ADVERTISEMENT

'ಲೀಡರ್‌' ನೆನಪಿಸುವ 'ರಾಜು'

ಘನಶ್ಯಾಮ ಡಿ.ಎಂ.
Published 7 ಸೆಪ್ಟೆಂಬರ್ 2017, 19:30 IST
Last Updated 7 ಸೆಪ್ಟೆಂಬರ್ 2017, 19:30 IST
'ಲೀಡರ್‌' ನೆನಪಿಸುವ 'ರಾಜು'
'ಲೀಡರ್‌' ನೆನಪಿಸುವ 'ರಾಜು'   

'ಅಣ್ಣ, ನೀನು ತಪ್ಪು ಮಾಡ್ತಿದ್ದೀಯಾ. ಯಾವಾಗ ಮಾತಿನಲ್ಲಿ ಉತ್ತರ ಹೇಳಲು ಸಾಧ್ಯವಿಲ್ಲವೋ, ಆಗ ಕೈ ಮುಂದಾಗುತ್ತೆ...'

ಸದ್ಯದ ಮಟ್ಟಿಗೆ ತೆಲುಗು ಚಿತ್ರರಂಗದ ಗೆಲ್ಲುವ ಕುದುರೆ ರಾನಾ ದಗ್ಗುಬಾಟಿಗೆ 'ನೇನೇ ರಾಜು ನೇನೆ ಮಂತ್ರಿ' ಚಿತ್ರದಲ್ಲಿ ಪೋಷಕ ಪಾತ್ರವೊಂದು ಹೇಳುವ ಬುದ್ಧಿವಾದವಿದು.

ದಕ್ಷಿಣ ಭಾರತದ ಬಹುತೇಕ ಸ್ಟಾರ್‌ ನಟರು ಹೊಡಿ- ಬಡಿ- ಕಡಿ ಎನ್ನುತ್ತಾ ಮುನ್ನುಗ್ಗುತ್ತಿರುವಾಗ ಈ ಸಂಭಾಷಣೆ ಹಲವು ಆಯಾಮಗಳ ಅರ್ಥವನ್ನು ಹೊಳೆಸಬಲ್ಲದು. ವಾಸ್ತವ ಸ್ಥಿತಿಗೆ ವ್ಯಂಗ್ಯದ ಕನ್ನಡಿಯನ್ನೂ ಹಿಡಿಯಬಲ್ಲದು.

ADVERTISEMENT

'ನೇನೇ ರಾಜು...' ಚಿತ್ರ ನೋಡಿ ಹೊರ ಬಂದ ಪ್ರೇಕ್ಷಕನನ್ನು ಅದೇ ನಟನ ಮತ್ತೊಂದು ಚಿತ್ರ ಬಿಟ್ಟೂ ಬಿಡದೆ ಕಾಡುತ್ತದೆ. ಆತನಿಗೆ ಸ್ಟಾರ್‌ಗಿರಿ ಹೆಗಲಿಗೇರುವ ಮೊದಲು ತೆರೆಕಂಡಿದ್ದ ಆ ಚಿತ್ರದಲ್ಲೂ ರಾಜಕೀಯ ದಟ್ಟವಾಗಿ ಆವರಿಸಿಕೊಂಡಿತ್ತು. ಆದರೆ ಅವು 'ರಾಜು'ವಿನಂತೆ ಸಿದ್ಧಸೂತ್ರದ ಚೌಕಟ್ಟಿನಲ್ಲಿ ಬಂಧಿಯಾಗಿರಲಿಲ್ಲ. ವಾಸ್ತವಕ್ಕೆ ಮುಖಾಮುಖಿಯಾಗುವ, ಒಳಿತೆನೆಡೆಗೆ ಸಮಾಜವನ್ನು ಮುನ್ನಡೆಸುವ ಕನಸು ಹಂಚುವ ಪ್ರಯತ್ನ ಪ್ರತಿ ಫ್ರೇಂನಲ್ಲೂ ಕಾಣುವಂತಿತ್ತು.

(ಲೀಡರ್ ಚಿತ್ರದ ನಿರ್ದೇಶಕ ಶೇಖರ್ ಕಮ್ಮುಲ)

ಇಷ್ಟು ಹೇಳುವ ಹೊತ್ತಿಗೆ ನಿಮಗೆ 2010ರಲ್ಲಿ ತೆರೆ ಕಂಡಿದ್ದ ಶೇಖರ್ ಕಮ್ಮುಲ ನಿರ್ದೇಶನದ 'ಲೀಡರ್' ನೆನಪಾಗಿರುತ್ತೆ ಅಲ್ವಾ? ಅದರಲ್ಲಿಯೂ ಇದೇ ರಾನಾ ರಾಜಕಾರಿಣಿ.

