ADVERTISEMENT

ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡುವಾ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 5:24 IST
Last Updated 14 ಜನವರಿ 2017, 5:24 IST
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡುವಾ
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡುವಾ   
-ಡಾ. ಗೀತಾ ಎಸ್.ಎನ್. ಭಟ್
 
**
ಸಂಕ್ರಾಂತಿ ಹಬ್ಬದ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡುವ ಸಮಯವಿದು. ಎಳ್ಳು ಪುರಾತನ ಕಾಲದಿಂದ ನಮ್ಮ ಆಹಾರ ಮತ್ತು ಔಷಧ. ಅದು ಅಪ್ಪಟ ಭಾರತೀಯ ಮೂಲದ ಧಾನ್ಯ. ‘ಚಿಂತ್ಯಾಕೋ ಮಾಡುತೀ ಚಿನ್ಮಯನಿದ್ದಾನೆ! ಎಳ್ಳು ಮೊನೆಯ ಮುಳ್ಳು ಕೊನೆಯ ಎಲೂ ಬಿಡದೆ ಒಳಗೂ ಹೊರಗೂ ಎಲ್ಲ ಠಾವಿನಲ್ಲಿ ಗೌರೀ ವಲ್ಲಭನಿದ್ದಾನೆ!’  ದಾಸರ ಮಾತು ನಿಜ. ಮೊನ್ನಿನ ವಿಜ್ಞಾನ ಲೇಖನದ ಸಾರವಿದು. ವೀರ್ಯಾಣು ಮತ್ತು ಅಂಡಾಣುವಿನ ಸಮ್ಮಿಲನದ ಸ್ಫೋಟದಲ್ಲಿ ಅಸಂಖ್ಯಾತ ಝಿಂಕ್ ಕಣ ಹೊಮ್ಮುವುವಂತೆ. ಎಳ್ಳಿನಲ್ಲಿ ಗರಿಷ್ಟ ಝಿಂಕ್‌ನಂಶವಿದೆ. ಅರೆ, ಮೈನೆರೆದ ಹೆಣ್ಣುಮಗುವಿಗೆ ಹಲವು ದಿನ ಎಳ್ಳುಂಡೆ, ಚಿಗಳಿ ಉಂಡೆ ತಿನ್ನಿಸಿದ ನಮ್ಮಜ್ಜಿಗೆ ಇಂತಹ ವಿಜ್ಞಾನ ಹೇಗೆ ತಿಳಿಯಿತು ಎಂಬುದು ನನ್ನ ಕುತೂಹಲ. ಆಕೆಯ ಲಾಜಿಕ್ ಇಷ್ಟೆ. ಹಸಿ ಮೈ ಬಾಣಂತಿ (ಮೈನೆರೆದಾಕೆ) ಚೆನ್ನಾಗಿ ಎಳ್ಳು ತಿನ್ನಲಿ. ಋತುಚಕ್ರ ಸರಿಯಾಗಲಿ ಎಂಬ ಆಶಯ! ಎಳ್ಳಿನ ಆರೋಗ್ಯಕಾರಿ ಮತ್ತು ಸಾಂಸ್ಕೃತಿಕ ಅಂಶಗಳ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ.
 
**
ಎಳ್ಳು ಉತ್ತಮ ಆಹಾರ ಮಾತ್ರ ಅಲ್ಲ; ಹಲವು ಕಾಯಿಲೆಗಳಿಗೊದಗುವ ಅತಿ ಉತ್ತಮ ಮದ್ದು. ಎಳ್ಳಿನ ಬೀಜ ಮಾತ್ರ ಅಲ್ಲ. ಗಿಡದ ಎಲ್ಲ ಅಂಗಾಂಗ ಸಹ ಬಳಕೆಗೆ ಯೋಗ್ಯ. ಬೇರಿನ ಬೂಷ್ಟು ನಿರೋಧಕಶಕ್ತಿಗೆ ರುಜುವಾತಿದೆ. ಎಲೆ ಕಿವುಚಿ ಬಿಸಿನೀರಿನ ಸಂಗಡ ಕಲಸಿದರೆ ಒಳ್ಳೆಯ ಶಾಂಪೂ ಸಿಧ್ಧ. ಅದನ್ನು ನಿತ್ಯ ಬಳಸಲು ಸಾಧ್ಯ.
