ADVERTISEMENT

ಯಾರ ಆರೋಗ್ಯ? ಯಾರಿಗೆ ಭಾಗ್ಯ?

ಕೆ.ಸಿ.ರಘು
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ಯಾರ ಆರೋಗ್ಯ? ಯಾರಿಗೆ ಭಾಗ್ಯ?
ಯಾರ ಆರೋಗ್ಯ? ಯಾರಿಗೆ ಭಾಗ್ಯ?   

ಈ ಬಾರಿ ಕೇಂದ್ರದ ಮುಂಗಡ ಪತ್ರದಲ್ಲಿ 10 ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆಯನ್ನು ಒದಗಿಸುವ ‘ಆಯುಷ್ಮಾನ್ ಭಾರತ್’ ಎಂಬ ಯೋಜನೆಯನ್ನು ಪ್ರಕಟಿಸಲಾಗಿದೆ. ಈ ಪ್ರಕಾರ ಸುಮಾರು 50 ಕೋಟಿ ಜನರಿಗೆ ಈ ವಿಮೆ ಒಳಗೊಳ್ಳುತ್ತದೆ ಎನ್ನಲಾಗಿದೆ. ಇದಕ್ಕಾಗಿ ಸುಮಾರು ಎರಡು ಸಾವಿರ ಕೋಟಿಯಷ್ಟು ಹಣವನ್ನು ನಿಗದಿಪಡಿಸಲಾಗಿದೆ. ಈ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಜೋಡಿಸಿ ಅನುಷ್ಠಾನಗೊಳಿಸುವುದಾಗಿದೆ.

ಕೇಂದ್ರದಿಂದ ರೂಪಾಯಿಗೆ 40 ಪೈಸೆ ಒದಗಿಸುವುದು, 60 ಪೈಸೆ ರಾಜ್ಯ ಸರ್ಕಾರ ಒದಗಿಸುವುದಾಗಿದೆ. ವಿಮೆಯ ಮೂಲಕ ಕೆಲವು ಆರೋಗ್ಯ ಸೇವೆಗಳನ್ನು ನಿಭಾಯಿಸುವ ಕ್ರಮ ಇದೇನೂ ಮೊದಲಲ್ಲ. ಅನೇಕ ರಾಜ್ಯಗಳಲ್ಲಿ ಇದಾಗಲೇ ಸಾರ್ವತ್ರಿಕ ವಿಮಾ ಯೋಜನೆಗಳು ಜಾರಿಯಲ್ಲಿವೆ. ಆದರೆ ಇಡೀ ದೇಶದಲ್ಲಿ ಇಂತಹದೊಂದು ದೊಡ್ಡಮಟ್ಟದ ಯೋಜನೆ ಕೈಗೊಂಡಿರಲಿಲ್ಲ.

ಈ ಯೋಜನೆಗೆ 10 ಸಾವಿರ ಕೋಟಿಯಿಂದ 1 ಲಕ್ಷ ಕೋಟಿಯವರೆಗೂ ಹಣ ಬೇಕಾಗಬಹುದು ಎಂದು ವಿವಿಧ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಣಕಾಸಿನ ವಿಚಾರ ಹಾಗಿದ್ದಲ್ಲಿ, ಈ ವಿಮೆ ಏನೆಲ್ಲಾ ಒಳಗೊಳ್ಳುವುದು ಎನ್ನುವುದು ಪ್ರಮುಖ ಪ್ರಶ್ನೆ. ಇದು ನಿಜವಾಗಿಯೂ ಆರೋಗ್ಯ ಸೇವೆಯಲ್ಲಿ ಒಂದು ಕ್ರಾಂತಿಯೇ ಎನ್ನುವುದನ್ನು ವಿಮರ್ಶಿಸಬೇಕಾಗುವುದು. ಈ ವಿಮೆ ಆಸ್ಪತ್ರೆಗೆ ದಾಖಲಾಗಿ, ಒಳರೋಗಿಯಾಗಿ ಶಸ್ತ್ರಚಿಕಿತ್ಸೆ ರೀತಿಯ ಚಿಕಿತ್ಸೆಗಳಿಗೆ ಅನ್ವಯಿಸುವಂಥದ್ದು. ಇತ್ತೀಚೆಗೆ ಗುರುಗ್ರಾಮದ ಫೋರ್ಟೀಸ್ ಆಸ್ಪತ್ರೆಯಲ್ಲಿ ಡೆಂಗಿಯಿಂದ ಬಳಲುತ್ತಿರವವರೊಬ್ಬರು ಹದಿನಾರು ಲಕ್ಷ ರೂಪಾಯಿಗಳ ಬಿಲ್‌ ಅನ್ನು ಆಸ್ಪತ್ರೆಗೆ ಪಾವತಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಈ ವಿಮೆಯಿಂದ ಪ್ರಯೋಜನವಾಗದು.

