ADVERTISEMENT

ನಗು ನಗುತಾ ನಲಿ ನಲಿ…

ಒತ್ತಡಕ್ಕೆ ಬೆನ್ನುಹಾಕಲು ಹಸನ್ಮುಖವೇ ರಹದಾರಿ

ಸುಮಲತಾ ಎನ್, ಪದ್ಮನಾಭ ಭಟ್ಟ
Published 24 ಏಪ್ರಿಲ್ 2018, 19:30 IST
Last Updated 24 ಏಪ್ರಿಲ್ 2018, 19:30 IST
ಪ್ರವೀಣ್ ಗೋಡ್ಕಿಂಡಿ
ಪ್ರವೀಣ್ ಗೋಡ್ಕಿಂಡಿ   

ಸಂಗೀತ ಕಛೇರಿಯೊಂದರ ತಯಾರಿ ನಡೆದಿತ್ತು. ಅವರೊಬ್ಬರು ಪ್ರಖ್ಯಾತ ಕೊಳಲು ವಾದಕರು. ಮತ್ತೊಬ್ಬ ಖ್ಯಾತ ತಬಲಾ ವಾದಕರು ಬರುವವರಿದ್ದರು. ಅದು ಸಂಜೆ ಕಾರ್ಯಕ್ರಮ. ಇದ್ದಕ್ಕಿದ್ದಂತೆ, ಅನಿವಾರ್ಯ ಕಾರಣದಿಂದಾಗಿ ಆ ದಿನ ಬರಬೇಕಿದ್ದ ತಬಲಾ ವಾದಕರು ಬರಲು ಸಾಧ್ಯವಾಗುವುದಿಲ್ಲ ಎಂಬ ವಿಷಯ ತಿಳಿಯಿತು. ಏನೇ ಪ್ರಯತ್ನಪಟ್ಟರೂ ಯಾರೂ ಆ ಕ್ಷಣಕ್ಕೆ ಸಿಗಲಿಲ್ಲ. ಆಗ, ಅದೇ ಊರಿನಲ್ಲಿದ್ದ ಮತ್ತೊಬ್ಬ  ತಬಲಾ ವಾದಕರನ್ನು ಕರೆಸಬೇಕಾಯಿತು.

ಮಕ್ಕಳಿಗೆ ತಕ್ಕಮಟ್ಟಿಗೆ ತಬಲಾ ಹೇಳಿಕೊಡುತ್ತಿದ್ದವರು ಅವರು. ಅಂಥ ಪರಿಣತಿಯನ್ನೇನೂ ಹೊಂದಿರಲಿಲ್ಲ. ಆದರೆ ಬೇರೆ ದಾರಿ ಇರಲಿಲ್ಲ. ಅವರಿಗೆ ಏನು ಬರುತ್ತದೋ ಅಷ್ಟಕ್ಕೇ ಹೊಂದಿಕೊಂಡು, ಅಭ್ಯಾಸ ಮಾಡಿಸಿ, ಕೊಳಲು ನುಡಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ಹೊಂದಾಣಿಕೆಯ ಈ ಕಸರತ್ತು ಜನರ ಗಮನಕ್ಕೂ ಬರಲಿಲ್ಲ. ಆದರೆ ಬೇರೆ ಯಾರೇ ಆ ಕೊಳಲು ವಾದಕರ ಜಾಗದಲ್ಲಿದ್ದರೂ, ಕಾರ್ಯಕ್ರಮ ರದ್ದು ಮಾಡಿ ಎಂದು ಮುಲಾಜಿಲ್ಲದೇ ಹೇಳುತ್ತಿದ್ದರು. ಆ ಕ್ಷಣದಲ್ಲಿ ಆ ಹಿರಿಯರು ಪರಿಸ್ಥಿತಿಯನ್ನು, ಒತ್ತಡವನ್ನು ನಿಭಾಯಿಸಿದ ರೀತಿ ಹಾಗೂ ಅವರು ಆ ಸಂದರ್ಭದಲ್ಲಿ ತೋರಿದ ದೊಡ್ಡತನವಿದೆಯಲ್ಲಾ - ಅದು ನನ್ನನ್ನು ಯೋಚಿಸುವಂತೆ ಮಾಡಿತು.

ನನ್ನ ವೃತ್ತಿಬದುಕಿನಲ್ಲಿ ಎದುರಾಗಿರುವ ಇಂಥ ಹಲವು ಒತ್ತಡಗಳನ್ನು ನಿಭಾಯಿಸುವುದನ್ನು ಕಲಿತಿರುವುದೇ ಇಂಥ ಘಟನೆಗಳಿಂದ, ಹಿರಿಯ ಕಲಾವಿದರಿಂದ. ನಮಗೆ ಸಿಗುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಹಸನ್ಮುಖಿಯಾಗಿ ಜೀವಿಸಲು ಕಲಿಯಬೇಕು. ಹಾಗಾದರೆ ಒತ್ತಡಗಳಿಂದ ನಮ್ಮನ್ನು ನಾವು ರಕ್ಷಿಸಿಕೊಂಡಂತೆ. ನನಗೂ ಇಂಥ ಸನ್ನಿವೇಶಗಳನ್ನು ಅನುಭವಿಸಿ, ಅವುಗಳನ್ನು ಹಿಮ್ಮೆಟ್ಟಿ ನಡೆದು ಅಭ್ಯಾಸವಾಗಿದೆ.

ADVERTISEMENT

ಒತ್ತಡದಲ್ಲೂ ಅನೇಕ ರೀತಿಯಿದೆ. ನನ್ನ ವೃತ್ತಿಗೆ ಸಂಬಂಧಪಟ್ಟ ಹಾಗೆ ಹೇಳಬೇಕೆಂದರೆ, ಯಾವುದೇ ಕಾರ್ಯಕ್ರಮ ನೀಡುವ ಮುನ್ನ, ಸಹ ಕಲಾವಿದನ ತಯಾರಿ, ಅದಕ್ಕೆ ತಕ್ಕಂತೆ ನನ್ನ ತಯಾರಿ, ನನ್ನ ಪಕ್ಕವಾದ್ಯದವರು ಯಾರು, ಅವರು ಹೇಗೆ ತಯಾರಿ ಮಾಡಿಕೊಂಡಿರುತ್ತಾರೆ? ಅದಕ್ಕೆ ತಕ್ಕಂತೆ ನಾನು ಹೇಗಿರಬೇಕು? ಹೀಗೆ ಸಾಕಷ್ಟು ಅಂಶಗಳು ತಲೆಯಲ್ಲಿ ಓಡುತ್ತಿರುತ್ತವೆ. ಅದರ ಜೊತೆಗೆ ಕಾರ್ಯಕ್ರಮದ ಆಯೋಜಕರು, ಅವರ ನಿರೀಕ್ಷೆ, ಕಾರ್ಯಕ್ರಮದ ದಿನ ಜನರ ಅಪೇಕ್ಷೆ ಏನಿರುತ್ತದೆ ಎಂಬ ಆತಂಕಗಳೆಲ್ಲವೂ ಒತ್ತಡಗಳೇ ಅಲ್ಲವೇ? ಅಂದುಕೊಂಡ ರೀತಿ ಏನೂ ಆಗದೇ ಇದ್ದ ಪಕ್ಷದಲ್ಲಿ, ಆಗುವ ಮಾನಸಿಕ ಕಿರಿಕಿರಿಯಿದೆಯಲ್ಲ, ಅದು ಒತ್ತಡದ ರಾಕ್ಷಸ ರೂಪ. ಇವೆಲ್ಲ  ಒತ್ತಡಗಳನ್ನೂ ನಿಭಾಯಿಸುವ ಜಾಣತನ ಇರಬೇಕಷ್ಟೆ.

ಇನ್ನೊಂದೆಡೆ, ಸರ್ವೇಸಾಮಾನ್ಯ ಒತ್ತಡಗಳು ನಮ್ಮ ಬದುಕಿನೊಂದಿಗೇ ಇರುತ್ತವೆ. ಈಗಂತೂ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗುವುದೇ ಒತ್ತಡ. ‌ಒಂದು ಕೆಲಸವನ್ನು ಏನೋ ಯೋಜನೆಯೊಂದಿಗೆ ಮಾಡುವ ಸ‌ಂದರ್ಭ, ಕೆಲವೊಮ್ಮೆ ನಾವಂದುಕೊಂಡಂತೆ ಕೆಲಸಗಳು ಆಗುವುದೇ ಇಲ್ಲ. ಆಗ ಗೊತ್ತೇ ಆಗದೆ ಟೆನ್ಷನ್ ಎಂಬ ಭೂತ ಹೆಗಲೇರಿರುತ್ತದೆ.

ಸಂಗೀತ ಕಛೇರಿ ಸಂದರ್ಭ, ಒಂದಿಷ್ಟು ಅವ್ಯವಸ್ಥೆಯಾದರೂ ಅದು ನಮ್ಮ ಸಂಗೀತದಲ್ಲೇ ಪ್ರತಿಫಲಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅಂಥ ಸಮಯದಲ್ಲಿ, ಒಬ್ಬ ಕಲಾವಿದನಿಗೆ ಬಹುಮುಖ್ಯವಾಗಿ ಬೇಕಿರುವುದು ಸಂಯಮ. ಎಷ್ಟೇ ಒತ್ತಡವಿದ್ದರೂ ಹಸನ್ಮುಖಿಯಾಗಿರಬೇಕು. ಆ ಕಲೆಯನ್ನು ಕಲಿಯುವುದೂ ಒಂದು ದೊಡ್ಡ ಕಲೆ ಎಂಬುದನ್ನು ಅರಿತುಕೊಂಡಿದ್ದೇನೆ. ನನ್ನ ತಂದೆ ವೆಂಕಟೇಶ್ ಗೋಡ್ಖಿಂಡಿಯವರು, ಗುರು ಆನೂರು ಅನಂತಕೃಷ್ಣ ಶರ್ಮ, ಬಾಲಸುಬ್ರಹ್ಮಣ್ಯಂ ಅವರನ್ನು ನೋಡಿ ಈ ಪಾಠವನ್ನು ಕಲಿತಿದ್ದೇನೆ. ಇವೆರೆಲ್ಲಾ, ಎಂಥ ಕಷ್ಟದ ಸಮಯ ಬಂದರೂ ‘ಇದನ್ನು ನಿಭಾಯಿಸುವುದು ನನ್ನಿಂದ ಸಾಧ್ಯ’ ಎಂದುಕೊಂಡು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವುದನ್ನು ಕಲಿಸಿದವರು.

ನಾನು ವಿಶ್ರಾಂತವಾಗಲು ಎರಡು ಮಾರ್ಗವನ್ನು ಅನುಸರಿಸುತ್ತೇನೆ. ಏನೂ ಮಾಡಲು ಸಾಧ್ಯವಾಗದಂಥ ಪರಿಸ್ಥಿತಿ ಎದುರಾದರೆ, ಚೆನ್ನಾಗಿ ನಿದ್ದೆ ಮಾಡುತ್ತೇನೆ. ಎದ್ದಾಗ ಮನಸ್ಸು ರಿಲ್ಯಾಕ್ಸ್ ಅನಿಸುತ್ತದೆ. ಮತ್ತೊಂದು ಮಾರ್ಗವೆಂದರೆ, ಇಂಗ್ಲಿಷ್ ಆ್ಯಕ್ಷನ್ ಸಿನಿಮಾಗಳನ್ನು ನೋಡುವುದು. ಇದರ ಹೊರತಾಗಿ ಕ್ರಿಕೆಟ್ ಆಡುವುದು, ಓದುವುದು ಮಾಡುತ್ತೇನೆ. ಓರ್ವ ಸಂಗೀತ ಕಲಾವಿದನಾಗಿ ಹೇಳಬೇಕೆಂದರೆ, ಒತ್ತಡ ನಿವಾರಣೆಗೆಂದು ಸಂಗೀತ ಕೇಳಲು ಶುರುಮಾಡಿದರೆ, ಮನಸ್ಸು ವಿಮರ್ಶೆಗೆ ಇಳಿದುಬಿಡುತ್ತದೆ.

ಮನಸ್ಸು ವಿಶ್ರಾಂತವಾಗುವ ಬದಲು ವಿಮರ್ಶೆಯೇ ಕೆಲಸವಾಗಿ, ಇನ್ನಷ್ಟು ಒತ್ತಡ ಸೃಷ್ಟಿಸುತ್ತದೆ. ಆದ್ದರಿಂದ ಇಂಥ ಸಂದರ್ಭದಲ್ಲಿ ನಾನು ಸಂಗೀತ ಕೇಳುವುದಿಲ್ಲ. ಕೇಳಿದರೂ ಹಿರಿಯ ಕಲಾವಿದರ, ಈಗಾಗಲೇ ಕೇಳಿರುವ ಸಂಗೀತವನ್ನೇ ಕೇಳುತ್ತೇನೆ. ಹೊಸ ಮ್ಯೂಸಿಕ್ ಕೇಳಲು ಹೋಗುವುದಿಲ್ಲ. ಆದರೆ ಕೆಲವರಿಗೆ ಸಂಗೀತ ರಿಲ್ಯಾಕ್ಸೇಷನ್‌ಗೆ ದಾರಿ. ಅಂಥವರು ಮಾಧುರ್ಯದ ಸಂಗೀತ, ಶಾಸ್ತ್ರೀಯ ಸಂಗೀತವನ್ನು ಕೇಳಬಹುದು. ಯುವಜನರಿಗೆ ಇದು ಇಂದಿನ ಅಗತ್ಯ ಕೂಡ.

ಒತ್ತಡ ಹೇರಿಕೊಂಡರೆ ಆಗುವ ಕೆಲಸವೂ ಸಾಗುವುದಿಲ್ಲ. ಅದು ಮನಸ್ಸನ್ನು ಬೇರೆಡೆ ತಿರುಗಿಸಿಬಿಡುತ್ತದೆ. ಅಂಥ ಸಮಯದಲ್ಲಿ ಕೆಲವು ನಿಮಿಷ ಬಿಡುವು ತೆಗೆದುಕೊಳ್ಳಬೇಕು, ನಂತರ ಮನಸ್ಸು ಹೊಸ ಆಲೋಚನೆಯೊಂದಿಗೆ ಮುನ್ನಡೆಯುತ್ತದೆ.

ಕೆಲವೇ ವರ್ಷಗಳ ಹಿಂದಿನ ಜೀವನವನ್ನು ನೆನಪಿಸಿಕೊಂಡರೆ - ‘ಒತ್ತಡ’ ಎಂಬ ಪದ ಹೆಚ್ಚು ಚಾಲ್ತಿಯಲ್ಲಿರುವುದೇ ಈಗ. ಇದಕ್ಕೆ ಇಲ್ಲಿನ ಸಾಮಾಜಿಕ-ಆರ್ಥಿಕ ಅಂಶಗಳು ಕಾರಣವಿರಬಹುದು. ಭಾರತದಲ್ಲಿ ಬೆಳಿಗ್ಗೆ ಏಳುತ್ತಿದ್ದಂತೆ, ಕರೆಂಟು ಇಲ್ಲ, ನೀರಿಲ್ಲ ಎಂಬ ಮೂಲಭೂತ ಸೌಲಭ್ಯಗಳ ಕೊರತೆಯ ವಿಷಯದಿಂದಲೇ ಒತ್ತಡ ಆರಂಭವಾಗುತ್ತದೆ. ವಿದೇಶಗಳಲ್ಲಿ ಹಾಗಲ್ಲ. ಅಲ್ಲಿ ಮಾನವನ ಮೂಲಭೂತ ಅಗತ್ಯಗಳಿಗೆ ಕಷ್ಟಪಡುವ ಅವಶ್ಯಕತೆ ಅಷ್ಟಿಲ್ಲ. ನಮ್ಮ ಕೆಲಸದ ಮೇಲಷ್ಟೇ ಗಮನ ಹರಿಸಲು ಸಾಧ್ಯವಾಗುವಂಥ ವಾತಾವರಣವಿದೆ. ಇದಕ್ಕೆ ನಾವೇ ಹೊಣೆಗಾರರು. ನಾವೇ ಸೃಷ್ಟಿಸಿಕೊಂಡ ಟ್ರಾಫಿಕ್, ಜನಸಂಖ್ಯೆ ಇಂಥವೇ ಅಂಶಗಳು ಕಾರಣ. ಇವೆಲ್ಲವೂ ಮಾನಸಿಕವಾಗಿ ಪರಿಣಾಮ ಬೀರುವಂಥವೇ.

ಈ ಎಲ್ಲಾ ಪರಿಸ್ಥಿತಿಗಳನ್ನು ಹತೋಟಿಗೆ ತರುವಂಥ ತಂತ್ರವೊಂದಿದೆ. ಅದೇ ತಾಳ್ಮೆ. ಯಾವುದೇ ಕ್ಷೇತ್ರವಾಗಿರಲಿ, ಯಾವುದೇ ರೀತಿಯ ಒತ್ತಡವಾಗಲಿ,‌ ತಾಳ್ಮೆಯಿಂದಿರುವುದು ಅತಿ ಅಗತ್ಯ. ಕೋಪ ಮಾಡಿಕೊಂಡರೆ ಪರಿಸ್ಥಿತಿ ಬದಲಾಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಇದರಿಂದ ಅನಗತ್ಯ ನಮ್ಮನ್ನೇ ಕಿರಿಕಿರಿಗೆ ದೂಡಿಕೊಂಡಂತೆ. ಅದರ ಬದಲು ತಾಳ್ಮೆಯಿಂದ, ನಗುನಗುತ್ತಲೇ ನಿಭಾಯಿಸುವ ಕಲೆಯನ್ನು ಎಲ್ಲರೂ ಕಲಿತುಕೊಳ್ಳುವ ಅಗತ್ಯ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.