ADVERTISEMENT

ಹೃದಯ ಕೃತಕ; ಬಡಿತ ಸಹಜ

ಕೆ.ಸಿ.ರಘು
Published 28 ಜುಲೈ 2017, 19:30 IST
Last Updated 28 ಜುಲೈ 2017, 19:30 IST
ಹೃದಯ ಕೃತಕ; ಬಡಿತ ಸಹಜ
ಹೃದಯ ಕೃತಕ; ಬಡಿತ ಸಹಜ   

ಸಿಲಿಕಾನ್ ಪದಾರ್ಥದಿಂದ ಕೃತಕ ಹೃದಯವೊಂದನ್ನು ಇತ್ತೀಚೆಗೆ ಜ್ಸ್ಯೂರಿಚ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಅದು ಮನುಷ್ಯನ ಹೃದಯದಂತೆಯೇ ಗಾತ್ರ ಮತ್ತು ಕಾರ್ಯವೈಖರಿಯಲ್ಲಿ ಹೋಲುವಂತಿತ್ತು. ಸಿಲಿಕಾನ್ ನಮಗೆ ಚಿರಪರಿಚಿತ ಪದಾರ್ಥ. ಫ್ರಿಜ್‌ನಲ್ಲಿ ಐಸ್ ಮಾಡಲು ಬಳಸುವ ಸಾಧನದಿಂದ ಹಿಡಿದು, ಅಡುಗೆಮನೆಯ ಸೌಟಿನವರೆಗೆ ಇಂದು ಅದರ ಬಳಕೆಯಾಗುತ್ತಿದೆ.  ಇಂದು ವಸ್ತುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಆಧುನಿಕ ತಂತ್ರಜ್ಞಾನ 3ಡಿ ಪ್ರಿಂಟಿಗ್ ಮೂಲಕ ಅಣುಗಳನ್ನು ಸೇರಿಸಿ ಸಿಲಿಕಾನ್‌ನಿಂದ ಕೃತಕ ಹೃದಯವನ್ನು ತಯಾರಿಸಲಾಗಿತ್ತು. ತ್ತು. ಅದು ಹೃದಯದಂತೆಯೇ ಬಡಿದು ರಕ್ತವನ್ನು ಶುದ್ಧೀಕರಿಸಿ ಹೊರಹಾಕುತ್ತಿತ್ತು. ಆದರೆ ಇದು ಕೇವಲ ತಂತ್ರಜ್ಞಾನದ ಸಾಧ್ಯತೆಯನ್ನು ತೋರಿಸಲು ಮಾಡಿದ್ದ ಕೃತಕ ಹೃದಯ. ಅದರ ಸಾಮರ್ಥ್ಯ ಕೇವಲ ಮೂರು ಸಾವಿರ ಬಡಿತವಷ್ಟೇ ಆಗಿತ್ತು. ಅಂದರೆ ಸುಮಾರು ಮುಕ್ಕಾಲು ಗಂಟೆಯೊಳಗೆ ಅದು ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿತ್ತು.

ಆದರೆ ಮುಂದೊಂದು ದಿನ ಅಜೈವಿಕ ವಸ್ತುಗಳನ್ನೇ ಬಳಸಿ ನಮ್ಮ ಅಂಗಾಂಗಗಳನ್ನು ಸೃಷ್ಟಿ ಮಾಡುವ ಸಾಧ್ಯತೆಗೆ ಈ ಘಟನೆ ಸಾಕ್ಷಿಯಾಗಿದೆ.  ಜೈವಿಕ ಅಂಗಗಳನ್ನು ಇತರರಿಂದ ಪಡೆದು ಕಸಿ ಮಾಡಿಸಿಕೊಂಡ ಅಂಗಗಳು ದೇಹದಿಂದ ತಿರಸ್ಕೃತವಾಗುವ ಸಾಧ್ಯತೆ ಹೆಚ್ಚು. ಹೀಗೆ ಕಸಿಗೊಂಡ ಅಂಗಗಳು ತಿರಸ್ಕಾರವಾಗದಂತೆ ನೋಡಿಕೊಳ್ಳಲು ದೇಹದ ಸ್ವಾಭಾವಿಕ ಪ್ರಕ್ರಿಯೆಯನ್ನು ಹತ್ತಿಕ್ಕಲು ಅನೇಕ ತೀಕ್ಷ್ಣವಾದ ಔಷಧಿಗಳನ್ನು ಸತತವಾಗಿ ಉಪಯೋಗಿಸಬೇಕಾಗುತ್ತದೆ. ಈಗಾಗಲೇ ಜಗತ್ತಿನಲ್ಲಿ ಅಂಗಾಂಗಳನ್ನು ಕಸಿ ಮಾಡಿಸಿಕೊಂಡು ಸಮಸ್ಯೆಗೊಳಗಾಗಿರುವವರ ಸಂಖ್ಯೆ ಬಹಳಷ್ಟಿದೆ. ಹಾಗೆಯೇ ಅಂಗಾಗಗಳಿಗಾಗಿ ಕಾಯುತ್ತಿರುವ ರೋಗಿಗಳ ಸಂಖ್ಯೆ ಅಧಿಕವಾಗುತ್ತಿದೆ. ಆದರೆ ದಾನಿಗಳ ಸಂಖ್ಯೆ ಕಡಿಮೆ ಇರುವುದರಿಂದ ಅಂಗಾಂಗಗಳ ಲಭ್ಯತೆಯೂ ಕಡಿಮೆ. ಅನೇಕರಿಗೆ ಸರಿಯಾದ ಸಮಯಕ್ಕೆ ಬದಲಿ ಅಂಗಾಂಗಗಳು ಸಿಗದೆ ಸಾವಿಗೂ ಈಡಾಗುತ್ತಿದ್ದಾರೆ. ಅಲ್ಲದೆ ಅಂಗಾಂಗಗಳನ್ನು ದಾನವಾಗಿ ಪಡೆದುಕೊಳ್ಳುವುದಕ್ಕೂ ಕಾನೂನಿನ ಕಟ್ಟಲೆಗಳ ಅಡೆತಡೆಗಳೂ ಹಲವು. ಅಂಗಾಂಗಗಳನ್ನು ಕದ್ದು ವ್ಯಾಪಾರ ಮಾಡುತ್ತಿರುವುದೂ ಉಂಟು. ಈ ಎಲ್ಲವಕ್ಕೂ ಪರ್ಯಾಯವಾಗಿ ಕೃತಕ ಅಂಗಾಂಗಗಳನ್ನು ತಯಾರಿಸುವ ಹಾದಿಯಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿವೆ. ಸಿಲಿಕಾನ್‌ನಂತೆ ನ್ಯಾನೋ ತಂತ್ರಜ್ಞಾನ ಮತ್ತು 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ ಜೈವಿಕ ಅಥವಾ ಅಜೈವಿಕ ಅಂಗಗಳನ್ನು ಪ್ರಿಂಟ್ ಮಾಡುವ ಮಾರ್ಗ ಒಂದಾದರೆ, ಹಂದಿಯಂತಹ ಪ್ರಾಣಿಗಳ ದೇಹವನ್ನೇ ಮನುಷ್ಯರ ಅಂಗಗಳನ್ನು ಬೆಳೆಸುವ ಸಾಧನವಾಗಿ ಬಳಸಿಕೊಳ್ಳುವಂಥ ಪ್ರಯೋಗಗಳೂ ನಡೆಯುತ್ತಿವೆ.

ಟೋಕಿಯೋ ವಿಶ್ವವಿದ್ಯಾಲಯವು ಇದಾಗಲೇ ಮನುಷ್ಯರ ಅಂಗಗಳನ್ನು ಒಳಗೊಂಡಿರುವ ಹಂದಿಗಳನ್ನು ಪ್ರಯೋಗಾರ್ಥವಾಗಿ ಸಾಕಲಾರಂಭಿಸಿದ್ದಾರೆ. ದೇಹವು ಹಂದಿಯದ್ದಾದರೂ ಅದರೊಳಗೆ ಬೆಳೆಯುತ್ತಿರುವ ಹೃದಯ, ಪ್ಯಾಂಕ್ರಿಯಾಸ್, ಮೂತ್ರಪಿಂಡ, ಲಿವರ್ ಮನುಷ್ಯನದ್ದಾಗಿರುತ್ತವೆ. ಅದು ಯಾವ ಮನುಷ್ಯನಿಗೆ ಈ ಅಂಗಗಳು ಬೇಕಾಗಿರುತ್ತವೆಯೋ ಅಂತಹ ಮನುಷ್ಯನ ಚರ್ಮದಿಂದ ತೆಗೆದ ಜೀವಕೋಶವನ್ನು ಜೈವಿಕ ತಂತ್ರಜ್ಞಾನದ ಮೂಲಕ ಭ್ರೂಣಾವಸ್ಥೆಗೇ ಆ ಜೀವಕೋಶವನ್ನು ಮರು ಮಾರ್ಪಾಡಿಸುವ ಮೂಲಕ ಸ್ಟೆಮ್‌ಸೆಲ್‌ಗಳಾಗಿ ಪರಿವರ್ತಿಸುತ್ತಾರೆ. ಇದು ಜೀವಕೋಶದ ಗಡಿಯಾರವನ್ನು ಸಂಪೂರ್ಣವಾಗಿ ಹಿಮ್ಮರಳಿಸುವ ತಂತ್ರಜ್ಞಾನ.

ADVERTISEMENT

ಭ್ರೂಣಾವಸ್ಥೆಯಲ್ಲಿರುವ ಜೀವಕೋಶವನ್ನು ಸ್ಟೆಮ್‌ಸೆಲ್‌ಗಳೆನ್ನುತ್ತೇವೆ. ಈ ಸ್ಟೆಮ್‌ಸೆಲ್‌ಗಳು ಮುಂದೆ ಮೆದುಳೋ, ಮೂಳೆಯೋ, ಹಲ್ಲೋ, ವಿವಿಧ ಅಂಗಗಳೋ ಆಗುವ ಹಾದಿ ಹಿಡಿಯುತ್ತವೆ. ಆದರೆ ಜೀವಕೋಶಗಳಲ್ಲಿ ಇದ್ಯಾವುದನ್ನೂ ನಾವು ನೋಡಲಾಗುವುದಿಲ್ಲ. ಆದರೆ ಇವೆಲ್ಲವೂ ಆಗಬಲ್ಲಂಥ ಸಾಧ್ಯತೆಯನ್ನೂ ಗುಣವನ್ನೂ ತನ್ನೊಳಗೆ ಅಡಗಿಸಿಕೊಂಡಿರುತ್ತವೆ. ಇಂತಹ ಸ್ಟೆಮ್‌ಸೆಲ್‌ಗಳನ್ನು ಹಂದಿಯ ಭ್ರೂಣಾವಸ್ಥೆಯಲ್ಲಿಯೇ ಅದರ ದೇಹದ ಒಳಸೇರಿದಾಗ ನಮ್ಮ ಅಂಗಗಳನ್ನು ಅದರ ದೇಹದಲ್ಲಿ ಬೆಳೆಯುವಂತಾಗುತ್ತದೆ. ಆದರೆ ಅದಕ್ಕೆ ಮೊದಲು ಅದರ ಅಂಗಾಂಗಗಳ ರಚನೆಗೆ ಇರುವ ಗುಣಾಣುಗಳನ್ನು ‘ಸ್ವಿಚ್‌ಆಫ್’ – ಎಂದರೆ ನಿಲ್ಲಿಸಬೇಕಾಗುತ್ತದೆ. ನಂತರ ಹೊರಗಿನಿಂದ ಸೇರ್ಪಟ್ಟ ಸ್ಟೆಮ್‌ಸೆಲ್‌ಗಳನ್ನು ತನ್ನದೇ ಎಂದು ಆ ಹಂದಿಗೆ ’ತಿಳಿಹೇಳಿ’ ಬೆಳೆಸುವಂಥದ್ದಾಗಿರುತ್ತದೆ.

ಈ ರೀತಿ ಬೇರೆ ಪ್ರಾಣಿಯ ಅಂಗಗಳನ್ನು ಬೆಳೆಸುವ ಪ್ರಾಣಿಗೆ ‘ಕೈಮೀರ’ (Chimera) ಎನ್ನುತ್ತಾರೆ. ಕೆಲವು ವರ್ಷಗಳ ಹಿಂದೆ ಇಂಥದ್ದೇ ಪ್ರಯೋಗವನ್ನು ಮಂಗಗಳಲ್ಲಿ ಮಾಡಲು ಹೊರಟಾಗ ಕೆಲವರು ವಿಜ್ಞಾನಿಗಳು ಹಿಂದೇಟು ಹಾಕಿದ್ದರು. ಕಾರಣ ಅಂಗಾಂಗಗಳೇನೋ ಬೆಳೆಯುವಂತಾದರೆ ಸರಿ; ನಮ್ಮ ಬುದ್ಧಿಯೂ ಅವುಗಳ ಮೆದುಳಿಗೆ ಸೇರಿದರೆ ಗತಿಯೇನು – ಎಂಬ ಭಯವಾಗಿತ್ತು. ಈ ವಿಷಯದಲ್ಲಿ ಅನೇಕ ನೆಲೆಗಳ ಸರಿ–ತಪ್ಪುಗಳ ಜಿಜ್ಞಾಸೆ, ಧರ್ಮಾಧರ್ಮಗಳ ಚಿಂತನೆ ನಡೆಯುತ್ತಿದೆ. ನಾವು ಇತರ ಪ್ರಾಣಿಗಳನ್ನು ನಮ್ಮ ಸ್ವಾರ್ಥಕ್ಕಾಗಿ ಕೇವಲ ಸಾಧನವಾಗಿ ಬಳಸಿಕೊಳ್ಳಬಹುದೇ ಎಂಬ ಪ್ರಶ್ನೆಗಳು ಇವೆ. 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಇದಕ್ಕೆ ಹೊರತಾಗಿದೆ ಎನ್ನಬಹುದು. ಇದಾಗಲೇ ಈ ತಂತ್ರಜ್ಞಾನದ ಮೂಲಕ ಕಿವಿ, ಮೂಗನ್ನು ಸಿದ್ಧಪಡಿಸಿ ಅವನ್ನು ಯುದ್ಧದ ಗಾಯಾಳುಗಳಿಗೆ ಅಳವಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅನೇಕ ತಂತ್ರಜ್ಞಾನ ಕಂಪನಿಗಳು ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿವೆ.

ಮುಂದೊಂದು ದಿನ ಅಂಗಗಳನ್ನು ಮಾರುಕಟ್ಟೆಯಲ್ಲಿ ಜಾರ್‌ನಲ್ಲಿ ಖರೀದಿಸುವ ಕಾಲ ಬಹಳ ದೂರವಿಲ್ಲ ಎನ್ನುತ್ತಾರೆ, ಹಲವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.