ADVERTISEMENT

ಆರೋಗ್ಯಕ್ಕೆ ಗ್ರೀನ್ ಟೀ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2014, 19:30 IST
Last Updated 11 ಏಪ್ರಿಲ್ 2014, 19:30 IST
ಆರೋಗ್ಯಕ್ಕೆ ಗ್ರೀನ್ ಟೀ
ಆರೋಗ್ಯಕ್ಕೆ ಗ್ರೀನ್ ಟೀ   

ಟೀ , ಕಾಫಿಗಳಿಗಿಂತ ಈಗ ಗ್ರೀನ್ ಟೀ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಕೆಲವೇ ವರ್ಷಗಳ ಹಿಂದೆ ಅಮೆರಿಕದಲ್ಲಿ ಅಧಿಕವಾಗಿ ಬಳಸಲಾಗುತ್ತಿದ್ದ ಗ್ರೀನ್ ಟೀ ಈಗ ಭಾರತದಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿದೆ.

ಹಾಗೆಂದ ಮಾತ್ರಕ್ಕೆ ಗ್ರೀನ್ ಟೀ ನೆನ್ನೆ ಮೊನ್ನೆ ಕಂಡುಬಂದ ಪಾನೀಯ ಅಲ್ಲ. ಕ್ರಿ.ಪೂ. 600ರಲ್ಲೇ ಚೀನಾದಲ್ಲಿ ಗ್ರೀನ್ ಟೀ ತಯಾರಿಸಲಾಗುತ್ತಿತ್ತು. ಚಾ ಜಿಂಗ್ ಎಂಬ ಪುಸ್ತಕವನ್ನು ಲು ಯು ಎಂಬಾತ ಬರೆದಿದ್ದು, ಅದರಲ್ಲಿ ಗ್ರೀನ್ ಟೀ ಮಾಡುವ ವಿಧಾನ, ಅದರಿಂದಾಗುವ ಉಪಯೋಗ ಹಲವು ವಿಷಯಗಳನ್ನು ನಮೂದಿಸಲಾಗಿತ್ತು.

  ಕ್ಯಾಮೆರಲಿಯಾ ಸೈನೆನ್ಸಿಸ್ ಎಂಬ ಜಾತಿಯ ಟೀ ಗಿಡವೇ ಗ್ರೀನ್ ಟೀ ಮೂಲ. ಈ ಹಿಂದೆ ಔಷಧಿಯಂತೆ ಬಳಸಲಾಗುತ್ತಿದ್ದ ಈ ಎಲೆಗಳನ್ನು ಈಗ ಟೀಯಂತೆ ಉಪಯೋಗಿಸಿಕೊಳ್ಳಲಾಗುತ್ತಿದೆ.

ತಲೆ ನೋವು, ಮೈ ಕೈ ನೋವು, ಮನುಷ್ಯನ ಜೀವನಾವಧಿ ಹೆಚ್ಚಿಸಲು ಭಾರತದಲ್ಲಿ ಮತ್ತು ಚೀನಾದಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತಿತ್ತು.
ಆದರೆ ಆಧುನಿಕ ಜೀವನಶೈಲಿ ಆಧಾರಿತ  ಆರೋಗ್ಯ ಸಮಸ್ಯೆಗಳಿಗೂ ಗ್ರೀನ್ ಟೀ ಪರಿಹಾರವಾಗುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಕೆಲಸದ ಒತ್ತಡ, ಬದಲಾದ ಜೀವನಶೈಲಿ, ಏರು ಪೇರಾಗಿರುವ ಆಹಾರ ಪದ್ಧತಿ ಇವೆಲ್ಲಕ್ಕೂ ಅಗತ್ಯವಿರುವ ಔಷಧಿಗಳೊಂದಿಗೆ ‘ಗ್ರೀನ್ ಟೀ’ ಹೆಸರು ಸಹ ಕೇಳಿಬರುತ್ತಿದೆ. ಡಯಟ್‌, ತ್ವಚೆ ಆರೈಕೆ, ರೋಗನಿರೋಧಕ ಶಕ್ತಿಯ ಹೆಚ್ಚಿಸಲು ಇದು ಸಹಾಯಕ. 

