ADVERTISEMENT

ತತ್ವ–ಸಿದ್ಧಾಂತಗಳಿದ್ದರೆ ಒತ್ತಡ ದೂರ

ಸಂತೋಷ ಜಿಗಳಿಕೊಪ್ಪ
Published 22 ಮೇ 2018, 19:30 IST
Last Updated 22 ಮೇ 2018, 19:30 IST
ಕೆ. ಅಣ್ಣಾಮಲೈ
ಕೆ. ಅಣ್ಣಾಮಲೈ   

ಜೀವನದಲ್ಲಿ ಪ್ರತಿಯೊಂದಕ್ಕೂ ತತ್ತ್ವ–ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು. ನಾನು ಈ ಕೆಲಸವನ್ನು ಮಾಡುತ್ತೇನೆ; ಇಂತಹ ಕೆಲಸವನ್ನು ಮಾಡುವುದಿಲ್ಲ ಎಂಬುದನ್ನು ಮನಸ್ಸಿನಲ್ಲಿ ಅಂದುಕೊಂಡಿರುತ್ತೇನೆ. ಆಗ ನನ್ನಲ್ಲಿ ಒತ್ತಡದ ಪ್ರಮಾಣ ಕಡಿಮೆಯಾಗುತ್ತದೆ.

ನಾನು ಈ ಕೆಲಸ ಮಾಡುವುದಿಲ್ಲ ಅಥವಾ ಇದು ನನಗೆ ಇಷ್ಟವಿಲ್ಲ ಎಂಬ ಕೆಲಸದ ಜೊತೆಗೆ ರಾಜಿ ಮಾಡಿಕೊಳ್ಳುವುದಿಲ್ಲ. ಮಾಡಬೇಕು ಎಂದುಕೊಂಡಿರುವ ಕೆಲಸವನ್ನು ಮಾಡಿಯೇ ಮಾಡುತ್ತೇನೆ. ಹಾ‌ಗಾಗಿ ನನ್ನಲ್ಲಿ ಮನಸ್ಸಿನ ವಿರುದ್ಧವಾಗಿ ಹೋಗುವ ಮಾತೇ ಬರುವುದಿಲ್ಲ. ಮನಸ್ಸಿಗೆ ವಿರುದ್ಧವಾದ ಕೆಲಸ ಮಾಡಿದಾಗ ಮಾತ್ರ ಒತ್ತಡ ಉಂಟಾಗುತ್ತದೆ ಎಂಬುದು ನನ್ನ ಅನಿಸಿಕೆ.

ಪೊಲೀಸ್ ಇಲಾಖೆ ಎಂದ ಮೇಲೆ ಒತ್ತಡ ಇದ್ದೇ ಇರುತ್ತದೆ. ಇತ್ತೀಚೆಗೆ ಪೊಲೀಸರ ಕೆಲಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸರ್ಕಾರದ ಬೇರೆ ಬೇರೆ ಇಲಾಖೆ ವ್ಯಾಪ್ತಿಯ ಮುನ್ಸಿಪಾಲಿಟಿ, ರಸ್ತೆ, ನೀರು, ಆರೋಗ್ಯ – ಹೀಗೆ ಹಲವು ಸಮಸ್ಯೆಗಳು ಪೊಲೀಸರ ವ್ಯಾಪ್ತಿಗೆ ಬರುತ್ತಿವೆ. ರಾಜಕೀಯ ಪಕ್ಷಗಳ ಕಾರ್ಯಕ್ರಮ, ವಿವಿಐಪಿ ಬಂದೋಬಸ್ತ್‌ಗಳೇ ಹೆಚ್ಚಾಗುತ್ತಿವೆ. ಇವುಗಳೇ ನಮ್ಮ ಮೇಲೆ ಒತ್ತಡ ಹೆಚ್ಚಲು ಕಾರಣವಾಗುತ್ತಿವೆ.