ಭ್ರಷ್ಟಾಚಾರ ತೊಲಗಿಸುವ ಕನಸು ಬಿತ್ತಿ ಮುಖ್ಯಮಂತ್ರಿಯಾದ ಸಂಜೀವಯ್ಯ (ಸುಮನ್) ವ್ಯವಸ್ಥೆಯ ಕೈಗೊಂಬೆಯಾಗಿ ಪರಮಭ್ರಷ್ಟನಾಗುತ್ತಾನೆ. ಬಾಂಬ್‌ ಸ್ಫೋಟದಿಂದ ಮುಖ್ಯಮಂತ್ರಿ ಅಕಾಲ ಸಾವಿಗೀಡಾದ ನಂತರ ಮುಖ್ಯಮಂತ್ರಿಯ ಮಗ ಅರ್ಜುನ್ (ರಾನಾ ದಗ್ಗುಬಾಟಿ) ರಾಜಕಾರಣ ಪ್ರವೇಶಿಸುತ್ತಾನೆ. ತನ್ನ ತಂದೆ ಎಲ್ಲಿಂದ ದಾರಿ ತಪ್ಪಿದ್ದರೋ ಅಲ್ಲಿಂದಲೇ ವ್ಯವಸ್ಥೆಯನ್ನು ಸರಿಪಡಿಸುವ ಆಶಯದಿಂದ ಟೊಂಕಕಟ್ಟಿ ನಿಲ್ಲುತ್ತಾನೆ.

ಒಂದು ಹಂತದಲ್ಲಿ ಸರ್ಕಾರ ಉಳಿಸಿಕೊಳ್ಳಲು ಅತ್ಯಾಚಾರಿ- ಕೊಲೆಗಡುಕನೊಬ್ಬನನ್ನು ರಕ್ಷಿಸಬೇಕಾಗುತ್ತೆ. 'ಎಲ್ಲರೂ ಹೀಗೇ ಕಣೋ. ಅಧಿಕಾರ ಸಿಗೋವರೆಗೆ ಒಂದು ಥರ, ಅಧಿಕಾರ ಉಳಿಸಿಕೊಳ್ಳಲು ಮತ್ತೊಂದು ಥರ. ನಿಮ್ಮಪ್ಪನೂ ಹೀಗೇ ಆದ್ರು. ನೀನೂ ಹೀಗೇ ಆಗ್ತಿದ್ದೀಯಾ. ನೀನು ರಾಜಕಾರಿಣಿಯಾಗುವುದು ನನಗೆ ಬೇಕಿರಲಿಲ್ಲ. ನೀನೊಬ್ಬ ಲೀಡರ್ ಆಗಬೇಕಿತ್ತು' ಎನ್ನುವ ಅಮ್ಮ ರಾಜೇಶ್ವರಿಯ (ಸುಹಾಸಿನಿ) ಮಾತು ಅವನ ಕಣ್ತೆರೆಸುತ್ತದೆ.

'ನೇನೇ ರಾಜು...' ನೋಡುವಾಗ ಪದೇಪದೆ ನೆನಪಾಗುವ 'ಲೀಡರ್‌' ಚಿತ್ರದ ಸಂಭಾಷಣೆ- ದೃಶ್ಯ ಇದು.