ಅತಿ ಹೆಚ್ಚು ಆ್ಯಂಟಿಯಾಕ್ಸಿಡೆಂಟ್, ಅಮಿನೊ ಆಸಿಡ್, ಕಾರ್ಬೊಹೈಡ್ರೇಟ್, ಲಿಪಿಡ್ ಅಂಶಗಳನ್ನು ಹೊಂದಿರುವ ಗ್ರೀನ್ ಟೀ ಅನ್ನು ರಕ್ತ ಹೆಪ್ಪುಗಟ್ಟುವಿಕೆ, ಗಾಯ ಗುಣಪಡಿಸಲು, ಜೀರ್ಣಕ್ರಿಯೆಗೆ, ಮಾನಸಿಕ ಆರೋಗ್ಯಕ್ಕೆ ಕಾಪಾಡಿಕೊಳ್ಳಲು, ಹೃದಯ ಸ್ವಾಸ್ಥ್ಯಕ್ಕೆ ಹಾಗೂ ದೇಹದ ಉಷ್ಣವನ್ನು ಸಮತೋಲನವಾಗಿಸಲು ಬಳಸಲಾಗುತ್ತಿತ್ತು. ಆದರೆ ಕಾಲ ಸರಿದಂತೆ ಔಷಧದಂತಿದ್ದ ಗ್ರೀನ್ ಟೀಗೆ ಪಾನೀಯ ರೂಪ ಬಂದಿತು.

ಕೆಲವು ಜೀವನಶೈಲಿ ಸಂಬಂಧಿತ ಆರೋಗ್ಯ ಸಮಸ್ಯೆಗಳಾದ ಬೊಜ್ಜು, ಲಿವರ್ ಸಮಸ್ಯೆ ಹಾಗೂ ಟೈಪ್ 2 ಮಧುಮೇಹಕ್ಕೂ ಗ್ರೀನ್ ಟೀ ಮದ್ದಾಗಿದೆ. ಕಾಫಿ, ಟೀ ರೀತಿಯ ಪಾನೀಯಗಳಂತೆಯೇ ಇದನ್ನೂ ಒತ್ತಡ ನಿರ್ವಹಣೆಗೆ ಬಳಸಬಹುದಾಗಿದೆ.

ಹಾಗೆಂದು ಗ್ರೀನ್ ಟೀ ಅನ್ನು ಅತಿ ಹೆಚ್ಚು ಕುಡಿಯುವಂತಲೂ ಇಲ್ಲ. ದಿನವೊಂದಕ್ಕೆ ಐದು ಕಪ್ ಗ್ರೀನ್ ಟೀ ಸೇವಿಸಿದರೆ ಆರೋಗ್ಯಕರ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಗ್ರೀನ್ ಟೀಯಲ್ಲಿರುವ ಎಪಿಗಾಲೊಕೇಟ್‌ಚಿನ್ 3 ಗ್ಯಾಲೆಟ್ ಪಾಲಿಫೆನಾಲ್ ಅಂಶ ಆರೋಗ್ಯಕ್ಕೆ ಪೂರಕವಾಗಿರುವುದರಿಂದ ಕ್ಯಾನ್ಸರ್ ತಡೆಗಟ್ಟುವಲ್ಲೂ ಸಾಕಷ್ಟು ಸಹಕಾರಿಯಾಗಿದೆ.

