ADVERTISEMENT

ಹಸಿದ ಹೊಟ್ಟೆಗೆ ಹೊಡೆಯುವ ಲೀಚಿಹಣ್ಣಿನ ನಂಜು

ಕೆ.ಸಿ.ರಘು
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಹಸಿದ ಹೊಟ್ಟೆಗೆ ಹೊಡೆಯುವ ಲೀಚಿಹಣ್ಣಿನ ನಂಜು
ಹಸಿದ ಹೊಟ್ಟೆಗೆ ಹೊಡೆಯುವ ಲೀಚಿಹಣ್ಣಿನ ನಂಜು   

ಬಿಹಾರದ ಮುಜ್ಜಫರ್‌ ಜಿಲ್ಲೆಯಲ್ಲಿ ಕಳೆದ ಅನೇಕ ದಶಕಗಳಿಂದ ಲೀಚಿಹಣ್ಣು ಕೋಯ್ಲಿಗೆ ಬರುವ ಏಪ್ರಿಲ್-ಜುಲೈ ತಿಂಗಳಿನಲ್ಲಿ ನೂರಾರು ಮಕ್ಕಳು ತೀವ್ರ ಮೆದುಳಿನ ಉರಿಯೂತದಿಂದ (acute encephalitis syndrome) ಆಸ್ಪತ್ರೆ ಸೇರುತ್ತಿದ್ದಾರೆ. ಅದರಲ್ಲಿ ಅನೇಕರು ಸಾವಿಗೂ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಹುಡುಕಲು ಹಲವು ವರ್ಷಗಳಿಂದ ವೈದ್ಯರು, ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ.

ರಸವತ್ತಾದ ಈ ಲೀಚಿಹಣ್ಣಿನಲ್ಲಿ ಈ ರೀತಿಯ ಮಾರಕವಸ್ತು ಇರುವುದಾದರೂ ಏನು? ಹಣ್ಣೋ ಅಥವಾ ಅದಕ್ಕೆ ತಗುಲುವ ರೋಗಾಣುಗಳಿಂದ ಈ ಕಾಯಿಲೆ ಬರುತ್ತದೆಯೋ? ಅಥವಾ ಅಲ್ಲಿ ಬಳಸುವ ಕೀಟನಾಶಕ, ಶಿಲೀಂದ್ರನಾಶಕಗಳಿಂದ ಸಮಸ್ಯೆ ಉಂಟಾಗುತ್ತಿದೆಯೇ? ಅಥವಾ ಆ ಭೌಗೋಳಿಕ ಪ್ರದೇಶದಲ್ಲಿ ಬೇರೆಯೇ ಮಾರಕ ವಿಷದ ಅಂಶಗಳಿವೆಯೇ? ಈ ರೀತಿ ಅನೇಕ ರೀತಿಯ ಸಂಶಯಗಳಿಗೆ, ಸಂಶೋಧನೆಗೆ ಎಡೆಮಾಡಿಕೊಟ್ಟಿದೆ. ಇದರ ಕಾರ್ಯ–ಕಾರಣಸಂಬಂಧದ ಹುಡುಕಾಟದಿಂದ ಅನೇಕ ವೈಜ್ಞಾನಿಕ ವರದಿಗಳು ಇದುವರೆಗೆ ಹೊರಬಂದಿವೆ.

ಇತ್ತೀಚಿಗೆ  ‘ಲ್ಯಾನ್ಸೆಟ್ ಗ್ಲೊಬಲ್ ಹೆಲ್ತ್ ’ನಿಯತಕಾಲಿಕದಲ್ಲಿ ಡಾ. ಪದ್ಮಿನಿ ಶ್ರೀವತ್ಸ ಪ್ರಕಟಪಡಿಸಿದ ಅಧ್ಯಯನದ ವರದಿಯ ಪ್ರಕಾರ ಇದಕ್ಕೆ ಒಂದು ಅಂತಿಮ ಉತ್ತರ ಸಿಕ್ಕಿದಂತೆ ಕಾಣುತ್ತದೆ.

ಈ ಅಧ್ಯಯನವನ್ನು ಭಾರತದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಅಮೆರಿಕದ ಡಿಸೀಸ್ ಫಾರ್ ಕಂಟ್ರೋಲ್ ಆಶ್ರಯದಲ್ಲಿ ಕಳೆದ 2013ರಿಂದ ನಡೆಸಲಾಗಿತ್ತು. ಈ ವರದಿಯ ಪ್ರಕಾರ ಲೀಚಿಹಣ್ಣಿನಲ್ಲಿ, ಅದರಲ್ಲೂ ಚೆನ್ನಾಗಿ ಮಾಗಿರದ ದೊರಗಾಯಿಯಲ್ಲಿ ‘ಹೈಪೊಗ್ಲೈಸಿನ್ ಎ’ ಎಂಬ ರಾಸಾಯನಿಕ ವಸ್ತು ಇದೆ. ಇದನ್ನೇ ‘ಮಿಥೈಲ್‌ಸೈಕ್ಲೊಪ್ರೊಪೈಲ್ ಗ್ಲೈಸೀನ್’ ಎಂದೂ ಕರೆಯುತ್ತಾರೆ.

ಲೀಚಿಹಣ್ಣನ್ನು ಅಪೌಷ್ಟಿಕತೆಯಿಂದ ಪೀಡಿತರಾಗಿರುವ ಮಕ್ಕಳು ಖಾಲಿ ಹೊಟ್ಟೆಯಲ್ಲಿ ತಿಂದಾಗ ಮೆದುಳಿನ ತೀವ್ರ ಉರಿಯೂತ ಉಂಟಾಗಿ ಸಾವನ್ನಪ್ಪುವ ಸಾಧ್ಯತೆಯಿರುತ್ತದೆ. ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳು ಖಾಲಿ ಹೊಟ್ಟೆಯಲ್ಲಿ ಬೆಳಗಿನ ಜಾವ ತೋಟದಲ್ಲಿ ಬಿದ್ದಿರುವ ಲೀಚಿಹಣ್ಣನ್ನು ತಿನ್ನುತ್ತಾರೆ. ಮೆದುಳಿಗೆ ದೇಹದ ಕೊಬ್ಬನ್ನು ಸಕ್ಕರೆ(ಗ್ಲೂಕೋಸ್)ಯಾಗಿ ಪರಿವರ್ತನೆಯಾಗುವುದನ್ನು ಆ ಹಣ್ಣಿನಲ್ಲಿರುವ ಹೈಪೊಗ್ಲೈಸಿನ್ ಎ ತಡೆಯುತ್ತದೆ.

ಪರಿಣಾಮ ಗ್ಲೂಕೋಸ್ಸನ್ನೇ ಮಾತ್ರ ಶಕ್ತಿಗಾಗಿ ಬಳಸುವ ನಮ್ಮ ಮೆದುಳು ಬಲಹೀನವಾಗಿ ಉರಿಯೂತಕ್ಕೆ ಸಿಲುಕುತ್ತದೆ. ಇಂಧನವಿಲ್ಲದೇ ಮೆದುಳು ತೀವ್ರ ಸಮಸ್ಯೆಗೆ ಈಡಾಗಿ ಸಾವನ್ನಪ್ಪುವ ಸಾಧ್ಯತೆಗೆ ಎಡೆಮಾಡಿಕೊಡುತ್ತದೆ. ಹೊಟ್ಟೆ ಖಾಲಿ ಇರುವಾಗ ದೇಹ ತನ್ನಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಗ್ಲೂಕೋಸ್ ಆಗಿ ಪರಿವರ್ತಿಸಿಕೊಡುವುದು ನಮ್ಮ ದೇಹದ ಪ್ರಕೃತಿ ನಿಯಮ. ಆದರೆ ಲೀಚಿಯಲ್ಲಿನ ಹೈಪೊಗ್ಲೈಸಿನ್ ಎ ಇದನ್ನು ತಡೆಗಟ್ಟುವ ಗುಣವನ್ನು ಹೊಂದಿದೆ.

