ADVERTISEMENT

ಬೊಜ್ಜು ಹೆಚ್ಚಿದೆಯೇ?

ಡಾ.ಕೆ.ಎಸ್.ಪವಿತ್ರ
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST

ನಾಳೆ ಬೊಜ್ಜು ವಿರೋಧಿ ದಿನ-ತೂಕ ನಿಯಂತ್ರಣ ನಿರ್ವಹಣೆ ಸೋಲುವುದೆಲ್ಲಿ? ಸೋಲುವುದು ಯಾಕೆ?

ಮಹಿಳೆಯರು ‘ದಪ್ಪ’ ಆಗುವ ಬಗ್ಗೆ ಜೋಕುಗಳು ಬಹಳ. ಮೂರು ಜನ ತಮ್ಮ ಹೆಂಡತಿಯರು ಎಷ್ಟು ದಪ್ಪ ಎಂದು ವರ್ಣಿಸುತ್ತಿದ್ದರಂತೆ. ಮೊದಲನೆ ಯವನು ಹೇಳಿದ ‘ನನ್ನ ಹೆಂಡತೀನ ನೋಡಿ ಆಟೋದವನು ಡಬಲ್ ಚಾರ್ಜು ಕೇಳಿದ’.  ಇನ್ನೊಬ್ಬ ಹೇಳಿದನಂತೆ ‘ನನ್ನ ಹೆಂಡತಿ ಕುಳಿತ ತಕ್ಷಣ ಬಸ್‌ನ ಟೈರ್ ಪಂಕ್ಚರ್ ಆಯ್ತು’ ಅಂತ. ಕೊನೆಯವನು ಹೇಳಿದ “ಅಯ್ಯೋ ನನ್ನ ಹೆಂಡತಿ ಸೀರೇನ ದೋಬಿಗೆ ನಾನು ತೊಗೊಂಡು ಹೋದೆ. ಆಗ ಅವನು ಹೇಳಿದ ‘ನಾವು ಷಾಮಿಯಾನ ಒಗೆಯಲ್ಲ ಸಾರ್’ ಅಂತ!”

ಇಂತಹ ಜೋಕುಗಳನ್ನು ಕೇಳುವುದು, ನಕ್ಕು ಸುಮ್ಮನಾಗುವುದು, ಒಳಗೊಳಗೇ ಒಂಥರಾ ಬೇಸರ ಅನುಭವಿಸುವುದು ಮಹಿಳೆಯರಿಗೆ ಅಭ್ಯಾಸವಾಗಿಬಿಟ್ಟಿದೆ.  13,600 ಜನರನ್ನು ಪರೀಕ್ಷಿಸಿದ ಇತ್ತೀಚಿನ ಅಧ್ಯಯನವೊಂದು ಮಹಿಳೆಯರು ಬೊಜ್ಜಿನಿಂದ ಪುರುಷರಿಗಿಂತ ಹೆಚ್ಚು ಆರೋಗ್ಯದ ಸಮಸ್ಯೆಗಳಿಗೆ ಒಳಗಾಗುತ್ತಾರೆ ಎಂಬ ಅಂಶವನ್ನು ಮತ್ತಷ್ಟು ದೃಢಪಡಿಸಿದೆ.  ದಪ್ಪ ಮಹಿಳೆಯರು, ದಪ್ಪವಿರುವ ಪುರುಷರಿಗಿಂತ ಸಾವಿಗೆ ಬೇಗ ತುತ್ತಾಗುತ್ತಾರೆ ಎಂಬ ಅಂಶವೂ ಈ ಅಧ್ಯಯನದ ಮುಖ್ಯಾಂಶಗಳಲ್ಲಿ ಒಂದು.