 
ಉತ್ತಮ ಕೇಶರಾಶಿಗೆ ಹಾಗೂ ಕೂದಲ ಬುಡಕ್ಕೆ ಅದು ಉತ್ತಮ ಬಲದಾಯಕ ಟಾನಿಕ್.  ಮಕ್ಕಳ ಭೇದಿ, ವಾಂತಿ ಮತ್ತು ಆಮಶಂಕೆ ಪರಿಹಾರಕ್ಕೆ ಎಳ್ಳಿನೆಲೆ ಬಳಕೆ ಇದೆ. ಗಿಡದ ಕುಡಿ ಚಿಗುರು ಸಹ ತಂಬುಳಿ ರೂಪದಲ್ಲಿ ಸೇವಿಸಲು ಅಡ್ಡಿ ಇಲ್ಲ. ಅರಳಿದ ಸುಂದರ ಬಿಳಿಯ ಹೂವುಗಳನ್ನು ಅರ್ಬುದ, ನಾಣ್ಯದಾಕಾರದ ಕೂದಲುದುರುವ ಅಲೋಪಿಶಿಯಾ ತೊಂದರೆಗೆ, ಮೂತ್ರಾಂಗದ ಸೋಂಕಿಗೆ, ಹಾಗೂ ಆತಂಕಕಾರಿ ಮಲಬದ್ಧತೆಯ ಮದ್ದಾಗಿ ಬಳಸುವರು. ಎಳ್ಳು ಬೀಜದ ಸೆಸಾಮಿನ್ ಮತ್ತು ಸೆಸಾಮಿನಾಲ್ ರಾಸಾಯನಿಕಗಳು ರಕ್ತದಲ್ಲಿರುವ ಅನಗತ್ಯ ಕೊಬ್ಬು ನಿವಾರಕ. ಕೊಲೆಸ್ಟೆರಾಲ್ ಅಂಶ ಇಳಿಸುತ್ತದೆ. ರಕ್ತದ ಏರೊತ್ತಡ ಇಳಿಸಲು ಸಹಕಾರಿ. ಬೀಜದಲ್ಲಿರುವ ಅಸಂಖ್ಯ ಮೂಲವಸ್ತುಗಳು ಎಳ್ಳಿನ ಪೌಷ್ಟಿಕತೆಯ ಹಿಂದಿರುವ ಗುಟ್ಟು. ತಾಮ್ರದಂಶವಿದೆ. ರಂಜಕ ಇದೆ. ಹೇರಳ ಸುಣ್ಣದಂಶವಿದೆ.
 
ಮೇಂಗನೀಸ್ ಇದೆ. ಇವೆಲ್ಲದರ ದೆಸೆಯಿಂದ ಎಳ್ಳು ಬೀಜವು ಮೂಳೆ ಮತ್ತು ಕೀಲುಗಂಟುಗಳ ಆರೋಗ್ಯದಾಯಿ. ಸವಕಳಿ ತಪ್ಪಿಸಿ ನೋವು ಪರಿಹರಿಸುವ ಸಂಜೀವಿನಿ ಎನಿಸುತ್ತದೆ. ಸಂದುಗಳ ಉರಿಯೂತ ತಪ್ಪಿಸಿ ಮೂಳೆಗಳ ಟೊಳ್ಳುತನ ಪರಿಹರಿಸುತ್ತದೆ. ದೇಹದ ಮುಪ್ಪಡರುವಿಕೆಯನ್ನು ಮುಂದೂಡುವ  ಎಳ್ಳಿನ ‘ಆ್ಯಂಟಿ ಆಕ್ಸಿಡೆಂಟ್’ ಗುಣವನ್ನು ಬಹಿರಂಗಗೊಳಿಸಿದ್ದಾರೆ. 
