ADVERTISEMENT

ನಂಬಿಕೆಯ ಬಗ್ಗೆ ಇರಲಿ ನಂಬಿಕೆ

ವಿಜಯಾ ಶ್ರೀಧರ್
Published 23 ಮೇ 2017, 19:30 IST
Last Updated 23 ಮೇ 2017, 19:30 IST
ನಂಬಿಕೆಯ ಬಗ್ಗೆ ಇರಲಿ ನಂಬಿಕೆ
ನಂಬಿಕೆಯ ಬಗ್ಗೆ ಇರಲಿ ನಂಬಿಕೆ   

‘ನಂಬರು, ನಚ್ಚರು ಬರಿದೆ ಕರೆವರು, ನಂಬಿ ಕರೆದರೆ ಓ ಎನ್ನನೇ ಶಿವನು’ ಎಂದು ಬಸವಣ್ಣನವರು ಹೇಳಿದರೆ, ಇದಕ್ಕೆ ಸಂವಾದಿಯಾಗಿ ‘ನಂಬಿ ಕೆಟ್ಟವರಿಲ್ಲವೋ’ ಎಂದು ದಾಸರು ಹಾಡಿದರು. ದೇವರು ಮತ್ತು ಭಕ್ತರ ಮಧ್ಯೆಯ ನಂಬಿಕೆ ಕುರಿತಾದ ಮಾತುಗಳು ಇವು. ಜೀವನದ ಎಲ್ಲ ಕ್ಷೇತ್ರಗಳಲ್ಲಿ ನಂಬಿಕೆ ಕೆಲಸ ಮಾಡುತ್ತದೆ, ಮಾಡಬೇಕು.

ರಾಷ್ಟ್ರಕವಿ ಕುವೆಂಪುರವರು ‘ರವಿಗಿಲ್ಲದ ಭಯ, ಶಶಿಗಿಲ್ಲದ ಭಯ’ ಎನ್ನುತ್ತ ಅಣುಶ್ರದ್ಧೆಯನಿಡು, ನಿನ್ನನ್ನೇ ನೀ ನೈವೇದ್ಯ ನೀಡು ಇಡು ಎಂದು ‘ತೇನ ವಿನಾ’ ಕವನದಲ್ಲಿ ಹಾಡಿದ್ದಾರೆ. ಅಣುಶ್ರದ್ಧೆ ಎರಡು ರೀತಿಯ ಅರ್ಥವನ್ನು ಕೊಡುತ್ತದೆ. ಅಣುರೇಣುತೃಣಕಾಷ್ಠಗಳಲ್ಲೂ ಈ ಚೈತನ್ಯರೂಪಿ ಇದ್ದಾನೆಂದು ನಂಬು ಎಂಬರ್ಥ ಒಂದಾದರೆ, ಈ ಪ್ರಕೃತಿಯಲ್ಲಿ ರವಿ, ಶಶಿ, ತಾರಾಗಣಕ್ಕೆ ಇಲ್ಲದ ಭಯ ಮನುಷ್ಯನಿಗೆ ಮಾತ್ರ ಏಕೆ, ಒಂದು ಅಣುವಿನಷ್ಟಾದರೂ ಶ್ರದ್ಧೆ ಇಡು ಎಂದು ಹೇಳುತ್ತಾರೆ.

ಯಾವುದೋ ಒಂದು ತತ್ವದಲ್ಲಿ, ಚೈತನ್ಯದಲ್ಲಿ ಅಚಲವಾದ ನಂಬಿಕೆ ಇಟ್ಟಾಗ ಅದು ನಿಶ್ಚಿತವಾಗಿ ಸಹಾಯ ಮಾಡಿದ ಘಟನೆ, ಕಥೆಗಳನ್ನು ನಾವು ಕೇಳಿದ್ದೇವೆ. ಅಡವಿಯ ದಾರಿಯಲ್ಲಿ ಸಂಚರಿಸಲು ಭಯಪಡುವ ಬಾಲಕನಿಗೆ, ಅವನಮ್ಮ ನಿನಗೆ ಭಯವಾದಾಗ ನಿನ್ನಣ್ಣ ಗೋಪಾಲನನ್ನು ಕರೆ ಸಹಾಯ ಮಾಡುತ್ತಾನೆ – ಎಂದ ಕುವೆಂಪುರವರ ಬಾಲಗೋಪಾಲಕಥೆ ‘ನಂಬಿಕೆ’ಯನ್ನು ಕುರಿತಾದದ್ದೇ ತಾನೇ? ಗೋವುಗಳನ್ನು ಕಾಯುವ ಗೋಪಾಲ ಬಂದು ಆ ಬಾಲಕನಿಗೆ ಸಹಾಯ ಮಾಡಿದ್ದು ಆ ತಾಯಿ-ಮಗನ ನಂಬಿಕೆಯ ಫಲ ತಾನೆ?