ಗ್ಲೂಕೋಸ್‌ನಿಂದ ಮಾತ್ರ ನಮ್ಮ ಮೆದುಳು ಮತ್ತು ರಕ್ತ ಶಕ್ತಿಯನ್ನು ಪಡೆದುಕೊಳ್ಳಲು ಸಾಧ್ಯ. ಗ್ಲೂಕೋಸ್ ಇಲ್ಲದಿದ್ದಾಗ ಶೇಖರಣೆಯಾಗಿರುವ ಕೊಬ್ಬನ್ನು ಪರಿವರ್ತಿಸಿ ತನಗೆ ಬೇಕಾದ ಗ್ಲೂಕೋಸ್ ಆಗಿ ಪರಿವರ್ತಿಸಿಕೊಂಡು ದೇಹ ಬಳಸಿಕೊಳ್ಳುತ್ತದೆ.

ಡಾ.ಪದ್ಮಿನಿ ತಂಡ ವಿಶೇಷವಾಗಿ ಗಮನಿಸಿದ್ದು ಅಪೌಷ್ಟಿಕತೆಯಿಂದ ಖಾಲಿ ಹೊಟ್ಟೆಯಲ್ಲಿ ತಿಂದ ಮಕ್ಕಳಿಗೆ ಈ ಸಮಸ್ಯೆ ಉಂಟಾಗುವುದನ್ನು. ಇದೇ ರೀತಿಯ ಸಮಸ್ಯೆ ಅಕಿ ಎನ್ನುವ ಹಣ್ಣನ್ನು ತಿಂದಾಗ ಜಮೈಕಾ ದೇಶದಲ್ಲಿ ಉಂಟಾಗುವ ಪರಿಣಾಮಗಳೊಂದಿಗೆ ತುಲನೆ ಮಾಡಲಾಯಿತು. ಅಕಿಹಣ್ಣಿನಲ್ಲಿ ಹೈಪೊಗ್ಲೈಸಿನ್ ರೀತಿಯದೇ ಮತ್ತೊಂದು ರಾಸಾಯನಿಕ ವಸ್ತು ಇದೆ. 

ಲೀಚಿಹಣ್ಣನ್ನು ಮತ್ತು ಅಕಿ ಹಣ್ಣನ್ನು ತಿಂದ ಮಕ್ಕಳ ಮೂತ್ರದಲ್ಲೂ ಈ ರಾಸಾಯನಿಕ ವಸ್ತು ಕಂಡುಬರುತ್ತದೆ. ಲನ್ಸೆಟ್ ವರದಿಯನ್ನು ಕೆಲವರು ವಿರೋಧಿಸಿ ಲೀಚಿಹಣ್ಣಿನಲ್ಲಿ ಅಕಿಹಣ್ಣಿನಷ್ಟು ಹಾನಿಕಾರಕ ರಾಸಾಯನಿಕ ಇಲ್ಲ ಎನ್ನುವ ವಾದ ಕೂಡ ಮುಂದಿಟ್ಟಿದ್ದಾರೆ.

ಈ ಮೊದಲು ವೆಲ್ಲೊರಿನ ಮಕ್ಕಳವೈದ್ಯ ಟಿ. ಜೇಕಬ್ ಜಾನ್ ಮತ್ತು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್ ಸಂಸ್ಥೆಯ ಮುಕುಲ್ ದಾಸ್ ಕೂಡ ಲೀಚಿಯಲ್ಲಿನ ಹೈಪೊಗ್ಲೈಸಿನ್‌ಗೂ ಮಕ್ಕಳ ಸಾವು–ನೋವಿಗೂ ಸಂಬಂಧವನ್ನು  ಸಂಶೋಧಿಸಿ ‘ಕರೆಂಟ್ ಸೈನ್ಸ್’ ನಿಯತಕಾಲಿಕದಲ್ಲಿ ಅಧ್ಯಯನ ವರದಿ ಪ್ರಕಟಿಸಿದ್ದರು.

ಈ ಸಂಶೋಧನೆಗಳನ್ನು ಗಮನಿಸಿದರೆ ನಮ್ಮ ಹಿರಿಯರ ‘ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು’ ಎಂಬ ಗಾದೆ ನೆನಪಾಗುತ್ತದೆ. ಇದು ಆಳವಾದ ಅನುಭವದ ಮೂಸೆಯಿಂದ ಬಂದಿದೆ ಎನ್ನುವುದನ್ನು ತಳ್ಳಿಹಾಕಲಾಗದು.

ಅನೇಕ ಆಹಾರ ಪದಾರ್ಥಗಳಲ್ಲಿ ವ್ಯತಿರಿಕ್ತ ಪರಿಣಾಮ ಉಂಟುಮಾಡುವ ರಾಸಾಯನಿಕಗಳು ಪೌಷ್ಟಿಕಾಂಶದ ಜೊತೆ ಜೊತೆಯಲ್ಲೇ ಇರುವುದು ಗಮನಿಸಬಹುದಾಗಿದೆ. ಅದು ಕೇಸರಿಬೇಳೆಯಲ್ಲಿಯ ಅಮೀನೊ ಅಮ್ಲಗಳಿರಬಹುದು; ಫ಼ುಗು ಮೀನಿನಲ್ಲಿರುವ ತಕ್ಷಣವೇ ಕೊಲ್ಲಬಲ್ಲ ವಿಷವಿರಬಹುದು; ಅಥವಾ ನಮ್ಮ ಕಳಲೆಯಲ್ಲಿನ ಒಂದು ರೀತಿಯ ಸಯನೈಡ್ ಅಂಶವಿರಬಹುದು. ಹೀಗಿದ್ದೂ ಮನುಷ್ಯರು ತಮ್ಮ ಅನುಭವಗಳ ಮೂಲಕ ಅವುಗಳ ಜಾಣ ಬಳಕೆಯ ಕ್ರಮಗಳನ್ನು ದಕ್ಕಿಸಿಕೊಂಡಿದ್ದಾರೆ. ಅಡುಗೆಯ ಮೂಲಕ ವಿಷದಂಶಗಳನ್ನು ಹೊರಹಾಕುವ ವಿಧಾನಗಳನ್ನೂ ತಿಳಿದುಕೊಂಡಿದ್ದಾರೆ.

ADVERTISEMENT

ಉದಾಹರಣೆಗೆ, ಕಳಲೆಯಲ್ಲಿನ ವಿಷದ ಅಂಶವನ್ನು ಬೇಯಿಸಿ, ಆ ನೀರನ್ನು ಹೊರಹಾಕಿ ಬಳಸಿಕೊಳ್ಳುತ್ತಾರೆ. ಬಾಳೆದಿಂಡನ್ನು ಅಡುಗೆಗೆ ಬಳಸುವಾಗ ಅದನ್ನು ತೆಳು ಬಿಲ್ಲೆಯಾಗಿ ತುಂಡರಸಿ, ತುಂಡರಿಸಿದಾಗ ಹೊರಬರುವ ನಾರನ್ನು ಕಡ್ಡಿಯಲ್ಲಿ ಸುತ್ತಿ ಸುತ್ತಿ ತೆಗೆದು ಅಡುಗೆಗೆ ಬಳಸುತ್ತಾರೆ. ಆಗ ಅದರಲ್ಲಿಯ ನಾರಿನಂಶ ಹೆಚ್ಚಿನ ಕಲ್ಮಶಗಳನ್ನು ದೇಹದಿಂದ ಹೊರಹಾಕುವ ಸಾಮರ್ಥ್ಯ ಪಡೆದುಕೊಳ್ಳುತ್ತದೆ.