ಮಹಿಳೆಯರು ತಮ್ಮ ತೂಕ ಹೆಚ್ಚಿಸಿಕೊಳ್ಳುವ, ಕೊಬ್ಬನ್ನು ಶೇಖರಿಸುವ ಪ್ರಕ್ರಿಯೆ ಹುಡುಗಿಯರಿದ್ದಾಗಲೇ ಆರಂಭ! ಹತ್ತನೇ ತರಗತಿಯ ನಂತರ ಭಾರತೀಯ ಮಹಿಳೆಯರಲ್ಲಿ ದೈಹಿಕ ವ್ಯಾಯಾಮ ಮಾಡದಿರುವುದು ಅತ್ಯಂತ ಸಹಜ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯ! ಆಟದ ಕೊರತೆ, ಕುಳಿತೇ ಕಾಲ ಕಳೆಯುವ ಜೀವನಶೈಲಿ, ನಂತರದ ಸಂಸಾರ-ಮನೆ-ಮಕ್ಕಳ ಮಧ್ಯೆ ‘ವ್ಯಾಯಾಮ’ ಮಾಯ. ಹೀಗೆ ಈ ಸ್ಥಿತಿ ಮುಂದುವರಿಯುತ್ತದೆ.  ಜೈವಿಕವಾಗಿಯೂ ಮಹಿಳೆಯ ದೇಹದ ಅಂಗರಚನೆ, ಗರ್ಭ ಧರಿಸುವಿಕೆ, ಬಾಣಂತನ - ನಂತರದ ಋತುಬಂಧ ಇವೂ ಕೂಡ ತೂಕದ ಏರುವಿಕೆಗೆ ಕಾರಣಗಳೇ.

* ಮಹಿಳೆಯರು ಸಾಮಾನ್ಯವಾಗಿ ತೂಕ ಕಳೆಯುವ ತಮ್ಮ ಪ್ರಯತ್ನಗಳ ಬಗ್ಗೆ ದೂರುವುದು ಹೀಗೆ:
“ಅಯ್ಯೋ ಡಾಕ್ಟ್ರೇ ಪ್ರತಿದಿನ ಒಂದು ಗಂಟೆ ವಾಕ್ ಮಾಡ್ತಾನೇ ಇದೀನಿ.  ಆದರೆ ಒಂದು ಕೆ.ಜೀನೂ ಇಳಿದಿಲ್ಲ”.

“ಡಾಕ್ಟ್ರೇ ಅದೇನೋ ಬೆಲ್ಟ್ ತೋರಿಸ್ತಾರಲ್ಲ!  ಹಾಕ್ಕೊಂಡ್ರೆ ತೆಳ್ಳಗಾಗಿಬಿಡ್ತೀನಾ?”.

“ಡಾಕ್ಟ್ರೇ ‘ಒಬೆಸಿಟಿ ಟ್ರೀಟ್‌ಮೆಂಟ್ ಸೆಂಟರ್’ಗೆ ಹೋದೆ.  ಮೂರು ವಾರ ಇದ್ದೆ.  ಬರೀ ಹಣ್ಣಿನ ರಸ, ಹಸಿ ಸೊಪ್ಪು, ಕಾಳು, ತೆಳ್ಳಗಾದೆ.  ಆದ್ರೆ ಮನೆಗೆ ಬಂದ್ಮೇಲೆ ಬರೀ ಹಣ್ಣಿನ ರಸ - ಸೊಪ್ಪಲ್ಲಿ ಹೇಗೆ ಬದುಕೋದು?  ಮತ್ತೆ ದಪ್ಪ ಆಗ್ಬಿಟ್ಟೆ!”.

“ಡಾಕ್ಟ್ರೇ ಎಲ್ಲಾ ಮಾಡಿ ಆಯ್ತು, ಏನೂ ಪ್ರಯೋಜನ ಇಲ್ಲ. ತೆಳ್ಳಗಾಗೋಕೆ ಮಾತ್ರೆ ಕೊಟ್ಬಿಡಿ ಸಾಕು!”.

ಮಹಿಳೆಯರ ‘ದಪ್ಪ’ಗಾಗುವ ನಡವಳಿಕೆಗಳಲ್ಲಿ ನಾಲ್ಕು ಮುಖವಾದವು.
* ನಿಯಮಿತವಾದ ವ್ಯಾಯಾಮದ ಕೊರತೆ - ಒಂದೆರಡು ತಿಂಗಳು ಮಾಡಿ ಅದನ್ನು ಕೈಬಿಡುವುದು.
* ‘ತೆಳ್ಳಗಾಗಲು’ ‘ಡಯಟ್’ ಮಾಡುವುದು.
* ‘ತೆಳ್ಳಗಾಗಲು’ ‘ತತ್‌ಕ್ಷಣ’ದ ಪರಿಹಾರಗಳ ಮೊರೆ ಹೋಗುವುದು.
* ದಪ್ಪಗಿರುವುದು, ವ್ಯಾಯಾಮ ಮಾಡದಿರುವುದು ಆರೋಗ್ಯದ ಸಮಸ್ಯೆ ಎನ್ನುವದಕ್ಕಿಂತ ‘ಸೌಂದರ್ಯ’ದ ಸಮಸ್ಯೆಯಾಗಿ ಭಾವಿಸುವುದು.