ADVERTISEMENT

ಕಾರಣ, ಇಲ್ಲಿ ಯಾವುದೇ ಶಸ್ತ್ರಚಿಕಿತ್ಸೆಯಾಗಿರಲಿಲ್ಲ. ಕೇವಲ ಔಷಧೋಪಚಾರಕ್ಕೆ 16 ಲಕ್ಷ ಬಿಲ್ ಮಾಡಲಾಗಿತ್ತು. ಅಲ್ಲದೆ, ಶೇ 70ರಷ್ಟು ತನ್ನ ಜೇಬಿನ ಖರ್ಚಿನಿಂದ ಇಂದು ಜನರು ನಿರ್ವಹಿಸುತ್ತಿರುವ ಆರೋಗ್ಯದ ಖರ್ಚು ಒಳರೋಗಿಯಾಗಿ ಮಾಡುವಂಥದ್ದಲ್ಲ. ಈ ಖರ್ಚುಗಳು ಹೊರರೋಗಿಯಾಗಿ ಮತ್ತು ರೋಗಪತ್ತೆಗಾಗಿ ಹಾಗೂ ಔಷಧದಕ್ಕಾಗಿ ಮಾಡುವುದಾಗಿದೆ. ಇದಕ್ಕೆ ಈ ವಿಮೆ ಪ್ರಯೋಜನಕ್ಕೆ ಬರದು.

ಇನ್ನೊಂದು ಪ್ರಮುಖ ವಿಷಯ ವಿಮೆಯ ಮೊತ್ತ ಹೆಚ್ಚಾದಷ್ಟೂ, ಆಸ್ಪತ್ರೆಗಳು ಅದನ್ನು ಪಡೆಯಲು ಹೊರರೋಗಿಯಾಗಿ ಚಿಕಿತ್ಸೆ ಮಾಡುವುದು ಕಡಿಮೆಯಾಗಿ, ಒಳರೋಗಿಯಾಗಿ ನೊಂದಾಯಿಸಿಕೊಳ್ಳುವ ಪ್ರಕ್ರಿಯೆ ಹೆಚ್ಚಾಗಬಹುದು. ವಿಮೆಯ ಮೊತ್ತವನ್ನು ನೋಡಿ, ಸಿಜೇರಿಯನ್ ಕೂಡ ಹೆಚ್ಚಾಗುತ್ತದೆ ಎನ್ನುವ ಅನೇಕ ವರದಿಗಳಿವೆ. ಎಲ್ಲದಕ್ಕೂ ಮುಖ್ಯವಾಗಿ ಭಾರತದಲ್ಲಿ ಆರೋಗ್ಯ ವ್ಯವಸ್ಥೆಯ ಪ್ರಮುಖ ದೋಷಗಳಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ ಮತ್ತು ಸಮುದಾಯ ಆರೋಗ್ಯಕೇಂದ್ರಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಸರ್ಜರಿಗೆ ಮೂರನೆ ಹಂತದ ಚಿಕಿತ್ಸೆಗೆ ಒತ್ತು ಕೊಡುತ್ತಿರುವುದು ಸರಿಯಲ್ಲ.

