ADVERTISEMENT

ಆಡುತ್ತಾ ಕಲಿಯುತ್ತಾ

ದಿವ್ಯಾ ವಿಶ್ವನಾಥ
Published 23 ಮಾರ್ಚ್ 2015, 19:30 IST
Last Updated 23 ಮಾರ್ಚ್ 2015, 19:30 IST

ವಿಜ್ಞಾನ ಕಲಿಕೆ ಮಕ್ಕಳಿಗೆ ಹೇರಿಕೆಯಾಗಬಾರದು, ಸರಳವಾಗಿ ಕಲಿತು ಅರ್ಥೈಸಿಕೊಳ್ಳುವ ವಿಷಯವಾಗಬೇಕು ಎಂಬ ಉದ್ದೇಶದೊಂದಿಗೆ ರೂಪುಗೊಂಡಿದೆ ಸೈನ್ಸ್ ಟೆಕ್ ಪಾರ್ಕ್. ವಿಜ್ಞಾನದ ಕಠಿಣ ಸವಾಲುಗಳನ್ನು ಸುಲಲಿತವಾಗಿ ಎದುರಿಸುವಂತೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನವೂ ಇದಾಗಿದೆ.

ಬೆಂಗಳೂರಿನಲ್ಲಿ ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವ ಬಾಲಕಿ ರಮ್ಯಾ. ರಸಾಯನ ವಿಜ್ಞಾನದ ಸೂತ್ರಗಳನ್ನು ಉರುಹೊಡೆದು ಹೇಳುವ ಪ್ರತಿಭೆ. ತಮ್ಮ ಮಗುವಿನ ಬಗ್ಗೆ ಅಪ್ಪ- ಅಮ್ಮಂದರಿಗಂತೂ ಹೆಮ್ಮೆಯೋ ಹೆಮ್ಮೆ. ಆದರೆ ಅದೇ ರಮ್ಯಾ, ರಜದಲ್ಲಿ ಹಳ್ಳಿಯಲ್ಲಿ ರುವ ಅಜ್ಜನ ಮನೆಗೆ ಹೋದಾಗ ಅಜ್ಜ, ‘ನಮಗೆ ಹಾಲು ಕೊಡುವ ಪ್ರಾಣಿ ಯಾವುದು?’ ಎಂದು ಕೇಳಿದ್ದರು. ಇವಳು ಯಾವುದೇ ಅಳುಕಿಲ್ಲದೇ ‘ನಂದಿನಿ ಪ್ಯಾಕೆಟ್‌ನಿಂದ ಬರುತ್ತೆ ಅಜ್ಜ...’ ಎಂದು ಉತ್ತರಿಸಿದ್ದಳು!

ಇದು ಕೇವಲ ಆ ಮಗುವಿನ ಸ್ಥಿತಿಯಲ್ಲ, ನಗರ ಪ್ರದೇಶಗಳಲ್ಲಿ ವಾಸಿಸುವ ಅನೇಕ ಮಕ್ಕಳ ಕಥೆ. ರಾಕೆಟ್ ಸೈನ್ಸ್ ಕೂಡ ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿವಂತರು. ಆದರೆ ವಾಸ್ತವ ಬದುಕಿಗೆ ಬೇಕಾಗುವ ಸಣ್ಣಪುಟ್ಟ ವಿಷಯಗಳೇ ತಿಳಿದಿರುವುದಿಲ್ಲ. ನಿಜವಾದ ಸಮಸ್ಯೆ ಬಂದಾಗ ತಾರ್ಕಿಕವಾಗಿ ವಿಚಾರ ಮಾಡಿ ಅದರಿಂದ ಹೊರಬರುವ ನೈಪುಣ್ಯ ಇರುವುದಿಲ್ಲ. ಅದು ಬರುವುದು ಜೀವನ ಪಾಠದಿಂದ, ನಿಸರ್ಗದೊಂದಿಗೆ ಸಹಜವಾಗಿ ಬೆರೆತು ಬರುವ ಜ್ಞಾನದಿಂದ.

ಮಕ್ಕಳ ಮಾತಿರಲಿ. ದೊಡ್ಡವರನ್ನು ಕೇಳಿ ನೋಡಿ, ಮ್ಯಾಂಗನೀಸ್ ಅದಿರು ಹೇಗಿರುತ್ತದೆ? ಹೋಗಲಿ, ದಿನನಿತ್ಯ ಬಳಸಲಾಗುವ ಕಬ್ಬಿಣದ ಮೂಲ ‘ಹೆಮಟೈಟ್’ ಅದಿರು ಹೇಗಿರುತ್ತದೆ? ಊಹುಂ... ನಮ್ಮಲ್ಲಿ ಅನೇಕರಿಗೆ ಇದು ಗೊತ್ತಿಲ್ಲ. ಯಾವಾಗಲೋ ಚಿತ್ರದಲ್ಲಿ ನೋಡಿದ ನೆನಪು ಅಷ್ಟೇ, ಇಲ್ಲಾ ಇಂಟರ್‌ನೆಟ್‌ ಇದ್ದರೆ ತಕ್ಷಣ ‘ಗೂಗಲ್‌’ನತ್ತ ಕೈ ಓಡುತ್ತದೆ! ಆದರೆ ಅದೇ ಆಕಳು ಹೇಗಿರುತ್ತದೆ? ಮಾವಿನ ಮರ ಹೇಗಿರುತ್ತದೆ ಅಂತ ಕೇಳಿದ್ರೆ ನಕ್ಕು ಬಿಡ್ತೀವಿ. ಯಾಕೆಂದ್ರೆ ದಿನ ನಿತ್ಯ ಕಣ್ಣಿಗೆ ಬೀಳುವುದರ ಬಗ್ಗೆ ಚೆನ್ನಾಗಿ ಪರಿಚಯವಿರುತ್ತದೆ.

ಇದೇ ಪರಿಕಲ್ಪನೆಯನ್ನು ಶಾಲೆಗಳಲ್ಲಿ ಬಳಸಿ ಮಕ್ಕಳಿಗೆ ಶಿಕ್ಷಣ ನೀಡಿದರೆ ವಿದ್ಯಾರ್ಥಿಯ ಬುದ್ಧಿಮತ್ತೆ ಹೇಗೇ ಇರಲಿ, ಕಲಿಕೆಯಲ್ಲಿ ಉತ್ತಮ ಸಾಧನೆ ತೋರುವುದು ಖಚಿತ. ಹಸಿರ ನಡುವೆ ಕಲಿತು ಸರ್ವತೋಮುಖ ಅಭಿವೃದ್ಧಿ ಹೊಂದಿ ನಾಳಿನ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವುದು ಕೂಡ ಇಂಥ ಶಿಕ್ಷಣದಿಂದಲೇ.

ADVERTISEMENT

ಅಂಥ ಶಿಕ್ಷಣ ಸಂಸ್ಥೆಯೊಂದು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಸರು ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆ. ‘ನೋಡಿ ಕಲಿ, ಮಾಡಿ ತಿಳಿ’ ಎನ್ನುವ ಮಾತನ್ನು ಚಾಚೂತಪ್ಪದೇ ಪಾಲಿಸುತ್ತಿದೆ ಈ ಸಂಸ್ಥೆ. ಶಿಕ್ಷಣವೆಂದರೆ ಇದು ಹೀಗ್ಹೀಗೆ ಎಂದು ಉರು ಹೊಡೆಸುವುದಲ್ಲ, ಬದಲಾಗಿ ತಿಳಿದುಕೊಳ್ಳಬೇಕು ಎನ್ನುವ ದಾಹ ಹುಟ್ಟಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಆ ದಿಸೆಯಲ್ಲಿ ದಾಪುಗಾಲು ಇಡುತ್ತಿದೆ ಇದು.

ಒಂದೇ ಸೂರಿನಡಿ ಹಲವು ವಿಷಯ
ತ್ಯಾಜ್ಯದಿಂದ ಅಡುಗೆ ಅನಿಲ ಉತ್ಪಾದನೆ, ಸೋಲಾರ್ ವಿದ್ಯುತ್ ಉತ್ಪಾದನೆ, ಎರೆಹುಳ

ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕೆ.ಹರೀಶ್ ಅವರ ಕನಸಿನ ಕೂಸು ಸೈನ್ಸ್ ಟೆಕ್ ಪಾರ್ಕ್. ಸ್ವತಃ ಇಸ್ರೋದಲ್ಲಿ ವಿಜ್ಞಾನಿಯಾಗಿದ್ದವರು ಹರೀಶ್‌. ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಯಾವ ರೀತಿ ಕುತೂಹಲ ಕೆರಳಿಸಬಹುದು ಎನ್ನುವುದನ್ನು ಚೆನ್ನಾಗಿ ಅರಿತವರು. ಶಿಕ್ಷಣವನ್ನು ಹೊಸ ರೀತಿಯಲ್ಲಿ ಹೇಗೆ ಕಲಿಸಬಹುದು ಎನ್ನುವುದನ್ನು ತೋರಿಸಿಕೊಟ್ಟವರು. ‘ಮಕ್ಕಳು ವಿಜ್ಞಾನದ ಸಿದ್ಧಾಂತಗಳನ್ನು ಪ್ರಯೋಗದ ಮೂಲಕ ಅರ್ಥೈಸಿಕೊಳ್ಳಲಿ ಎಂಬ ಉದ್ದೇಶದಿಂದ ಸೈನ್ಸ್ ಪಾರ್ಕ್ ನಿರ್ಮಿಸಲಾಗಿದೆ. ಇದನ್ನು ವೀಕ್ಷಿಸಿದ ಹುಡುಗರ ಸಂತಸ ಕಂಡು ಬೆರಗಾಗಿದ್ದೇನೆ. ವಿವಿಧ ಶಾಲೆಗಳ ಶಿಕ್ಷಕರು ಇದನ್ನು ಮೆಚ್ಚಿ ಅಭಿನಂದನೆ ಸಲ್ಲಿಸಿದ್ದಾರೆ. ಹಲವರು ತಮ್ಮ ಶಾಲೆಯಲ್ಲಿಯೂ ಇಂಥ ಪಾರ್ಕ್ ರೂಪಿಸುವ ಆಸಕ್ತಿ ತೋರಿದ್ದಾರೆ. ನಮ್ಮ ಶ್ರಮ ಸಾರ್ಥಕವಾಗಿದೆ’ ಎನ್ನುತ್ತಾರೆ ಕೆ. ಹರೀಶ್.

ಗೊಬ್ಬರ, ಚಿಟ್ಟೆ ವನ... ಹೀಗೆ ಪರಿಸರ, ವಿಜ್ಞಾನ, ಸಮಾಜ, ಜೀವಜಂತು, ಸ್ವಾವಲಂಬನೆ ಎಲ್ಲದರ ಜ್ಞಾನ ಒಂದೇ ಸೂರಿನಡಿ ನೀಡುವ ಮೂಲಕ ಈಗಾ ಗಲೇ ಸಾಕಷ್ಟು ಖ್ಯಾತಿ ಹೊಂದಿರುವ ವಾಗ್ದೇವಿ ಶಿಕ್ಷಣ ಸಂಸ್ಥೆ ಈಗ ಇನ್ನೊಂದು ಹೆಜ್ಜೆ ಮುಂದಿರಿಸಿದೆ. ‘ವಿಜ್ಞಾನ ಉದ್ಯಾನ’ ವನ್ನು (ಸೈನ್ಸ್ ಟೆಕ್ ಪಾರ್ಕ್‌) ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿದೆ. ಇದು ಕೇವಲ ವಿಜ್ಞಾನ ವಸ್ತುಗಳ ಪ್ರದರ್ಶನವಲ್ಲ. ವಿದ್ಯಾರ್ಥಿಗಳು ಸ್ವತಃ ಪ್ರಯೋಗಗಳನ್ನು ಮಾಡಿ ಕುತೂಹಲ ತಣಿಸಿಕೊಳ್ಳಲೂ ಅವಕಾಶ ಮಾಡಿಕೊಡ­ಲಾಗಿದೆ. ಚಿಕ್ಕವರಿಗೆ ಹಿರಿಯರ ಸಾಧನೆಯೇ ಸ್ಫೂರ್ತಿ.

ಈ ವಿಜ್ಞಾನ ಉದ್ಯಾನಕ್ಕೆ ಕಾಲಿಟ್ಟಾಕ್ಷಣ ಹೋಮಿ ಜಹಾಂಗೀರ್ ಬಾಬಾ, ಐಸಾಕ್ ನ್ಯೂಟನ್, ಗೆಲಿಲಿಯೊ, ಜೋಹಾನ್ಸ್ ಕೆಪ್ಲರ್, ವಿಕ್ರಮ್ ಸಾರಾಭಾಯ್ ಮೊದಲಾದ ಪ್ರತಿಭಾನ್ವಿತ ವಿಜ್ಞಾನಿಗಳ ಚಿತ್ರ, ಸಾಧನೆ ವಿವರಗಳು ಸ್ವಾಗತಿಸುತ್ತವೆ. ಮುಂದೆ ಮುಂದೆ ಸಾಗುತ್ತಿದ್ದಂತೆಯೇ ವಿಭಿನ್ನ ಪ್ರಪಂಚ ತೆರೆದುಕೊಳ್ಳುತ್ತವೆ.

ಸುಮಾರು ಅರ್ಧ ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾದ ಸೈನ್ಸ್ ಟೆಕ್ ಪಾರ್ಕ್‌ನಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಕಠಿಣ ವಿಜ್ಞಾನದ ಸಿದ್ಧಾಂತಗಳನ್ನು ಸರಳ ಮಾದರಿಗಳ ಮೂಲಕ ಮನದಟ್ಟು ಮಾಡುವ ಪ್ರಯತ್ನ ಮಾಡಲಾಗಿದೆ. ಉದಾಹರಣೆಗೆ: ಇಲ್ಲಿ ಗಾಳಿಯ ದಿಕ್ಕನ್ನು ಸೂಚಿಸುವ ಗಾಳಿ ಚೀಲವನ್ನು ತೂಗಿಬಿಡಲಾಗಿದೆ. ಇದನ್ನು ವಿಮಾನ ಹಾರಾಟಕ್ಕೂ ಮುನ್ನ ಗಾಳಿಯ ದಿಕ್ಕು ತಿಳಿಯಲು ಬಳಸಲಾಗುತ್ತದೆ. ವಿವಿಧ ಬಣ್ಣಗಳಲ್ಲಿ ಶಾಖವನ್ನು ಪ್ರತಿಫಲಿಸುವ ಸಾಮರ್ಥ್ಯ ಭಿನ್ನವಾಗಿರುತ್ತವೆ ಎಂಬುದನ್ನು ಬಿಂಬಿಸಲು ಬೇರೆ ಬೇರೆ ಬಣ್ಣದ ತಟ್ಟೆಗಳನ್ನು ಜೋಡಿಸಲಾಗಿದೆ. ಮಕ್ಕಳು ತಟ್ಟೆಗಳನ್ನು ಮುಟ್ಟುವ ಮೂಲಕ ಇದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಸೂರ್ಯ ಪ್ರಕಾಶದ ನೆರಳಿನಿಂದ ಸಮಯ ತಿಳಿಯುವ ‘ವರ್ಟಿಕಲ್ ಸನ್ ಡೈಲ್’ ಕೂಡಾ ಇಲ್ಲಿದೆ.

ಪ್ರತಿಧ್ವನಿ ಹೇಗೆ ಆಗುತ್ತದೆ ಎನ್ನುವ ಸಾಮಾನ್ಯ ವಿಷಯದಿಂದ ಹಿಡಿದು ಕ್ಲಿಷ್ಟಕರ ಎನ್‌ಡಿಎ ಮಾದರಿಗಳ ತನಕ ವಿಜ್ಞಾನದ ಎಲ್ಲಾ ವಿಭಾಗಗಳ ವಿಷಯಗಳೂ ವಿದ್ಯಾರ್ಥಿಗಳನ್ನು ಸೆಳೆಯುತ್ತವೆ. ಎಲ್ಲಾ ಬಣ್ಣಗಳ ಹಿಂದೆ ಇರುವುದು ಬಿಳಿ ಬಣ್ಣ ಎಂದು ವಿವರಿಸುವ ನ್ಯೂಟನ್ ಡಿಸ್ಕ್, ಭಾರವನ್ನು ಸುಲಭವಾಗಿ ಎತ್ತಲು ಸಹಾಯ ಮಾಡುವ ಚಕ್ರ (ಪುಲಿ) ಹೀಗೆ ಬದುಕಿಗೆ ಹತ್ತಿರವಾದ ವಿಷಯಗಳು ವಿಜ್ಞಾನದ ವಿಷಯದ ಬಗ್ಗೆ ಮಕ್ಕಳಿಗೆ ಇರುವ ಭಯ ತೊಲಗಿಸುತ್ತದೆ.