‘ಕ್ಯಾಲೋರಿ’ ಎಂಬುದು ಆಹಾರದಲ್ಲಿರುವ ಶಕ್ತಿಯನ್ನು ಅಳೆಯುವ ಘಟಕ.  ನಮ್ಮ ದೇಹ ಕೆಲಸ ಮಾಡಲು ಬೇಕಾದ ಶಕ್ತಿಯನ್ನು ಈ ‘ಕ್ಯಾಲೋರಿ’ ಅಳೆಯುತ್ತದೆ.  ನಾವು ಖರ್ಚು ಮಾಡುವುದಕ್ಕಿಂತ ಹೆಚ್ಚು ಶಕ್ತಿಯನ್ನು ಆಹಾರದಿಂದ ನಾವು ತೆಗೆದುಕೊಂಡರೆ, ನಮ್ಮ ತೂಕ ಏರುತ್ತದೆ.  ಆದರೆ ಈ ಪ್ರಕ್ರಿಯೆ ಮೇಲುನೋಟಕ್ಕೆ ಕಂಡಷ್ಟು ಸರಳವಲ್ಲ.  ಏಕೆಂದರೆ ನಮ್ಮ ಮೆದುಳು ನಮ್ಮ ತೂಕವನ್ನು ನಿಯಂತ್ರಿಸುತ್ತದೆ.  ನಮ್ಮ ಹಸಿವು, ಚಟುವಟಿಕೆ ಮತ್ತು ಜೀರ್ಣ ಪ್ರಕ್ರಿಯೆ ಇವು ಮೆದುಳಿನ ಸಂಕೇತಗಳ ಮೇಲೆ ಅವಲಂಬಿಸಿರುತ್ತದೆ. 

ದೇಹದ ‘ತೂಕ’ವನ್ನು ಇಷ್ಟೆಂದು ನಿಗದಿಗೊಳಿಸುವ ಮೆದುಳು ಅದನ್ನು ಕಾಯ್ದುಕೊಳ್ಳಲು ಹೆಣಗುತ್ತದೆ.  ಹಾಗಾಗಿ ನಾವು ಮಾಡುವ ‘ಡಯಟ್’ನ ಮೊದಲ ವಿರೋಧಿ ನಮ್ಮ ಮೆದುಳೇ! ಸಾಮಾನ್ಯವಾಗಿ ಮನುಷ್ಯರಲ್ಲಿ ಎರಡು ರೀತಿಯ ತಿನ್ನುವ ನಡವಳಿಕೆಗಳಿರುತ್ತವೆ. ಒಂದು, ತಮಗೆ ಹಸಿವಾದಾಗ ತಿನ್ನುವವರು.  ಎರಡು, ತಮ್ಮ ಮನಸ್ಸಿನಿಂದ ತಿನ್ನುವಿಕೆಯನ್ನು ನಿಯಂತ್ರಿಸುವವರು. ಕುತೂಹಲವೆಂದರೆ, ಹಸಿವಾದಾಗ ತಿನ್ನುವವರು ‘ಆಹಾರ’ದ ಬಗೆಗೆ ಕಡಿಮೆ ಯೋಚಿಸುತ್ತಾರೆ. 

ಅದೇ ಮನಸ್ಸಿ ನಿಂದ ತಿನ್ನುವಿಕೆಯನ್ನು ನಿಯಂತ್ರಿಸುವವರು ಜಾಹೀರಾತುಗಳಿಗೆ, ‘100 ರೂಪಾಯಿಗೆ ಎಷ್ಟು ಬೇಕಾದರೂ ತಿನ್ನಬಹುದು’ ಎನ್ನುವ ಆಮಿಷಗಳಿಗೆ ಬಹುಬೇಗ ಬಲಿಯಾಗುತ್ತಾರೆ.  ಒಂದು ‘ಸ್ಕೂಪ್’ ಐಸ್‌ಕ್ರೀಮ್ ಅದರಲ್ಲಿ ತಿನ್ನುವ ‘ಬಿಂಜ್’ಗೆ ಕಾರಣವಾಗುತ್ತದೆ.  ಅಂದರೆ ಅಧ್ಯಯನಗಳ ಪ್ರಕಾರ ‘ಡಯಟಿಂಗ್’ನಿಂದ ದೀರ್ಘಕಾಲದ ಅವಧಿಯಲ್ಲಿ ತೂಕ ಕಳೆದುಕೊಳ್ಳುವುದಕ್ಕಿಂತ ತೂಕ ಹೆಚ್ಚುವ ಸಂಭವನೀಯತೆ ಹೆಚ್ಚು!  

