ADVERTISEMENT

ಕತ್ತಲಲ್ಲಿ ಕಮರುವ ಕುಸುಮಗಳು

ಕೆ.ಎಚ್.ಓಬಳೇಶ್
Published 26 ಡಿಸೆಂಬರ್ 2016, 19:30 IST
Last Updated 26 ಡಿಸೆಂಬರ್ 2016, 19:30 IST
ಕೊಲಾಜ್: ವಿಜಯಕುಮಾರಿ
ಕೊಲಾಜ್: ವಿಜಯಕುಮಾರಿ   

2015ರ ನವೆಂಬರ್ 29ರಂದು ಮುಂಜಾನೆ ಸಮಯ. ಮಕ್ಕಳ ಸಹಾಯವಾಣಿ ಕೇಂದ್ರದ ಗೋಡೆ ಮೇಲಿದ್ದ ಗಡಿಯಾರದ ದೊಡ್ಡಮುಳ್ಳು 6ರ ಅಂಕಿ ಬಳಿ ಸಾಗುತ್ತಿತ್ತು. ಸಿಬ್ಬಂದಿಯ ಮನಸ್ಸು ಅಂದಿನ ದಿನಚರಿಯ ಲೆಕ್ಕಾಚಾರದಲ್ಲಿ ಮುಳುಗಿತ್ತು. ಹೊರಗೆ ಮೈಕೊರೆಯುವ ಚಳಿ. ಅದೇ ವೇಳೆಗೆ ‘ಚೈಲ್ಡ್‌ಲೈನ್‌–1098’ ರಿಂಗಾಯಿತು. ಆ ದೂರವಾಣಿ ಕರೆಗೆ ಸಿಬ್ಬಂದಿ ತಡಬಡಾಯಿಸಿ ಮೇಲೆದ್ದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಮತ್ತು ಪೊಲೀಸರನ್ನು ಒಳಗೊಂಡ ತಂಡವು ಕಾರ್ಯಾಚರಣೆಗೆ ಸಜ್ಜಾಯಿತು. ಚಾಮರಾಜನಗರದ ಹೃದಯ ಭಾಗದಲ್ಲಿ ಇರುವ ಕೊಳದಬೀದಿಯ ಕಲ್ಯಾಣ ಮಂಟಪಕ್ಕೆ ಕಾರ್ಯಾಚರಣೆ ತಂಡ ತೆರಳಿತು.
 
ಮೊದಲಿಗೆ ತಂಡದ ಮಹಿಳೆಯೊಬ್ಬರು ಕಲ್ಯಾಣ ಮಂಟಪ ಪ್ರವೇಶಿಸಿದರು. ಅದಾಗಲೇ ಬಾಲಕಿಯೊಬ್ಬಳು ಹಸೆಮಣೆ ಏರಲು ಗಂಡಿನೊಂದಿಗೆ ಹೆಜ್ಜೆಹಾಕುತ್ತಿದ್ದಳು. ವಿಡಿಯೊ ಚಿತ್ರೀಕರಣವೂ ಭರದಿಂದ ಸಾಗಿತ್ತು. ಮಂಟಪದ ಭೋಜನಾ ಶಾಲೆಯೂ ತುಂಬಿ ತುಳುಕುತ್ತಿತ್ತು. ಬೆಳಗಿನ ಉಪಾಹಾರ ಸವಿದವರು ನವದಂಪತಿಗೆ ಶುಭ ಕೋರಲು ಮಂಟಪದ ವೇದಿಕೆಯತ್ತ ಮುಖ ಮಾಡಿದ್ದರು. 
 
ಮಹಿಳಾ ಸಿಬ್ಬಂದಿಯು ಪರಿಸ್ಥಿತಿ ಅವಲೋಕಿಸಿದರು. ಬಳಿಕ ಮಂಟಪದ ಮುಂಭಾಗವಿದ್ದ ಕಾರ್ಯಾಚರಣೆ ತಂಡಕ್ಕೆ ಸುದ್ದಿ ರವಾನಿಸಿದರು. ತಂಡದ ಸದಸ್ಯರು ಒಳಹೊಕ್ಕುವ ವೇಳೆಗೆ ನವದಂಪತಿ ಅಲ್ಲಿಂದ ನಾಪತ್ತೆಯಾಗಿದ್ದರು! ಒಮ್ಮೆಲೆ ಕಲ್ಯಾಣ ಮಂಟಪ ಸ್ತಬ್ಧವಾಯಿತು. ಮದುವೆಗೆ ಬಂದಿದ್ದ ನೆಂಟರು, ಸ್ನೇಹಿತರ ನಡುವೆ ಮಾತುಗಳು ಪಿಸುಗುಟ್ಟಿದವು. 
 
ಹೆಣ್ಣು ಮತ್ತು ಗಂಡಿನ ತಂದೆ, ತಾಯಿ ಕಾರ್ಯಾಚರಣೆಯ ತಂಡಕ್ಕೆ ಮುಖಾಮುಖಿಯಾದರು. ಅವರ ಕೂಲಂಕಷ ವಿಚಾರಣೆ ನಡೆಯಿತು. ‘ನಮ್ಮ ಮಗಳು ಅಪ್ರಾಪ್ತಳಲ್ಲ. ಕಲ್ಯಾಣ ಮಂಟಪದ ಮಾಲೀಕರಿಗೂ ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ ಕೊಟ್ಟಿದ್ದೇವೆ. ವಧು ಇನ್ನೂ ಶೃಂಗರಿಸಿಕೊಳ್ಳುತ್ತಿದ್ದಾಳೆ. ನಿಮಗೆ ಅನುಮಾನವಿದ್ದರೆ ಕೊಠಡಿಗೆ ಹೋಗಿ ಪರೀಕ್ಷಿಸಿಕೊಳ್ಳಬಹುದು’ ಎಂದು ವಧುವಿನ ಪೋಷಕರು ಕಾರ್ಯಾಚರಣೆ ತಂಡಕ್ಕೆ ಸವಾಲೊಡ್ಡಿದರು.
 
 
ತಂಡದ ಸದಸ್ಯರು ವಧುವಿನ ಕೊಠಡಿ ಹೊಕ್ಕಿದರು. ಅಲ್ಲಿ ಮಹಿಳೆಯೊಬ್ಬರು ನವವಧುವಿನಂತೆಯೇ ಶೃಂಗರಿಸಿಕೊಳ್ಳುತ್ತಿದ್ದರು. ಆಕೆಯ ಸಹಾಯಕ್ಕೆ ನಾಲ್ಕಾರು ಹೆಣ್ಣುಮಕ್ಕಳು ನಿಂತಿದ್ದರು. ಈಕೆಯೇ ನಮ್ಮ ಮಗಳು ಎಂದು ಪೋಷಕರು ವಾದ ಮಂಡಿಸಿದರು. 
 
