ADVERTISEMENT

ಕೌದಿಯಲಿ ಕನಸಿನ ಹೆಣಿಗೆ

ಗುರು ಪಿ.ಎಸ್‌
Published 29 ಸೆಪ್ಟೆಂಬರ್ 2014, 19:30 IST
Last Updated 29 ಸೆಪ್ಟೆಂಬರ್ 2014, 19:30 IST

ಕೌದಿ ಹೊಲಿಯುವುದೇ ಇವರ ಕೈ ಹಿಡಿದ ಕಾಯಕ. ಕೌದಿ ಹೊದ್ದಂತೆ ಬೆಚ್ಚಗೆ ಮಲಗಿರುವ ಓಣಿಯ ಒಳಗೆ ಇಣುಕಿದರೆ ಬೇರೆಯದ್ದೇ ಲೋಕ. ಒಂದಿಷ್ಟು ಸಮಯ ಸಿಕ್ಕರೂ ಬಿರುಸಿನಿಂದ ಚಿಂದಿ ಬಟ್ಟೆಗಳ ಹೆಣಿಗೆಯಲ್ಲಿ ತೊಡಗಿಕೊಳ್ಳುತ್ತಾರೆ ಇಲ್ಲಿನ ಮಹಿಳೆಯರು. ಈ ಕೌಶಲದಿಂದಲೇ ಭವಿಷ್ಯದ ಕನಸನ್ನೂ ಹೆಣೆಯುತ್ತಿದ್ದಾರೆ ಇವರು...

ಜೋರಾಗಿ ಮಳೆ ಸುರಿಯುತ್ತಿರಲಿ, ಮೈಯನ್ನೇ ಮುದುರಿ ಹಾಕುವಂತಹ ಚಳಿಯಿರಲಿ, ಸುಡು ಬಿಸಿಲೇ ಇರಲಿ. ಈ ಮಹಿಳೆಯರ ಕೈಗೆ ಬಿಡುವೇ ಇರುವುದಿಲ್ಲ. ಬಟ್ಟೆಯ ತುಂಡುಗಳನ್ನು ಸುತ್ತ ಹರಡಿಕೊಂಡು, ಸೂಜಿ ದಾರ ಹಿಡಿದು ಕುಳಿತರೆ ಸಮಯ ಕಳೆಯುವುದು ಗೊತ್ತಾಗುವುದಿಲ್ಲ. ವಾರದೊಳಗೆ ಹೀಗೆ ತಯಾರಾಗುವ ಕೌದಿ, ಕೊಂಡವರ ದೇಹವನ್ನು, ಮನಸನ್ನು ಬೆಚ್ಚಗಾಗಿಸುತ್ತದೆ. ದುಬಾರಿಯಾಗಿರುವ ನಿದ್ದೆಯನ್ನು ಕಡಿಮೆ ಖರ್ಚಿನಲ್ಲಿ ತಂದುಕೊಡುತ್ತದೆ!

ಹುಬ್ಬಳ್ಳಿಯ ಹನುಮಂತನಗರದ ಒಳ ಹೊಕ್ಕರೆ, ಓಣಿಗೆ ಓಣಿಯೇ ಕೌದಿ ಹೊದ್ದುಕೊಂಡಂತೆ ಕಾಣುತ್ತದೆ! ಎಷ್ಟು ವರ್ಷಗಳಿಂದ ತಾವು ಈ ಕೆಲಸ ಮಾಡುತ್ತಿದ್ದೀವಿ ಎಂಬುದೂ ಅವರಿಗೆ ಗೊತ್ತಿಲ್ಲ. ತಾತ–ಮುತ್ತಾತರ ಕಾಲದಿಂದಲೂ ಕೌದಿ ಹೊಲಿಯುತ್ತಾ ಬಂದಿದ್ದೇವೆ ಎನ್ನುವ ಉತ್ತರ ಹೊರಬರುತ್ತದೆ.

ಚಿಕ್ಕಂದಿನಿಂದಲೂ ಕೌದಿ ಹೊಲಿಯುತ್ತಾ ಬಂದಿರುವ 85 ವರ್ಷದ ಗಾಳೆಮ್ಮ ವಾಗ್ಮೋಡೆಯಿಂದ ಹಿಡಿದು ಏಳನೇ ತರಗತಿಯಲ್ಲಿ ಓದುತ್ತಿರುವ ಲಾವಣ್ಯಳವರೆಗೆ ಕೌದಿ ತಯಾರಿಸುವುದನ್ನೇ ಕಸುಬನ್ನಾಗಿಸಿಕೊಂಡಿದ್ದಾರೆ. ಅವರಿಗೆ ಅದು ಕೆಲಸ ಮಾತ್ರವಲ್ಲ, ಮನರಂಜನೆ, ಹವ್ಯಾಸ, ಬದುಕು!

ಐದಂಕಿ ವೇತನದ ಕನಸು ಕಾಣುವವರ ನಡುವೆ, ವಾರಕ್ಕೆ ಒಂದು ಕೌದಿ ಹೊಲೆದು 300 ದುಡಿಮೆಯಲ್ಲಿ ತೃಪ್ತಿಪಟ್ಟುಕೊಳ್ಳುವ ಇವರು ಭಿನ್ನವಾಗಿ ಕಾಣುತ್ತಾರೆ. ಮನೆ ಮನೆಗೆ ಹೋಗಿ, ಅವರಿಂದ ಹಳೆಯ ಬಟ್ಟೆಗಳನ್ನು ಇಸಿದುಕೊಂಡು, ಅವುಗಳ ಹೊಲಿಗೆ ಬಿಚ್ಚಿ, ತೊಳೆದು, ಒಂದೊಂದೇ ಕೌದಿ ತಯಾರಿಸುತ್ತಿದ್ದಂತೆ, ಒಂದೊಂದು ಮಗುವಿಗೆ ಜನ್ಮ ನೀಡಿದ ಸಮಾಧಾನ ಇವರದ್ದು.