ಪ್ರಾಥಮಿಕ ಹಂತದಲ್ಲಿ ತಡೆಗಟ್ಟಬಹುದಾದುದ್ದನ್ನು ಮಾಡದೇ, ನೇರವಾಗಿ ನಗರ ಪ್ರದೇಶದ ದೈತ್ಯ ಆಸ್ಪತ್ರೆಗಳಿಗೆ ದಾಖಲಿಸಿ, ವಿಮೆ ಕಂಪನಿಗಳಿಗೆ ಹಣ ಕೊಡುವುದರಿಂದ ಆರೋಗ್ಯ ವ್ಯವಸ್ಥೆ ಸುಧಾರಿಸದು. ಇದಾಗಲೇ ಪ್ರಾಥಮಿಕ ಹಂತದಲ್ಲಿ ವೈದ್ಯರ ಕೊರತೆ ಸುಮಾರು ಶೇ 50ಕ್ಕೂ ಹೆಚ್ಚಾಗಿದೆ. ಅಲ್ಲದೆ, 40 ಸಾವಿರ ಕಟ್ಟಡಗಳನ್ನು ಆರೋಗ್ಯ ಕೇಂದ್ರಗಳಿಗಾಗಿ ನಿರ್ಮಿಸಬೇಕಾಗಿದೆ. ಇದಕ್ಕೆ ಸರ್ಕಾರ ನಿಗದಿಪಡಿಸಿರುವ ಮೊತ್ತ ಕೇವಲ ಒಂದೂವರೆ ಸಾವಿರ ಕೋಟಿ ರೂಪಾಯಿಗಳು ಮಾತ್ರ. ಪ್ರಾಥಮಿಕ ಆರೋಗ್ಯಕ್ಕೆ ಬಂಡವಾಳ ಹೂಡುವುದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಹೋಗುತ್ತಿದ್ದಂತೆ, ವಿಮಾ ಕಂಪನಿಗಳಿಗೆ ಮೂರನೇ ಹಂತದ ಚಿಕಿತ್ಸೆಯಿಂದ ಲಾಭ ಹೆಚ್ಚಾಗುತ್ತಾ ಹೋಗುತ್ತದೆ. ಇಂದು ಜನಸಾಮಾನ್ಯರು ತಮ್ಮ ಜೇಬಿನಿಂದ ಆರೋಗ್ಯದ ಒಟ್ಟು ಖರ್ಚನಲ್ಲಿ ಭರಿಸುವುದು ಚೀನಾದಲ್ಲಿ ಶೇ 32ರಷ್ಟಿದ್ದರೆ, ಅಮೆರಿಕದಲ್ಲಿ ಈ ಪ್ರಮಾಣ ಶೇ 11ರಷ್ಟು, ಭಾರತದಲ್ಲಿ ಇದು ಶೇ.63.

ಜಗತ್ತಿನ ಒಟ್ಟು ಸರಾಸರಿ ಜನಸಾಮಾನ್ಯರು ತಮ್ಮ ಖರ್ಚಿನಿಂದಲೇ ಆರೋಗ್ಯದ ಖರ್ಚು ನಿಭಾಯಿಸುವ ಪ್ರಮಾಣ ಶೇ 18.2 ಮಾತ್ರ. ಆದರೆ ಕಡಿಮೆ ಆದಾಯವಿರುವ ಭಾರತದಂಥ ದೇಶದಲ್ಲಿ ಜನರೇ ಶೇ 63ರಷ್ಟು ಆರೋಗಿಯದ ಖರ್ಚನ್ನು ಜನರೇ ನಿರ್ವಹಿಸಬೇಕಾಗಿರುವುದು ನಮ್ಮ ಪ್ರಜಾಪ್ರಭುತ್ವ ಸರ್ಕಾರಗಳ ಅತ್ಯಂತ ಘೋರ ಅಪರಾಧ ಎನ್ನಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಪ್ರಕಾರ ಜಿ.ಡಿ.ಪಿ.ಯ ಶೇ 2.5ರಷ್ಟು ಹಣವನ್ನು ಆರೋಗ್ಯಕ್ಕಾಗಿ ಸರ್ಕಾರ ಖರ್ಚು ಮಾಡಬೇಕಾಗುತ್ತದೆ. ಆದರೆ, ನಮ್ಮಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಟ್ಟು ಖರ್ಚು ಕೇವಲ ಶೇ 1.4ರಷ್ಟು ಮಾತ್ರ. ಹೀಗಾಗಿ ಪ್ರತಿ ವರ್ಷ ಸುಮಾರು ಆರು ಕೋಟಿ ಜನರು ಕಾಯಿಲೆ–ಕಸಾಲೆಗಳಿಗೆ ಹಣವನ್ನು ಚೆಲ್ಲಿ ಬಡತನರೇಖೆಗೆ ಜಾರುತ್ತಿದ್ದಾರೆ. ‘ಆರೋಗ್ಯವೇ ಭಾಗ್ಯ’ ಎನ್ನುವುದೇನೋ ಸರಿ, ಆದರೆ ‘ಯಾರ ಆರೋಗ್ಯ ಯಾರಿಗೆ ಭಾಗ್ಯ’ ಎಂದು ಕೇಳಬೇಕಾಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.