ಕೆಲವು ಆಹಾರದ ಕಲ್ಮಶಗಳನ್ನು ನೆನೆಸಿ ಹುದುಗುಹಾಕುವುದರಿಂದ ಅವುಗಳಲ್ಲಿಯ ಬೇಡದ ಹಾನಿಕಾರಕ ಅಂಶಗಳನ್ನು ಹೊರಹಾಕಬಹುದು. ಅಥವಾ ಹಾನಿಕಾರಕ ವಸ್ತುವಿರುವ ಆಹಾರವನ್ನು ಇತರೆ ಆಹಾರದಲ್ಲಿ ಬೆರಸಿ ತಿನ್ನುವುದರಿಂದ ಆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದುಂಟು.

ಕೇಸರಿಬೇಳೆಯಲ್ಲಿನ ವಿಷಾಂಶವನ್ನು ಬಟಾಣಿಕಾಳಿನ ಜೊತೆ ಬೆರಸಿ ಸರಿದೂಗಿಸಬಹುದು. ಅಲ್ಲದೆ ಇತ್ತೀಚಿಗೆ ಕೇಸರಿ ಬಗ್ಗೆ ನಾವು ಪರಿಗಣಿಸಿದ ಲ್ಯಾಥರಿಸಂ ಕಾಯಿಲೆಯ ಬಗ್ಗೆ ಮರುಪರಿಶೀಲನೆ ನಡೆಯುತ್ತಿದೆ.

ಇನ್ನು ಕೆಲವು ಆಹಾರಗಳು ವಿವಿಧ ಹಂತದಲ್ಲಿ ವಿಷವಾಗಿ, ಮತ್ತೆ ಪೌಷ್ಟಿಕಾಂಶಯುಕ್ತವಾಗಿ ಪರಿವರ್ತನೆಯಾಗುತ್ತವೆ. ಮೆಕ್ಕೆಜೋಳ ಹಾಲಾಗಿದ್ದಾಗ ವಿಷದಂಶದಿಂದ ಕೂಡಿರುತ್ತದೆ.  ಹಸುಗಳು ಅದನ್ನು ತಿಂದರೆ  ಅವು ತೊಂದರೆ ಅನುಭವಿಸುವುದುಂಟು. ಅದೇ ಬಲಿತ ಕಾಳಾದರೆ ವಿಷವಿರುವುದಿಲ್ಲ; ಅವಕ್ಕೆ ಅದು ಉತ್ತಮ ಆಹಾರವಾಗುತ್ತದೆ. 

ಸಿರಿಧಾನ್ಯ ಹಾರಕಕ್ಕೆ (kodo millet) ತೇವಾಂಶ ಸೇರಿದರೆ ಅದನ್ನು ತಿಂದವರಿಗೆ ಚಿತ್ತಭ್ರಮಣೆ ಉಂಟಾಗುತ್ತದೆ; ಕೈ–ಕಾಲು ಆಡದಂತಾಗಿ ಎಷ್ಟೋ ಜನರು ಆಸ್ಪತ್ರೆ  ಸೇರಿದ್ದರ ಬಗ್ಗೆ ಇತ್ತೀಚಿನ ವರದಿಗಳು ಉಲ್ಲೇಖಿಸಿವೆ.

ಆಹಾರದಲ್ಲಿರುವ ಹಾನಿಕಾರಕ ಅಂಶಗಳನ್ನು ಕುಶಲದಿಂದ ಹೊರಹಾಕಲು ನಮ್ಮ ಸಾಂಪ್ರದಾಯಿಕ ಜ್ಞಾನ ನೆರವಿಗೆ ಒದಗುತ್ತದೆ. ಇದರೊಂದಿಗೆ ಆಧುನಿಕ ವಿಜ್ಞಾನದ ಸಂಶೋಧನೆಗಳು ಈ ಸೂಕ್ಷ್ಮಸಂಬಂಧಗಳನ್ನು ಅರ್ಥೈಸಲು ಸಹಕರಿಸುತ್ತವೆ ಕೂಡ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.