ಅಂದರೆ ‘ಡಯಟಿಂಗ್’ ನಿಮ್ಮ ಸಮಯದ ಮತ್ತು ಶಕ್ತಿಯ ಅಪವ್ಯಯ! ಹಾಗಿದ್ದರೆ ‘ಡಯಟಿಂಗ್’ ಬಗ್ಗೆ ಮಾಡುವುದೇನು?  ತಿನ್ನುವುದರ ಬಗ್ಗೆ ಮೆದುಳು ನೀಡುವ ಹಸಿವಿನ ಸಂಕೇತಗಳನ್ನು ಗಮನವಿಟ್ಟು ಕೇಳುವುದು.  ಅಂದರೆ ಕೆಲವಾರು ಸಂದರ್ಭಗಳಲ್ಲಿ ನಾವು ಹಸಿವಿಲ್ಲದೆಯೂ, ಬೇಸರಕ್ಕಾಗಿ, ಆಸೆಗಾಗಿ, ಏನೋ ಆದೀತೆಂಬ ಹೆದರಿಕೆಯಿಂದ, ತಿನ್ನುತ್ತೇವಷ್ಟೆ.  ಹಾಗೆ ಮಾಡದಿರುವುದು, ಹಸಿವಾದಾಗ ತಿನ್ನುವ ಆಹಾರದ ಬಗೆಗೆ ಎಚ್ಚರ ವಹಿಸುವುದು, ಇವು ಡಯಟಿಂಗ್ ಮಾಡದೆಯೂ, ನಾವು ಆರೋಗ್ಯ ಕಾಯ್ದುಕೊಳ್ಳಲು ಸಹಾಯಕ.

ಇನ್ನು ವ್ಯಾಯಾಮ.  ‘ನೀವು ಪ್ರತಿನಿತ್ಯ ಸ್ನಾನ ಮಾಡುತ್ತೀರಾ?  ತಿಂಡಿ ತಿನ್ನುತ್ತೀರಾ?’ ಎಂಬ ಪ್ರಶ್ನೆಗೆ ಉತ್ತರ ಏನು?  “ಅಯ್ಯೋ ಡಾಕ್ಟ್ರೇ ಸ್ನಾನ ಮಾಡ್ದೇ ಇರ್ತೀವಾ”  ಅದೇ “ನೀವು ಪ್ರತಿನಿತ್ಯ ವ್ಯಾಯಾಮ ಮಾಡ್ತೀರಾ?  ವಾಕಿಂಗ್ ಮಾಡ್ತೀರಾ” ಹೆಚ್ಚಿನ ಮಹಿಳೆಯರ ಉತ್ತರ ‘ಇಲ್ಲ’.  ಮಹಿಳೆಯರ ‘ವಾಕಿಂಗ್’ ಆರಂಭವಾಗಲು ಮಧ್ಯ ವಯಸ್ಸಿನಲ್ಲಿ ಯಾವುದಾದರೊಂದು ಕಾಯಿಲೆ ಬಂದೇ ತೀರಬೇಕು.  ಆದರೆ ‘ವ್ಯಾಯಾಮ’, ಆರೋಗ್ಯಕರ ಜೀವನಶೈಲಿ ಮೊದಲ ಅಂಶಗಳಲ್ಲಿ ಒಂದು ಎನ್ನುವುದು ಎಲ್ಲ ವೈದ್ಯಕೀಯ ಪದ್ಧತಿಗಳಲ್ಲಿ ನಿರ್ವಿವಾದವಾಗಿ ಸಾಬೀತಾಗಿರುವ ಸಂಗತಿ. 

