ADVERTISEMENT

ಕೌತುಕದ ಒಡಲು ಕಾಕಾದ್ರಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2016, 19:30 IST
Last Updated 17 ಅಕ್ಟೋಬರ್ 2016, 19:30 IST
ಐತಿಹಾಸಿಕ ಕುರುಹಾಗಿ ಉಳಿದುಕೊಂಡಿರುವ ಕಾವಲುಗಾರನ ಮನೆ
ಐತಿಹಾಸಿಕ ಕುರುಹಾಗಿ ಉಳಿದುಕೊಂಡಿರುವ ಕಾವಲುಗಾರನ ಮನೆ   

-ವಿಷ್ಣುವರ್ಧನ ನಾಯ್ಕ

ಶಿವರಾತ್ರಿಯ ಸಮಯದಲ್ಲಿ ಅನೇಕ ಬಾರಿ ತುಮಕೂರು ಜಿಲ್ಲೆಯ ಕಾಕಾದ್ರಿ ಪರ್ವತಕ್ಕೆ ಸ್ನೇಹಿತರೊಟ್ಟಿಗೆ ಹೋಗಿ ಬಂದದ್ದುಂಟು. ಈ ಪರ್ವತದ ಇತಿಹಾಸದ ಬಗ್ಗೆ ಅವರಿವರ ಬಾಯಲ್ಲಿ ಕೆಲವೊಂದು ಕೌತುಕದ ವಿಷಯಗಳನ್ನು ಕೇಳಿದ್ದ ನನಗೆ, ಹೇಗಾದರೂ ಮಾಡಿ ಸಂಪೂರ್ಣ ಇತಿಹಾಸ ತಿಳಿದುಕೊಳ್ಳಬೇಕೆಂಬ ಹಂಬಲವಾಗಿತ್ತು.

ನನ್ನ ಈ ಆಸೆಯನ್ನು ಈಡೇರಿಸಿದ್ದು ಆಂಧ್ರಪ್ರದೇಶದ 75 ವರ್ಷದ ವೃದ್ಧರೊಬ್ಬರು.  ಶ್ರೀರಾಮಚಂದ್ರ ವನವಾಸ ದಿನಗಳನ್ನು ಇಲ್ಲಿಯೇ ಕಳೆದಿದ್ದ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಿದೆ ಎಂದು ಅವರು ತಿಳಿಸಿದರು. ಅದಕ್ಕೆ ಸಾಕ್ಷಿಯಾಗಿ ಅವರು ರಾಮಾಯಣಕ್ಕೆ ಸಂಬಂಧಿಸಿದ ಪುಸ್ತಕವನ್ನೂ ತೋರಿಸಿದರು.

ಆಂಧ್ರಪ್ರದೇಶದ ಗಡಿಗೆ ತೀರಾ ಹತ್ತಿರವಾಗಿದೆ ಪಾವಗಡ. ಅಲ್ಲಿಂದ ಸುಮಾರು 26ಕಿ.ಮೀ. ದೂರದಲ್ಲಿದೆ ಈ ಕಾಕಾದ್ರಿ ಪರ್ವತ. ಈ ಪರ್ವತವನ್ನು ಕಾಕಾದ್ರಿಕೊಂಡ, ಕಾಕಾದ್ರಿಗಿರಿ, ಕಾಮನಕೊಂಡ, ಕಾಮಿನಿಕೊಂಡ, ಕಾವಿನಕೊಂಡ, ಕಾಮನದುರ್ಗ, ದೊಡ್ಡಬೆಟ್ಟ, ರಾಮನಬೆಟ್ಟ, ರಾಮಲಿಂಗೇಶ್ವರ ಕೊಂಡ ಹೀಗೆ ಹತ್ತಾರು ಹೆಸರುಗಳಿಂದ ಕರೆಯುವುದುಂಟು. ಕಾಮವನ್ನು ನಿವಾರಿಸುವ ಬೆಟ್ಟ ಕಾಮನದುರ್ಗವೆಂದೂ, ಕಾಮಧೇನುವಿನಿಂದ ಕೂಡಿದ ಬೆಟ್ಟ ಕಾಮಿನಿಕೊಂಡವೆಂದೂ, ರಾಮ ವಾಸಿಸಿದ ಸ್ಥಳವಾದ್ದರಿಂದ ರಾಮಬೆಟ್ಟವೆಂದೂ, ರಾಮಲಿಂಗೇಶ್ವರ ಬೆಟ್ಟವೆಂದೂ ಇದನ್ನು ಕರೆಯುತ್ತಾರೆ.