 
ಆಯುರ್ವೇದದ ಸಂಹಿತೆಗಳಲ್ಲಿ ಎಳ್ಳಿನ ಮಹತ್ವ ಪುಟಗಟ್ಟಲೆ ವಿವರಗೊಳ್ಳುತ್ತದೆ. ಎಳ್ಳಿನ ಗುಣ ವಾಸ್ತವವಾಗಿ ಉಷ್ಣ. ಆದರೆ ಎದೆಹಾಲು ಹೆಚ್ಚಿಸಲು ಸಹಕಾರಿ. ಬಲವರ್ಧಕ. ಚರ್ಮದ ಕಾಂತಿವರ್ಧಕ. ಹಳೆಯ ಗಾಯ ಮಾಯಿಸುತ್ತದೆ. ಕೇಶರಕ್ಷಣೆಗೆ ಸಹಕಾರಿ.  ಹಲ್ಲಿನ ತೊಂದರೆ ಪರಿಹಾರ ಮತ್ತು ನಿರೋಧಕ್ಕೆ ಎಳ್ಳು ಉತ್ತಮ  ಆಹಾರ. ಮೀನು ತಿಂದು ಉಂಟಾದ ಅಜೀರ್ಣಕ್ಕೆ ಎಳ್ಳಿನ ಗಿಡ ಒಣಗಿಸಿ ಸುಟ್ಟ ಬೂದಿ ಕೊಡುವರು. ಮೂತ್ರಾಶ್ಮರೀ, ಅಂದರೆ ಮೂತ್ರಾಶಯದ ಕಲ್ಲಿನ ತೊಂದರೆಗೆ ಸಹ ಅಂತಹ ಬೂದಿ ಕುಡಿಸುವ ಚಿಕಿತ್ಸೆ ಇದೆ.  ಸಕ್ಕರೆ ಕೂಡಿಸಿ ಕುಡಿಸಿದ ಎಳ್ಳಿನ ಕಷಾಯವನ್ನು ಕೆಮ್ಮು ಮತ್ತು ದಮ್ಮು ನಿವಾರಣೆಗೆ ಬಳಸಬಹುದು. ಹಸಿ ಎಲೆಯನ್ನು ಕಿವುಚಿ ನೀರಲ್ಲಿ ನೆನೆಸಿ ಇಡುವರು. ಮರುದಿನ ಕುಡಿಸಿದರೆ ಒಣ ಕೆಮ್ಮು ಪರಿಹಾರ. ಎಳ್ಳಿನ ಬಳಕೆಯಿಂದ ಹೆರಿಗೆಯ ಅನಂತರದ ಗರ್ಭಾಶಯದ ಸಹಜಸ್ಥಿತಿ ಉಂಟಾಗುತ್ತದೆ. ಹಾಲೂಡುವ ತಾಯಂದಿರು ಯಥೇಚ್ಛ ಬಳಸಲಡ್ಡಿಯಿಲ್ಲ. ಕುರದ ಬಾವು ಪರಿಹಾರಕ್ಕೆ ಎಳ್ಳಿನ ಬಿಸಿ ಬಿಸಿ ಲೇಪದ ವಿಧಾನಕ್ಕೆ ‘ಪೋಲ್ಟೀಸು’ ಎನ್ನುತ್ತಾರೆ. ಅದು ಬಾವು ಮತ್ತು ನೋವು ಪರಿಹಾರಿ. ಇಷ್ಟೆಲ್ಲ ಎಳ್ಳು ಪುರಾಣ ಓದಿದಿರಿ. ಇನ್ನು ಅದರ ಎಣ್ಣೆಯ ಬಳಕೆಯ ಅನೂಚಾನತೆ ತಿಳಿಯೋಣವೆ?