ತನಿಖೆ ಮುಂದುವರಿಸಿದಾಗ ತಂಡಕ್ಕೆ ಅಚ್ಚರಿ ಕಾದಿತ್ತು. ಬೆಳಿಗ್ಗೆಯಿಂದ ತೆಗೆದಿದ್ದ ಮದುವೆಯ ವಿಡಿಯೊ ಚಿತ್ರೀಕರಣದ ಪರಿಶೀಲನೆ ನಡೆಸಲಾಯಿತು. ಕೋಣೆಯಲ್ಲಿರುವ ಮಹಿಳೆಯು ವಧುವಲ್ಲ ಎಂಬ ಸತ್ಯಾಂಶ ಬಯಲಾಗಲು ಬಹುಕಾಲ ಹಿಡಿಯಲಿಲ್ಲ. ಆದರೆ, ಆಕೆ ಯಾರು? ಎಂಬ ಯಕ್ಷಪ್ರಶ್ನೆ ತಂಡಕ್ಕೆ ಕಾಡಿತು. ಕೊನೆಗೆ, ಆ ಮಹಿಳೆಯು ವಧುವಿನ ಸ್ವಂತ ಚಿಕ್ಕಮ್ಮ ಎನ್ನುವ ಸತ್ಯ ಬಟಾಬಯಲಾದಾಗ ತಂಡದ ಸದಸ್ಯರು ತಬ್ಬಿಬ್ಬುಗೊಂಡರು.
 
ಕಲ್ಯಾಣ ಮಂಟಪದ ಮಾಲೀಕರು ಹೆಣ್ಣು ಮತ್ತು ಗಂಡಿನ ವಯಸ್ಸಿನ ದೃಢೀಕರಣ ಪ್ರಮಾಣಪತ್ರ ಪಡೆದಿಲ್ಲ ಎನ್ನುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿತು. ಮುಂದಿನ ಕಾನೂನು ಪ್ರಕ್ರಿಯೆಗೆ ಮುಂದಾದ ಕಾರ್ಯಾಚರಣೆ ತಂಡದ ಸದಸ್ಯರ ವಿರುದ್ಧ ಪೋಷಕರು ಮತ್ತು ನೆರೆದಿದ್ದ ನೆಂಟರಿಸ್ಟರು ಕೆಂಗಣ್ಣು ಬೀರಿದರು. ಕ್ಷಣಾರ್ಧದಲ್ಲಿ ಮದುವೆ ಮಂಟಪ ರಣರಂಗವಾಯಿತು.
 
‘ನಿಮ್ಮಿಂದಲೇ ಹೆಣ್ಣು–ಗಂಡು ಕಲ್ಯಾಣ ಮಂಟಪದಿಂದ ಕಾಣೆಯಾಗಿದ್ದಾರೆ. ಇದಕ್ಕೆ ನೀವೇ ಹೊಣೆ. ಅವರನ್ನು ಹುಡುಕಿಕೊಡಬೇಕು’ ಎಂದು ಪೋಷಕರು ಪಟ್ಟುಹಿಡಿದರು. ನೇಸರ ನೆತ್ತಿಗೇರುವ ವೇಳೆಗೂ ನಾಟಕೀಯ ಬೆಳವಣಿಗೆಗೆ ಕಲ್ಯಾಣ ಮಂಟಪ ಮೂಕಸಾಕ್ಷಿಯಾಗಿತ್ತು. ಬಾಲ್ಯವಿವಾಹ ಮಾಡಿದರೆ ಎದುರಾಗುವ ಶಿಕ್ಷೆ ಮತ್ತು ದಂಡದ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಪೋಷಕರ ಸಿಟ್ಟು ಜರ್ರನೆ ಇಳಿಯಿತು.
 
ಕಾರ್ಯಾಚರಣೆಯ ಸುಳಿವು ಅರಿತ ತಕ್ಷಣವೇ ಕಲ್ಯಾಣ ಮಂಟಪದಿಂದ ನಾಪತ್ತೆಯಾಗಿದ್ದ ನವದಂಪತಿ ತಂಡದ ಮುಂದೆ ಪ್ರತ್ಯಕ್ಷರಾದರು. ಅವರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. 8ನೇ ತರಗತಿ ಓದುತ್ತಿದ್ದ ಹೆಣ್ಣುಮಗಳು ಪೋಷಕರ ಬಲವಂತದಿಂದ ಮದುವೆಯಾಗುತ್ತಿರುವ ಸತ್ಯ ಬಿಚ್ಚಿಟ್ಟಳು. 18 ವರ್ಷ ತುಂಬುವ ತನಕ ಮದುವೆ ಮಾಡಬಾರದೆಂದು ಆಕೆಯ ತಂದೆ, ತಾಯಿಗೆ ತಿಳಿವಳಿಕೆ ನೀಡಲಾಯಿತು. ಪ್ರತಿ ಎರಡು ತಿಂಗಳಿಗೊಮ್ಮೆ ನಿಗದಿತ ದಿನದಂದು ಸಮಿತಿ ಮುಂದೆ ಆಕೆಯನ್ನು ಹಾಜರುಪಡಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಲಾಯಿತು. ಈ ಕುರಿತು ವರ ಸೇರಿದಂತೆ ಎರಡು ಕುಟುಂಬದ ಪೋಷಕರು ಮುಚ್ಚಳಿಕೆ ಪತ್ರ ಬರೆದುಕೊಟ್ಟರು.
 
ಅನಿಷ್ಟ ಬಾಲ್ಯವಿವಾಹ ಪದ್ಧತಿ
ಈ ಬಾಲ್ಯವಿವಾಹವೆಂಬ ಅನಿಷ್ಟ ಪದ್ಧತಿಯ ಕೂಪಕ್ಕೆ ಸಿಲುಕಿದ ಹೆಣ್ಣುಮಕ್ಕಳ ಭವಿಷ್ಯ ಬಾಲ್ಯದಲ್ಲಿಯೇ ಕಮರಿಹೋಗುತ್ತಿದೆ. ಬಡತನ, ಅನಕ್ಷರತೆ, ಮೂಢನಂಬಿಕೆಯೇ ಈ ಪದ್ಧತಿ ಜೀವಂತವಾಗಿರಲು ಮೂಲ ಕಾರಣ. 
 
