ADVERTISEMENT

ಮರು ಜೋಡಣೆಗೊಂದು ಹೊಸ ತಂತ್ರಜ್ಞಾನ

ಸುಮಲತಾ ಎನ್, ಪದ್ಮನಾಭ ಭಟ್ಟ
Published 27 ನವೆಂಬರ್ 2015, 19:30 IST
Last Updated 27 ನವೆಂಬರ್ 2015, 19:30 IST

ವಯಸ್ಸು 45– 50 ದಾಟುತ್ತಿದ್ದಂತೆ ಮಂಡಿ ಚಿಪ್ಪಿನ ಸವೆತ, ಸೊಂಟದ ಕೀಲು ಸಮಸ್ಯೆ ಅತಿ ಸಾಮಾನ್ಯ. ಆದರೆ ಈಗೀಗ ಯುವ ಜನತೆ, ಅದರಲ್ಲೂ ಮಧ್ಯವಯಸ್ಸಿನವರಲ್ಲಿ ಕೀಲು ಸಮಸ್ಯೆ ತೀವ್ರ ಸ್ವರೂಪ  ಪಡೆಯುತ್ತಿವೆ. ಹಲವು ಕಾರಣಗಳಿಗೆ, ಅಂದರೆ ಅಪಘಾತ, ಬೊಜ್ಜು ಅಥವಾ ಇನ್ನಿತರ ಮೂಳೆ ಸಂಬಂಧಿ ಸಮಸ್ಯೆಗಳಿಗೆ ಚಿಕ್ಕ ವಯಸ್ಸಿಗೇ ಕೃತಕ ಮರುಜೋಡಣೆ ಶಸ್ತ್ರಚಿಕಿತ್ಸೆಗೆ ಒಳಗಾಗುವವರ ಸಂಖ್ಯೆಯೂ ಹೆಚ್ಚಿದೆ.

ಈ ರೀತಿಯ ಕೀಲು ಸಮಸ್ಯೆಯನ್ನು ನೀಗಿಸಲೆಂದೇ ಹುಟ್ಟಿಕೊಂಡಿದ್ದು ಕೃತಕ ಮರು ಜೋಡಣೆ ಶಸ್ತ್ರಚಿಕಿತ್ಸೆ. ಮೊದಲೆಲ್ಲಾ 55 ವರ್ಷದ ನಂತರ ಈ ಶಸ್ತ್ರಚಿಕಿತ್ಸೆಗೆ ರೋಗಿಗಳಿಗೆ ಸಲಹೆ ನೀಡಲಾಗುತ್ತಿತ್ತು. ಆದರೆ ತಂತ್ರಜ್ಞಾನ ಬೆಳೆದಂತೆ ವಯಸ್ಸಿನ ಮಾನದಂಡಗಳೂ ಸಡಿಲವಾಗಿವೆ. ಇದಕ್ಕೆ ಉದಾಹರಣೆಯಂತೆ, ನ್ಯಾಷನಲ್ ಹಾಸ್ಪಿಟಲ್ ಡಿಸ್‌ಚಾರ್ಜ್‌ ಸರ್ವೆ ಮಾಹಿತಿ ಇದೆ. ಇದರ ಪ್ರಕಾರ 45 ರಿಂದ 54ರ ವಯಸ್ಸಿನವರಲ್ಲಿ ಸೊಂಟ ಮತ್ತು ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆ ಪ್ರಕರಣಗಳು 200 ಶೇಕಡಾ ಹೆಚ್ಚಾಗಿವೆ.

