ADVERTISEMENT

ಜಾತ್ರೆಗೆ ಬನ್ನಿ ಏಟು ತಿನ್ನಿ!

ಡಾ.ಡಿ.ಎಸ್‌.ಚೌಗಲೆ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಜಾತ್ರೆಗೆ ಬನ್ನಿ ಏಟು ತಿನ್ನಿ!
ಜಾತ್ರೆಗೆ ಬನ್ನಿ ಏಟು ತಿನ್ನಿ!   

ಬಡಿಗೆಯಿಂದ ಏಟಿನ ರುಚಿ ತಿನ್ನುವ ವಿಚಿತ್ರ ಆಚರಣೆ ಪ್ರತಿವರ್ಷ ಯುಗಾದಿಯ ಮಾರನೆಯ ದಿನ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬೈಲಕೂರ ಗ್ರಾಮದಲ್ಲಿ ನಡೆಯುತ್ತದೆ!

ಐತಿಹಾಸಿಕ ರಕ್ಕಸ ತಂಗಡಗಿ ಕಾಳಗದ ಪ್ರದೇಶವಾದ ಕೃಷ್ಣಾ ಹಿನ್ನೀರು ವ್ಯಾಪ್ತಿಯಲ್ಲಿರುವ ಬೈಲಕೂರ ಗ್ರಾಮವು ನೂರಾರು ಕುಟುಂಬಗಳ ಪುಟ್ಟ ಹಳ್ಳಿ. ಇಲ್ಲಿ ಉನ್ನತ ವ್ಯಾಸಂಗ ಮಾಡಿದವರೇ ಅಧಿಕ. ಆದರೆ ಇಲ್ಲಿ ತಲೆತಲಾರಂತರಗಳಿಂದ ನಡೆದು ಬಂದಿರುವ ಹಬ್ಬ ಹರಿದಿನ, ಜಾತ್ರೆ, ಸಂಪ್ರದಾಯಗಳಲ್ಲಿ ಮಾತ್ರ ವ್ಯತ್ಯಾಸವಾಗಿಲ್ಲ. ಪ್ರತಿವರ್ಷ ಯುಗಾದಿಯ ಪ್ರತಿಪದದ ಮಾರನೇ ದಿನ ನಡೆಯುವ ಬಡಿಗೆ ಹಬ್ಬಕ್ಕೆ ವಿಶೇಷ ಮಹತ್ವವಿದೆ.

ಜಾತ್ರೆಯಲ್ಲಿ ವೈಶಿಷ್ಟ್ಯಪೂರ್ಣ ನಾದ ಹೊರಸೂಸುವ ಗತಕಾಲದ ಕೆನ್ನಾಲಿಗೆ ಮರ್ದನ ಎಂಬ ಚರ್ಮವಾದ್ಯವನ್ನು ಮಾತ್ರ ಬಳಸುತ್ತಾರೆ. ಅಂದು ಇಡೀ ಊರನ್ನೇ ಹಸಿರು ಚಪ್ಪರ ಮಾವಿನ ತೋರಣ ಬಾಳೆ ಕಂಬಗಳಿಂದ ಸಿಂಗರಿಸುತ್ತಾರೆ. ಗ್ರಾಮದ ಅಗಸಿ ಕಟ್ಟೆಯಿಂದ, ಕೆಲವರು ನದಿ ದಂಡೆಯಿಂದ, ಹಲವರು ಮದರಿ ಗ್ರಾಮದಿಂದ ದೀರ್ಘದಂಡ ನಮಸ್ಕಾರ ಹಾಕುತ್ತಾ ದೇವರಿಗೆ ಭಕ್ತಿ ಸಮರ್ಪಿಸುವ ಸಂಪ್ರದಾಯ ಬೆಳಗಿನ ಜಾವದ ನಾಲ್ಕು ಗಂಟೆಯಿಂದ ಮಟಮಟ ಮಧ್ಯಾಹ್ನ ಒಂದು ಗಂಟೆಯವರೆಗೂ ಅವ್ಯಾಹತವಾಗಿ ನಡೆಯುತ್ತದೆ.

ಅಂತಿಮವಾಗಿ ಗ್ರಾಮದ ಗೌಡರ ಮನೆಯಿಂದ ಬಾಳೆಕಂಬ ಪಲ್ಲಕ್ಕಿಯೊಂದಿಗೆ ಸಾಮೂಹಿಕವಾಗಿ ನೂರಾರು ಜನ ಏಕಕಾಲಕ್ಕೆ ಲಿಂಗಭೇದ ಮರೆತು ದೀರ್ಘದಂಡ ನಮಸ್ಕಾರ ಸಲ್ಲಿಸುವ ಸಂಪ್ರದಾಯವುಂಟು. ಸಾಮೂಹಿಕ ದೀರ್ಘದಂಡ ನಮಸ್ಕಾರ ಸಲ್ಲಿಸಿದ ನಂತರ ಬೇರೆ ಯಾರೂ ದೀರ್ಘದಂಡ ನಮಸ್ಕಾರ ಸಲ್ಲಿಸುವಂತಿಲ್ಲ.

ಸಾಯಂಕಾಲ ನಾಲ್ಕು ಗಂಟೆಯಿಂದ ದೃಢಕಾಯದವರು ತಮ್ಮಷ್ಟೇ ದೃಢಕಾಯದವರ ಇನ್ನೊಬ್ಬರ ಭುಜದ ಮೇಲೆ ಶಿರವನ್ನಿಟ್ಟು ಕಾಲುಗಳನ್ನೇ ಮೇಲ್ಮುಖವಾಗಿ ನಿಲ್ಲಿಸಿ ಸಮತೋಲನ ಕಾಯ್ದುಕೊಂಡು ಶಾರೀರಿಕ ಸಾಮರ್ಥ್ಯ ಪ್ರದರ್ಶಿಸುವ ಕಸರತ್ತಿನ ಸಂಪ್ರದಾಯ ಜಾತ್ರೆಯ ಒಂದು ವಿಶೇಷ ಆಚರಣೆ. ಮುಂಬರುವ ನೂತನ ವರ್ಷದಲ್ಲಿ ಎಂಥ ಕಷ್ಟಕಾರ್ಪಣ್ಯಗಳು ಎದುರಾದರೂ ಅವುಗಳನ್ನು ಸಮರ್ಥವಾಗಿ ಎದುರಿಸಬಲ್ಲೆವು ಎಂಬುದರ ಸಂಕೇತ ಈ (ತಲೆ ಕೆಳಗಾಗಿ) ಗಜ ನಿಲ್ಲುವ ಸಂಪ್ರದಾಯ.

ಸಂಜೆಯಾಗುತ್ತಿದ್ದಂತೆ, ಜಾತ್ರೆ ರಂಗೇರುತ್ತದೆ. ಜಾತ್ರೆಯ ಅಂತಿಮ ಹಂತದಲ್ಲಿ ಓಕುಳಿ ನಡೆಯುತ್ತದೆ. ಓಕುಳಿ ಆಟ ಆಡಲು ಜನತೆಗೆ ಊರ ಕುಂಬಾರರು ಮಣ್ಣಿನ ಮಡಕೆಗಳನ್ನು ಪೂರೈಸುತ್ತಾರೆ. ಇದು ಕುಂಬಾರರ ದೈವ ಭಕ್ತಿ. ದೇವಸ್ಥಾನದ ಮುಂದಿನ ಹೊಂಡದಲ್ಲಿ ಓಕುಳಿ ನೀರು ಸಂಗ್ರಹಿಸಿರುತ್ತಾರೆ. ಹೊಂಡವನ್ನು ನಾನಾ ರೀತಿಯ ಹೂಗಳಿಂದ ಶೃಂಗರಿಸಿರುತ್ತಾರೆ.

ಹೊಂಡಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದ ನಂತರ ಅರ್ಚಕರು ಓಕುಳಿಗೆ ಚಾಲನೆ ನೀಡಿದ ನಂತರ ಮಣ್ಣಿನ ಮಡಕೆಗಳೊಂದಿಗೆ ಹೊಂಡಕ್ಕೆ ಧುಮುಕುವ ಭಕ್ತರ ದಂಡು, ನಿಂತ ಜನರ ಮೇಲೆ ನೀರೆರಚಲು ಆರಂಭಿಸುತ್ತದೆ. ನೀರೆರಚಿದ ವ್ಯಕ್ತಿಗೆ ನೀರು ಎರಚಿಕೊಂಡವನು ಕೈಯಲ್ಲಿ ಹಿಡಿದ ಉದ್ದನೆಯ (ರೆಂಪಿ) ಬಡಿಗೆಗಳಿಂದ ಹೊಡೆದರೂ ಸ್ವಲ್ಪವೂ ನೋವಾಗದಿರುವುದು ಬೈಲಾದ್ರಿಯ ಪವಾಡವೆಂದೇ ಭಾವಿಸುತ್ತಾರೆ.

ಹೊಡೆದು ಸುಸ್ತಾದವನು ಬಡಿಗೆಯನ್ನು ಮನಬಂದಂತೆ ಎಸೆದಾಗ ಆ ಬಡಿಗೆ ಯಾರ ಮೇಲಾದರೂ ತಾನಾಗಿಯೇ ಬಂದು ಬಿದ್ದರೆ ಆ ವ್ಯಕ್ತಿಗೆ ಅದೃಷ್ಟ ಒಲಿಯಿತೆಂದು ತಾನು ಭಾಗ್ಯವಂತನೆಂದು, ಪುಣ್ಯವಂತನೆಂದು ಭಾವಿಸಿ ಆ ಬಡಿಗೆಯನ್ನು ತೆಗೆದುಕೊಂಡು ಮನೆಯ ಜಂತಿಯಲ್ಲಿ (ಮೇಲ್ಚಾವಣಿ) ಇರಿಸಿದರೆ ಯಾವುದೇ ವಿಷ ಜಂತು ಕ್ರಿಮಿಕೀಟಗಳು ಮನೆಮಂದಿಗೆ ಉಪಟಳ ಕೊಡುವುದಿಲ್ಲ ಎನ್ನುವುದು ಇಲ್ಲಿಯ ಜನರ ಬಲವಾದ ನಂಬಿಕೆ.

ಇಂದಿನಿಂದ 30ರವರೆಗೆ ಗಡಿಗೆ ಒಡೆಯುವ ಸ್ಪರ್ಧೆ, ರಸಮಂಜರಿ ಕಾರ್ಯಕ್ರಮ, ಶ್ರೀ ಬೈಲಾದ್ರೇಶ್ವರ ಮಹಾದ್ವಾರ ಉದ್ಘಾಟನೆ, ಕೊಂಡ ತುಳುಕಿಸುವುದು ಹಾಗೂ ಸಾಯಂಕಾಲ ಶ್ರೀ ರೇಣುಕಾ ಯಲ್ಲಮ್ಮ ನಾಟಕ ಹೀಗೆ ವಿಭಿನ್ನ ರೀತಿಯ ಸ್ಪರ್ಧೆಗಳು ನಡೆಯುತ್ತವೆ.

ಈ ಜಾತ್ರೆಯಲ್ಲಿ ಈ ವರ್ಷ ಜಾನಪದ ವೈಭವ ಡೊಳ್ಳಿನ ಮೇಳ ಹಾಗೂ ಇತ್ತೀಚಿನ ಯುವಜನಾಂಗದ ದೈಹಿಕ ಶಕ್ತಿ ಪ್ರದರ್ಶಿಸುವ ಆರೋಗ್ಯಕರ ಸ್ಪರ್ಧೆಗಳು ಕೂಡ ಜರುಗಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.