 
ದೇಹಾರೋಗ್ಯದ ಸಹಜ ಪರಿಪಾಲನೆಗೆ ನಿತ್ಯ ತಲೆ, ಕಿವಿ ಮತ್ತು ಪಾದಗಳಿಗೆ ವಿಶೇಷವಾಗಿ ಎಣ್ಣೆಯ ಮಾಲೀಶು ಬೇಕು ಎಂದು ಚರಕ ಸಂಹಿತೆ( ಕ್ರಿ. ಪೂ.  500 ವಿವರಿಸುತ್ತದೆ. ಇಡೀ ದೇಹಾಭ್ಯಂಗಕ್ಕೆ ಅದು ಒತ್ತು ನೀಡುತ್ತದೆ. ದೇಹದ ಮೂರು ದೋಷಗಳ ಪೈಕಿ ವಾತದೋಷಕ್ಕೆ ಎಳ್ಳೆಣ್ಣೆ ಬಿಟ್ಟರೆ ಬೇರೆ ಮದ್ದಿಲ್ಲ. ಅಂತಹ ಎಣ್ಣೆಯ ಅಪರಿಮಿತ ಗುಣಗಳನ್ನು ಅಧ್ಯಾಯಗಟ್ಟಲೆ ಚರಕ ಮಹರ್ಷಿ ಬಣ್ಣಿಸಿದ್ದಾರೆ. ಇನ್ನೂ ಒಂದು ವಿಶೇಷ ಇದೆ. ಎಣ್ಣೆ ಎಂದರೆ ಆಯುರ್ವೇದ ಸಂಹಿತೆಗಳ ಪರಿಭಾಷೆಯಲ್ಲಿ ಎಳ್ಳೆಣ್ಣೆಯನ್ನೇ ಸ್ವೀಕರಿಸಬೇಕು ಎಂಬ ಸೂತ್ರ ಸಹ ಇದೆ. ಆಯುರ್ವೇದದ ಪ್ರಧಾನ ಚಿಕಿತ್ಸೆ ಪಂಚಕರ್ಮಕ್ಕೆ ಪೂರ್ವಕರ್ಮ ಎಂಬುವುದು ಮುಖ್ಯ. ಅದು ಎರಡು ತರಹ: ಸ್ನೇಹನ ಮತ್ತು ಸ್ವೇದನ. ಎಣ್ಣೆ, ತುಪ್ಪ, ವಸಾ, ಮಜ್ಜೆ ಎಂಬ ನಾಲ್ಕು ಜಿಡ್ಡು ಪದಾರ್ಥಗಳು ಸ್ನೇಹನ ಚಿಕಿತ್ಸೆಯ ಮುಖ್ಯ ಸುವಸ್ತುಗಳು. ಅವುಗಳ ಪೈಕಿ ಎಳ್ಳೆಣ್ಣೆಯೇ ಅತಿ ಪ್ರಮುಖ. ಹಿಂದೂ ಹಬ್ಬಗಳ ಪೈಕಿ ಅತಿಮುಖ್ಯವಾದ್ದು ದೀವಳಿಗೆ. ಅಂತಹ ಹಬ್ಬದ ಔಚಿತ್ಯ ಅರ್ಥಪೂರ್ಣ. ಚಳಿಗಾಲದ ಎಳೆ ಬಿಸಿಲ ದಿನಗಳಲ್ಲಿ ಎಣ್ಣೆಯನ್ನು ಹಚ್ಚಿ ಮೀಯುವ ಸಾಂಕೇತಿಕತೆ ಬರಿಯ ಒಂದು ದಿನಕ್ಕೆ ಮೀಸಲಾಗಿರಬಾರದು. ಅಂತೆಯೇ ಎಳ್ಳು ಬೆಲ್ಲ ಹಂಚುವ ಸಂಕ್ರಾಂತಿ ಹಬ್ಬದ ಆಚರಣೆಯ ಹಿಂದೆ ಸಹ ಅಂತಹುದೇ ಒಂದು ಸಂದೇಶ ಇದೆ. ಚಳಿಗಾಲದ ಮೈ ಕೊರೆಯುವ ಚಳಿಗೆ ಚರ್ಮಬಿರಿತ ಸಹಜ. ಅದರ ತಡೆಗೆ ಜಿಡ್ಡಿನ ಅಂಶ ಯಥೇಚ್ಛವಾಗಿ ಅತ್ಯಗತ್ಯ. ಅಂತಹ ಅನುಕೂಲವು ಎಳ್ಳಿನ ಬಳಕೆಯಲ್ಲಿದೆ. ತಮಿಳುನಾಡಿನ ಕೆಲವೆಡೆಗಳಲ್ಲಿ ಮತ್ತು ಗಡಿಭಾಗದ ಕೆಲವೆಡೆ ಎಳ್ಳೆಣ್ಣೆಯನ್ನೇ ಅಡುಗೆಗೆ ಬಳಸುವ ಸಂಪ್ರದಾಯ ಇದೆ. ಅದು ವಾಸ್ತವವಾಗಿ ಹಿತಕರ. ಕೊಲೆಸ್ಟೆರಾಲ್ ಭೂತ ಹೊರದಬ್ಬಲು ಎಳ್ಳೆಣ್ಣೆ ಬಳಕೆ ಸೂಕ್ತ.
 
ಪೆಡಾಲಿಯೆಸೀ ಕುಟುಂಬದ ಸಸ್ಯ ಸೆಸಾಮಂ ಇಂಡಿಕಂ. ಅದರ ತಳಿಗಳು ಅನೇಕ. ಗರಿಷ್ಠ ಎತ್ತರ  ಎರಡೂವರೆ ಮೀಟರ್ ಇದ್ದೀತು. ಕನಿಷ್ಠ ಅರೆ ಮೀಟರ್ ಸಹ ಆದೀತು. ಅತಿ ಸುಂದರ ಗಂಟೆಯಂಥ ಬಿಳಿಹೂವುಗಳು. ಚೌಕ ಕಾಯಿ. ಒಳಗೆ ಇದ್ದಲು ಬಣ್ಣ ಬೀಜ ಸಾಲು.  ತಾನಾಗಿಯೇ ಬಿರಿವ ಕಾಯಿ. ಚಳಿಯ ಕೊನೆ ದಿನಗಳಲ್ಲಿ ಕೊಂಚ ಹದ ಮಾಡಿದ ಜಮೀನಿಗೆ ಬಿತ್ತನೆ. ಸುಮಾರು ನಾಲ್ಕು ತಿಂಗಳಲ್ಲಿ ಬೆಳೆ ಕಟಾವು. ಅಂದರೆ ನಡು ಬೇಸಿಗೆ ಕಾಲದ ಹೊತ್ತಿಗೆ ಬೆಳೆ ಕೈಗೆ ಬರುತ್ತದೆ. ಮರಳುಮಿಶ್ರಿತ ಗೋಡುಮಣ್ಣು ಎಳ್ಳು ಬೆಳೆಗೆ ಹೇಳಿ ಮಾಡಿಸಿದ್ದು. ಭಾರತಮೂಲದ ಎಳ್ಳು ಇಂದು ಕೊಲ್ಲಿ ದೇಶ, ಆಪ್ರಿಕ, ಚೀನಾ ಹಾಗೂ ದಕ್ಷಿಣ ಅಮೆರಿಕಕ್ಕೆ ಸಹ ಕಾಲಿರಿಸಿದೆ. ಭಾರತೀಯ ಎಲ್ಲ ಭಾಷೆಗಳಲ್ಲಿ ‘ತಿಲ’ ಎಂದು ಹೆಸರಿದೆ. ಕಾಳಿದಾಸನೊಮ್ಮೆ  ಭೋಜರಾಜನ ಆಸ್ಥಾನದ ಕುಕವಿಗಳ ಬಂಡವಾಳವನ್ನು  ಹೊರಹಾಕಲು ಒಂದು ಸಂಚು ಹೂಡಿದ ಹಾಸ್ಯಪ್ರಸಂಗ ಹೀಗಿದೆ: ರೇಷ್ಮೆಯ ಶಾಲಿನ ಒಂದು ಕಟ್ಟು ಹೊತ್ತು ಕಾಳಿದಾಸ ಆಸ್ಥಾನಕ್ಕೆ ಬಂದನಂತೆ. ಅದರಲ್ಲಿ ತಿಲಕಾಷ್ಠ ಮಹಿಷಬಂಧನ ಇದೆ. ಇದು ಆಸ್ಥಾನ ಕವಿಗಳಿಗೆ ತಿಳಿದ ವಿಚಾರವೇ – ಎಂದು ಸವಾಲು ಒಡ್ಡಿದ. ಎಲ್ಲ ಕುಕವಿಗಳು ಮುಖ ಮುಖ ನೋಡಿ ತಲೆ ತಗ್ಗಿಸಿದರಂತೆ. ರೇಷ್ಮೆ ಶಾಲಿನ ಕಟ್ಟು ಬಿಚ್ಚಿದ ಕವಿರತ್ನ, ಎಳ್ಳಿನ ಸಸಿಯ ಒಣ ಕಟ್ಟಿಗೆ ಮತ್ತು ಅದನ್ನು ಸುತ್ತಿದ ಎಮ್ಮೆ ಕಟ್ಟುವ ಹಗ್ಗವನ್ನು ಪ್ರದರ್ಶಿಸಿದನಂತೆ! 