ಅಮೆರಿಕದಲ್ಲಿ 2014ರಲ್ಲಿ ಅಮೆರಿಕನ್ ಅಕಾಡೆಮಿ ಆಫ್ ಆರ್ಥೊಪೆಡಿಕ್ ಸರ್ಜನ್‌ನ ಅಧ್ಯಯನವೊಂದರಲ್ಲಿ ಮಂಡಿ ಮರುಜೋಡಣೆ ಶಸ್ತ್ರಚಿಕಿತ್ಸೆಗಳ ಪ್ರಕರಣ ಗಳು ಹೆಚ್ಚುತ್ತಿರುವ ಕುರಿತು ವರದಿಯಾಗಿದೆ. ಈ ಶಸ್ತ್ರಚಿಕಿತ್ಸೆಗೆ ಸುಮಾರು ಎರಡು ದಶಲಕ್ಷ ಜನರು ಒಳಗಾಗಿದ್ದು, ಹತ್ತು ವರ್ಷದಲ್ಲಿ ಕೀಲು ಮರು ಜೋಡಣೆ ಪ್ರಕರಣಗಳು 120 ಶೇಕಡಾ ತಲುಪಿವೆ ಎಂದು ಹೇಳಿದೆ. 16 ವರ್ಷದಿಂದ ಆರಂಭಿಸಿ 84 ವಯಸ್ಸಿನವರು ಕೀಲು ಮತ್ತು ಮಂಡಿ ಚಿಪ್ಪು ಮರುಜೋಡಣೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.

ಮಂಡಿ ಚಿಪ್ಪಿನ ಮರುಜೋಡಣೆ ಶಸ್ತ್ರಚಿಕಿತ್ಸೆ ಹಾಗೂ ಸೊಂಟದ ಕೀಲಿನ ಕೃತಕ ಜೋಡಣೆ ಶಸ್ತ್ರಚಿಕಿತ್ಸೆಯಲ್ಲಿ ಸಾಕಷ್ಟು ತಂತ್ರಜ್ಞಾನಗಳು ಅಭಿವೃದ್ಧಿಯಾಗಿವೆ. ಈಗ ಅಂಥದ್ದೇ ಒಂದು ಹೊಸ ತಂತ್ರಜ್ಞಾನ ‘ಶಾರ್ಟ್‌ ಮೋನೊಲಿಥಿಕ್ ಸ್ಟೆಮ್’. ಅಮೆರಿಕದಲ್ಲಿ ವಿನ್ಯಾಸಗೊಳಿಸಲಾಗಿರುವ ‘ಶಾರ್ಟ್‌ ಮೋನೊಲಿಥಿಕ್ ಸ್ಟೆಮ್ ಏಳು ವರ್ಷಗಳಿಂದ ಪ್ರಚಲಿತದಲ್ಲಿದೆ. ಚೈನಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮುಂತಾದೆಡೆ ಈ ಸ್ಟೆಮ್‌ ಬಳಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸಿದ್ದು, ಇತ್ತೀಚೆಗೆ ಚಂಡೀಗಡದ ಯುವಕ ನೊಬ್ಬನಿಗೆ ಈ ಸ್ಟೆಮ್ಅನ್ನು ಅಳವಡಿಸಲಾಗಿದೆ. ಮುಂಬೈ, ಚೆನ್ನೈ, ಬೆಂಗಳೂರಿನ ವೈದ್ಯರಿಗೆ ಇದರ ಅಳವಡಿಕೆ ಕುರಿತು ತರಬೇತಿ ನೀಡಲು ಇಟಲಿಯ ಸಾಂಟೊ ಸ್ಪಿರಿಟೊ ಆಸ್ಪತ್ರೆಯ ಆರ್ಥೊಪೆಡಿಕ್ ಹಾಗೂ ಟ್ರೌಮಾಲಜಿ ವಿಭಾಗದ ತಜ್ಞ ಫ್ರಾನ್ಸೆಸ್ಕೊ ಫಾಲೆಝ್ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಯುವಜನತೆಯನ್ನು ಉದ್ದೇಶವಾಗಿಟ್ಟುಕೊಂಡು ವಿನ್ಯಾಸಗೊಳಿಸಿರುವ ಈ ಸಾಧನದ ಕುರಿತು ಮಾತನಾಡಿದರು.

