಮಾಡುತ್ತಾರೆ.

ಬಾಹ್ಯವಾಗಿ ಹೆದರಿಸುವವರಿಂದ ಅವರ ಆತ್ಮಸ್ಥೈರ್ಯ ಕ್ಷೀಣಿಸಿ ಜೀವನದಲ್ಲಿ ನೆಲೆ ಕಂಡುಕೊಳ್ಳಬೇಕೆನ್ನುವವರೂ ಒಮ್ಮೆ ಯೋಚಿಸುವಂತೆ ಮಾಡುತ್ತದೆ. ಹೀಗೆ ಎಷ್ಟೋ ಪ್ರತಿಭಾವಂತರು ಅಂಜಿಕೆಯೆಂಬ ಕೋಟೆಯೊಳಗೆ ಬಂಧಿಯಾಗಿ, ತಮಗೆ ಲಭಿಸುವ ಅವಕಾಶಗಳನ್ನು ಕಳೆದುಕೊಂಡು ಹತಾಶರಾಗುತ್ತಾರೆ.

ಆದರೆ ಅಂಜಿಕೆ ಎಂಬ ಶತ್ರುವನ್ನು ಧೈರ್ಯವೆಂಬ ಅಸ್ತ್ರದಿಂದ ಮಟ್ಟಹಾಕಿ ಯಾವುದಕ್ಕೂ ಹಿಂಜರಿಯದೆ ಆತ್ಮವಿಶ್ವಾಸದಿಂದ ಮುನ್ನುಗ್ಗುವವನಿಗೆ ಯಶಸ್ಸೆಂಬುದು ಕಟ್ಟಿಟ್ಟ ಬುತ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.