 
ಎಳ್ಳೆಣ್ಣೆಯ ವಿಸ್ತೃತ ಬಳಕೆ ಜಪಾನಿನಲ್ಲಿದೆ. ಬಹುಶಃ ಜಪಾನೀಯರು ಕೃಶದೇಹಿಗಳಾಗಿರಲು ಅದರ ಬಳಕೆ ಕಾರಣವಾಗಿರಬಹುದು. ಕೊಲೆಸ್ಟೆರಾಲ್ ನಿರೋಧಕ ಗುಣಗಳ ಬಗ್ಗೆ ಭಾರತೀಯ ಆಯುರ್ವೇದ ವಿದ್ವಾಂಸ ಯು. ಕೆ. ಕೃಷ್ಣ ಎಂಬವರೊಬ್ಬರು ಸಂಶೋಧನೆ ಮಾಡಿ ಎರಡು ದಶಕಗಳು ಸಂದಿವೆ. ಜಪಾನೀ ಹೆಸರು ಗೋಮಾ. ಚೀನೀ ಹೆಸರು ‘ಹು ಮಾ’. ಸೆಸಾಂ,  ಜಿಂಜಿಲ್ಲಿ ಮುಂತಾದ ವಿದೇಶೀ ಹೆಸರುಗಳಿಂದ ಯುರೋಪಿನಲ್ಲಿ ಸಹ ಇದು ಪ್ರಸಿಧ್ಧ. ಆದರೆ ಅಲ್ಲಿ ಎಳ್ಳು ಬೆಳೆಯದು.
 
ಎಳ್ಳಿನ ಜಾನಪದಕಥೆ ಓದಿರಿ: ಕಡುಬೇಸಿಗೆಯ ಒಂದು ದಿನ. ಹೊಲದ ತುಂ ಕೊಬ್ಬಿದ ಎಳ್ಳಿನ ಫಸಲು. ದಾರಿಹೋಕ ಹೊಲದ ಬದಿಯಲ್ಲಿ ನಡೆದು ಹೋಗುತ್ತಿದ್ದ. ಬಿಸಿಲಿನ ಝಳಕ್ಕೆ ಫಟ್ ಅಂತ ಒಂದು ಎಳ್ಳಿನ ಕೋಡು ಸಿಡಿಯಿತು. ನಾಲ್ಕಾರು ಎಳ್ಳಿನ ಬೀಜಗಳು ದಾರಿಹೋಕನ ಬಾಯೊಳಗೆ ಬಂದು ಬಿತ್ತು. ಬಳಲಿದ ದಾರಿಹೋಕ ಸ್ವಾಭಾವಿಕವಾಗಿ ಬಾಯಿ ಚಪ್ಪರಿಸಿ ಎಳ್ಳಿನ ಬೀಜಗಳನ್ನು ರುಚಿ ಮಾಡಿ ಜಗಿದು ತಿಂದು ಬಿಟ್ಟ. ಆದರೆ ಮಾಲಿಕನ ಅಪ್ಪಣೆಯಿಲ್ಲದೆ ಎಳ್ಳುಬೀಜ ಕದ್ದು ತಿಂದ ಪಾಪ ದಾರಿಗನಿಗೆ ಅಂಟುತ್ತದೆ.  ಆ ಪಾಪದ ಫಲವಾಗಿ ಮುಂದಿನ ಜನುಮದಲ್ಲಿ ಅದೇ ಹೊಲದ ಮಾಲಿಕನ ಮನೆಯಲ್ಲಿ ಎತ್ತಿನ ಕರುವಾದ.  ದಿನವಿಡೀ ಜನುಮ ಪರ್ಯಂತ ದುಡಿದ. ತಾನು ಕದ್ದು ಮೆದ್ದ ಎಳ್ಳಿನ ಋಣವನ್ನು ತೀರಿಸಿದ. ಎಳ್ಳಿನ ಋಣ ಸಂದಾಯದ ಸುಂದರ ಜಾನಪದಕಥೆ ಇದು. ಅಪ್ಪಟ ಅಪರಿಗ್ರಹದ ನೀತಿಬೋಧಕ ಕಥೆ ತಾನೇ.