ಗ್ರೀನ್ ಟೀ ತಯಾರಿಸುವುದು ಹೀಗೆ...
ಗ್ರೀನ್‌ ಟೀಯನ್ನು ಕುದಿಸಬಾರದು. ಒಂದು ಕಪ್‌ ಕುದಿಯುವ ನೀರನ್ನು ಒಲೆಯಿಂದ ಕೆಳಗಿಳಿಸಿದ ನಂತರ ಅದಕ್ಕೆ ಹಸಿರೆಲೆಗಳನ್ನೇ ಹಾಕಿ ಮುಚ್ಚಿಡಬೇಕು. ನೀರಿನೊಂದಿಗೆ ಈ ಎಲೆಯನ್ನು ಕುದಿಸಬಾರದು. ಎರಡು ಮೂರು ನಿಮಿಷಗಳಷ್ಟು ಅವಧಿಗೆ ಮಾತ್ರ ಹೀಗೆ ನೀರಿನಲ್ಲಿ ನೆನೆಸಬೇಕು. ಆಗ ಅದರ ಪರಿಣಾಮ ಸೊಗಸಾಗಿರುತ್ತದೆ. ಆಹ್ಲಾದಕರವಾಗಿರುತ್ತದೆ. ಗ್ರೀನ್‌ ಟೀಯನ್ನು ತಣಿಸಿ ಕುಡಿಯಬಾರದು. ಮತ್ತೆ ಬಿಸಿ ಮಾಡಲೂ ಬಾರದು. ಎಲೆ ತೆಗೆದ ನಂತರವೇ ಸೇವಿಸುವುದು ಒಳಿತು. ಡಯೆಟ್‌ ಮಾಡುವವರು ಸಕ್ಕರೆ ಬದಲಿಗೆ ಜೇನು ಬಳಸಬಹುದು.

ಚಿಟಿಕೆ ಶುಂಠಿ, ತುಳಸಿ ಎಲೆ, ಮಾಧುರ್ಯಕ್ಕಾಗಿ ಪುದಿನಾ ಎಲೆಯ ಒಂದೆಸಳನ್ನೂ ನೀರು ಕುದಿಯುವಾಗಲೇ ಹಾಕಬಹುದು. ನಂತರ ಕುಡಿಯುವ ಮುನ್ನ ನಿಂಬೆರಸವನ್ನೂ ಬೆರೆಸಿದರೆ ಮನಸು ಮತ್ತೆ ಮತ್ತೆ ಬಯಸುವಂತಾಗುತ್ತದೆ .

  ಗ್ರೀನ್‌ ಟೀ ತಾಜಾ ಎಲೆ ಸಿಗುವುದು ಕಡಿಮೆ. ಆದ್ದರಿಂದ ಪರಿಷ್ಕರಿಸಿದ ಒಣಗಿದ ಎಲೆಗಳೇ ಮಳಿಗೆಗಳಲ್ಲಿ ಲಭ್ಯವಿದೆ. ಈಗ ಚಿಕ್ಕ ಚಿಕ್ಕ ಟೀ ಬ್ಯಾಗ್‌ಗಳೂ ದೊರೆಯುತ್ತವೆ.

ಬಗೆ ಬಗೆ ಗ್ರೀನ್ ಟೀ: ಗ್ರೀನ್‌ ಟೀಯಲ್ಲಿ 100 ಬಗೆ ಲಭ್ಯವಿದೆ. ಹಲವು ಫ್ಲೇವರ್‌ಗಳನ್ನು ಹೊಂದಿರುವ ಗ್ರೀನ್ ಟೀಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದು ಚೆಸ್‌ನಟ್ ಫ್ಲೇವರ್, ನಟ್ಟಿ– ಟೋಸ್ಟಿ ಫ್ಲೇವರ್, ಪಾಪ್‌ಕಾರ್ನ್‌ನೊಂದಿಗಿನ ಗ್ರೀನ್ ಟೀ, ಆಸ್ಟ್ರಿಂಜೆಂಟ್, ಪೀಚ್, ಪ್ಲಮ್, ಅಪ್ರಿಕಾಟ್ ಸುವಾಸನೆಗಳನ್ನು ಹೊಂದಿರುವ ಗ್ರೀನ್ ಟೀಗಳು.

ಗ್ರೀನ್ ಟೀ  ಎಲ್ಲ ಮಳಿಗೆಗಳಲ್ಲೂ ಲಭ್ಯ. 50 ಗ್ರಾಂ ನಿಂದ ಹಿಡಿದು ಕೆ.ಜಿ ಲೆಕ್ಕದಲ್ಲೂ  ಸಿಗುತ್ತದೆ. ಸ್ಯಾಶೆಗಳು ನಲವತ್ತು ರೂಪಾಯಿಯಿಂದ ಆರಂಭಗೊಳ್ಳುತ್ತವೆ.  5000 ರೂಪಾಯಿವರೆಗೂ ಬೆಲೆಬಾಳುವ ಟೀ ಎಲೆಯ ವೈವಿಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.