ADVERTISEMENT

ಈ ಒತ್ತಡಗಳ ನಡುವೆ ಪೊಲೀಸರು, ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಆಗುತ್ತಿಲ್ಲ. ಬೀಟ್ ವ್ಯವಸ್ಥೆಯೇ ಮಾಯವಾಗುತ್ತಿದೆ. ಮನೆ ಮನೆಗೆ ಹೋಗಿ ಜನರನ್ನು ಭೇಟಿ ಮಾಡಿ ಸಣ್ಣಪುಟ್ಟ ಸಮಸ್ಯೆ ಪರಿಹರಿಸುವುದು ಸಾಧ್ಯವಾಗುತ್ತಿಲ್ಲ. ಮೊದಲೆಲ್ಲ ಹಳ್ಳಿಗಳಿಗೆ ಪೊಲೀಸರೇ ಭೇಟಿ ಮಾಡಿ, ಸಮಸ್ಯೆ ಬಗೆಹರಿಸುತ್ತಿದ್ದರು. ಈಗ ಅದು ಕಣ್ಮರೆಯಾಗುತ್ತಿದೆ. ಸಮುದಾಯ ಪೊಲೀಸಿಂಗ್‌ ಮಾಡುವುದನ್ನೇ ನಾವು ಬಿಟ್ಟಿದ್ದೇವೆ. ಅದಕ್ಕೆ ಸಮಯವೇ ಸಿಗುತ್ತಿಲ್ಲ.

ಇನ್ನು ಅಪಘಾತದಲ್ಲಿ ಜನರು ಸಾಯುವುದನ್ನು ನೋಡಿದರೆ ನನಗೆ ದುಃಖ, ಒತ್ತಡವಾಗುತ್ತದೆ. ಅಯ್ಯೋ ಪಾಪ, ಪೊಲೀಸರು ಸರಿಯಾಗಿ ಕೆಲಸ ಮಾಡಿದ್ದರೆ, ಹೆದ್ದಾರಿಯವರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಅವರು ಸಾಯುತ್ತಿರಲಿಲ್ಲ ಎಂದೆಲ್ಲಾ ಯೋಚನೆ ಮಾಡುತ್ತೇನೆ. ಅದು ನನ್ನ ವ್ಯಾಪ್ತಿಗೆ ಬಾರದ ವಿಷಯವಾದರೂ ಮನಸ್ಸಿಗೆ ತುಂಬಾ ನೋವಾಗುತ್ತದೆ.

ನನ್ನ ಜೀವನದಲ್ಲಿ ಏಳು ಅಥವಾ ಎಂಟು ತತ್ವ– ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದೇನೆ. ಅದರಲ್ಲಿ ಸ್ಪಷ್ಟವಾಗಿದ್ದೇನೆ, ಇರಲೇಬೇಕು. ಈ ವಿಷಯವನ್ನು ನಾನು ಮಾಡುವುದಿಲ್ಲ, ಈ ವಿಷಯವನ್ನು ನಾನು ಮಾಡುತ್ತೇನೆ ಎಂದು ಅಂದುಕೊಂಡಿದ್ದೇನೆ. ಅದರಲ್ಲಿ ರಾಜಿ ಆಗುವುದಿಲ್ಲ. ಅದರಿಂದಲೇ ತ್ವರಿತ ಸಂದರ್ಭಗಳಲ್ಲೂ ಬಹುಬೇಗನೇ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗುತ್ತಿದೆ.