ರಾಜ್ಯ ಸರ್ಕಾರ ಬಾಲ್ಯವಿವಾಹ ಸಂಬಂಧ ಇತ್ತೀಚೆಗೆ ವರದಿ ಪ್ರಕಟಿಸಿದೆ. ಇದರ ಅನ್ವಯ ಅತಿಹೆಚ್ಚು ಬಾಲ್ಯವಿವಾಹ ನಡೆಯುತ್ತಿರುವ ಜಿಲ್ಲೆಗಳ ಪೈಕಿ ಬೆಳಗಾವಿ ಅಗ್ರಸ್ಥಾನದಲ್ಲಿದೆ. ರಾಯಚೂರು ಜಿಲ್ಲೆಯು ಎರಡನೇ ಸ್ಥಾನದಲ್ಲಿದೆ. ಹಿಂದುಳಿದ ಚಾಮರಾಜನಗರ ಜಿಲ್ಲೆಯು ಮೂರನೇ ಸ್ಥಾನದಲ್ಲಿದೆ. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರೆದಿರುವ ಜಿಲ್ಲೆಗಳಲ್ಲೂ ಈ ಸಾಮಾಜಿಕ ಪಿಡುಗು ತಹಬಂದಿಗೆ ಬಂದಿಲ್ಲ. ಇದಕ್ಕೆ ಮೈಸೂರು ಮತ್ತು ಮಂಡ್ಯ ಜಿಲ್ಲೆಯೇ ನಿದರ್ಶನ. ಈ ಜಿಲ್ಲೆಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ.
 
ಬಹುಬೇಗ ಹೆಣ್ಣುಮಕ್ಕಳ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ಧಾವಂತ ಪೋಷಕರದ್ದು. ಅವರ ಈ ಧೋರಣೆಯೇ ಹೆಣ್ಣುಮಕ್ಕಳ ಭವಿಷ್ಯಕ್ಕೆ ಕಂಟಕಪ್ರಾಯವಾಗಿದೆ. ಇನ್ನೊಂದೆಡೆ ಹೆಣ್ಣುಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಮೇಲೂ ದುಷ್ಪರಿಣಾಮ ಬೀರುತ್ತಿದೆ.
 
2015–16ರಲ್ಲಿ ಕೇಂದ್ರ ಸರ್ಕಾರ ದೇಶ ವ್ಯಾಪಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ನಡೆಸಿತು. ಈ ಸಮೀಕ್ಷೆಯು ಜಿಲ್ಲೆಯಲ್ಲಿ ಬಾಲ್ಯವಿವಾಹ ಜೀವಂತವಾಗಿರುವ ಬಗ್ಗೆ ಕನ್ನಡಿ ಹಿಡಿದಿದೆ. ಸಮೀಕ್ಷೆ ನಡೆಯುವ ವೇಳೆಗೆ ಜಿಲ್ಲೆಯಲ್ಲಿ ನಡೆದಿದ್ದ ಮದುವೆಗಳಲ್ಲಿ ಶೇ 8.5ರಷ್ಟು ಬಾಲ್ಯವಿವಾಹಗಳಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹದ ಪ್ರಮಾಣ ಶೇ 7.9ರಷ್ಟಿದೆ ಎನ್ನುತ್ತದೆ ವರದಿಯ ಸಾರಾಂಶ.
 
ಶೈಕ್ಷಣಿಕ ಅರಿವಿನ ಕೊರತೆ, ಕುಟುಂಬದ ಆಸ್ತಿಯನ್ನು ಕುಟುಂಬಸ್ಥರಲ್ಲಿಯೇ ಉಳಿಸಿಕೊಳ್ಳುವ ತಂತ್ರಗಾರಿಕೆ, ಬಾಲ್ಯದಲ್ಲಿ ಹೆಣ್ಣುಮಕ್ಕಳಿಗೆ ಮದುವೆ ಮಾಡಿದರೆ ವರದಕ್ಷಿಣೆ ಕಡಿಮೆಯಾಗುತ್ತದೆಂಬ ಪೋಷಕರ ಧೋರಣೆ ಹೆಣ್ಣುಮಕ್ಕಳ ಬದುಕಿಗೆ ಮುಳುವಾಗಿದೆ.
 
 
ಮಧ್ಯರಾತ್ರಿ ಬಾಲ್ಯವಿವಾಹ
ಪೋಷಕರು ಕದ್ದುಮುಚ್ಚಿ ಬಾಲ್ಯವಿವಾಹ ಮಾಡಲು ಸುಳ್ಳುಗಳ ಕಥೆ ಹೆಣೆಯುತ್ತಾರೆ. ಇದಕ್ಕೆ ಕಳೆದ ವರ್ಷದ ಮೇ ತಿಂಗಳಿನಲ್ಲಿ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ನಡೆದ ಪ್ರಕರಣವೇ ಸಾಕ್ಷಿ.
 
ಮಧುವನಹಳ್ಳಿಯು ಕೊಳ್ಳೇಗಾಲ– ಪಾಲಾರ್ ರಸ್ತೆಯ ಅಂಚಿನಲ್ಲಿಯೇ ಇದೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಈ ಮಾರ್ಗವಾಗಿಯೇ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುತ್ತಾರೆ.
 
ದೂರವಾಣಿ ಕರೆ ಸ್ವೀಕರಿಸಿದ ಜಿಲ್ಲಾ ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತಂಡ ಗ್ರಾಮಕ್ಕೆ ತೆರಳಿತು. ಊರಿನ ಹೊರಭಾಗದ ರಸ್ತೆಬದಿಯಲ್ಲಿದ್ದ ಮನೆಯಲ್ಲಿಯೇ ಬಾಲ್ಯವಿವಾಹ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ತಂಡಕ್ಕೆ ಲಭಿಸಿತ್ತು. ಆ ಮನೆಗೆ ಹೋದಾಗ ಅಚ್ಚರಿ ಕಾದಿತ್ತು.
 
ಮನೆಯ ಮುಂಭಾಗದಲ್ಲಿ ಚಪ್ಪರ ಹಾಕಲಾಗಿತ್ತು. ಹೋಮಕುಂಡ ನಿರ್ಮಿಸಿ ಅದು ಕಾಣದಂತೆ ಸುತ್ತಲೂ ಬಟ್ಟೆಯಿಂದ ತೆರೆ ಎಳೆಯಲಾಗಿತ್ತು. ಇಣುಕಿ ನೋಡಿದ ಸಿಬ್ಬಂದಿಗೆ ಕುಟುಂಬದ ಸದಸ್ಯರ ಗುಟ್ಟು ಅರ್ಥವಾಗಿತ್ತು. ಆದರೆ, ಗೃಹಪ್ರವೇಶ ನಡೆಯುತ್ತಿದೆ ಎಂಬ ಸಿದ್ಧ ಉತ್ತರ ಕುಟುಂಬದವರಿಂದ ಕೇಳಿಬಂತು.
 
ಮನೆಯಲ್ಲಿ ಮದುವೆ ಸಂಭ್ರಮ ಮೇಳೈಸಿತ್ತು. ನೆಂಟರು ಕೂಡ ದಾಂಗುಡಿ ಇಟ್ಟಿದ್ದರು. ಮನೆಯಲ್ಲಿ ಮಾತ್ರ ವಧು– ವರ ಕಾಣಿಸಲಿಲ್ಲ. ಕೊನೆಗೆ, ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆಗೆ ಇಳಿದಾಗ ಬಾಲ್ಯವಿವಾಹಕ್ಕೆ ಸಿದ್ಧತೆ ನಡೆಯುತ್ತಿರುವುದು ಬೆಳಕಿಗೆ ಬಂದಿತು. ಕುಟುಂಬಕ್ಕೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಯಿತು.
 
ಜಿಲ್ಲೆಯ ವೈ.ಕೆ.ಮೋಳೆ, ಬಡಗಲಮೋಳೆ, ತೆಂಕಲಮೋಳೆ, ಹೊನ್ನೂರು, ದೊಡ್ಡಮೋಳೆ, ಹರದನಹಳ್ಳಿ–ಬಂಡಿಗೆರೆ, ಅಮಚವಾಡಿ, ಮಧುವನಹಳ್ಳಿ, ಯರಿಯೂರು ಗ್ರಾಮಗಳಲ್ಲಿ ಅತಿಹೆಚ್ಚು ಬಾಲ್ಯವಿವಾಹ ನಡೆದಿರುವ ಬಗ್ಗೆ ವರದಿಯಾಗಿದೆ. 
 
ಇತ್ತೀಚೆಗೆ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಸ್ಥಳೀಯ ಪೊಲೀಸರು, ಸ್ಥಳೀಯಮಟ್ಟದ ಬಾಲ್ಯವಿವಾಹ ನಿಷೇಧ ಸಮಿತಿಯಿಂದ ಕಾರ್ಯಾಚರಣೆ ಹೆಚ್ಚಿದೆ. ಹಾಗಾಗಿ, ಪೋಷಕರು ಮಧ್ಯರಾತ್ರಿ 12 ಗಂಟೆ ಬಳಿಕ ಬಾಲ್ಯವಿವಾಹ ಮಾಡುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ.
 
ಬೆಳಿಗ್ಗೆ ಹೆಣ್ಣುಮಗಳ ಮನೆಗೆ ಹೋದರೆ ನೆಂಟರಿಸ್ಟರು ಭೋಜನ ಸವಿದು ಊರುಗಳತ್ತ ಹೋಗುವುದು ಕಾಣಸಿಗುತ್ತದೆ. ತಪಾಸಣೆ ನಡೆಸಿದರೂ ಸತ್ಯ ಬಯಲಾಗುವುದಿಲ್ಲ. ಗೃಹ ಪ್ರವೇಶ, ದೇವರ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ ಎಂಬ ನೆಪಹೇಳಿ ಕಾರ್ಯಾಚರಣೆ ತಂಡಕ್ಕೆ ದಿಕ್ಕುತಪ್ಪಿಸುವುದು ಉಂಟು.
 
ಬಾಲ್ಯವಿವಾಹ ಪತ್ತೆಹಚ್ಚುವ ಆಧಾರಗಳಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯೂ ಒಂದಾಗಿದೆ. ಇತ್ತೀಚೆಗೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಕರು ವಿಳಾಸ, ಮೊಬೈಲ್‌ ಸಂಖ್ಯೆ ಸಹ ಮುದ್ರಿಸುತ್ತಿಲ್ಲ. ಆ ಊರಿನ ಪ್ರಜ್ಞಾವಂತರು ಸುಳಿವು ನೀಡಿದರಷ್ಟೇ ಬಾಲ್ಯವಿವಾಹ ಬೆಳಕಿಗೆ ಬರುತ್ತದೆ. ಇಲ್ಲವಾದರೆ ಪರ ಊರುಗಳಲ್ಲಿ ವಿವಾಹ ಮುಗಿಸಿಕೊಂಡು ಬಂದು ಗುಟ್ಟಾಗಿ ಸಂಸಾರದ ಬಂಡಿ ಎಳೆಯುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಸಾಕಷ್ಟು ಇವೆ.
 
ಬಾಲ್ಯವಿವಾಹ ನಡೆದಿರುವ ಬಗ್ಗೆ ಗ್ರಾಮಸ್ಥರು ಮಾತನಾಡಲು ಸಿದ್ಧರಿರುವುದಿಲ್ಲ. ಬಾಲ್ಯವಿವಾಹ ಪದ ಕೇಳಿದ ತಕ್ಷಣವೇ ಪ್ರಶ್ನಿಸಿದವರೊಂದಿಗೆ ದೃಷ್ಟಿಯುದ್ಧ ಆರಂಭಿಸುತ್ತಾರೆ. ನಮ್ಮೂರಲ್ಲಿ ಆ ಪದ್ಧತಿಯೇ ಇಲ್ಲ ಎಂದು ವಾದಿಸುತ್ತಾರೆ. ಬಾಲ್ಯವಿವಾಹದ ಬಗ್ಗೆ ಊರಿನ ಮುಖಂಡರು ಒಗ್ಗಟ್ಟು ಪ್ರದರ್ಶಿಸುತ್ತಾರೆ. ಅಪ್ಪಿತಪ್ಪಿಯೂ ಸುಳಿವು ಬಿಟ್ಟುಕೊಡುವುದಿಲ್ಲ. 
 
ಉಪ್ಪಾರ ಸಮುದಾಯದಲ್ಲೇ ಹೆಚ್ಚು
ನಂಜುಂಡಪ್ಪ ವರದಿ ಅನ್ವಯ ಜಿಲ್ಲೆ ಹಿಂದುಳಿದಿದೆ. ಪರಿಶಿಷ್ಟ ಜಾತಿ ಶೇ 25.42 ಮತ್ತು ಪರಿಶಿಷ್ಟ ಪಂಗಡದ ಶೇ 11.78ರಷ್ಟು ಜನಸಂಖ್ಯೆ ಇದೆ. ರಾಜ್ಯದ ಇತರೇ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಉಪ್ಪಾರ ಜನಾಂಗ ಹೆಚ್ಚಿದೆ. ಒಟ್ಟು ಜನಸಂಖ್ಯೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉಪ್ಪಾರರು ಇದ್ದಾರೆ.
 
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಸಮುದಾಯದ ಮತಗಳೇ ನಿರ್ಣಾಯಕ. ಉಪ್ಪಾರ ಸಮುದಾಯದವರು ವಾಸಿಸುವ ಪ್ರದೇಶಗಳಿಗೆ ‘ಮೋಳೆ’ ಎಂದು ಕರೆಯುತ್ತಾರೆ. ಈ ಜನಾಂಗವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿದೆ. ಸಾಮಾಜಿಕ ಕಟ್ಟುಪಾಡುಗಳೇ ಈ ಜನಾಂಗ ಹಿಂದುಳಿಯಲು ಕಾರಣ. ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಪಡೆದ ಈ ಸಮುದಾಯದ ಸಂಖ್ಯೆ ಶೇ1ರಷ್ಟು ದಾಟುವುದಿಲ್ಲ. ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಮಕ್ಕಳು ಶಾಲೆಯಿಂದ ಹೊರಗುಳಿಯುವುದು ಸಮುದಾಯದಲ್ಲಿ ಸರ್ವೇಸಾಮಾನ್ಯ. ಮುಕ್ಕಾಲು ಭಾಗದಷ್ಟು ಕುಟುಂಬಗಳಿಗೆ ಕೂಲಿಯೇ ಜೀವನಾಧಾರ.
 
