ADVERTISEMENT

ಬಿಸಿಗಿಂತ ಬೆಳಕು ನೀಡಿ

ಸ್ವಸ್ಥ ಬದುಕು

ಪ್ರಜಾವಾಣಿ ವಿಶೇಷ
Published 23 ಜೂನ್ 2015, 19:30 IST
Last Updated 23 ಜೂನ್ 2015, 19:30 IST

ನಾವು ರೋಗವನ್ನು ಅನ್ಯಗ್ರಹದಿಂದ ಬಂದು ನಮ್ಮ ಮೇಲೆ ದಾಳಿ ನಡೆಸಿದ ಜೀವಿಯಂತೆ ಭಾವಿಸುತ್ತೇವೆ. ಸತ್ಯವನ್ನು ಹೇಳುವುದಾದರೆ ರೋಗ ನಮ್ಮ ಪೂರ್ಣತ್ವದ ಒಂದು ಭಾಗವಾಗಿರುತ್ತದೆ. ರೋಗ ಅಂದರೆ ನಮ್ಮೊಳಗಿನ ಏಕಾಂಗಿಯಾದ, ದುರ್ಬಲವಾದ, ನೋವಿನಿಂದ ಕೂಡಿದ, ಕಪ್ಪು ಭಾಗವಾಗಿರುತ್ತದೆ.

ಯಾವುದೇ ದೈಹಿಕ ನೋವು ನಮ್ಮ ಗಮನಕ್ಕಾಗಿ ಕಾತರಿಸುತ್ತಿರುತ್ತದೆ. ನಾವು ಆ ನೋವಿಗೆ ಗಮನ ನೀಡಿದಾಗ ಅಂಧಕಾರದಲ್ಲಿ ಸೂರ್ಯ ಉದಯಿಸಿದಂತೆ ಆಗುತ್ತದೆ. ಎಲ್ಲವನ್ನೂ ಗುಣಪಡಿಸುವ ಬೆಳಕು ಆ ಭಾಗದ ಮೇಲೆ ಬೀಳುತ್ತದೆ. ನೆರಳನ್ನು ಹೊಡೆದೊಡಿಸುತ್ತದೆ. ನೋವು ತುಂಬಿದ ಆ ಭಾಗದಲ್ಲಿ ಚೈತನ್ಯ ಪುಟಿಯುತ್ತದೆ.

ನೋವಿರುವ ಭಾಗಕ್ಕೆ, ನಿಮ್ಮೊಳಗಿನ ರೋಗಕ್ಕೆ ಗಮನ ನೀಡುವುದು ಹೇಗೆ? ಇದಕ್ಕೆ ಎರಡು ಮಾರ್ಗಗಳಿವೆ. ಒಂದು ಆ ರೋಗಕ್ಕೆ ಪ್ರಶ್ನೆ ಕೇಳುವುದು. ಇನ್ನೊಂದು ಧ್ಯಾನದ ಮೂಲಕ ಕಲ್ಪಿಸಿ ಕೊಳ್ಳುವುದು. ಅದು ಹೇಗೆಂದು ನೋಡೋಣ.

*ನಾನು ನಿನಗೆ ಹೇಗೆ ಸಹಾಯ ಮಾಡಬಹುದು ಎಂದು ರೋಗಕ್ಕೆ ಪ್ರಶ್ನಿಸಿ. ಹಿಂದೆ ರೋಗವನ್ನು ನಿರ್ಲಕ್ಷ್ಯ ಮಾಡಿದ್ದರೂ ಅದನ್ನು ಇದು ಸರಿಪಡಿಸುತ್ತದೆ.
*ನೀನು ಯಾವುದಾದರೂ ಸಂದೇಶ ನೀಡುತ್ತಿರುವೆಯಾ ಎಂದು ಪ್ರಶ್ನಿಸಿ. ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಇದು ನೆರವಾಗುತ್ತದೆ.
*ನೀನು ನನ್ನನ್ನು ಯಾರಿಂದಲಾದರೂ, ಯಾವುದರಿಂದಲಾದರೂ ರಕ್ಷಿಸುತ್ತಿದ್ದೀಯಾ ಎಂದು ಪ್ರಶ್ನಿಸಿ. ಆಂತರ್ಯದ ಭಯವನ್ನು ಹೊರಹಾಕಿದಾಗ ಆ ಭಯ ಶಕ್ತಿಹೀನವಾಗುತ್ತದೆ.