ಇತ್ತೀಚಿನ ವೈದ್ಯಕೀಯ ಸಂಶೋಧನೆಗಳ ಪ್ರಕಾರ ನಿಯಮಿತವಾಗಿ ವ್ಯಾಯಾಮ ಮಾಡುವುದು ‘ದಪ್ಪ’ ಇರುವ ವ್ಯಕ್ತಿಗಳಲ್ಲಿಯೂ ರೋಗಗಳ ಅಪಾಯದಿಂದ ಪಾರು ಮಾಡುತ್ತದೆ. ಅಂದರೆ ದಿನನಿತ್ಯ ‘ವಾಕಿಂಗ್’/ಅಥವಾ ಯಾವುದೇ ರೀತಿಯ ವ್ಯಾಯಾಮ ಮಾಡುವುದು ನಿಮ್ಮ ‘ತೂಕ’ ಇಳಿಸಿ ‘ಬಳುಕುವ ಬಳ್ಳಿ’ಯಾಗಿ ಮಾಡದಿರಬಹುದು, ಆದರೆ ನಿಮ್ಮ ಆರೋಗ್ಯ ಕಾಪಾಡುತ್ತದೆ.  ಹೃದಯಾಘಾತ, ರಕ್ತದೊತ್ತಡ, ಕ್ಯಾನ್ಸರ್, ಪಾರ್ಶ್ವವಾಯು ಮೊದಲಾದ ಅಪಾಯಗಳಿಗೆ ತುತ್ತಾಗದಂತೆ ಮಾಡುತ್ತದೆ.

ನಂತರದ ಪ್ರಶ್ನೆ ವ್ಯಾಯಾಮದ ರೀತಿ ಮತ್ತು ಎಷ್ಟು ಹೊತ್ತು ಎನ್ನುವ ಬಗ್ಗೆ.  ನಡೆಯುವುದು, ಈಜುವುದು, ಸೈಕಲ್ ಹೊಡೆಯುವುದು ಮತ್ತು ಕುಣಿತ ಇವು ‘ಏರೋಬಿಕ್’ ವ್ಯಾಯಾಮ ಎನಿಸುತ್ತದೆ.  ಈ ‘ಏರೋಬಿಕ್’ ವ್ಯಾಯಾಮದ ಉಪಯೋಗಗಳು ಒಂದೆರಡಲ್ಲ.  ದೇಹದ ಎಲ್ಲ ಭಾಗಗಳಿಗೆ, ವಿಶೇಷವಾಗಿ ಹೃದಯ, ರಕ್ತನಾಳಗಳು ಮತ್ತು ಮೆದುಳಿಗಾಗಿ, ರೋಗ ಬರದಿರಲು, ಇದು ಉಪಯುಕ್ತ.  ವಾರಕ್ಕೆ ಕನಿಷ್ಠ ಮೂರು ದಿನ, 30 ನಿಮಿಷಗಳಾದರೂ ಈ ವ್ಯಾಯಾಮ ಅಗತ್ಯ. 

ನಾವು ವ್ಯಾಯಾಮ ಆರಂಭಿಸಿದ 29 ನಿಮಿಷಗಳವರೆಗೆ ದೇಹದಲ್ಲಿರುವ ಸಕ್ಕರೆಯ ಅಂಶ ಮೊದಲು ಖಾಲಿಯಾಗುತ್ತದೆ.  ನಂತರ ದೇಹದ ಕೊಬ್ಬು ಕರಗತೊಡಗುತ್ತದೆ.  ಹಾಗಾಗಿ ಖಾಲಿ ಹೊಟ್ಟೆಯಲ್ಲಿ, ಬೆಳಿಗ್ಗೆ ಕನಿಷ್ಠ 30 ನಿಮಿಷಗಳವರೆಗೆ ವ್ಯಾಯಾಮ ಮಾಡುವುದು, ‘ತಿಂಡಿ ತಿಂದಂತೆ’ ‘ಸ್ನಾನ ಮಾಡುವಂತೆ’ ಎಲ್ಲ ಮಹಿಳೆಯರ ದಿನಚರಿಯಾಗಬೇಕು. ನವೆಂಬರ್ 26 ಜಾಗತಿಕ ಬೊಜ್ಜು ವಿರೋಧಿ ದಿನ.  ಬೊಜ್ಜಿನ ಬಗ್ಗೆ ಅರಿವು ಮೂಡಿಸುವ, ಬೊಜ್ಜನ್ನು ನಿಯಂತ್ರಿಸುವ, ಆರೋಗ್ಯಕರ ಜೀವನಶೈಲಿಯ ಬಗ್ಗೆ ಜನರಲ್ಲಿ ಎಚ್ಚರ ಹತ್ತಿಸಲು ಈ ದಿನ ಮೀಸಲು. 

"ಆರೋಗ್ಯಕರ ಜೀವನಶೈಲಿ ನಿಮ್ಮ ಗುರಿಯಾಗಲಿ"- ಆರೋಗ್ಯವಂತ ಮಹಿಳೆಯರಾಗಲು ಈ ಕೆಳಗಿನ ಅಂಶಗಳನ್ನು ಗಮನಿಸಿ, ಪಾಲಿಸಿ.

* ದಪ್ಪಗಿರುವುದರ ಬಗ್ಗೆ ಚಿಂತಿಸುವುದು, ಯಾವ ವ್ಯಾಯಾಮವನ್ನು ಮಾಡದಿರುವುದು ಮತ್ತಷ್ಟು ಅನಾರೋಗ್ಯ ತರುತ್ತದೆ.

ADVERTISEMENT

* ತೆಳ್ಳಗಾಗುವ ಗುರಿಯನ್ನು ತಲೆಯಿಂದ ತೆಗೆದುಹಾಕಿ, ಆರೋಗ್ಯಕರ ಜೀವನಶೈಲಿಯನ್ನು ನಿಮ್ಮ ಗುರಿಯಾಗಿ ಮಾಡಿಕೊಳ್ಳಿ.

* ನಿಯಮಿತ ವೇಳೆಯಲ್ಲಿ ತರಕಾರಿ, ಹಣ್ಣ, ಹಾಲು ಮೊದಲಾದ ಪೌಷ್ಟಿಕ ಆಹಾರ ಸೇವಿಸಿ.  ಸಾಕಷ್ಟು ನೀರು ಕುಡಿಯಿರಿ.

* ಯಾವುದಾದರೊಂದು ರೀತಿಯ ವ್ಯಾಯಾಮ ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆ ಮಾಡಿ.

* ಮನೆಯಲ್ಲಿರುವ ಇತರ ಹೆಣ್ಣುಮಕ್ಕಳನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸಿ.  ಅಕ್ಕಪಕ್ಕದ ಮಹಿಳೆಯರನ್ನೂ ವಾಕಿಂಗ್/ ಯೋಗ/ಆಟ ಇವುಗಳಲ್ಲಿ ಜೊತೆ ಮಾಡಿಕೊಳ್ಳಿ.

* ಹಸಿವಿನ ಬಗ್ಗೆ ಹೆದರಬೇಡಿ.  ಹಸಿವನ್ನು ನಿಭಾಯಿಸುವುದನ್ನು ಕಲಿಯಿರಿ.  ಹಸಿವಾದಾಗ ಏನು ತಿನ್ನುತ್ತೀರಿ ಎಂಬುದರ ಬಗ್ಗೆ ಗಮನವಿಡಿ.  ಹಸಿವನ್ನು ಮುಂದೂಡಬೇಡಿ.  ಹಸಿವಾದ ಮಹಿಳೆ ಹರುಷದಿಂದಿರಲು ಸಾಧ್ಯವಿಲ್ಲ - Hungry Woman cannot be a Happy Woman!   ಹುಡುಗಿಯರಿಗೂ ಇದನ್ನು ಹೇಳಿಕೊಡಿ.

* ನಿಮ್ಮ ನಿಲುವಿನ ಬಗ್ಗೆ, ದೇಹದ ತೂಕದ ಬಗ್ಗೆ ಆತ್ಮವಿಶ್ವಾಸದಿಂದ ಯೋಚಿಸುವುದನ್ನು ರೂಢಿಸಿಕೊಳ್ಳಿ.  “ಬೇರೆಯವರು ನಿಮ್ಮ ಬಗ್ಗೆ ಏನನ್ನುತ್ತಾರೆ” ಎನ್ನುವದಕ್ಕಿಂತ, ‘ನೀವು ಹೇಗೆ ಕಾಣುತ್ತೀರಿ’ ಎನ್ನುವುದಕ್ಕಿಂತ, ‘ನೀವೆಷ್ಟು ಆರೋಗ್ಯವಂತರು, ಎಷ್ಟು ದಿನ ಮತ್ತು ಯಾವ ಗುಣಮಟ್ಟದಿಂದ ಜೀವಿಸುತ್ತೀರಿ’ ಎನ್ನುವುದು ನಿಮಗೆ ಮುಖ್ಯವಾಗಬೇಕು.  ನಿಮಗಾಗಿ ನೀವು ವ್ಯಾಯಾಮ - ಆರೋಗ್ಯಕರ ಆಹಾರ ಸೇವನೆಯ ರೂಢಿ ಪಾಲಿಸಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.