ಹೆಣ್ಣುಮಕ್ಕಳು ಪ್ರೌಢಶಾಲಾ ಹಂತದ ಶಿಕ್ಷಣ ಪಡೆಯುವುದು ಅತಿವಿರಳ. ಜನಾಂಗದಲ್ಲಿ ಇಂದಿಗೂ ಆಳವಾಗಿ ಬೇರೂರಿರುವ ಸಾಂಪ್ರದಾಯಿಕ ಕಟ್ಟಲೆಗಳಿಂದಾಗಿ ಬಾಲ್ಯವಿವಾಹ ಪದ್ಧತಿ ಜೀವಂತವಾಗಿದೆ.
 
ಹೆಣ್ಣುಮಕ್ಕಳು ಕುಟುಂಬಕ್ಕೆ ಹೊರೆ ಎಂಬ ಮನಸ್ಥಿತಿ ಈ ಸಮುದಾಯದ ಪೋಷಕರದ್ದು. 18 ವರ್ಷ ತುಂಬಿದ ಹೆಣ್ಣುಮಗಳನ್ನು ಯಾರೂ ಮದುವೆಯಾಗುವುದಿಲ್ಲ ಎಂಬ ಅಲಿಖಿತ ಧೋರಣೆ ಬೆಳೆದುಬಂದಿದೆ. ಹದಿನೆಂಟು ವರ್ಷದೊಳಗೆ ಮದುವೆ ಮಾಡದಿದ್ದರೆ ನೆರೆಹೊರೆಯವರು ನಿಂದಿಸುತ್ತಾರೆ. ಇಷ್ಟು ವಯಸ್ಸಿಗೆ ಮದುವೆ ಮಾಡಲು ಮುಂದಾದರೆ ವಿವಾಹ ನಿರಾಕರಣೆ ಮಾಡುತ್ತಾರೆ ಎಂಬ ಭೀತಿ ಪೋಷಕರದ್ದು.
 
ಇನ್ನೊಂದೆಡೆ ಮನೆಯಲ್ಲಿರುವ ಹಿರಿಯರ ಒತ್ತಾಯವೂ ಬಾಲ್ಯವಿವಾಹಕ್ಕೆ ಕಾರಣವಾಗುತ್ತಿದೆ. ಜನಾಂಗದ ಸಾಂಸ್ಕೃತಿಕ ಪದ್ಧತಿ, ರಕ್ತಸಂಬಂಧ ಗಟ್ಟಿಗೊಳಿಸುವ ಪೋಷಕರ ಧೋರಣೆಯ ಪರಿಣಾಮ ಹೆಣ್ಣುಮಕ್ಕಳು ಬಾಲ್ಯವಿವಾಹದ ಸುಳಿಗೆ ಸಿಲುಕುತ್ತಿದ್ದಾರೆ.
 
ಶಿಕ್ಷಣಕ್ಕೆ ಸಂಬಂಧಿಸಿದಂತೆ ಲಿಂಗತಾರತಮ್ಯ ಈ ಸಮುದಾಯದಲ್ಲಿ ಹೆಚ್ಚು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ಗೌಣ. ಶೈಕ್ಷಣಿಕ ಜಾಗೃತಿ, ಅರಿವು ಕಡಿಮೆ. ಸಮುದಾಯದ ಧಾರ್ಮಿಕ ಆಚರಣೆಗೆ ನೀಡುವಷ್ಟು ಪ್ರಾಶಸ್ತ್ಯವು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಿಗುವುದಿಲ್ಲ. ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಶಾಲೆಯಿಂದ ಹೊರಗುಳಿಯುವುದೇ ಹೆಚ್ಚು. ಋತುಮತಿಯಾದ ತಕ್ಷಣವೇ ಮದುವೆ ಮಾಡುವ ಸಂಪ್ರದಾಯ ಆಳವಾಗಿ ಬೇರುಬಿಟ್ಟಿದೆ.
 
‘ದಶಕಗಳ ಹಿಂದೆ ಉಪ್ಪಾರ ಜನಾಂಗದಲ್ಲಿ 10 ವರ್ಷದೊಳಗಿರುವ ಹೆಣ್ಣುಮಕ್ಕಳಿಗೆ ಮದುವೆ ಮಾಡುವ ಸಂಪ್ರದಾಯವಿತ್ತು. ಇತ್ತೀಚೆಗೆ ಬಡಕುಟುಂಬದ ಪೋಷಕರು ಹೆಣ್ಣು ಋತುಮತಿಯಾದ ತಕ್ಷಣವೇ ಮದುವೆ ಮಾಡಲು ಮುಂದಾಗುತ್ತಾರೆ. ಸಮುದಾಯದಲ್ಲಿ ಬೇರೂರಿರುವ ಮೌಢ್ಯ, ಶಿಕ್ಷಣದ ಅರಿವಿನ ಕೊರತೆ, ಬಡತನವು ಬಾಲ್ಯವಿವಾಹಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಚಾಮರಾಜನಗರ ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು.
 
‘ಬಾಲ್ಯವಿವಾಹ ಮಾಡುವುದು ತಪ್ಪು. ಸಂಘದಿಂದಲೂ ಇದಕ್ಕೆ ವಿರೋಧವಿದೆ. ಉಪ್ಪಾರ ಸಮುದಾಯದಲ್ಲಿ ಇಂದಿಗೂ ಗಡಿಮನೆ, ಕಟ್ಟೆಮನೆ ಸಂಪ್ರದಾಯ ಇದೆ. ಇವುಗಳ ಯಜಮಾನರ ಮೂಲಕ ಬಾಲ್ಯವಿವಾಹಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲೂ ಕ್ರಮವಹಿಸಲಾಗಿದೆ. ಸಮುದಾಯದ ಸಭೆ, ಸಮಾರಂಭಗಳಲ್ಲಿ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲಾಗುತ್ತಿದೆ’ ಎನ್ನುತ್ತಾರೆ.
 
‘ಈ ಹಿಂದೆಯೂ ಸಂಘದಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜನವರಿಯಿಂದ ಉಪ್ಪಾರ ಸಮುದಾಯದ ಜನರು ವಾಸವಿರುವ ಗ್ರಾಮಗಳಲ್ಲಿ ಜಾಗೃತಿಯಾತ್ರೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂಬುದು ಅವರ ವಿವರಣೆ.
 