ನಾಲ್ಕು ಮೊಳದ ಕೌದಿಗೆ 200, ಆರು ಮೊಳದ ಕೌದಿಗೆ 300ರಂತೆ ಮಾರಾಟ ಮಾಡಲಾಗುತ್ತದೆ. ಖುಷಿಯ ವಿಚಾರವೆಂದರೆ, ಇವತ್ತಿನವರೆಗೂ ಕೌದಿಗೆ ಬೇಡಿಕೆ ಕಡಿಮೆಯಾಗಿಲ್ಲ. ಬಾಣಂತಿಯರಿಗೆ, ಹಸುಗೂಸುಗಳಿಗೆ ಹೇಳಿ ಮಾಡಿಸಿದ ಹೊದಿಕೆಯಾಗಿರುವುದರಿಂದ, ಬೇಸಿಗೆಯಲ್ಲಿಯೂ ತಣ್ಣಗೆ ಇರುವ ಕಾರಣದಿಂದ ತನ್ನ ಮಹತ್ವ ಹೆಚ್ಚಿಸಿಕೊಳ್ಳುತ್ತಿದೆ. ಆದರೆ, ಕೌದಿ ಹೊಲಿದ ಕೈಗಳ ಬಗ್ಗೆ ಇದೇ ಮಾತು ಹೇಳುವುದು ಕಷ್ಟ.

ತಲೆ ಬಗ್ಗಿಸಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದರಿಂದ ಬೆನ್ನು ನೋವು ಹೆಚ್ಚಾಗಿದೆ, ಮಂಡಿ ನೋವಿನಿಂದ ನಡೆಯುವುದೇ ಕಷ್ಟವಾಗಿದೆ. ಸೂಜಿ–ದಾರ ದಿಟ್ಟಿಸುತ್ತಾ ದಿಟ್ಟಿಸುತ್ತಾ ದೃಷ್ಟಿ ಮಂಕಾಗಿದೆ. ರಾಮವ್ವ, ಹುಲಿಗೆಮ್ಮ, ದ್ಯಾಮವ್ವ ಪಾರಗಿ, ಶಾಂತಮ್ಮ ಮುಕ್ಕೆ, ಜಾನಾಬಾಯಿ ವಾಸ್ತರ್‌, ಪಿರಗಮ್ಮ ಶಿಂಧೆಯಂತಹ ನೂರಾರು ಮಹಿಳೆಯರು ಕೌದಿ ಹೊಲಿಯುವುದನ್ನೇ ಫುಲ್‌ಟೈಂ, ಪಾರ್ಟ್‌ ಟೈಂ ಜಾಬ್‌ನಂತೆ ಮಾಡಿಕೊಂಡು ಬರುತ್ತಿದ್ದಾರೆ.

‘ಕೌದಿ ಹೊಲಿಯುವುದು ಬಿಟ್ಟರೆ ನಮಗೆ ಬೇರೆ ಕೆಲಸ ಗೊತ್ತಿಲ್ಲ. ಜನ ಕೌದಿಯನ್ನು ಇಷ್ಟಪಡುತ್ತಾರೆ. ಆದರೆ, ಮೊದಲಿನಂತೆ ಹೆಚ್ಚು ಹೊತ್ತು ಕುಳಿತುಕೊಳ್ಳಲು ಈಗ ಆಗುತ್ತಿಲ್ಲ. ಸರ್ಕಾರ ರಾಟಿ (ಬಟ್ಟೆ ಹೊಲಿಯುವ ಯಂತ್ರ) ನೀಡಿದರೆ ಉಪಕಾರವಾಗುತ್ತದೆ’ ಎಂದು ಹೇಳುತ್ತಾರೆ ಶೋಭಾ ಸುಗತೆ.

ಇವರಲ್ಲಿ ಕೆಲವರು ಹೇರ್‌ಪಿನ್‌ ಮಾರಲು ಹೋಗುತ್ತಾರೆ, ಮತ್ತೆ ಕೆಲವರು ಕಪ್ಪು–ಬಸಿ ಮಾರುತ್ತಾರೆ. ಪುರುಷರು ಪಾತ್ರೆ ಮಾರಲು, ಶಾಸ್ತ್ರ ಹೇಳಲು ಹೊರಡುತ್ತಾರೆ. ಸಾವಿರಾರು ರೂಪಾಯಿ ಸಂಬಳವಿದ್ದರೂ, ತಲೆ ತುಂಬಾ ಚಿಂತೆ ಹೊತ್ತುಕೊಂಡು ಓಡಾಡುವವರ ನಡುವೆ, ಅಂದಿನ ಅನ್ನ ಅಂದೇ ದುಡಿದು ತಿನ್ನುವ ಇಂಥವರ ಜೀವನಪ್ರೀತಿ ಹೆಚ್ಚು ಆಪ್ತವೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT