ADVERTISEMENT

ಖಾಸಗೀಕರಣದಿಂದ ಸುಧಾರಿಸೀತೆ ಆರೋಗ್ಯ?

ಕೆ.ಸಿ.ರಘು
Published 4 ಆಗಸ್ಟ್ 2017, 19:30 IST
Last Updated 4 ಆಗಸ್ಟ್ 2017, 19:30 IST
ಖಾಸಗೀಕರಣದಿಂದ ಸುಧಾರಿಸೀತೆ ಆರೋಗ್ಯ?
ಖಾಸಗೀಕರಣದಿಂದ ಸುಧಾರಿಸೀತೆ ಆರೋಗ್ಯ?   

ಇತ್ತೀಚೆಗೆ ಕೇಂದ್ರ ಸರ್ಕಾರದ ನೀತಿ ಆಯೋಗ ಕೆಲವು ಹೊಸ ಮಾರ್ಗಸೂಚಿಗಳನ್ನು ಹೊರತಂದಿದೆ. ಅವುಗಳಲ್ಲಿ ಪ್ರಮುಖವಾದುದು, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ಬಿಟ್ಟುಕೊಡುವುದು. ಹಾಗೆಯೇ ಸರ್ಕಾರಿ ಶಾಲೆಗಳನ್ನು ಖಾಸಗಿಯವರು ನಡೆಸಲು ಉತ್ತೇಜಿಸುವುದು ಮತ್ತು ಬಂದರು, ರಸ್ತೆ, ವಿಮಾನ ನಿಲ್ದಾಣಗಳನ್ನು ಸಹ ಖಾಸಗಿಯವರು ನಡೆಸುವಂತೆ ಸೂಚಿಸಲಾಗಿದೆ.

ನೀತಿ ಆಯೋಗದ ಪ್ರಕಾರ ಆಸ್ಪತ್ರೆಗಳ ನಿರ್ವಹಣೆಯಲ್ಲಿ ಸರ್ಕಾರ ಸೋಲುಂಡಿದೆ. ಲಭ್ಯ ಮೂಲ ಸೌಕರ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ಸೋತಿರುವ ಸರ್ಕಾರ, ಜನಸಾಮಾನ್ಯರ ಆರೋಗ್ಯದಲ್ಲಿ ಸುಧಾರಣೆ ತರುವ ಪ್ರಯತ್ನದಲ್ಲಿ ಅನೇಕ ವರ್ಷಗಳಿಂದ ಎಡವುತ್ತಲೇ ಇದೆ. ಹೀಗಾಗಿ ಸರ್ಕಾರದ ಹಿಡಿತದಲ್ಲಿರುವ ಆಸ್ಪತ್ರೆಗಳನ್ನು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಖಾಸಗಿಯವರಿಗೆ ವಹಿಸಿಕೊಡುವ ಮೂಲಕ ಅವುಗಳ ಸುಧಾರಣೆಗೆ ಪ್ರಯತ್ನಿಸುವ ಚಿಂತನೆ ಆಯೋಗದ್ದು.

ಖಾಸಗಿ ವ್ಯಾಪ್ತಿಗೆ ಬರುವ ಸರ್ಕಾರಿ ಆಸ್ಪತ್ರೆಗಳ ಮೂಲಕ ಜನಸಾಮಾನ್ಯರಿಗೆ ವಿಮಾ ಯೋಜನೆಯಡಿ ಚಿಕಿತ್ಸೆ ದೊರೆಯುವಂತೆ ಮಾಡುವುದು ಹಾಗೂ ಬಡವರಿಗೆ ಕೊಟ್ಟ ಚಿಕಿತ್ಸೆಯ ಹಣವನ್ನು ಸಹಾಯಧನದ ಮೂಲಕ ಸರ್ಕಾರ ಭರಿಸುವ ಪ್ರಸ್ತಾಪವಿದೆ. ಜೊತೆಗೆ, ಸ್ವಂತ ಖರ್ಚಿನಿಂದ ಚಿಕಿತ್ಸೆ ಪಡೆಯುವವರಿಗೂ ಅಲ್ಲಿ ಅವಕಾಶ ಕಲ್ಪಿಸಲಾಗುವುದು.

ADVERTISEMENT

ಈಗಾಗಲೇ ರಾಜಸ್ಥಾನ, ಗುಜರಾತ್‍ಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ (ಠಿubಟiಛಿ ಠಿಡಿivಚಿಣe ಠಿಚಿಡಿಣಟಿeಡಿshiಠಿ) ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿಯವರಿಗೆ ಹರಾಜು ಮೂಲಕ ವಹಿಸಿಕೊಡಲಾಗುತ್ತಿದೆ. ಇತ್ತೀಚಿನ ಆಲೋಚನೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಇದೇ ನಿಟ್ಟಿನಲ್ಲಿ ನಡೆಯುತ್ತಿದೆ. ದವಸ ಧಾನ್ಯಗಳ ಪಡಿತರ ವ್ಯವಸ್ಥೆಯನ್ನೂ ಬದಲಿಸಲು ಚಿಂತಿಸಲಾಗುತ್ತಿದೆ. ಧಾನ್ಯಗಳ ಫಲಾನುಭವಿಗಳ ಖಾತೆಗೆ ಹಣ ಹಾಕುವುದು ಹಾಗೂ ಆ ಮೂಲಕ ಗ್ರಾಹಕರು ತಮಗಿಷ್ಟಬಂದ ಆಹಾರವನ್ನು ಮಾರುಕಟ್ಟೆಯಲ್ಲಿ ಪಡೆಯುವಂತೆ ಮಾಡುವ ಚಿಂತನೆಯಿದು. ಉದಾಹರಣೆಗೆ, ಸೀಮೆ ಎಣ್ಣೆ ಸಹಾಯಧನವನ್ನು ನೇರವಾಗಿ ಖಾತೆಗೆ ಹಾಕುವುದು.

ವಿವಿಧ ಯೋಜನೆಗಳನ್ನು ನಿಲ್ಲಿಸಿ, ವರ್ಷಕ್ಕೆ 10-12 ಸಾವಿರ ರೂಪಾಯಿಯನ್ನು ಫಲಾನುಭವಿಗಳ ಖಾತೆಗೆ ಹಾಕುವ ಮೂಲಕ, ಈ ಎಲ್ಲ ಯೋಜನೆಗಳ ಜವಾಬ್ದಾರಿಯಿಂದ ಕೈತೊಳೆದುಕೊಳ್ಳುವ ‘ಯೂನಿವರ್ಸಲ್ ಬೇಸಿಕ್ ಇನ್‍ಕಂ’ ಎಂಬ ಹೊಸ ಆಲೋಚನೆಯೂ ಸರ್ಕಾರಿ ವಲಯದಲ್ಲಿದೆ.

ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಕರ್ನಾಟಕಕ್ಕೆ ಹೊಸತೇನೂ ಅಲ್ಲ. ಈ ನಿಟ್ಟಿನಲ್ಲಿ ಕರ್ನಾಟಕವೇ ಮೊದಲ ಹೆಜ್ಜೆ ಇಟ್ಟಿದೆ ಎನ್ನುವುದು ಕೆಲವರಿಗಾದರೂ ನೆನಪಿರಬಹುದು. 1997ರಲ್ಲಿಯೇ ರಾಯಚೂರಿನಲ್ಲಿರುವ ‘ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯನ್ನು ಸರ್ಕಾ ಅಪೋಲೋ ಆಸ್ಪತ್ರೆಗೆ ವಹಿಸಿಕೊಟ್ಟಿತ್ತು.

ಈ ಒಡಂಬಡಿಕೆಯ ಆಸ್ಪತ್ರೆಯ ನಾಲ್ಕನೇ ಮೂರರಷ್ಟು ಸೇವೆಗಳನ್ನು ಅಲ್ಲಿನ ಬಡವರ ಸೇವೆಗಾಗಿ ಮೀಸಲಿಡಬೇಕಾಗಿತ್ತು. ಆದರೆ ಅಲ್ಲಿ ನಡೆದುದೇ ಬೇರೆ. ಬಡರೋಗಿಗಳ ನೊಂದಣಿ ಅಲ್ಲಿ ಶೇ 25ಕ್ಕೂ ಕಡಿಮೆಯಿದೆ. ಖಾಸಗಿ ಆರೋಗ್ಯ ಸೇವೆಗೆ ವಹಿಸಿದ್ದ ‘ಭಿಕ್ಷುಕರ ವಸತಿ ಕೇಂದ್ರ’ವೊಂದರಲ್ಲಿ ಸಾವುನೋವುಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿದ್ದ ಸುದ್ದಿಯನ್ನೂ ಇಲ್ಲಿ ಗಮನಿಸಬೇಕು. ನೋವಿಗೂ ಖಾಸಗಿ ಸಂಸ್ಥೆ ಕಾರಣವಾಗಿತ್ತು. ಸರ್ಕಾರ ಇವೆರಡೂ ಒಡಂಬಡಿಕೆಯನ್ನು ರದ್ದುಗೊಳಿದೆ.

ಸಾಮಾನ್ಯವಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸರ್ಕಾರ ಉತ್ತಮವಾದ ಮೂಲ ಸೌಕರ್ಯ ವ್ಯವಸ್ಥೆಯನ್ನು ಹೊಂದಿರುತ್ತದೆ. ಪ್ರಸ್ತುತ ಜಿಲ್ಲೆ-ತಾಲ್ಲೂಕು ಸ್ಥಳಗಳಲ್ಲಿ ಸ್ಥಳಾವಕಾಶ ಪಡೆದು ಆಸ್ಪತ್ರೆಗಳನ್ನು ರೂಪಿಸುವುದು ದುಬಾರಿ ಬಾಬತ್ತಾಗಿದೆ. ಹಾಗಾಗಿ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಪ್ರಯತ್ನಗಳು ಖಾಸಗಿಯವರಿಂದ ನಡೆಯುತ್ತಿರುತ್ತವೆ. ಇಂಥ ಪ್ರಯತ್ನಗಳಲ್ಲಿ ಸೇವೆಗಿಂಥ ಲಾಭದ ಉದ್ದೇಶವೇ ಮುಖ್ಯವಾಗಿರುತ್ತದೆ.