ಜಿಲ್ಲೆಯಲ್ಲಿ ಉಪ್ಪಾರ ಸಮುದಾಯ ಹೊರತುಪಡಿಸಿದರೆ ಹೆಚ್ಚಾಗಿ ಬಾಲ್ಯವಿವಾಹ ನಡೆಯುವುದು ಕುರುಬ ಸಮುದಾಯದಲ್ಲಿ. ಉಳಿದಂತೆ ಛಲವಾದಿ, ನಾಯಕ, ಸೋಲಿಗ ಜನಾಂಗದಲ್ಲೂ ಬಾಲ್ಯವಿವಾಹ ನಡೆದಿರುವ ಪ್ರಕರಣಗಳು ವರದಿಯಾಗಿವೆ.
 
ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರ ಮತ್ತು ಹೆಬ್ಬಸೂರು ಗ್ರಾಮದಲ್ಲಿ ಲಿಂಗಾಯತ ಸಮುದಾಯದಲ್ಲೂ ಬಾಲ್ಯವಿವಾಹದ ಸಿದ್ಧತೆ ತಪ್ಪಿಸಿದ ಬಗ್ಗೆ ಮಕ್ಕಳ ಸಹಾಯವಾಣಿಯ ದಾಖಲೆಗಳು ಹೇಳುತ್ತವೆ.
 
‘ಕುರುಬ ಸಮುದಾಯದಲ್ಲೂ ಬಾಲ್ಯವಿವಾಹ ನಡೆಯುತ್ತಿದೆ. ಸಂಘದಿಂದ ಈ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಸಮುದಾಯದ ಜನರಿರುವ ಗ್ರಾಮಗಳಲ್ಲಿ ಸಂಘದಿಂದ ಈ ಪದ್ಧತಿಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ’ ಎನ್ನುತ್ತಾರೆ ಚಾಮರಾಜನಗರ ತಾಲ್ಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಶಿವರಾಮು. 
 
ಸ್ಥಳೀಯ ರಾಜಕಾರಣದ ಪ್ರಭಾವಳಿ
ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಬಾಲ್ಯವಿವಾಹ ನಿಷೇಧ ಸಮಿತಿಗಳಿವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗ, ಶಾಲಾ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಸ್ಥಳೀಯ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಯೊಬ್ಬರು ನಿಷೇಧ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಗ್ರಾಮದಲ್ಲಿ ನಡೆಯುವ ಬಾಲ್ಯವಿವಾಹದ ಬಗ್ಗೆ ಸಮಿತಿಯ ಎಲ್ಲ ಸದಸ್ಯರಿಗೂ ಮಾಹಿತಿ ಇರುತ್ತದೆ. 
 
ಜತೆಗೆ, ಅಂಗನವಾಡಿ ಕಾರ್ಯಕರ್ತೆಯರ ಬಳಿ ವಧುವಿನ ವಯಸ್ಸಿನ ಕುರಿತ ನಿಖರ ಮಾಹಿತಿ ಇರುತ್ತದೆ. ಆದರೆ, ಗ್ರಾಮಮಟ್ಟದ ರಾಜಕೀಯ ಒತ್ತಡದಿಂದ ಬಹಳಷ್ಟು ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಸತ್ಯ ಬಯಲಾದರೆ ಸ್ಥಳೀಯವಾಗಿ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಆತಂಕದಿಂದ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಲು ಹಿಂಜರಿಯುತ್ತಾರೆ. ಹಾಗಾಗಿ, ಗ್ರಾಮದಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದರೂ ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ.
 
ಗರ್ಭಿಣಿಯರು ಸರ್ಕಾರದ ಆರೋಗ್ಯ ಸೌಲಭ್ಯ ಪಡೆಯಲು ತಾಯಿಕಾರ್ಡ್‌ ಅಗತ್ಯ. ಈ ಕಾರ್ಡ್‌ನಲ್ಲಿ ವಯಸ್ಸು ದೃಢೀಕರಿಸುವುದು ಕಡ್ಡಾಯ. ಬಾಲ್ಯವಿವಾಹ ಮಾಡಿದ ಪೋಷಕರು ಇಂಥ ಹೆಣ್ಣುಮಕ್ಕಳ ವಯಸ್ಸು ಮರೆಮಾಚುವುದೂ ಉಂಟು. 
 
ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗೆ ಗರ್ಭಿಣಿಯರ ವಯಸ್ಸಿನ ಬಗ್ಗೆ ಮಾಹಿತಿ ಇರುವುದಿಲ್ಲ. ಆದರೆ, ಅಂಗನವಾಡಿ, ಶಾಲೆಯಲ್ಲಿ ಮಾಹಿತಿ ಇರುತ್ತದೆ. ಜನ್ಮ ದಿನಾಂಕ ನಮೂದಿಸುವ ವೇಳೆ ಸಂಬಂಧಪಟ್ಟ ಶಾಲಾ ವರ್ಗಾವಣೆ ಪತ್ರದ ಪರಿಶೀಲನೆ ನಡೆಸುವುದಿಲ್ಲ. ಬಾಲ್ಯವಿವಾಹ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆ ಪಾತ್ರವೂ ಹೆಚ್ಚಿದೆ ಎನ್ನುತ್ತಾರೆ ಮಕ್ಕಳ ಸಹಾಯವಾಣಿ ಅಧಿಕಾರಿಗಳು.
 
ಬಾಲ್ಯವಿವಾಹ ನಿಷೇಧ ಕಾಯ್ದೆ–2006ರ ಅನ್ವಯ ಬಾಲ್ಯವಿವಾಹ ಪ್ರಕರಣದಲ್ಲಿ 2 ವರ್ಷ ಸಜೆ ಮತ್ತು ₹1 ಲಕ್ಷ ದಂಡ ವಿಧಿಸಲು ಅವಕಾಶವಿದೆ. 2015ರಲ್ಲಿ ಕಾಯ್ದೆಗೆ ತಂದಿರುವ ತಿದ್ದುಪಡಿ ಅನ್ವಯ ಬಾಲ್ಯವಿವಾಹ ನಡೆದ ಎರಡು ವರ್ಷದವರೆಗೂ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
 
‘ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ. ಮಕ್ಕಳ ಗ್ರಾಮ ಸಭೆಯಲ್ಲಿ ಈ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ. ವಿಶೇಷವಾಗಿ 8 ಮತ್ತು 9ನೇ ತರಗತಿ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಶ್ಮಿ.
 
‘ಜಿಲ್ಲೆಯ ಕೆಲವು ಸಮುದಾಯದಲ್ಲಿ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಿದೆ. ಶಿಕ್ಷಣ ಪಡೆದ ವಧುವಿಗೆ ಉನ್ನತ ಶಿಕ್ಷಣ ಪಡೆದಂತಹ ವರನನ್ನೇ ಹುಡುಕಿ ಮದುವೆ ಮಾಡುವುದು ಕಷ್ಟಕರ ಎನ್ನುವ ಧೋರಣೆ ಪೋಷಕರದ್ದು. ಜಿಲ್ಲೆಯಲ್ಲಿ 15ರಿಂದ 17 ವರ್ಷದೊಳಗಿನ ಹೆಣ್ಣುಮಕ್ಕಳ ವಿವಾಹ ನಡೆಯುತ್ತಿರುವುದೇ ಹೆಚ್ಚು. ಇದಕ್ಕೆ, ಸಮುದಾಯದ ಯಜಮಾನರ ಸಭೆ ನಡೆಸಿ ಅರಿವು ಮೂಡಿಸಲು ನಿರ್ಧರಿಸಲಾಗಿದೆ’ ಎನ್ನುತ್ತಾರೆ ಅವರು.
 
(ಸಿ.ಪುಟ್ಟರಂಗಶೆಟ್ಟಿ)
 
ಶಾಸಕರ ಊರಲ್ಲೇ ಗಟ್ಟಿಮೇಳ
ಆಗಸ್ಟ್10ರಂದು ಜಿಲ್ಲಾ ಕೇಂದ್ರದ ಹಳೇ ಬಸ್‌ ನಿಲ್ದಾಣದ ಬಳಿ ಭಗೀರಥ ಮಹರ್ಷಿ ಜಯಂತಿಗೆ ಅದ್ದೂರಿ ವೇದಿಕೆ ನಿರ್ಮಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಯಿಂದ ಉಪ್ಪಾರ ಜನಾಂಗದವರು ಆಗಮಿಸಿದ್ದರು. ಗಡಿಮನೆ, ಕಟ್ಟೆಮನೆ ಯಜಮಾನರು ನೆರೆದಿದ್ದರು. ಆ ಕಾರ್ಯಕ್ರಮದಲ್ಲಿ ಯಳಂದೂರು ತಾಲ್ಲೂಕಿನ ಗಡಿಮನೆ ಯಜಮಾನರಾದ ಉಪ್ಪಾರ ಜನಾಂಗದ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಹೇಳಿದ ಮಾತು ಜಿಲ್ಲಾಡಳಿತವನ್ನು ಪೇಚಿಗೆ ಸಿಲುಕಿಸಿತು.
 
‘ನನ್ನೂರು ವೈ.ಕೆ.ಮೋಳೆಯಲ್ಲಿ ಅಧಿಕಾರಿಗಳ ಕಣ್ಣುತಪ್ಪಿಸಿ ನಾಲ್ಕು ಬಾಲ್ಯವಿವಾಹ ನಡೆದಿದೆ. ಈ ಅನಿಷ್ಟ ಪದ್ಧತಿ ಮೂಲೋತ್ಪಾಟನೆಯಾದರೆ ಮಾತ್ರ ಜನಾಂಗದ ಶ್ರೇಯೋಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಗಡಿಮನೆ, ಕಟ್ಟೆಮನೆ ಯಜಮಾನರ ಪಾತ್ರ ಹೆಚ್ಚಿದೆ’ ಎಂದು ಮಾರ್ಮಿಕವಾಗಿ ಎಚ್ಚರಿಸಿದರು.
 
‘ಉಪ್ಪಾರ ಸಮುದಾಯದಲ್ಲಿ ಬಾಲ್ಯವಿವಾಹ ಮಾಡುವ ಪದ್ಧತಿ ಇದೆ. ಇದರ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ನಾನು ಪಾಲ್ಗೊಳ್ಳುವ ಸಮುದಾಯದ ಕಾರ್ಯಕ್ರಮಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಆದ್ಯತೆ ನೀಡುತ್ತಿದ್ದೇನೆ. ‘ಗಡಿಮನೆಯ ಉಸ್ತುವಾರಿಯಲ್ಲಿ ಕಟ್ಟೆಮನೆಗಳು ಬರುತ್ತವೆ. ಇವುಗಳಿಗೆ ಯಜಮಾನರಿದ್ದಾರೆ. ಆಯಾ ಗ್ರಾಮದ ಯಜಮಾನರು ಒಪ್ಪಿದರೆ ಮಾತ್ರವೇ ವಿವಾಹ ಸಾಧ್ಯ. ಹಾಗಾಗಿ, ಯಜಮಾನರ ಮೂಲಕ ಬಾಲ್ಯವಿವಾಹ ತಡೆಗಟ್ಟುವ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದ್ದೇನೆ’ ಎಂದರು ಪುಟ್ಟರಂಗಶೆಟ್ಟಿ.
 
‘ಅನಕ್ಷರತೆ ಪರಿಣಾಮ ಸಮುದಾಯದಲ್ಲಿ ಬಾಲ್ಯವಿವಾಹ ಹೆಚ್ಚಿದೆ. ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳ ರಚನೆ ಬಳಿಕ ಸಮುದಾಯದ ಮಹಿಳೆಯರಲ್ಲೂ ತುಸು ಅರಿವು ಮೂಡಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ಸಿಕ್ಕಿದೆ. ದಶಕದ ಹಿಂದಿನ ಚಿತ್ರಣಕ್ಕೆ ಹೋಲಿಸಿದರೆ ಈಗ ಬಾಲ್ಯವಿವಾಹ ಕಡಿಮೆಯಾಗುತ್ತಿದೆ. ಭವಿಷ್ಯದಲ್ಲಿ ಈ ಪದ್ಧತಿ ನಿರ್ಮೂಲನೆಯಾಗುವ ನಂಬಿಕೆ ಇದೆ’ ಎನ್ನುವ ವಿಶ್ವಾಸ ಅವರದು.
 
***
ಹಿರಿಯರ ಒತ್ತಾಯವೇ ಮುಖ್ಯ ಕಾರಣ
ಪ್ರತಿಯೊಂದು ಬಾಲ್ಯವಿವಾಹ ಪ್ರಕರಣದ ಹಿಂದೆ ವಿಭಿನ್ನ ಕಾರಣಗಳಿರುತ್ತವೆ. ಮನೆಯ ಹಿರಿಯರ ಒತ್ತಾಯಕ್ಕೆ ಮಣಿದು ಬಾಲಕಿಯರು ಅನಿಷ್ಟ ಪದ್ಧತಿಗೆ ಬಲಿಯಾಗುವ ನಿದರ್ಶನವಿದೆ. ರಕ್ತಸಂಬಂಧ ಗಟ್ಟಿಗೊಳಿಸಲು ಬಾಲ್ಯವಿವಾಹ ಮಾಡಿರುವ ಉದಾಹರಣೆಗಳು ಇವೆ.
 