 
ಧಾರ್ಮಿಕ ಕಾರ್ಯಗಳಲ್ಲಿ ಸಂಕ್ರಾಂತಿ ಹಬ್ಬದ ಸಡಗರದಲ್ಲಿ ಎಳ್ಳಿನ ವಿತರಣೆ ಇದೆ.  ಉಳಿದಂತೆ ಅಂತಹ ಪ್ರಶಸ್ತ ಸ್ಥಾನ ಎಳ್ಳಿನದಲ್ಲ. ಅಪರ ಕ್ರಿಯೆಯಲ್ಲಿ ಅದು ಬೇಕು. ನವಗ್ರಹಗಳ ಪೈಕಿ ಶನಿಗ್ರಹದ ತೃಪ್ತಿಗೆ ಎಳ್ಳು ದಾನ ನೀಡುವರು. ಮಹಾಲಯ ಅಮಾವಾಸ್ಯೆ ಮತ್ತು ಇತರ ಶ್ರಾಧ್ಧ ಕರ್ಮಗಳಲ್ಲಿ ಕುಟುಂಬದ ಗತಿಸಿದ ಹಿರಿಯರೆಲ್ಲರನ್ನು ನೆನೆದು ಎಳ್ಳು ನೀರು ಬಿಡುವರು. ಅಂತಹ ನುಡಿಗಟ್ಟು ಸಹ ನಮ್ಮ ಭಾಷಾಪ್ರಪಂಚದಲ್ಲಿ ಸ್ಥಿರ. ಎಳ್ಳಿನ ಉಂಡೆಯನ್ನು ಆಗತಾನೇ  ಮೈನರೆದ ಕಿಶೋರಿಯರಿಗೆ ಹೇರಳ ತಿನ್ನಿಸುವರು. ಇದರಿಂದ ಅವರ ಮಾಸಿಕ ಸ್ರಾವದ ಸಹಜ ಸ್ಥಿತಿಗೆ ಅನುಕೂಲ. ಚೋದನಿಕೆಗಳ ಏರುಪೇರಿನಿಂದ ದೂರ. ಚಿಗಳಿ ಉಂಡೆ ಎಂಬ ಹೆಸರಿನಿಂದ ಇದು ಪ್ರಖ್ಯಾತ. ಇಂದಿಗೂ ಮುಟ್ಟಿನ ದಿನಗಳು ಏರುಪೇರಾದ ಸಂದರ್ಭಗಳಲ್ಲಿ ಎಳ್ಳು ತಿನ್ನಿಸಿ ಸರಿ ಪಡಿಸಿಕೊಳ್ಳುವ  ಮನೆಮದ್ದು ಜನಪದದ ವಿಶೇಷ. ಮೂಲವ್ಯಾಧಿಯ ರಕ್ತಸ್ರಾವ ಮತ್ತು ಮೊಳಕೆಯ ಬೆಳವಣಿಗೆಗೆ ಕಡಿವಾಣ ಹಾಕಲು ನೆನೆಸಿದ ಎಳ್ಳು ಬಿಝ ತಿನ್ನಿಸುವರು. ಎಳ್ಳಿನ ಜೊತೆಗೆ ಅರೆದುಕೊಂಡ ಇತರ ಸಂಭಾರಗಳಿಗೆ ದಟ್ಟ ರುಚಿ ಇದೆ. ಹೀಗಾಗಿ ಅನೇಕ ವಿಶೇಷ ತಿಂಡಿ ಮತ್ತು ಅಡುಗೆಯಲ್ಲಿ ಎಳ್ಳನ್ನು ಬಳಸುವರು. ಕರಾವಳಿ ಅಡುಗೆಯಲ್ಲಿ ಪ್ರಸಿದ್ಧ ಎನಿಸಿದ ‘ಮೆಣಸ್‌ಕಾಯಿ’ ಎಂಬ ಸಿಹಿಗೊಜ್ಜಿನ ಮೂಲ ಪರಿಕರವು ಎಳ್ಳು. ಹಾಗೆಂದು ದಿನ ನಿತ್ಯ ಎಳ್ಳು ಹುರಿದು ಅಂತಹ ಉಪಖಾದ್ಯ  ತಯಾರಿಸಬಾರದೆಂದು ನಿಷೇಧ ಸಹ ಇದೆ. ಅಂತಹ ರಿವಾಜಿನ ಹಿಂದೆ ಎಳ್ಳಿನ ದುರ್ಬಳಕೆಯ ಬಗ್ಗೆ ನಮ್ಮ ಪೂರ್ವಿಕರ ಕಾಳಜಿ ಮತ್ತು ನಂಬಿಕೆ ಸುಸ್ಪಷ್ಟ. 
 
ಗಯೆ ಇಂದು ಹಿಂದುಗಳ ಪವಿತ್ರ ಯಾತ್ರಾ ಸ್ಥಳ. ಅದರ ಸನಿಹದ ಬೋಧಗಯೆ ಬುದ್ಧನ ಜ್ಞಾನೋದಯದ ತಾಣ. ಇಂತಹ ಪರಿಸರದಲ್ಲಿ ‘ತಿಲಕುಟ್’ ಎಂಬ ಒಂದು ತಿಂಡಿ ಮಾರುವ ಅಂಗಡಿ ಬಹಳ ಪ್ರಸಿದ್ಧ. ಅದು ಇಡೀ ಬಿಹಾರದ ಮಂದಿಗೆ ಪರಿಚಿತ ಕೂಡ. ಲೋನಾವಳದ ಚಿಕ್ಕಿ, ಧಾರವಾಢದ ಫೇಡೆ, ಬೆಳಗಾಂ ಕುಂದಾ ತರಹ ಬಿಹಾರದ ತಿಲಕುಟ್ ಕೂಡ ಪ್ರಸಿದ್ಧ. ಯಕಶ್ಚಿತ್ ಎಳ್ಳಿನಿಂದ ಅಂತಹ ತಿಂಡಿ ಮಾಡಲಾದೀತು ಎಂದರೆ ಯಾರಿಗಾದರೂ ಅಚ್ಚರಿಯೇ. ಎಳ್ಳಿನ ಮಹಿಮೆಯೇ ಅಂಥಹದು. ಆದರೆ ಗಯೆಯ ಆಸುಪಾಸು ಹೆಚ್ಚಿನ ಯಾತ್ರಾರ್ಥಿಗಳು ಬರುವರು ಎಂದು ಇಂತಹ ಅಂಗಡಿ ಅಲ್ಲಿರುವುದಲ್ಲ. ಇನ್ನೊಂದು ಕಾರಣ ಸಹ ಇಲ್ಲಿ ಪ್ರಸ್ತುತ. ಇಂದಿಗೂ ಸಹ ಗಯೆಗೆ ಹೋಗುವ ಹಿಂದೂ ಸಮುದಾಯದ ಮಂದಿ ಅಗಲಿದ ಪಿತೃಗಳಿಗೆ ತರ್ಪಣ ಮತ್ತು ಪಿಂಡ ಪ್ರದಾನ ಮಾಡುವರು. ಅಂತಹ ಕ್ರಿಯೆಗಳಿಗೆ ಬೇಕಾದ್ದು ಎಳ್ಳು ಮಾತ್ರ.  ಹೀಗಾಗಿ  ಅಗಲಿದ ಮಹನೀಯರಿಗೆ ಸಲ್ಲುವ ಎಳ್ಳು ಬಳಸಿ ತಿಂಡಿಯನ್ನು ತಯಾರಿಸುವ ಕಲೆಗಾರಿಕೆ ಇಲ್ಲಿ ರೂಪುಗೊಂಡಿತೆ – ಎಂಬ ಸಂಶಯ ಸಹಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.