ಒಂದೊಂದು ದಿನ ಒಂದೊಂದು ರೀತಿ ಮಾಡಿದರೆ ಒತ್ತಡವೂ ಜಾಸ್ತಿ ಆಗುತ್ತದೆ. ನನಗೆ ತತ್ವ–ಸಿದ್ಧಾಂತಗಳು ಇರುವುದರಿಂದ ನನ್ನಲ್ಲಿ ಒತ್ತಡ ಕಡಿಮೆ. ನಾನು ಯಾವ ರೀತಿ ಇದ್ದೇನೆ ಎಂಬುದು ರಾಜಕಾರಣಿಗಳು, ನನ್ನ ಸಿಬ್ಬಂದಿಗೂ ತಿಳಿಯುತ್ತದೆ. ನಮ್ಮ ಎಸ್ಪಿ ಈ ವಿಷಯಕ್ಕೆ ಸೇರಲ್ಲ, ಅದನ್ನು ಮಾಡಬಾರದು ಎಂದು ಅವರೇ ಅಂದುಕೊಳ್ಳುತ್ತಾರೆ. ಜನರಿಗೂ ನಾನು ಎಂಥ ಅಧಿಕಾರಿ ಎಂಬುದು ತಿಳಿಯುತ್ತದೆ. ಆಗ ಒತ್ತಡದ ಪ್ರಶ್ನೆಯೇ ಬರುವುದಿಲ್ಲ.

ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾದ ಘಟನೆ ನಾನು ಉಡುಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಡೆದಿತ್ತು. ಆಗ ಆ ಪ್ರಕರಣದಲ್ಲಿ ಆರೋಪಿಗಳನ್ನು ಬೇಗನೇ ಬಂಧಿಸಿ ಕುಟುಂಬಕ್ಕೆ ಹಾಗೂ ಜನರಿಗೆ ನ್ಯಾಯ ಒದಗಿಸಬೇಕು ಎಂಬ ಒತ್ತಡ ನನ್ನ ಮೇಲಿತ್ತು. ಅದಕ್ಕಾಗಿ ಮೂರ್ನಾಲ್ಕು ದಿನ ಹಗಲು ರಾತ್ರಿ ಕೆಲಸ ಮಾಡಿದ್ದೆ. ಅದು ನನಗೆ ಸವಾಲಾದ ಪ್ರಕರಣವೂ ಆಗಿತ್ತು.

ಇನ್ನು ಶಿವಮೊಗ್ಗದಲ್ಲಿ ಪ್ರೊಬೇಷನರಿ ಅಧಿಕಾರಿ ಇದ್ದಾಗ, ಅಲ್ಲೊಂದು ಡಕಾಯಿತಿ ನಡೆದಿತ್ತು. ದೊಡ್ಡ ಪ್ರಕರಣ ಅದಾಗಿದ್ದರಿಂದ ಒತ್ತಡವೂ ಜಾಸ್ತಿ ಇತ್ತು. ಕಷ್ಟಪಟ್ಟು ತನಿಖೆ ಮುಗಿಸಿದೆ. 2 ಕೆ.ಜಿ. ಚಿನ್ನ ಜಪ್ತಿ ಮಾಡಿದ್ದೆ. ನನ್ನ ವೃತ್ತಿಜೀವನದಲ್ಲೇ ಈ ಎರಡೂ ಪ್ರಕರಣಗಳು ಹೆಚ್ಚು ಒತ್ತಡ ತಂದಿದ್ದವು.

ಒತ್ತಡ ಕಡಿಮೆ ಮಾಡಿಕೊಳ್ಳಲು ನಾನು ಕೆಲವೊಂದು ಸೂತ್ರಗಳನ್ನು ಅನುಸರಿಸಿಕೊಂಡಿದ್ದೇನೆ. ನಾನು ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಗೆ ಏಳುತ್ತೇನೆ. ವಾರದಲ್ಲಿ ಎರಡು, ಮೂರು ದಿನ 5 ಕಿ.ಮೀ. ಓಡುತ್ತೇನೆ. ಸೈಕ್ಲಿಂಗ್ ಸಹ ಮಾಡುತ್ತೇನೆ. ಸಮಯ ಸಿಕ್ಕಾಗಲೆಲ್ಲಾ ಯೋಗ ಮಾಡುತ್ತೇನೆ. ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ. ದೈಹಿಕ ಆರೋಗ್ಯ ಉತ್ತಮವಾಗಿದ್ದರೆ ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ. ಮನೆಯವರೊಂದಿಗೆ ಸಮಯ ಕಳೆಯುವುದರಿಂದ ಕೂಡ ಒತ್ತಡವನ್ನು ನಿವಾರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.