ಈಗ ಮತ್ತೆ 'ನೇನೇ ರಾಜು ನೇನೇ ಮಂತ್ರಿ'ಗೆ ಹೊರಳೋಣ. ಹಳ್ಳಿಯೊಂದರಲ್ಲಿ ಬಡ್ಡಿ ವ್ಯಾಪಾರಿಯಾಗಿ ಜೀವನ ನಡೆಸುತ್ತಿದ್ದ ಜೋಗೇಂದ್ರ (ರಾನಾ) ತನ್ನ ಹೆಂಡತಿ ರಾಧಾಳನ್ನು (ಕಾಜೊಲ್ ಅಗರ್‌ವಾಲ್) ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ಹೆಂಡತಿಯ ಗರ್ಭಪಾತಕ್ಕೆ ಕಾರಣವಾದ ಕುಟುಂಬದ ವಿರುದ್ಧ ತಿರುಗಿ ಬೀಳಲು ರಾಜಕಾರಿಣಿಯಾಗುತ್ತಾನೆ. ಸಾಲುಸಾಲು ಕೊಲೆಗಳು, ಗೋಡೆ ತುಂಬಾ ಹಣದ ಕಂತೆ. ಯಾವ ಕೇಡಿಗನಿಗೂ ಕಡಿಮೆ ಇಲ್ಲದಷ್ಟು ಸಂಚು, ಮಹತ್ವಾಕಾಂಕ್ಷೆ. ಹಿಂಸೆಯಲ್ಲಿ ಕೊಚ್ಚಿ ಹೋಗುವ ಚಿತ್ರವನ್ನು ಆಗೀಗ ಕೈಹಿಡಿಯುವುದು ದಾಂಪತ್ಯ ಪ್ರೀತಿಯ ಎಳೆ ಬಿಸಿಲು.

ಕಣ್ಣೀರು ಸುರಿಸುವ ಗ್ಲಾಮರ್‌ ಗೊಂಬೆಯಾಗಿ ತೆರೆಯನ್ನು ಆವರಿಸಿಕೊಳ್ಳುವ ದೇವಿಕಾ ರಾಣಿ (ಕ್ಯಾಥರಿನ್ ತೆರೆಸಾ) ಚಿತ್ರಕ್ಕೆ ಕೊಡುವ ತಿರುವು ದೊಡ್ಡದು. ಈ ಚಿತ್ರದಲ್ಲಿ ಆಕೆ ಪತ್ರಕರ್ತೆ. 'ನಾನು ಕೊನೆಯವರೆಗೂ ರಾಧಾ ಜೋಗೇಂದ್ರನೇ ಆಗಿ ಉಳಿಯುತ್ತೇನೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ರಾನಾಗೆ ಅಸಹಾಯಕ ಪತ್ರಕರ್ತೆಯೊಬ್ಬಳ (ಕ್ಯಾಥರಿನ್ ತೆರೆಸಾ) ಮೇಲೆ ಅತ್ಯಾಚಾರ ನಡೆಸಿದ್ದು, ಅವಳ ಮನಸಿನೊಂದಿಗೆ ಆಟವಾಡಿದ್ದು ಎಂದಿಗೂ ತಪ್ಪು ಎನಿಸುವುದೇ ಇಲ್ಲ. ಬದಲಿಗೆ ಎಲ್ಲರೂ ಅವಳಿಗೇ 'ನಿನ್ನ ಪ್ರೀತಿ ಶುದ್ಧವಲ್ಲ' ಎಂದು ಬುದ್ಧಿ ಹೇಳುತ್ತಾರೆ.

ಅಂದು ಅತ್ಯಾಚಾರಿಗೆ ಶಿಕ್ಷೆ ಕೊಡಿಸಲೆಂದು ಸರ್ಕಾರವನ್ನೇ ಕಳೆದುಕೊಳ್ಳುವ 'ಲೀಡರ್‌', ಕೇವಲ ಏಳು ವರ್ಷಗಳ ಅವಧಿಯಲ್ಲಿ 'ರಾಜ'ನಾಗಿ ವಿಜೃಂಭಿಸುತ್ತಾನೆ. ಮುಖ್ಯಮಂತ್ರಿಯಾಗುವ ಆಸೆಗೆ ತಾನೇ ಅತ್ಯಾಚಾರಿಯಾಗುತ್ತಾನೆ. ಒಂದು ಕಾಲಕ್ಕೆ ತಪ್ಪು ಎನಿಸಿದ್ದ ಹಿಂಸೆ, ಕ್ರೌರ್ಯ, ತಂಬಾಕು ಸೇವನೆ, ಮದ್ಯಪಾನ, ಅತ್ಯಾಚಾರಗಳನ್ನು ಇಂದು ತೆಲುಗು ಚಿತ್ರರಂಗ ಸಹಜ ಎಂಬಂತೆ ಬಿಂಬಿಸುತ್ತಿದೆ. ಈ ಎಲ್ಲ ದ್ವಂದ್ವಗಳ ಪ್ರತೀಕ ಎಂಬಂತೆ 'ನೇನೇ ರಾಜು ನೇನೇ ಮಂತ್ರಿ' ಭಾಸವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.