ADVERTISEMENT

ವೈದ್ಯ-ರೋಗಿಯ ಸಂಬಂಧದಲ್ಲೂ ನಂಬಿಕೆ ಬಹುಮುಖ್ಯ ಪಾತ್ರ ವಹಿಸುತ್ತದೆ. ವೈದ್ಯರ ಹಸ್ತಗುಣ ಅಂದರೆ ಕೈಗುಣ ಎನ್ನುವುದು ನಂಬಿಕೆಗೆ ಸೇರಿದ ವಿಚಾರ ತಾನೆ? ವೈದ್ಯರಲ್ಲಿ ಸಂಪೂರ್ಣ ನಂಬಿಕೆ ಇದ್ದಾಗ ರೋಗಿ ಬೇಗ ಗುಣಮುಖನಾಗುತ್ತಾನೆ, ಈ ವೈದ್ಯರಿಗೆ ಏನು ಗೊತ್ತಿದೆಯೋ ಇಲ್ಲವೋ, ಮಾತ್ರೆ ಸರಿ ಕೊಟ್ಟರೋ ಇಲ್ಲವೋ, ಡೋಸೇಜ್ ಹೆಚ್ಚಾಯಿತೋ, ಕಡಿಮೆ ಆಯಿತೋ ಎಂದು ನಾನಾ ರೀತಿ ಅಪನಂಬಿಕೆಯಲ್ಲಿ ಬಳಲುವವನಿಗೆ ರೋಗ ಗುಣವಾಗುವುದು ಕಷ್ಟ. ಜೀವನದಲ್ಲಿ ಏನೇ ಕಷ್ಟ ಬಂದರೂ ಜೀವನಶ್ರದ್ಧೆಯಿಂದ ಬದುಕಿ ಬಾಳಿದ-ಬಾಳುವ ಹಿರಿಯರಿದ್ದಾರೆ. ಸಣ್ಣ-ಪುಟ್ಟ ವಿಫಲತೆಗೆ ಹೆದರಿ ತಮ್ಮಲ್ಲೇ ತಾವು ನಂಬಿಕೆ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಯುವ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಆಗಬೇಕಾಗಿದೆ.

ಗಂಡ-ಹೆಂಡತಿಯಲ್ಲಿ ಪರಸ್ಪರ ನಂಬಿಕೆ-ಗೌರವಗಳಿದ್ದಾಗ ಮಾತ್ರ ದಾಂಪತ್ಯ ಸುಗಮವಾಗಿರಲು ಸಾಧ್ಯ. ಮಕ್ಕಳ ಮೇಲೆ ತಂದೆ-ತಾಯಿಗೆ ನಂಬಿಕೆ ಬೇಕು. ಅದರಂತೆ ಮಕ್ಕಳು ಆ ನಂಬಿಕೆ ಉಳಿಸಿಕೊಳ್ಳುವಂತೆ ತಮ್ಮ ನಡವಳಿಕೆ-ವಿದ್ಯಾಭ್ಯಾಸ ಮಾಡಬೇಕು. ನಂಬಿಕೆಗೆ ಅರ್ಹರಾದ ಕೆಲಸಗಾರರನ್ನು ಪ್ರೀತಿ-ವಿಶ್ವಾಸದಿಂದ ನೋಡಿಕೊಳ್ಳಬೇಕಾದದ್ದು ಯಜಮಾನರ ಕರ್ತವ್ಯ. ಯಜಮಾನ ತನ್ನಲ್ಲಿ ಇಟ್ಟ ನಂಬಿಕೆಗಾಗಿ ಪ್ರಾಣತ್ಯಾಗ ಮಾಡಿದ ಆಳುಗಳು, ಪ್ರಾಣಿಗಳು ಇವೆ. ನಾಯಿ ತನ್ನ ಈ ‘ನಂಬಿಕೆ’ಯ ಗುಣಕ್ಕಾಗಿಯೇ ಪ್ರಸಿದ್ಧವಾಗಿದೆ.

ಜನಸಾಮಾನ್ಯರು ನಂಬಿಕೆ-ಮೂಢನಂಬಿಕೆಯ ಮಧ್ಯದ ಅಂತರವನ್ನು ಅರಿತಿರಬೇಕು. ಒಬ್ಬರ ನಂಬಿಕೆ ಇನ್ನೊಬ್ಬರಿಗೆ ಮೂಢನಂಬಿಕೆಯಾಗಿ ಕಾಣಬಹುದು. ಮುಗ್ಧರನ್ನು ಶೋಷಣೆ ಮಾಡುವ ಮೂಢನಂಬಿಕೆಗಳು ನಮಗೆ ಬೇಡ. ಜೀವನಶ್ರದ್ಧೆ ಮೂಡಿಸುವ ನಂಬಿಕೆಗಳು ಇರಲಿ. ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವ ನಂಬಿಕೆಗಳಿಂದ ವ್ಯಕ್ತಿಗೂ, ಸಮಾಜಕ್ಕೂ ಹಿತ. ಅಂಥ ನಂಬಿಕೆಗಳು ನಮ್ಮಲ್ಲಿ ಮೂಡಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.