ADVERTISEMENT

ಚಳಿಗಾಲದಲ್ಲಿ ಕಾಡುವ ‘ಉಬ್ಬಸ’

ಡಾ.ಅನಂತರಾಮ್
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ಚಳಿಗಾಲದಲ್ಲಿ ಕಾಡುವ ‘ಉಬ್ಬಸ’
ಚಳಿಗಾಲದಲ್ಲಿ ಕಾಡುವ ‘ಉಬ್ಬಸ’   

ಚಳಿಗಾಲವನ್ನು ಇಷ್ಟಪಡದ ಪ್ರೇಮಿಗಳಿಲ್ಲ, ಜೊತೆಗೆ ಅವರನ್ನು ಬಣ್ಣಿಸದ ಕವಿಗಳೂ ಇಲ್ಲ! ಆದರೆ ಈ ಚಳಿಗಾಲವು ಉಬ್ಬಸ ರೋಗಿಗಳಿಗೆ ‘ಶಾಪ’ದ ರೂಪದಲ್ಲಿದೆ.

ದಿನವಿಡೀ ’ಅಕ್ಷಿ, ಅಕ್ಷಿ’ ಎಂಬ ಸೀನುಗಳು, ಜೊತೆಗೆ ಕೆಮ್ಮು, ರಾತ್ರಿ ನಿದ್ರೆ ಮಾಡಲು ಬಿಡದ ಬೆಕ್ಕಿನ ಶಬ್ದಕ್ಕೆ ಹೋಲುವ ‘ಸೂಯ್‌ ಸೂಯ್‌’ ಎಂಬ ಉಸಿರಾಟದ ಕಷ್ಟ. ಇವು ಉಬ್ಬಸ ರೋಗಿಗಳ ನಿತ್ಯದ ಪಾಡು. ಚಳಿಗಾಲದ ತಂಪು ಗಾಳಿಯನ್ನು ನಾವು ಮೂಗಿನ ಮೂಲಕ ಒಳಗೆ ಎಳೆದುಕೊಂಡಾಗ, ಆ ಗಾಳಿಯು ನಮ್ಮ ಶರೀರದ ಉಷ್ಣಾಂಶಕ್ಕೆ ಏರಿ ನಾವು ಸಲೀಸಾಗಿ ಉಸಿರಾಡುತ್ತೇವೆ. ಆದ್ದರಿಂದಲೇ ನಮ್ಮ ಮೂಗಿನ ಮೂಲಕ ಹೊರ ಬರುವ ಗಾಳಿಯು ಬಿಸಿಯಾಗಿರುತ್ತದೆ. ಉಬ್ಬಸ ರೋಗಿಗಳ ಶರೀರದಲ್ಲಿ ಉಷ್ಣಾಂಶ ನಿಯಂತ್ರಣ ವ್ಯವಸ್ಥೆಯು ಸಮರ್ಪಕವಾಗಿ ನಡೆಯದಿರುವುದರಿಂದ ಒಳ ಸೇವಿಸುವ ಶೀತಗಾಳಿಯು ಶ್ವಾಸಕೋಶದ ನಳಿಕೆಗಳ ಒಳಗಾತ್ರವನ್ನು ಕುಗ್ಗಿಸಿ ಉಸಿರಾಟಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ.

ಉಸಿರಾಟದ ತೊದರೆಯಿಂದ ಕೆಲವೊಮ್ಮೆ ಕಣ್ಣುಕತ್ತಲು (ತಮ) ಬರಬಹುದಾದ್ದರಿಂದ ಉಬ್ಬಸರೋಗವನ್ನು ಆಯುರ್ವೇದ ವೈದ್ಯಶಾಸ್ತ್ರದಲ್ಲಿ ‘ತಮಕಶ್ವಾಸ’ ಎಂದು ಹೆಸರಿಸಿದ್ದಾರೆ.

ADVERTISEMENT

ಉಬ್ಬಸ ರೋಗಿಗಳು ಚಳಿಗಾಲದಲ್ಲಿ ಪಾಲಿಸಬೇಕಾದ ಉಪಯುಕ್ತ ಸಲಹೆಗಳು ಇಂತಿವೆ:

1. ಬೆಳಗಿನ ಜಾವ ತಂಪು ಹವೆಯಲ್ಲಿ ಹೊರಗೆ ವಾಕಿಂಗ್‌ಗೆ ಹೋಗಬಾರದು. ಇದರಿಂದ ಉಬ್ಬಸವೂ ಹೆಚ್ಚಾಗುತ್ತದೆ. ಜೊತೆಗೆ ಸೊಂಟ, ಮಂಡಿ, ಕುತ್ತಿಗೆ ನೋವುಗಳು ಉಂಟಾಗಬಹುದು. ಇದರ ಬದಲಾಗಿ ಮನೆಯಲ್ಲಾಗಲೀ, ಯೋಗಮಂದಿರದಲ್ಲಾಗಲೀ ಸರಳವಾದ ಯೋಗಾಸನಗಳು, ಪ್ರಾಣಾಯಾಮವನ್ನು ಮಾಡಬಹುದು.

2. ಬೆಳಗ್ಗೆ ಖಾಲಿಹೊಟ್ಟೆಗೆ ಒಂದು ಚಮಚದಷ್ಟು ಜೇನುತುಪ್ಪವನ್ನು ನೆಕ್ಕಿ ನಂತರ ಒಂದು ಲೋಟದಷ್ಟು ಬಿಸಿನೀರಿನ್ನು ಕುಡಿಯಬೇಕು. ಜೇನುತುಪ್ಪಕ್ಕೆ ಕಫವನ್ನು ಕತ್ತರಿಸುವ (ಲೇಖನ) ಗುಣವಿದೆ, ಜೊತೆಗೆ ಶಕ್ತಿಯನ್ನು ಕೊಡುತ್ತದೆ.

3. ಸ್ನಾನ ಮಾಡುವಾಗ ಅತಿಯಾದ ಬಿಸಿ ಅಥವಾ ತಣ್ಣೀರಿನ ಬದಲಾಗಿ ಬೆಚ್ಚಗಿರುವ ನೀರಿನ ಸ್ನಾನ ಮಾಡಬೇಕು. ಒಂದು ಪಾತ್ರೆ ಬೆಚ್ಚಗಿರುವ ನೀರಿಗೆ ಒಂದು ಚಮಚದಷ್ಟು ನೀಲಗಿರಿ–ಎಣ್ಣೆಯನ್ನು ಬೆರೆಸಿ, ಸ್ನಾನದ ಕೊನೆಗೆ ಮೈಮೇಲೆ ಸುರಿದುಕೊಂಡು, ನಂತರ ಒಣ ಬಟ್ಟೆಯಿಂದ ಮೈ ಒರಸಿಕೊಳ್ಳಬೇಕು ಅನುಕೂಲವಾಗುತ್ತದೆ. ಇದರಿಂದ ಉಬ್ಬಸ ರೋಗಿಯ ಇಡೀ ಶರೀರದ ಚರ್ಮದ ಮೇಲೆ ನೀಲಗಿರಿತೈಲದ ಅಂಶವು ಲೇಪಿಸಿರುವುದರಿಂದ ಅವರ ದೇಹದ ಉಷ್ಣಾಂಶವನ್ನು ಸಮತೋಲನ ಮಾಡುತ್ತದೆ.

4. ಒಂದು ಲೋಟ ಬಿಸಿನೀರಿಗೆ ಒಂದು ಚಿಟಕೆಯಷ್ಟು ಉಪ್ಪು ಮತ್ತು ಅಷ್ಟೇ ಪ್ರಮಾಣದಲ್ಲಿ ಅರಿಶಿಣದ ಪುಡಿಯನ್ನು ಬೆರಸಿ ದಿನಕ್ಕೆ 3–4 ವೇಳೆ ಗಂಟಲು ಮುಕ್ಕಳಿಸಬೇಕು (Gargle). ಇದರಿಂದ ಗಂಟಲು ಕೆರೆತ, ಎಡಬಿಡದೆ ಕೆಮ್ಮು ತಗ್ಗುತ್ತದೆ.

5. ಎರಡು ಚಮಚದಷ್ಟು ಎಳ್ಳೆಣ್ಣೆಯನ್ನು ಬೆಚ್ಚಗೆ ಮಾಡಿ, ಇದಕ್ಕೆ ಒಂದು ಚಿಟಿಕೆಯಷ್ಟು ಉಪ್ಪು ಬೆರಸಿ, ಇದನ್ನು ಹಣೆಗೆ, ಪಕ್ಕೆಗಳಿಗೆ ಹಚ್ಚಿ ಮಸಾಜ್‌ ಮಾಡಬೇಕು. ಸ್ವಲ್ಪ ಸಮಯದ ನಂತರ ಒಂದು ಬಟ್ಟೆಯನ್ನು ಬಿಸಿನೀರಿನಲ್ಲಿ ಅದ್ದಿ, ನಂತರ ಹಿಂಡಿ, ಎಣ್ಣೆ ಹಚ್ಚಿದ ಭಾಗಗಳಿಗೆ ಶಾಖ ಕೊಡಬೇಕು. ಇದರಿಂದ ಹಣೆ ಮತ್ತು ಎದೆಯ ಭಾಗದಲ್ಲಿ ಕಟ್ಟಿಕೊಂಡ ಗಟ್ಟಿಯಾದ ಕಫವು ಕರಗಿ ಉಸಿರಾಡಲು ಅನುಕೂಲವಾಗುತ್ತದೆ.

6. ಆಗ ತಾನೇ ತಯಾರಿಸಿದ ಬಿಸಿ ಅಡುಗೆಯನ್ನು ಮಿತ ಪ್ರಮಾಣದಲ್ಲಿ ತಿನ್ನಬೇಕು. ತಂಗಳು, ಹೊಟ್ಟೆ ಬಿರಿಯುವಷ್ಟು ತಿನ್ನುವುದು, ಫ್ರಿಜ್‌ನಲ್ಲಿಟ್ಟ ತಣ್ಣಗಾದ ಆಹಾರವು ಜೀರ್ಣಿಸಲು ಜಡವಾಗಿ ಉಬ್ಬಸವನ್ನು ಹೆಚ್ಚಿಸುತ್ತದೆ. ಶೀತ (ತಂಪು ಮಾಡುವುದು), ಗುರು (ಜೀರ್ಣಕ್ಕೆ ಜಡ), ಅಭಿಷ್ಯಂದಿ (ಅಂಟಿಕೊಳ್ಳುವ) ಗುಣಗಳಿರುವ ಬಾಳೆಹಣ್ಣು ಮತ್ತು ಮೊಸರನ್ನು ತಿನ್ನಬಾರದು. ರಾತ್ರಿ ಊಟದಲ್ಲಿ ಮೆಣಸಿನಸಾರು, ಹುರುಳಿಸಾರುಗಳನ್ನು ಬಳಸುವುದು ಹಿತಕರವಾಗಿದೆ. ಹಾಲು ಕುಡಿಯುವಾಗ ಅದಕ್ಕೆ ಒಂದು ಚಿಟಿಕೆಯಷ್ಟು ಅರಿಶಿಣ ‍ಪುಡಿಯನ್ನು ಬೆರೆಸಿ ಕುಡಿಯಬೇಕು. ಉಪಾಹಾರ, ಊಟಗಳನ್ನು ಸೇವಿಸುವಾಗಲೂ ಒಂದು ಚಿಟಿಕೆಯಷ್ಟು ಅರಿಶಿಣವನ್ನು ಬೆರಸಿ, ನಂತರ ತಿಂದರೆ ಕಫ ಉಂಟಾಗುವ ಪ್ರಕ್ರಿಯೆಯು ತಡೆಯಲ್ಪಡುವುದು.

7. ಸ್ವೆಟರ್, ಮಫ್ಲರ್‌ಗಳನ್ನು ಚಳಿಗಾಲದಲ್ಲಿ ಧರಿಸಬೇಕು. ಅಗತ್ಯವಿದ್ದರೆ ಗ್ಲೌಸ್, ಸಾಕ್ಸ್‌ಗಳನ್ನೂ ಧರಿಸಬೇಕು. ‘ಕಂಬಲವಂತಂ ನ ಭಾದತೇ ಶೀತಃ’ ಎಂಬ ಸಂಸ್ಕೃತದ ಉಕ್ತಿಯು ಇದೆ. ಅಂದರೆ ಕಂಬಳಿ ಮುಂತಾದುವನ್ನು ಧರಿಸಿರುವವನನ್ನು ಶೀತವು ಭಾದಿಸುವುದಿಲ್ಲ. ಈ ಉಕ್ತಿಗೆ ಮತ್ತೊಂದು ಅರ್ಥವೂ ಇದೆ. ಬಲಶಾಲಿಯಾದವನನ್ನು (ರೋಗನಿರೋಧಕ ಶಕ್ತಿ) ಶೀತವು ಹೇಗೆ ಭಾದಿಸುತ್ತದೆ? ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೇಬು, ಸ್ವಲ್ಪ ಮೆಣಸಿನಪುಡಿ, ಸ್ವಲ್ಪ ಉಪ್ಪು ಹಾಕಿದ ಚೆನ್ನಾಗಿ ಹಣ್ಣಾದ ಸೀಬೆಹಣ್ಣುಗಳನ್ನು ತಿನ್ನಬೇಕು. ಒಣಹಣ್ಣುಗಳಾದ ಖರ್ಜೂರ, ಅಂಜೂರ, ಗೋಡಂಬಿ, ಬಾದಾಮಿ, ಒಣದ್ರಾಕ್ಷಿಗಳನ್ನು ತಿನ್ನಬೇಕು.

8. ಹತ್ತು ತುಳಸಿ ಎಲೆಗಳು (ಶ್ರೀತುಳಸಿ ಅಥವಾ ಕೃಷ್ಣತುಳಸಿ), ಐದು ಕರಿಮೆಣಸು, ಅರ್ಧ ಚಮಚದಷ್ಟು ಸೊಂಪು (ಒಡೇ ಸೊಪ್ಪು), ಸ್ವಲ್ಪ ಬೆಲ್ಲಗಳನ್ನು ಒಂದು ಪಾತ್ರೆಗೆ ಹಾಕಿ, ಇದಕ್ಕೆ ಒಂದು ಲೋಟದಷ್ಟು ಕುದಿಯುತ್ತಿರುವ ನೀರನ್ನು ಹಾಕಿ, ತಟ್ಟೆ ಮುಚ್ಚಿಡಬೇಕು. ಈ ನೀರು ಕುದಿಯುವ ಹದಕ್ಕೆ ಬಂದಾಗ ಸೋಸಿಕೊಂಡು ಸ್ವಲ್ಪ ಸ್ವಲ್ಪವೇ ನಿಧಾನವಾಗಿ ಕುಡಿಯಬೇಕು. ದಿನಕ್ಕೆ 3–4 ವೇಳೆ ಇದನ್ನು ಕುಡಿದರೆ ನೆಗಡಿ, ಕೆಮ್ಮು, ಉಬ್ಬಸವು ಹತೋಟಿಗೆ ಬರುತ್ತದೆ.

ಮೇಲಿನ ಸಲಹೆಗಳನ್ನು ಉಬ್ಬಸ ಇರುವವರು ತಪ್ಪದೇ ನಿತ್ಯವೂ ಪಾಲನೆ ಮಾಡಿದರೆ ಅವರು ಚಳಿಗಾಲಕ್ಕೆ ಹೆದರಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.