ADVERTISEMENT

ತಾಕತ್ತಿದ್ದರೆ ತೋಳ್ಬಲ ತೋರಿಸಿ!

ಮಲ್ಲೇಶ್ ನಾಯಕನಹಟ್ಟಿ
Published 12 ಡಿಸೆಂಬರ್ 2016, 19:30 IST
Last Updated 12 ಡಿಸೆಂಬರ್ 2016, 19:30 IST
ತಾಕತ್ತಿದ್ದರೆ ತೋಳ್ಬಲ ತೋರಿಸಿ!
ತಾಕತ್ತಿದ್ದರೆ ತೋಳ್ಬಲ ತೋರಿಸಿ!   

ಅವು ಮಣಭಾರದ ಕಲ್ಲುಗಳು... ಅಲ್ಲಲ್ಲ... ತೋಳ್ಬಲದ ತಾಕತ್ತು ತೋರಿಸುವ ಸಂಗ್ರಾಣಿ ಕಲ್ಲುಗಳು. ಯಾದಗಿರಿಯಿಂದ ಉತ್ತರಾಭಿಮುಖವಾಗಿ ಭೀಮಾನದಿ ತಟದಲ್ಲಿ ಸಾಗಿದರೆ ಸಿಗುವ ಅಚೋಲಾ ಗ್ರಾಮದಲ್ಲಿ ಈ ಕಲ್ಲುಗಳು ತೋಳ್ಬಲ ತೋರುವಂತೆ ನಿಮ್ಮನ್ನು ಸ್ವಾಗತಿಸುತ್ತವೆ.

‘ಅಚೋಲಾ’ ವಿಚಿತ್ರ ಹೆಸರೆನಿಸಿದರೂ, ಸಾಂಪ್ರದಾಯಿಕ ಗ್ರಾಮೀಣ ಕಲೆಗಳನ್ನು ಸಂರಕ್ಷಿಸಿರುವ ಸಣ್ಣ ಊರು. ಇಲ್ಲಿನ ಯುವಕರು ಬಿಸಿಲಲ್ಲಿ ಹೊಲದಲ್ಲಿ ದುಡಿದು ದಣಿದರೂ, ಸಂಜೆ –ಮುಂಜಾನೆ ಊರಿನ ಕಟ್ಟೆಯ ಮೇಲೆ ತೋಳ್ಬಲದ ಕಸರತ್ತು ನಡೆಸುತ್ತಾರೆ. ಆ ಕಲ್ಲುಗಳನ್ನು ನೋಡಿಯೇ ಎದೆ ಝಲ್ಲೆನ್ನುತ್ತದೆ, ಇನ್ನು ಎತ್ತುವುದೆಲ್ಲಿ ಬಂತು. ಜತೆಗಿದ್ದ ಗೆಳೆಯ ಮಲ್ಲಪ್ಪ ಸಂಕೀನ್‌ ‘ಎತ್ರಿ ಸರ ಅದೇನಾಗುತ್ತೋ ನೋಡೇ ಬಿಡುವಾ’ ಎಂದು ಆ ಕಲ್ಲಿನ ಸಂದಿಯಲ್ಲಿ ಕೈಹಾಕಿ ಹಿಡಿದೆಳೆದ. ಅದು ಜಪ್ಪಯ್ಯ ಅನ್ನಲಿಲ್ಲ. ‘ಸರ ಸ್ಪೈನಲ್‌ ಕಾರ್ಡ್‌ ಹೋಗ್‌ ಬಿಡತ್ತರೀ’ ಎಂದು ಗೆಳೆಯ ರಾಜು ಎಚ್ಚರಿಕೆ ನೀಡಿದ.

ಅಲ್ಲಿಯವರೆಗೆ ನಮ್ಮೆಲ್ಲರ ಕಸರತ್ತು ನೋಡುತ್ತಾ ನಿಂತಿದ್ದ ಆನಂದ ಇದ್ಲಿ, ನಿಂಗಪ್ಪ ಪೂಜಾರಿ ಎಂಬ ಇಬ್ಬರು ಯುವಕರು ತೋಳೇರಿಸಿ, ‘ಇದು ನೋಡ್ರಿ ಸರ... ಬರೋಬ್ಬರಿ 40 ಕೆ.ಜಿ. ತೂಕ ಅದ’ ಎನ್ನುತ್ತಾ ಸಲೀಸಾಗಿ ಮೇಲೆತ್ತಿದರು. ಅವರ ತೋಳ್ಬಲದಲ್ಲಿ ಆ ಮಣಭಾರದ ಕಲ್ಲುಗಳು ಹೂವಿನಂತೆ ಹಗುರಾಗಿ ಮೇಲೆದ್ದವು. ಆಗ ನಟ ಶಿವರಾಜ್‌ ಕುಮಾರ್‌ ಅಭಿನಯದ ‘ಮನಮೆಚ್ಚಿದ ಹುಡುಗಿ’ ಸಿನಿಮಾ ನೆನಪಾಯ್ತು. ಶಿವರಾಜ್‌ ಕುಮಾರ್‌ ನಾಯಕಿಯನ್ನು ಪಡೆಯಲು ಮಣಭಾರದ ಕಲ್ಲನ್ನು ಎತ್ತುವ ಪರಿಯ ದೃಶ್ಯ ಕಣ್ಣ ಮುಂದೆ ಬಂತು.

‘ನಾನು ಹುಡ್ಗ ಇದ್ದಾಗ. 70 ಕೆ.ಜಿ. ಭಾರದ ಕಲ್ಲನ್ನು ಒಂದೇ ಕೈಯಲ್ಲಿ ಎತ್ತುತ್ತಿದ್ದೆ. ಇವರೇನ್‌ ಎತ್ತತಾರ ಬಿಡ್ರಿ...’ ಎಂದು 80ರ ವಯೋಮಾನದ ಯಮನಪ್ಪ ಪವಾರ ಅಲ್ಲೇ ಇದ್ದ ಕಲ್ಲನ್ನು ತೋರಿಸಿದರು. ಆ ಕಲ್ಲು ನೋಡಿ ಎದೆ ಧಸಕ್ಕಂತು.

‘ಮುಂದಿನ ಜನವರಿ 14ಕ್ಕೆ ನಮ್ಮೂರಾಗ ಐಯ್ಯೋಳ ಲಿಂಗೇಶ್ವರ ಜಾತ್ರೆ ಅದ. ಬ್ಯಾರೆ ಊರು, ವಾಡಿಯಿಂದ ಬರುವ ನೆಂಟರಿಷ್ಟರಲ್ಲಿ ಕಲ್ಲು ಎತ್ತಲು ಪೈಪೋಟಿ ಇರತೈತಿ. ಆಗ ನೋಡಾಕಬೇಕ್ರಿ. ಹೆಚ್ಚು ಭಾರದ ಕಲ್ಲು ಎತ್ತೋರಿಗೆ 5 ತೊಲಿ (50 ಗ್ರಾಂ) ಬೆಳ್ಳಿ ಖಡ್ಗ ಹಾಕ್ತಾರ್ರಿ...’ ಎಂದು ಮುಂಬರುವ ಹಬ್ಬದ ಸಂಭ್ರಮದಲ್ಲಿ ಆನಂದ ಇದ್ಲಿ, ನಿಂಗಪ್ಪ ಪೂಜಾರಿ ಮೈಮರೆತರು.
-ಮಲ್ಲೇಶ್ ನಾಯಕನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.