ದೇಶದಲ್ಲಿನ ಖಾಸಗಿ ಆಸ್ಪತ್ರೆ ವ್ಯವಸ್ಥೆ ಇಂದಿಗೂ ತಾನು ಚಿಕಿತ್ಸೆ ಕೊಟ್ಟ ರೋಗಿಯ ವಿವರ, ಕಾಯಿಲೆಯ ಸ್ವರೂಪದ ವಿವರಗಳನ್ನು ಸರ್ಕಾರಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿಲ್ಲ. ಖಾಸಗಿಯವರ ಈ ಅಸಹಕಾರದಿಂದಲೇ ಕ್ಷಯರೋಗ ತಡೆಗಟ್ಟುವಲ್ಲಿ ಮತ್ತು ಸರಿಯಾಗಿ ನಿರ್ವಹಿಸುವಲ್ಲಿ ಕರ್ನಾಟಕದಲ್ಲಿ ರಾಜ್ಯ ಸರ್ಕಾರಕ್ಕೆ ಸೋಲಾಗುತ್ತಿದೆ ಎನ್ನಲಾಗಿದೆ. ಭಾರತದಲ್ಲಿ ಕೇವಲ ಶೇ 10ರಷ್ಟು ಸಾವಿನ ಪ್ರಕರಣಗಳನ್ನಷ್ಟೇ ವೈದ್ಯಕೀಯವಾಗಿ ನಿರ್ಧರಿಸಿ ದಾಖಲಿಸಲಾಗುತ್ತಿದೆ. ಮುಂದುವರಿದ ರಾಷ್ಟ್ರಗಳಲ್ಲಿ ಈ ಪ್ರಮಾಣ ಶೇ 90ಕ್ಕೂ ಹೆಚ್ಚಿದೆ.

ಸರ್ಕಾರ ಕೊಡುವ ವಿಮೆ-ಸಹಾಯಧನಗಳು, ಔಷಧ ಮತ್ತು ರೋಗ ತಪಾಸಣೆಯ ಖರ್ಚನ್ನೂ ಭರಿಸುತ್ತಿಲ್ಲ. ಹೀಗಾಗಿ ಹೊರ ನೋಟಕ್ಕೆ ಸರ್ಕಾರ ‘ಉಚಿತ ಸೇವೆ’ ಎಂದು ತೋರಿದರೂ ಸಹ ಖಾಸಗಿಯಾಗಿ ಹಣ ಖರ್ಚು ಮಾಡುವುದು ಮುಂದುವರಿಯುತ್ತಲೇ ಇದೆ. ಆಂಧ್ರ ಪ್ರದೇಶದ ಹೆಸರಾಂತ ‘ಆರೋಗ್ಯಶ್ರೀ’ ಯೋಜನೆ ಹಾಗೂ ಕೇಂದ್ರದ ವಿಮಾ ಯೋಜನೆಗಳೂ ಇದಕ್ಕೆ ಹೊರತಲ್ಲ.

ಆರೋಗ್ಯ ಮತ್ತು ಶಿಕ್ಷಣವನ್ನು ಜನಸಾಮಾನ್ಯರಿಗೆ ಉಚಿತವಾಗಿ ತಲುಪಿಸುವಲ್ಲಿ ಸರ್ಕಾರ ವಿಫಲವಾಗಿರುವುದು ಸತ್ಯವಾದರೂ ಅಲ್ಲಲ್ಲಿ ಇಂದಿಗೂ ಉತ್ತಮ ಉದಾಹರಣೆಗಳು ನಮ್ಮ ನಡುವೆ ಇವೆ. ಉದಾಹರಣೆಗೆ, ಕೇಂದ್ರೀಯ ವಿದ್ಯಾಲಯಗಳು ಯಾವುದೇ ಅಂತರರಾಷ್ಟ್ರೀಯ ಶಾಲೆಗೂ ಮೀರಿ ಕಾರ್ಯ ನಿರ್ವಹಿಸುತ್ತಿವೆ. ನಮ್ಮಲ್ಲಿ ಶೇ 80ರಷ್ಟು ಆರೋಗ್ಯ ವ್ಯವಸ್ಥೆಯ ಮೂಲ ಸೌಕರ್ಯ ಇರುವುದು ಸರ್ಕಾರಿ ಸ್ವಾಮ್ಯದಲ್ಲಿ. ಆದರೆ ಜನ ಶೇ 80ರಷ್ಟು ಖರ್ಚು ಮಾಡುತ್ತಿರುವುದು ಖಾಸಗಿ ಆಸ್ಪತ್ರೆಯಲ್ಲಿ. ಸರ್ಕಾರ ಈ ಸೌಕರ್ಯವನ್ನು ಖಾಸಗಿಗೆ ವಹಿಸುವುದರಿಂದ ಇದು ಬದಲಾಗುತ್ತದೆ ಎನ್ನುವುದು ಸಂದೇಹಾಸ್ಪದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.