ಬೆಟ್ಟದ ಇತಿಹಾಸ
ಚಿತ್ರದುರ್ಗದಲ್ಲಿ ಮುಸಲ್ಮಾನರ ಹಿಂಸೆ ತಾಳಲಾಗದೇ ಅಲ್ಲಿನ ಪಾಳೇಗಾರರು ತಮ್ಮ ಅಪಾರ ಗೋಸಂಪತ್ತಿನ ಸಮೇತ ಬಂದು ಕಾಕಾದ್ರಿ ಪರ್ವತವನ್ನು ಸೇರಿದ್ದರು. ಈ ಪಾಳೇಗಾರರು ತಮ್ಮ ಅಪಾರ ಗೋಸಂಪತ್ತನ್ನು ಇಲ್ಲಿಯೇ ಸಾಕಿದ್ದರಿಂದ ಕಾಮಧೇನುವಿನಿಂದ ಕೂಡಿದ ಬೆಟ್ಟ ಕಾಮನದುರ್ಗವಾಯಿತು ಎಂದು ಇತಿಹಾಸ ಹೇಳುತ್ತದೆ.

ವನವಾಸದ ಸಮಯದಲ್ಲಿ ರಾಮ, ಲಕ್ಷ್ಮಣ ಮತ್ತು ಸೀತೆ, ಯಮುನಾ, ತುಂಗಾ, ಆಂಧ್ರದ ಗೋದಾವರಿಯ ನದಿಯನ್ನು ದಾಟಿ ಲೇಪಾಕ್ಷಿಯಲ್ಲಿ ಕೆಲವು ದಿನಗಳು ಕಳೆದರು.ಆನಂತರ ಪಾವಗಡಕ್ಕೆ ಪೂರ್ವಾಭಿಮುಖವಾಗಿ ಬಂದರು.  ವನವಾಸದಿಂದ ಬೇಸತ್ತ ಲಕ್ಷ್ಮಣ, ಇನ್ನೆಷ್ಟು ದಿನ ಅತ್ತಿಗೆ ಕೂಡ ಈ ಕಷ್ಟ ಅನುಭವಿಸಬೇಕು ಎಂದು ರಾಮನಿಗೆ ಕೇಳಿದಾಗ, ರಾಮನು ಸೀತಾಳಿಗೆ ತಿರುಗಿ ಹೋಗು ಎನ್ನುತ್ತಾನಂತೆ. ಆದ್ದರಿಂದ ಈ ಸ್ಥಳ ತಿರುಮಣಿ (ತಿರು–ತಿರುಗು; ಮಣಿ–ಸೀತಾ) ಆಯಿತು ಎನ್ನಲಾಗುತ್ತಿದೆ.

ನಂತರ ಆಯಾಸಗೊಂಡ ಶ್ರೀರಾಮಚಂದ್ರ ಸೀತೆಯ ತೊಡೆಯ ಮೇಲೆ ನಿದ್ದೆಗೆ ಜಾರುತ್ತಾನೆ. ಅಲ್ಲಿಗೆ ಬಂದ ಕಾಕರಾಜ ಎಂಬ ರಾಕ್ಷಸ ಸೀತೆಯ ಸೌಂದರ್ಯಕ್ಕೆ ಮಾರು ಹೋಗುತ್ತಾನೆ.  ಸೀತೆಯನ್ನು ಆತ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾನೆ. ಅವನ ಉಗುರು ಸೀತೆಗೆ ತಗುಲಿ ರಕ್ತ ಸುರಿಯುತ್ತದೆ. ಆ ರಕ್ತ ರಾಮನ ಮೈಮೇಲೆ ಬೀಳುತ್ತದೆ. ತನ್ನ ಗಂಡನ ನಿದ್ದೆಗೆ ಭಂಗ ಬರುತ್ತದೆ ಎಂದು ಸೀತೆ ನೋವನ್ನು ಸಹಿಸಿಕೊಳ್ಳುತ್ತಾಳೆ.

ರಕ್ತದ ಹನಿಗಳು ಬೀಳುತ್ತಿದ್ದಂತೆಯೇ ರಾಮನಿಗೆ ಎಚ್ಚರವಾಗುತ್ತದೆ. ಹೆಂಡತಿಯ ನೋವನ್ನು ಕಂಡ ಆತ ಕಾಕರಾಜನ ಸಂಹಾರಕ್ಕೆ ಮುಂದಾಗುತ್ತಾನೆ. ಕಾಕರಾಜ ಶ್ರೀರಾಮಚಂದ್ರನಲ್ಲಿ ಕ್ಷಮೆ ಕೇಳಿದಾಗ, ತನ್ನ ಹೆಂಡತಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿದ ಈ ಕಣ್ಣುಗಳು ಹೊರಟುಹೋಗಲಿ ಎಂದು ರಾಮ ಶಾಪ ಕೊಟ್ಟು, ಇಂದೆಂದಿಗೂ ಇತ್ತ ಸುಳಿಯಬೇಡ ಎನ್ನುತ್ತಾನೆ. ಆದ್ದರಿಂದಲೇ ಈ ಬೆಟ್ಟದಲ್ಲಿ ಕಪ್ಪು ಬಣ್ಣದಿಂದ ಕೂಡಿದ ವಸ್ತುಗಳನ್ನು ತರುವಂತಿಲ್ಲ.

ಇಲ್ಲೇ ಸನಿಹದಲ್ಲಿ ಸಿದ್ದರಗವಿ ಇದ್ದು, ಇದರಲ್ಲಿ ಸಾಧು-ಸಂತರು, ಋಷಿಮುನಿಗಳು ವಾಸವಾಗಿದ್ದರೆಂದು ಹೇಳುವುದುಂಟು. ಈ ಗವಿಯಲ್ಲಿ ಒಬ್ಬರು ಮಾತ್ರ ಒಳಪ್ರವೇಶಿಸುವಷ್ಟು ಜಾಗವಿದೆ. ಒಳಗೆ ಹೋಗುವಾಗ ನುಸುಳಿಕೊಂಡು ಹೋಗಬೇಕು. ಒಳಗೆ ಹೋಗಿದಂತೆ ಜಾಗ ವಿಸ್ತಾರವಾಗುತ್ತದೆ. ಈ ಗವಿಯ ಒಳಗಡೆಯೇ ಹಲವಾರು ಗವಿಗಳು ಇವೆ. ಸ್ವಲ್ಪ ಎಚ್ಚರ ತಪ್ಪಿದರೂ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಅನುಭವವಿರುವವರ ಜೊತೆಗೆ ಹೋಗಬೇಕು.

ಗವಿಯ ಒಳಕ್ಕೆ ಗಂಗಾಜಲವಿದ್ದು, ಈ ನೀರನ್ನು ಕುಡಿದರೆ ರೋಗ ರುಜಿನಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ದೇವಾಲಯದ ಮುಂದೆ ಅಕ್ಕಮಾರ್ಗಾಲು ಎಂಬ ಕಲ್ಯಾಣಿಯಿದ್ದು, ಇದರಲ್ಲಿ ಮಹಿಳೆಯರು ಗಂಗಾ ಪೂಜೆಯನ್ನು ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಶ್ರೀರಾಮಚಂದ್ರ ಕಾಕರಾಜನನ್ನು ಹಿಮ್ಮೆಟ್ಟಿಸಿಕೊಂಡು ಹೋದ ಜಾಗದಲ್ಲಿ ಅವನ ಪಾದಗಳ ಗುರುತು ಇವೆ. ಒಂದು ಪಾದದ ಗುರುತು ದೇವಸ್ಥಾನದ ಸುತ್ತ ಇರುವ ಕೋಟೆಯ ಪ್ರವೇಶ ದ್ವಾರದಲ್ಲಿದೆ.