ಮನೆಯಲ್ಲಿ ವೃದ್ಧರಿದ್ದರೆ ಹೆಣ್ಣುಮಕ್ಕಳ ಮದುವೆಗೆ ಒತ್ತಾಯಿಸುವುದೇ ಹೆಚ್ಚು. ನಾವು ಸಾಯುವ ಮೊದಲು ಮೊಮ್ಮಗಳ ವಿವಾಹ ನೋಡುವಾಸೆ ಮುಂದಿಡುತ್ತಾರೆ. ಚಿಕ್ಕ ವಯಸ್ಸಿನ ಹೆಣ್ಣುಮಗುವಿಗೆ ಆಗುವ ತೊಂದರೆ ಬಗ್ಗೆ ಅರಿವು ಅತ್ಯಲ್ಪ.
 
ಬಾಲ್ಯವಿವಾಹದಿಂದ ರಕ್ಷಿಸಿದ ಹೆಣ್ಣುಮಕ್ಕಳನ್ನು ಸಮಿತಿ ಮುಂದೆ ವಿಚಾರಣೆಗೆ ಹಾಜರುಪಡಿಸಬೇಕು. ಬಾಲಮಂದಿರದಲ್ಲಿ ಆಕೆಗೆ ಪುನರ್ವಸತಿ ಕಲ್ಪಿಸಲಾಗುತ್ತದೆ. ಮುಚ್ಚಳಿಕೆ ಪತ್ರ ಬರೆದುಕೊಟ್ಟ ಪ್ರಕರಣಗಳ ಬಗ್ಗೆಯೂ ಸಮಿತಿಯು ನಿಗಾವಹಿಸಲಿದೆ. ಪ್ರತಿ 2 ತಿಂಗಳಿಗೊಮ್ಮೆ ಸಮಿತಿ ಮುಂದೆ ಹೆಣ್ಣುಮಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಿದೆ. ಬಾಲಮಂದಿರದಲ್ಲಿ ಪುನರ್ವಸತಿ ಕಲ್ಪಿಸಿದರೆ ಆಕೆಯ ಶಿಕ್ಷಣ ಮತ್ತು ಕೌಶಲ ತರಬೇತಿಗೂ ಅವಕಾಶ ಕಲ್ಪಿಸಲಾಗುತ್ತದೆ.
–ಟಿ.ಜೆ. ಸುರೇಶ್‌ ಅಧ್ಯಕ್ಷರು
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ 
 
**
ಪೋಷಕರಿಂದ ಬೆದರಿಕೆ
ಪ್ರೇಮ ಪ್ರಕರಣ ಮುಂದಿಟ್ಟು ಬಾಲ್ಯವಿವಾಹ ಮಾಡಲು ಮುಂದಾಗಿರುವ ಉದಾಹರಣೆಗಳೇ ಹೆಚ್ಚು. ಇಂಥ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸುವುದು ಕಷ್ಟಕರ. ಹೆಣ್ಣುಮಕ್ಕಳ ಪೋಷಕರು ನಮ್ಮ ವಿರುದ್ಧ ತಿರುಗಿಬೀಳುತ್ತಾರೆ.
 
ನಮ್ಮ ಮಕ್ಕಳು ಪ್ರೇಮವಿವಾಹವಾದರೆ ನೀವು ಜವಾಬ್ದಾರಿ ಹೊರುತ್ತೀರಾ ಎಂದು ಪ್ರಶ್ನಿಸುತ್ತಾರೆ. ಅವರು ಓಡಿಹೋದರೆ ನೀವೇ ಹೊಣೆ ಎಂದು ಬೆದರಿಸುತ್ತಾರೆ. ಇಂಥ ಪ್ರಕರಣಗಳ ತನಿಖೆ ವೇಳೆ ಕಾರ್ಯಾಚರಣೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಹೆಚ್ಚಿರುತ್ತದೆ. ಚಾಮರಾಜನಗರದ ಸಾಗಡೆ–ಕೆಂಗಾಕಿ ಗ್ರಾಮದಲ್ಲಿ ಕಳೆದ ವರ್ಷ ಬಾಲ್ಯವಿವಾಹ ನಡೆಯುತ್ತಿರುವ ಸುದ್ದಿ ಗೊತ್ತಾಯಿತು. ಗ್ರಾಮಕ್ಕೆ ಹೋದಾಗ, ಒಂದೇ ದಿನ ನಾಲ್ಕು ಬಾಲ್ಯವಿವಾಹ ನಡೆಯುತ್ತಿರುವುದು ಬೆಳಕಿಗೆ ಬಂತು. ಪೋಷಕರೊಂದಿಗೆ ಚರ್ಚೆಗೆ ಮುಂದಾದೆವು. ನಾನು ಸೇರಿದಂತೆ ಸಹಾಯವಾಣಿಯ ನಾಲ್ಕು ಸಿಬ್ಬಂದಿಯನ್ನು ಮನೆಯಲ್ಲಿ ಕೂಡಿಹಾಕಿದರು. ಕೊನೆಗೆ ಅವರಿಗೆ ಕಾನೂನಿನ ಬಗ್ಗೆ ಮನವರಿಕೆ ಮಾಡಿಕೊಟ್ಟು ನಾವು ಗೃಹಬಂಧನದಿಂದ ಮುಕ್ತರಾದೆವು.
 
ಸ್ಥಳೀಯರ ಸಹಕಾರ ಇದ್ದರೆ ಬಾಲ್ಯವಿವಾಹ ತಡೆಗಟ್ಟಬಹುದು. ಮಾಧ್ಯಮಗಳು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರು ಇದಕ್ಕೆ ಸಹಕರಿಸಬೇಕು. ಕಲ್ಯಾಣ ಮಂಟಪದ ಆಡಳಿತ ಮಂಡಳಿಗಳು ವಧು–ವರರ ವಯಸ್ಸಿನ ದೃಢೀಕರಣ ಪತ್ರ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ. ಇದು ಪಾಲನೆಯಾಗುತ್ತಿಲ್ಲ. ಶಾಲಾ ವರ್ಗಾವಣೆ ಪತ್ರವನ್ನೇ ಹೆಣ್ಣುಮಕ್ಕಳ ವಯಸ್ಸಿಗೆ ಮುಖ್ಯ ಆಧಾರವಾಗಿ ಪರಿಗಣಿಸಬೇಕು. ನೋಟರಿ ದೃಢೀಕೃತ ಪ್ರಮಾಣ ಪತ್ರ ಸ್ವೀಕರಿಸಬಾರದು.
–ಎನ್. ಅರುಣ್‌ಕುಮಾರ್‌ ಜಿಲ್ಲಾ ಸಂಯೋಜಕ
ಮಕ್ಕಳ ಸಹಾಯವಾಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.