ಈ ಉದ್ಯಾನದ ಇನ್ನೊಂದು ವಿಶೇಷ ವಿಭಾಗ ‘ಖನಿಜ ಭವನ’. ಸುಲಭವಾಗಿ ನೋಡಲು ಸಿಗದ ಬಾಕ್ಸೈಟ್, ಹೆಮಟೈಟ್, ಲೈಮ್‌ಸ್ಟೋನ್, ಪಿಂಕ್ ಗ್ರಾನೈಟ್, ಕಾಂಗ್ಲಾಮರೈಟ್, ಲಟರೈಟ್, ಅಸ್‌ಬೆಸ್ಟಸ್, ಡೊಲೊಮೈಟ್‌­ಗಳನ್ನಿಡಲಾಗಿದ್ದು, ಮಕ್ಕಳು ಅವುಗಳನ್ನು ನೋಡುವುದಷ್ಟೇ ಅಲ್ಲ, ಅದರ ಗುಣಲಕ್ಷಣಗಳನ್ನು ಅರಿಯಬಹುದಾಗಿದೆ.

ವಾತಾವರಣದಲ್ಲಿ ತಾಪಮಾನ ಏರುತ್ತಿರುವ ಸಮಸ್ಯೆ ಯಾರಿಗೆ ತಾನೆ ತಿಳಿದಿಲ್ಲ? ಆದರೆ ಯಾರೂ ಅದರ ಬಗ್ಗೆ ಗಂಭೀರವಾಗಿ ಯೋಚಿಸುತ್ತಿಲ್ಲ ಎಂಬುದೇ ವಿಷಾದ. ಆದರೆ ನಮ್ಮ ಶಾಲೆ ‘ಆಡು’ವು­ದನ್ನು ‘ಮಾಡಿ’ ತೋರಿಸುವಲ್ಲಿ ಪ್ರಯತ್ನಿಸುತ್ತಿದೆ.

‘ನಮ್ಮ ಶಾಲೆಯಲ್ಲಿ ತೆಗೆದುಕೊಳ್ಳಲಾಗಿರುವ ಹಸಿರು ಪ್ರಯೋಗಗಳು ಹಾಗೂ ಆಯೋಜನೆಗಳು ಶಾಲೆಯ ಮಕ್ಕಳಿಗೆ ಉತ್ತಮ ತಿಳಿವಳಿಕೆ ನೀಡುವಲ್ಲಿ ಸಫಲವಾಗಿವೆ. ಪುಸ್ತಕದ ಅನುಭವ ಮೀರಿ ವೈಜ್ಞಾನಿಕ ಅನುಭವ ಪಡೆಯಲು ವಿಜ್ಞಾನದ ಪರಿಕರಗಳು ಪೂರಕವಾಗಿವೆ. ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಮೂಡುವಂತೆ ಮಾಡಿವೆ’ ಎನ್ನುತ್ತಾರೆ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಅರಿತ್ರಾ ರಾಯ್ ಚೌಧರಿ.

ಬೆಂಗಳೂರಿನ ವರ್ತೂರು, ಮಾರತಹಳ್ಳಿ, ಬಿಡದಿಯಲ್ಲಿರುವ ಸಂಸ್ಥೆಯ ಶಾಖೆಗಳಲ್ಲೂ ಸೈನ್ಸ್ ಪಾರ್ಕ್‌ಗಳನ್ನು ನಿರ್ಮಿಸಲಾಗಿದೆ. ವಿಶೇಷ ಎಂದರೆ ಇಲ್ಲಿ ಇತರ ಶಾಲೆಗಳ ಮಕ್ಕಳೂ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿಗೆ: 9686577171.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.