ಇಲ್ಲೊಂದು ಬಾಲೇಂತಗುಂಡು ಇದ್ದು, ಅದಕ್ಕೂ ಒಂದು ಕಥೆಯಿದೆ. ಬಾಲೇಂತ ಎಂದರೆ ಗರ್ಭಿಣಿ. ಒಬ್ಬ ಗರ್ಭಿಣಿ ಭಕ್ತೆ, ಕಾಮನದುರ್ಗ ಬೆಟ್ಟ ಹತ್ತುವ ಆಸೆಯಿಂದ ಹತ್ತಿದಳಂತೆ.ಅಷ್ಟರಲ್ಲಿಯೇ ಹೊಟ್ಟೆನೋವು ಕಾಣಿಸಿಕೊಂಡಿತು. ಯಾರೂ ಆಕೆಯ ಸಹಾಯಕ್ಕೆ ಇಲ್ಲದಾಗ ಇಲ್ಲಿರುವ ಬಂಡೆಯೊಂದು ಬಾಗಿ ಆಕೆಗೆ ಆಶ್ರಯ ನೀಡಿತಂತೆ. ಆ ಜಾಗವನ್ನೀಗ ‘ಬಾಲೇಂತಗುಂಡು’ ಎನ್ನುತ್ತಾರೆ. ಇದು ಬೆಟ್ಟದ ಮಧ್ಯಭಾಗದಲ್ಲಿರುವ ಕಾರಣ ಬರುವ ಭಕ್ತರು ಈ ಬಂಡೆಯ ಕೆಳಗೆ ಕೆಲವು ಸಮಯ ಕುಳಿತು ಸುಧಾರಿಸಿಕೊಂಡು ಹೋಗುತ್ತಾರೆ.

ಎತ್ತರದ ಬೆಟ್ಟಗಳಲ್ಲಿ ಒಂದು
ಇಷ್ಟೆಲ್ಲಾ ಪೌರಾಣಿಕ, ಐತಿಹಾಸಿಕ ಕಥನ ಹೊಂದಿರುವ ಕಾಮನದುರ್ಗ ಬೆಟ್ಟ ತುಮಕೂರು ಜಿಲ್ಲೆಯ ಅತೀ ಎತ್ತರದ ಬೆಟ್ಟಗಳಲ್ಲಿ ಒಂದು ಎನಿಸಿದೆ. ಸಮುದ್ರ ಮಟ್ಟದಿಂದ ಸರಿಸುಮಾರು 33,720 ಅಡಿಗಳಷ್ಟು ಎತ್ತರವಾಗಿದ್ದು, ಸುಮಾರು 6 ಸಾವಿರ ಎಕರೆ ಭೂಪ್ರದೇಶ ಹೊಂದಿದೆ. ಈ ಪ್ರದೇಶವು ಏಳು ಗಿರಿಶಿಖರಗಳಿಂದ ಕೂಡಿದೆ. ಬೆಟ್ಟದ ಮೇಲಿನಿಂದ ಈ ಏಳು ಶಿಖರಗಳನ್ನು ನೋಡುವುದೇ ಅಂದ. ಈ ಬೆಟ್ಟದಲ್ಲಿ ಹಲವಾರು ಗಿಡಮೂಲಿಕೆಗಳೂ ಇವೆ.

ಪ್ರಸ್ತುತ ಇದು ಮುಜರಾಯಿ ಸಂಸ್ಥೆಗೆ ಸೇರಿದೆ. ಇದನ್ನು ಪ್ರವಾಸಿ ತಾಣ ಮಾಡಲಾಗುವುದು ಎಂದು ಹಲವಾರು ವರ್ಷಗಳಿಂದ ಘೋಷಣೆ ಆಗುತ್ತಿದೆಯೇ ವಿನಾ ಇದರ ಅಭಿವೃದ್ಧಿಗೆ ಇದುವರೆಗೆ ಏನೂ ಕೆಲಸ ಕಾರ್ಯ ನಡೆದಿಲ್ಲ. 

ಹೀಗೆ ಬನ್ನಿ...
ಕಾಕಾದ್ರಿ ಬೆಟ್ಟ, ಪಾವಗಡದಿಂದ 26 ಕಿಲೋ ಮೀಟರ್ ದೂರವಿದೆ. ಚಳ್ಳಕೆರೆ ಮಾರ್ಗದಲ್ಲಿ ಬಲಕ್ಕೆ ನೀಲಮ್ಮನಹಳ್ಳಿಯ ಮಾರ್ಗಕ್ಕೆ ತಿರುಗಿ ಎಡಭಾಗಕ್ಕೆ ಹೋಗಬೇಕು

ಪೂರಕ ಮಾಹಿತಿ: ‘ಇತಿಹಾಸ ಪ್ರಸಿದ್ಧಿ ಕಾಕಾದ್ರಿ ಪರ್ವತ ಶ್ರೀ ವರದಾಂಜನೇಯ’ ಪುಸ್ತಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.