ಶಾರ್ಟ್‌ ಮೋನೊಲಿಥಿಕ್ ಸ್ಟೆಮ್
ಹೆಸರೇ ಹೇಳುವಂತೆ ಇದು ಸಣ್ಣ ಸಾಧನ. ಸೊಂಟದ ಕೃತಕ ಕೀಲು ಮರುಜೋಡಣೆಯ ಸ್ಟೆಮ್ ಇದು. ಎಸ್‌ಎಂಎಫ್‌ ಮೋನೊಲಿಥಿಕ್ ಸ್ಟೆಮ್‌ನಲ್ಲಿ ಟೈಟಾನಿಯಂ–ಸಿಮೆಟ್ರಿಕ್ ಬೀಡ್‌ ಕೋಟಿಂಗ್‌ ಇದೆ. ಇದು ಮೂಳೆಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಅನುಕೂಲ ಮಾಡಿ ಉತ್ತಮ ಹಿಡಿತ ನೀಡುತ್ತದೆ. ಇದು ಎಲುಬು ಪಕ್ವಗೊಳ್ಳಲು ಅನುವು ಮಾಡಿಕೊಡುವುದಲ್ಲದೆ, ಪೆಲ್ವಿಸ್ ಹಾಗೂ ತೊಡೆಯ ಮೂಳೆನಡುವಿನ ಈ ಸ್ಟೆಮ್ ಇನ್ನಿತರ ಅಕ್ಕ ಪಕ್ಕದ ಮೂಳೆಗಳ ಚಟುವಟಿಕೆಗೆ ಪೂರಕವಾಗಿರುತ್ತದೆ.

73ಎಂಎಂನಿಂದ 110ಎಂಎಂವರೆಗೂ ಇದರ ಉದ್ದ ಇದ್ದು, ಇನ್ನಿತರ ಸ್ಟಮ್‌ಗಿಂತ 20% ಅಳತೆ ಕಡಿಮೆ. ಇದರಿಂದ ಶಸ್ತ್ರಚಿಕಿತ್ಸೆ ಸಮಯ, ಹೆಚ್ಚು ಮೂಳೆಯನ್ನು ತೆಗೆಯುವ ಅವಶ್ಯಕತೆ ಇರುವುದಿಲ್ಲ. ಈ ಹಿಂದೆ ಇದ್ದ ಸ್ಟೆಮ್‌ಗಳ ಗಾತ್ರ ದೊಡ್ಡದಾಗಿದ್ದು, ಅಳವಡಿಕೆಗೆ ಮೂಳೆಯ ಹೆಚ್ಚು ಭಾಗವನ್ನು ತೆಗೆಯಬೇಕಾಗುತ್ತಿತ್ತು. ಜೊತೆಗೆ ರೋಗಿಯ ದೇಹ ರಚನೆಗೆ ತಕ್ಕಂತೆ  ಮಾದರಿಗಳು ಲಭ್ಯ ಇರುತ್ತವೆ. ನಾಲ್ಕು ವಾರಗಳ ನಂತರ ಆರಾಮಾಗಿ ಓಡಾಡಬಹುದು. 16 ವರ್ಷದಿಂದ 87 ವರ್ಷದವರೆಗೂ ಹಾಕಬಹುದು.

ಭಾರತದಲ್ಲಿ ಹೆಚ್ಚು ಕೃತಕ  ಮಂಡಿ ಮರುಜೋಡಣೆ
ಒಂದೊಂದು ಕಡೆ ಒಂದೊಂದು ರೀತಿಯ ಪ್ರಕರಣಗಳು ಇರುತ್ತವೆ. ವಿದೇಶಗಳಲ್ಲಿ ಸೊಂಟದ ಮರು ಜೋಡಣೆ ಪ್ರಕರಣಗಳು ಹೆಚ್ಚಿದ್ದರೆ, ಭಾರತದಲ್ಲಿ ಮಂಡಿ ಚಿಪ್ಪಿನ ಮರುಜೋಡಣೆ ಶಸ್ತ್ರಚಿಕಿತ್ಸೆಗಳು ಹೆಚ್ಚು. ಆಯಾ ಜನರ ಚಟುವಟಿಕೆಯನ್ನು ಅವಲಂಬಿಸಿದ್ದಾಗಿರುತ್ತವೆ. ವಿದೇಶದಲ್ಲಿ ಶೇ 70ರಷ್ಟು ಸೊಂಟದ ಕೀಲಿನ ಕೃತಕ ಮರುಜೋಡಣೆ ಇದ್ದರೆ, 30% ಕೃತಕ ಮಂಡಿ ಜೋಡಣೆ ಇರುತ್ತದೆ. ಇತ್ತೀಚೆಗೆ ಈ ಎಸ್‌ಎಂಎಫ್‌ ಅನ್ನು ಅಮೆರಿಕದಲ್ಲಿ 97ವರ್ಷದ ವೃದ್ಧೆಯೂ ಅಳವಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT