ADVERTISEMENT

ಜೇಡ ಹೊಸೆದ ಚಿತ್ರ

ಗಣಪತಿ ಹಾಸ್ಪುರ
Published 6 ಫೆಬ್ರುವರಿ 2017, 19:30 IST
Last Updated 6 ಫೆಬ್ರುವರಿ 2017, 19:30 IST
ಜೇಡ  ಹೊಸೆದ ಚಿತ್ರ
ಜೇಡ ಹೊಸೆದ ಚಿತ್ರ   
ಜೇಡ ಎಂಬ ಪುಟ್ಟ ಕ್ರಿಮಿ ಅದ್ಭುತ ಕಸೂತಿ ಕೆಲಸ ಮಾಡುತ್ತದೆ ಎಂದು ಮಿತ್ರ ಗ.ರಾ. ಭಟ್ಟ ಹೇಳಿದಾಗ ಆಶ್ಚರ್ಯವಾಗಿತ್ತು. ‘ಜೇಡನ ಕಸೂತಿಯನ್ನು ನಾನು ನೋಡಬೇಕು. ನನಗೆ ಅದನ್ನು ತೋರಿಸೋ...’ ಎಂದು ಒತ್ತಾಯಿಸಿದೆ. ಆತ, ತನ್ನ ಹೆಗಲಿನಲ್ಲಿ ಇಳಿಬಿಟ್ಟಿದ್ದ ಪುಟ್ಟ ಚೀಲವನ್ನು ತೆಗೆಯಲು ಆರಂಭಿಸಿದಾಗ, ನನ್ನ ಕುತೂಹಲ ಇನ್ನೂ ಹೆಚ್ಚಾಗಿತ್ತು.
 
ಆಗಲೇ ಕ್ಯಾಮೆರಾ ತೆಗೆದು, ಜೇಡನ ಕಸೂತಿಯ ವೈವಿಧ್ಯವನ್ನು ತಾನೇ ಕ್ಲಿಕ್ಕಿಸಿಕೊಂಡಿದ್ದ ಚಿತ್ರವನ್ನು ಒಂದಾದ ಮೇಲೆ ಒಂದರಂತೆ ಮಿತ್ರ ತೋರಿಸುತ್ತಿದ್ದ. ಜೇಡನ ಆಕರ್ಷಕ ಚಿತ್ತಾರವನ್ನು ಕ್ಯಾಮೆರಾದಲ್ಲಿ ನೋಡಿದಾಗ ನನಗೂ ಖುಷಿಯಾಗಿತ್ತು. ಜೇಡನ ಆ ಅದ್ಭುತ ಆಕರ್ಷಕ ಭಂಗಿಯ ನೇಯ್ಗೆಯ ಚಿತ್ತಾರವನ್ನು ಮತ್ತೆ ಮತ್ತೆ ನೋಡಬೇಕು ಅನ್ನಿಸಿತ್ತು. 
 
ಜೇಡನ ಚಿತ್ತಾರದ ವೈವಿಧ್ಯವನ್ನು ಸೆರೆ ಹಿಡಿದ ಬಗ್ಗೆ ಆತನಲ್ಲಿ ಪ್ರಶ್ನೆ ಹಾಕಿದಾಗ ಆತ, ‘ಪ್ರಕೃತಿಯಲ್ಲಿರುವ ಹುಳಗಳಲ್ಲಿ ಜೇಡವೂ ಒಂದು. ಅದು ತನ್ನ ಕಸೂತಿಯ ಕಾರ್ಯವನ್ನು ಅಭಿವ್ಯಕ್ತಪಡಿಸದೇ ಇರುವ ಜಾಗವೇ ಇಲ್ಲ. ಸ್ವಲ್ಪ ಹೊತ್ತು ನಾವು ನಿಂತಲ್ಲೇ ನಿಂತರೆ ಜೇಡ ಹುಳವು ನಮ್ಮನ್ನೇ ಬಂಧಿಸುವ ಬಲೆಯನ್ನು ನೇಯ್ದರೂ ಆಶ್ಚರ್ಯವಿಲ್ಲ’ ಎಂದ. 
 
‘ಸದಾ ಕಾರ್ಯನಿರತವಾಗಿರುವ ಜೇಡವು ನಮ್ಮ ಕಣ್ಣೆದುರಿನಲ್ಲಿಯೇ ಕೆಲವು ಕ್ಷಣದಲ್ಲಿ ಸುಂದರವಾದ ಚಿತ್ತಾರವನ್ನು ಸಿದ್ಧಪಡಿಸುತ್ತವೆ. ತನ್ನ ನೇಯ್ಗೆ ಕಾರ್ಯಕ್ಕೆ ವ್ಯಕ್ತಿ, ವಸ್ತು, ಸ್ಥಳ ಯಾವುದೂ ಜೇಡನಿಗೆ ಮುಖ್ಯವಲ್ಲ. ಪುಟ್ಟ ಸ್ಥಳದಲ್ಲಿಯೇ ಆದರೂ ತನ್ನ ಕಸೂತಿ ಕೆಲಸ ತೋರುವ ವಿಶಿಷ್ಟ ಕೀಟ’ ಎಂದು ಅದರ ಬಗ್ಗೆ ಅವನು ಇನ್ನಷ್ಟು ವಿವರಣೆ ನೀಡಿದ. ಅಂದಹಾಗೆ ಗ.ರಾ.ಭಟ್‌ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಬಾಳೆಗದ್ದೆಯವರು.
 
ಚಳಿಗಾಲದ ಸಮಯದಲ್ಲಿ ಮಲೆನಾಡಿನ ಯಾವುದೇ ಕಡೆಗೂ ಹೋದರೂ ಜೇಡರ ಬಲೆ ಕಾಣಬಹುದು. ಅದರ ಬಗ್ಗೆ ಆಸಕ್ತಿ, ತಿಳಿಯುವ ಕುತೂಹಲವಿದ್ದರೆ ಮುಂಜಾನೆಯ ಹೊತ್ತು ಸೂರ್ಯ ಕಣ್ತೆರೆಯುವ ಸಂದರ್ಭಗಳಲ್ಲಿಯೇ ನೋಡಬೇಕು. ಸೂರ್ಯನ ಪ್ರಖರವಾದ ಬೆಳಕಿಗೆ ಜೇಡನ ನೇಯ್ಗೆಯ ಕಸುಬು ಆಕರ್ಷಕವಾಗಿ ಕಾಣಿಸುತ್ತದೆ. ಮನೆಯ ಎಲ್ಲಾ ಭಾಗಗಳಲ್ಲಿ ಬೆಟ್ಟ-ಗುಡ್ಡದಲ್ಲಿರುವ ಗಿಡಗಂಟಿಗಳ ಮೇಲೆ, ಗದ್ದೆ-ಹಳ್ಳದ ದಿಂಬ, ಹುಲ್ಲು-ಕಡ್ಡಿಗಳ ಮೇಲೆ... ಹೀಗೆ ಎಲ್ಲೆಡೆ ಜೇಡನ ಅದ್ಭುತ ಚಿತ್ತಾರವನ್ನು ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.