ಜನ ತಮಗೆ ಅರಿವಿಲ್ಲದಂತೆ ರೋಗಕ್ಕೆ ಶರಣಾಗುತ್ತಾರೆ. ನೋವನ್ನು, ರೋಗವನ್ನು ಅವರು ಆಹ್ವಾನಿಸದಿದ್ದರೂ ಹೀಗಾಗುತ್ತದೆ. ಚಾರುಗೆ ತನ್ನಿಚ್ಛೆಯಂತೆ ನಡೆದುಕೊಳ್ಳಲು ಸಾಧ್ಯವಿಲ್ಲ ಎಂಬ ಬೇಸರ ಕಾಡುತ್ತಿತ್ತು. ಗಂಡ ಹಾಕಿದ ದಾರಿಯಲ್ಲೇ ಆಕೆ ನಡೆಯಬೇಕಿತ್ತು. ಈ ಹಳಹಳಿಕೆ ಕೀಲುಗಳ ಉರಿಯೂತಕ್ಕೆ ಕಾರಣವಾಯಿತು. ನಂತರ ಆ ನೋವು ಆಕೆಯ ಮೂಳೆಗಳಿಗೂ ಪಸರಿಸಿತು.

50 ವರ್ಷವಾಗುವ ಹೊತ್ತಿಗೆ ಆಕೆಯ ಇಡೀ ದೇಹ ನೋವಿನ ಮೂಟೆಯಾಗಿತ್ತು. ಔಷಧ ನೋವಿಗೆ ತಾತ್ಕಾಲಿಕ ಶಮನ ನೀಡಬಲ್ಲದು. ಆದರೆ ಈ ನೋವು ಶಾಶ್ವತವಾಗಿ ಗುಣವಾಗಬೇಕಾದರೆ ಆಕೆ ತನ್ನ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ತನ್ನ ನಿರ್ಧಾರಗಳಿಗೆ ಆಕೆ ತಾನೇ ಜವಾಬ್ದಾರಿ ತೆಗೆದುಕೊಳ್ಳಬೇಕು. ‘ನಾನು ನನ್ನಿಚ್ಛೆಯಂತೆ ಬದುಕು ಸಾಗಿಸಬಹುದಿತ್ತು. ಆದರೆ, ಪತಿ ಹೇಳಿದಂತೆ ನಡೆಯುವ ನಿರ್ಧಾರ ನನ್ನದೇ ಆಗಿತ್ತು’ ಎಂದು ಆಕೆ ಅರಿತಾಗ ನೋವು ಕಡಿಮೆಯಾಗುತ್ತ ಬರುತ್ತದೆ.

ಕೆಲವೇ ರೋಗಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಮನಸ್ಸಿನಲ್ಲಿಯೇ ಆರಂಭವಾಗುತ್ತವೆ. ರಾಮ್‌ಗೆ ರಕ್ತದೊತ್ತಡ ಇತ್ತು. ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸಬೇಕು, ತನ್ನ ಮಾತೇ ನಡೆಯಬೇಕು ಎಂಬ ಹಟ ಅವನಲ್ಲಿತ್ತು. ಜನರು ಆತನ ಮಾತು ಕೇಳದಾಗ, ಅವನಿಚ್ಛೆಯಂತೆ ಯಾವುದೂ ನಡೆಯದಾಗ ರಕ್ತದೊತ್ತಡ ಏರುತ್ತಿತ್ತು.

ಆತನ ಸಿಟ್ಟನ್ನು ಯಾರೂ ಲೆಕ್ಕಿಸದೇ ಇದ್ದಾಗ ಆತ ಖಿನ್ನತೆಗೆ ಜಾರುತ್ತಿದ್ದ. ನಮ್ಮೊಳಗೆ ರೋಗ ಹುಟ್ಟುಹಾಕುವ ರೀತಿಯಲ್ಲಿ ನಾವು ಪ್ರತಿಕ್ರಿಯಿಸುತ್ತಿರುತ್ತೇವೆ. ನಡೆದುಕೊಳ್ಳುತ್ತೇವೆ. ಇದರಿಂದ ನಮಗಾಗುವ ಹಾನಿ ನಮಗೆ ಗೊತ್ತಿರುವುದಿಲ್ಲ. ನಮ್ಮ ಅಹಂಕಾರಭರಿತ ಮನಸ್ಸು ಸದಾ ಅತೃಪ್ತಿಯಿಂದ ಇರುತ್ತದೆ. ಅತಿ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಿರುತ್ತದೆ.

ನಮ್ಮೊಳಗಿನ ನೋವು ಗಮನಕ್ಕಾಗಿ ಹಾತೊರೆಯುತ್ತಿದೆ ಎಂದು  ಅರಿವಾದಾಗ, ಆ ನೋವಿಗೆ ನಾವು ಪ್ರಶ್ನಿಸಬೇಕು. ಆಗ ನಮ್ಮ ಗಮನವನ್ನು ಆಂತರ್ಯಕ್ಕೆ ತಿರುಗಿಸುತ್ತೇವೆ. ಆಗ ಎಲ್ಲವೂ ಬದಲಾಗುತ್ತದೆ. ಯಾವುದೇ ಪೂರ್ವಗ್ರಹವಿಲ್ಲದೆ ನಮ್ಮ ಮನಸ್ಸಿನ ಮೇಲೆ ಗಮನ ಕೇಂದ್ರೀಕರಿಸಿದಾಗ ಮಾತ್ರ ನಾವು ಮನಸ್ಸಿನಲ್ಲಿ ಸುಳಿದಾಡುವ ಯೋಚನೆಗಳನ್ನು ಭಾವುಕರಾಗದೇ ಅವಲೋಕಿಸಲು ಸಾಧ್ಯ.

‘ನಾನು ಗಂಡ ಹೇಳಿದ್ದನ್ನೆಲ್ಲ ಮಾಡಿದ್ದೇನೆ, 2 ಗಂಟೆಯೊಳಗೆ ಬನ್ನಿ ಎಂದು ಅವರಿಗೆ ಹೇಳಿದ್ದೆ. ಇನ್ನೂ ಬಂದಿಲ್ಲ’ ಎಂದು ಗೊಣಗಬೇಡಿ. ಇದೆಲ್ಲ ನಮ್ಮೊಳಗಿನ ಅಹಂಕಾರ ಆಡಿಸುವ ಮಾತುಗಳು. ಈ ಅಹಂಕಾರವನ್ನು ನಿರ್ಲಕ್ಷ್ಯಿಸಿ. ನಿಮ್ಮೊಳಗಿನ ಸಿಟ್ಟು, ಆಕ್ರೋಶ, ಸ್ವ ಮರುಕ, ಹಳಹಳಿಕೆಗೆ ನೀರು ಹಾಕದೇ ಇದ್ದಾಗ ಋಣಾತ್ಮಕ ಭಾವನೆಗಳು ಸಾಯುತ್ತವೆ. ನೈಜತನ, ಬುದ್ಧಿವಂತಿಕೆ ನಿಮ್ಮೊಳಗೆ ಉಳಿದಿರುತ್ತದೆ. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಅರಿವು ನಿಮಗಾಗುತ್ತದೆ.

ನೀವು ಹೇಳಿದ್ದನ್ನು ಯಾರಾದರೂ ಮಾಡಿದಲ್ಲಿ ಉತ್ತಮ. ಮಾಡದೇ ಇದ್ದಲ್ಲಿ ಅದು ಇನ್ನೂ ಉತ್ತಮ. ನೀವು ಹೇಳಿದಂತೆ ಏಕೆ ಆಗಿಲ್ಲ ಎಂಬುದರ ಕಾರಣ ನಿಮಗೆ ಮುಂದೊಂದು ದಿನ ಗೊತ್ತಾಗುತ್ತದೆ. ಶ್ರೇಷ್ಠ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೈನ್, ನನಗೆ ‘ಇಲ್ಲ’ ಎಂದು ಹೇಳಿದವರಿಗೆಲ್ಲ ದೊಡ್ಡ ಥ್ಯಾಂಕ್ಸ್. ಅವರಿಂದಾಗಿಯೇ ಇಷ್ಟೊಂದು ಸಾಧಿಸಲು ಸಾಧ್ಯವಾಯಿತು ಎಂದಿದ್ದರು. ‘ಉದಯಿಸುತ್ತಿರುವ ಸೂರ್ಯನ ಬಳಿ ಇವತ್ತು ನೀನು ನನಗೆ ಯಾವ ಪಾಠ ಕಲಿಸುತ್ತಿಯಾ ಎಂದು ಕೇಳಿದೆ. ಬಿಸಿಗಿಂತ ಹೆಚ್ಚು ಬೆಳಕು ನೀಡು ಎಂಬ ಉತ್ತರ ದೊರಕಿತು’ ಎಂದು ಅನುಭಾವಿಯೊಬ್ಬರು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT