ADVERTISEMENT

ನಿಮ್ಮೂರ ಮೂಲ ಬಲ್ಲಿರಾ?

ಮಧು ಚಂದ್ರ ಎಚ್.ಬಿ.
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST

ಹೆಸರು ಬದಲಾವಣೆ ಮಾಡುವುದು ಅಂದರೆ ಸಾಮಾನ್ಯ ಕಾರ್ಯವೇ, ಅದರಲ್ಲೂ ಊರ ಹೆಸರು ಮರು ನಾಮಕರಣ ಮಾಡುವುದು ಅಂದರೆ ಅದೊಂದು ಮಹಾನ್ ಕಾರ್ಯವೇ ಸರಿ. ನಿಮಗೆಲ್ಲ ತಿಳಿದಿರುವಂತೆ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ರಾಜ್ಯದ 12 ನಗರಗಳ ಹೆಸರನ್ನು ಮೂಲ ಹೆಸರಿಗೆ ಬದಲಾವಣೆ ಮಾಡಲಾಯಿತು. ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಕಳೆದ ಅ.17ರಂದು ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸಿತ್ತು.

ಕೇಂದ್ರ ಸರ್ಕಾರದ ಸೂಚನೆ ಆಧರಿಸಿ ರಾಜ್ಯ ಸರ್ಕಾರವು ರಾಜ್ಯೋತ್ಸವದ ದಿನದಂದು ಹೊಸ ಹೆಸರುಗಳು ಜಾರಿಗೆ ಬರಲಿವೆ ಎಂದು ಅಧಿಸೂಚನೆ ಹೊರಡಿಸಿತು. ಹಾಗಾಗಿ ಇನ್ನು ಮುಂದೆ ಬೆಂಗಳೂರ್ ಇಂದ ಬೆಂಗಳೂರು, ಮಂಗಲೋರ್ ಇಂದ ಮಂಗಳೂರು, ಬೆಳ್ಳಾರಿ ಇಂದ ಬಳ್ಳಾರಿ, ಶಿಮೊಗ ಇಂದ ಶಿವಮೊಗ್ಗ, ಹಾಗೆ ಇನ್ನುಳಿದ ಎಂಟು ಊರುಗಳ ಹೆಸರು ಬದಲಾದವು. ಬದಲಾವಣೆ ಮಾಡಿದ ಈ ಹೆಸರುಗಳಲ್ಲಿ ಯಾವುದೇ ಹೊಸ ಹೆಸರುಗಳಿಲ್ಲ, ಇವೆಲ್ಲವೂ ಹಿಂದೆಯೇ ಇದ್ದ ಹೆಸರುಗಳು.

ಪ್ರತಿಯೊಂದು ಸ್ಥಳದ ಹೆಸರು ಅಲ್ಲಿನ  ಪ್ರಕೃತಿಯಿಂದಲೋ, ಅಲ್ಲಿ ನಡೆದ ಐತಿಹಾಸಿಕ ಹಾಗೂ ಚಾರಿತ್ರಿಕ ಘಟನೆಯಿಂದಲೋ  ಅಥವಾ ಅಲ್ಲಿ ನೆಲೆಸಿದ ಇತಿಹಾಸ/ಪುರಾಣ ವ್ಯಕ್ತಿಗಳಿಂದಲೋ   ಅಂಕಿತವಾಗಿದೆ. ಹಾಗಾಗಿ ನಮ್ಮ ದೇಶದಲ್ಲಿ ಇರುವ ಪ್ರತಿಯೊಂದು ಊರಿಗೂ ಒಂದೊಂದು ಇತಿಹಾಸವಿದೆ. ಕಾಲ ಕ್ರಮೇಣ ಪ್ರತಿ ಊರಿಗೂ ನಾಮಕರಣವಾಗಿ ಕಡೆಗೆ ವ್ಯುತ್ಪತ್ತಿಯಾಗಿ ಮತ್ತೊಂದು ಹೆಸರನ್ನು ಗಳಿಸಿಕೊಂಡಿವೆ. ನಮ್ಮ ಕರ್ನಾಟಕದ ಊರುಗಳ ಹೆಸರಿನ ಮೂಲ ಹೆಸರು ಹಾಗೂ ವ್ಯುತ್ಪತ್ತಿಯಾದ ಬಗ್ಗೆ ತಿಳಿಯೋಣ.

ಬೆಂಗಳೂರು: ಹೊಯ್ಸಳ ದೊರೆ ವೀರ ಬಲ್ಲಾಳ ಇಂದಿನ ಹೆಬ್ಬಾಳ ಪ್ರದೇಶಕ್ಕೆ ಬೇಟೆಗೆಂದು ಬಂದಾಗ ಕಾಡಿನಲ್ಲಿ ದಾರಿ ತಪ್ಪಿದ. ಹಿಂದಿರುಗುವ ದಾರಿ ಹುಡುಕುವ ಸಮಯದಲ್ಲಿ ಅವನಿಗೆ ತುಂಬಾ ಹಸಿವಾಯಿತು. ಅದೇ ಸಮಯಕ್ಕೆ ಅಲ್ಲಿದ್ದ ಅಜ್ಜಿಯ ಗುಡಿಸಲು ಕಂಡ. ವೀರ ಬಲ್ಲಾಳನ ಕಂಡ ಅಜ್ಜಿ ಮನೆಯಲ್ಲಿ ಇದ್ದ ಬೆಂದ ಕಾಳನ್ನು ಕೊಟ್ಟಳು. ಇದರಿಂದ ಆ ಸ್ಥಳಕ್ಕೆ ಬೆಂದಕಾಳೂರು ಎಂದು ಹೆಸರು ಬಂತು, ಕ್ರಮೇಣ ಬೆಂಗಳೂರು ಆಯಿತು ಎಂದು ಪ್ರತೀತಿ. ಇದರ ಜೊತೆಗೆ, ಬೆಂಗಳೂರಿನ ಬೇಗೂರಿನಲ್ಲಿ ದೊರೆತಿರುವ ಒಂಬತ್ತನೇ ಶತಮಾನದ  ಗಂಗರ ಕಾಲದಲ್ಲಿನ ವೀರಗಲ್ಲಿನಲ್ಲಿಯೇ ಬೆಂಗಳೂರು ಅಂತ ಹೆಸರಿನ ಪ್ರಸ್ತಾಪವಿದೆ. 

ಭದ್ರಾವತಿ: ಭದ್ರಾವತಿ ಮೂಲ ಹೆಸರು ಬೆಂಕಿ ಪುರ, ವಂಕಿ ಪುರ, ಭದ್ರ ನದಿ ಹರಿಯುವುದರಿಂದ ಕಡೆಗೆ ಭದ್ರಾವತಿಯಾಯಿತು.

ದಾಂಡೇಲಿ: ಇಲ್ಲಿ ದಟ್ಟ ದಂಡಕಾರಣ್ಯ ಇರುವುದರಿಂದ ದಾಂಡೇಲಿ ಪಟ್ಟಣವೆಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಅಲ್ಲದೇ ಇಲ್ಲಿರುವ ದಾಂಡೇಲಪ್ಪ ದೇವಸ್ಥಾನದಿಂದಾಗಿ ದಾಂಡೇಲಿ ಎಂಬ ಹೆಸರು ಬಂದಿದೆ ಎಂಬ ಇನ್ನೊಂದು ನಂಬಿಕೆ ಇದೆ.

ಮುಳಬಾಗಿಲು: ಮೂಲ ಹೆಸರು ಮೂಡಣ ಬಾಗಿಲು. ವಿಜಯನಗರದ ಅರಸರ ಕೋಟೆಯ ಬಾಗಿಲೊಂದು ಮೂಡಣ ದಿಕ್ಕಿನಲ್ಲಿ ಇಂದಿನ ಮುಳುಬಾಗಿಲು ಪ್ರದೇಶದಲ್ಲಿ ಇತ್ತು. ಇದೇ ಮುಂದೆ ಮೂಡಣ ಬಾಗಿಲು, ಮೂಡು ಬಾಗಿಲು, ಕೊನೆಗೆ ಮುಳಬಾಗಿಲು ಆಯಿತು. ಕರ್ನಾಟಕದ ಮೇಲೆ ಸೂರ್ಯನ ಕಿರಣವು ಮೊದಲು ಸ್ಪರ್ಶಿಸುವುದು ಇದೇ ಮುಳಬಾಗಿಲಿನಲ್ಲಿ.

ಕುಶಾಲನಗರ: ಇದರ ಹಿಂದಿನ ಹೆಸರು ಫ್ರೇಸರ್ ಪೇಟೆ,ಯುದ್ಧದ ಸಮಯದಲ್ಲಿ ಹೈದರಾಲಿ ಫ್ರೇಸರ್ ಪೇಟೆಯ ಮೂಲಕ ಸಾಗುವಾಗ ಅವನಿಗೆ ಅವನ ಕಡೆಯವರು ಒಂದು ಖುಷಿ ಸಮಾಚಾರ ತಿಳಿಸಿದರಂತೆ. ಅದಕ್ಕವನು ಆ ಸ್ಥಳವನ್ನು ಕುಶಾಲ ನಗರ ಎಂದು ಕರೆದ.

ಬೆಳಗಾವಿ: ಬೆಳಗಾವಿಯ ಮೂಲ ಹೆಸರು ವೇಣುಗ್ರಾಮ ಮತ್ತು ಹಲಸಿ. ಅತಿ ಹೆಚ್ಚು ಹಿತಕರವಾದ ವಾತಾವರಣವನ್ನು ಹೊಂದಿದ ಬೆಳಗಾವಿಯಲ್ಲಿ ಬೆಳಗಿನ ಜಾವ ಮಂಜು ಬೀಳುತ್ತಿರುತ್ತದೆ. ಅದರಿಂದ ಬೆಳ್ಳಗೆ+ಆವಿ= ಬೆಳ್ಳಗಾವಿ ಆಯಿತು.

ಶಿವಮೊಗ್ಗ: ಮೂಲ ಹೆಸರು ಶಿವನ ಮುಖ, ಮುಂದೆ ಸಿಹಿ-ಮೊಗೆಯಾಗಿ ಕಡೆಗೆ ಶಿವಮೊಗ್ಗವಾಯಿತು. ಕರ್ನಾಟಕದ ಇತಿಹಾಸದಲ್ಲಿ ಶಿವಮೊಗ್ಗಕ್ಕೆ ಉನ್ನತ  ಸ್ಥಾನಮಾನ ಕೊಡಲಾಗಿದೆ. ಮೌರ್ಯ ಸಾಮ್ರಾಜ್ಯವು ದಕ್ಷಿಣಕ್ಕೆ ಶಿವಮೊಗ್ಗದಲ್ಲಿ ಕೊನೆಗೊಳ್ಳುತ್ತಿತ್ತು. ಕರ್ನಾಟಕವನ್ನು ಆಳಿದ ಎಲ್ಲ ರಾಜಮನೆತನಗಳ ಆಡಳಿತಕ್ಕೆ ಶಿವಮೊಗ್ಗವು ಒಳಪಟ್ಟಿತ್ತು. ಕನ್ನಡದ ಮೊದಲ ರಾಜವಂಶ ಕದಂಬರ ಮೂಲ ಪುರುಷ ಮಯೂರನ ಜನ್ಮ ಸ್ಥಳ ಶಿವಮೊಗ್ಗದ ತಾಳಗುಪ್ಪ. 

ಮಂಗಳೂರು:ಮೂಲ ಹೆಸರು ಮಂಗಳಾಪುರ, ಮಂಗಳಾ ದೇವಿಯ ದೇವಸ್ಥಾನವಿದ್ದುದರಿಂದ ಮಂಗಳೂರು ಹೆಸರು ಬಂದಿತು. ತುಳುವಿನಲ್ಲಿ ಮಂಗಳೂರಿಗೆ ‘ಕುಡ್ಲ’, ಬ್ಯಾರಿಯಲ್ಲಿ ‘ಮೈಕಾಲ’ ಕೊಂಕಣಿಯಲ್ಲಿ ‘ಕೊಡಿಯಾಲ್’ ಮತ್ತು ಮಲಯಾಳದಲ್ಲಿ ‘ಮಂಗಳಾ ಪುರಂ’ಎಂದು ಕರೆಯುತ್ತಾರೆ.

ಬಳ್ಳಾರಿ: ಬಳ್ಳದಲ್ಲಿ ಶಿವ ಪ್ರತ್ಯಕ್ಷನಾದ ಸ್ಥಳ ಬಳ್ಳಾರಿ ಹಾಗೂ ಬಳನೆಂಬ ರಾಕ್ಷಸನನ್ನು ಇಂದ್ರ ಕೊಂದ ಸ್ಥಳವಾದ್ದರಿಂದ ಬಳಹರಿಯು ಬಳ್ಳಾರಿಯಾಗಿದೆಯೆಂದು ಪ್ರತೀತಿಯಿದೆ. 

ಶೃಂಗೇರಿ: ಮೂಲ ಹೆಸರು ಋಷ್ಯಶೃಂಗಗಿರಿ. ಶೃಂಗಗಿರಿ ಬೆಟ್ಟದ ಹೆಸರಿನಿಂದ ಶೃಂಗೇರಿ ಹೆಸರು ಪಡೆದುಕೊಂಡಿತು. ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದನ್ನು ಹೊಂದಿರುವ ಕ್ಷೇತ್ರ ಇದು.

ಚಿತ್ರದುರ್ಗ: ಹಿಡಿಂಬಪಟ್ಟಣ, ಚಂದ್ರವಳ್ಳಿ, ಸೂಳ್ಗಲ್ಲು, ಪೆರುಮಾಳೆಪುರ, ಬೆಮ್ಮತ್ತನಕಲ್ಲು, ಛತ್ರಕಲ್‌ದುರ್ಗ, ಚಿತ್ರಕಲ್‌ದುರ್ಗ, ಕಡೆಗೆ  ‘ಚಿತ್ತಲ್‌ಡ್ರುಗ್‌’ ಆಗಿದ್ದು ಇಂದು ‘ಚಿತ್ರದುರ್ಗ’ ಎಂಬ ಹೆಸರು ಪ್ರಚಲಿತದಲ್ಲಿದೆ.

ಕುಂದಾಪುರ: ಕುಂದವರ್ಮ ರಾಜನು ಆಳಿದ್ದರಿಂದ, ಕುಂದವನ್ನು(ಮಲ್ಲಿಗೆ ಹೂವು) ಹೆಚ್ಚಾಗಿ ಬೆಳೆಯುವುದರಿಂದ ಹಾಗೂ ಕುಂದವರ್ಮ ರಾಜನು ಕಟ್ಟಿಸಿದ ಕುಂದೇಶ್ವರ ದೇವಸ್ಥಾನದಿಂದ ಕುಂದಾಪುರ ಹೆಸರು ಬಂದಿದೆ.   

ಬೈಂದೂರು: ಮೂಲ ಹೆಸರು ಬಿಂದುನಾಡು, ಬಿಂದುಪುರ, ಬಿಂದೂರು. ಬಿಂದು ಮಹರ್ಷಿಗಳು ಈ ಪ್ರದೇಶದಲ್ಲಿ  ತಪಸ್ಸು ಮಾಡುತ್ತಿದ್ದರಿಂದ ಬೈಂದೂರು ಹೆಸರು ಬಂತು.

ಬೀದರ್: ಮೂಲ ಹೆಸರು ಮೊಹಮ್ಮದಾಬಾದ್. ಪರ್ಶಿಯಾ ದೇಶದಿಂದ ಬಂದ ಬಿದರಿ ಕುಸುರಿ ಕಲೆಯಿಂದ ಬೀದರ್ ತನ್ನ ಹೆಸರು ಪಡೆಯಿತು.

ಮೈಸೂರು: ಮೂಲ ಹೆಸರು ಮಹಿಷಪುರಿ, ಚಾಮುಂಡೇಶ್ವರಿ ದೇವತೆಯು ಮಹಿಶಾಸುರನ ಮರ್ಧನ ಮಾಡಿ, ಬೆಟ್ಟದಲ್ಲಿ ನೆಲೆಸುತ್ತಾಳೆ. ಮುಂದೆ ಅ ಸ್ಥಳಕ್ಕೆ ಮಹಿಷಪುರಿ, ಮಹಿಷೂರು, ಮಹಿಸೂರಾಗಿ ಕಡೆಗೆ ಮೈಸೂರು ಆಗಿದೆ.     

ಕೊಡಗು: ಕೊಡಗು ಜಿಲ್ಲೆಯ ತುಂಬಾ ಹಾವು ಹರಿದಾಡಿದಂತಿರುವ ರಸ್ತೆಗಳು, ಬೆಟ್ಟ ಗುಡ್ಡಗಳ ಮೇಲೆ ನಿಂತಿರುವ ಊರುಗಳು. ಕೊಡಗು, ಕುಡು ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬರ್ಥ, ಮುಂದೆ ಕೊಡಗು ಆಗಿ ಮಾರ್ಪಟ್ಟಿದೆ.

ಬಾಗಲಕೋಟೆ: ಮೂಲ ಹೆಸರು ಬಾಗಡಿಗೆ, ವಿಜಾಪುರದ ರಾಜನು ತನ್ನ ಮಗಳಿಗೆ ಕಂಕಣ ಕಾಣಿಕೆಯಾಗಿ ಬಾಗಡಿಗೆ ಪಟ್ಟಣವನ್ನು ಕೊಟ್ಟನು. ಮುಂದೆ ಅದು ಬಾಗಡಿಕೋಟೆಯಾಗಿ ನಂತರ ಬಾಗಲಕೋಟೆಯಾಯಿತು.

ಚಾಮರಾಜನಗರ: ಜಯಚಾಮರಾಜ ಒಡೆಯರ್ ಅವರ ನೆನಪಿಗಾಗಿ ಹೆಸರಿಟ್ಟ ಊರು.

ಕೊಳ್ಳೇಗಾಲ: ಕೌಹಳ ಮತ್ತು ಗಾಳವ ಇಬ್ಬರು ಋಷಿಗಳು ಕೊಳ್ಳೇಗಾಲವನ್ನು ಕಟ್ಟಿದರು. ಇದರಿಂದ ಕೊಳ್ಳೇಗಾಲವೆಂದು ಕರೆಯಲಾಯಿತು.

ಧರ್ಮಸ್ಥಳ: ಇದರ ಮೂಲ ಹೆಸರು ಕುಡುಮ. ಧರ್ಮದೇವತೆಗಳು ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪೆರ್ಗಡೆ ಅಮ್ಮು ಬಲ್ಲಾಳ್ತಿ ಅವರ ಕನಸಿನಲ್ಲಿ ಬಂದು ಅವರ ನಿವಾಸದಲ್ಲಿ ನೆಲೆಸಲು ಇಚ್ಛೆ ವ್ಯಕ್ತಪಡಿಸಿದರು. ಬಿರ್ಮಣ್ಣ ಪೆರ್ಗಡೆರವರು ಮನೆಯನ್ನು ದೇವರಿಗೆ ಬಿಟ್ಟುಕೊಟ್ಟರು. ದೇವರ ಆಜ್ಞೆಯಂತೆ ಬಿರ್ಮಣ್ಣರು ಗುಡಿ ಕಟ್ಟಿಸಿದರು. ಅರ್ಚಕರು ಈಶ್ವರ ಲಿಂಗವನ್ನು ಪ್ರತಿಷ್ಠಾಪಿಸಲು ಸೂಚಿಸಿದರು. ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಕುಡುಮಕ್ಕೆ (ಧರ್ಮಸ್ಥಳ)ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಇದೆ.

ಉಡುಪಿ: ಉಡುಪಿ ತುಳುವಿನ ಹೆಸರು ಒಡಿಪುವಿನಿಂದ ಬಂದಿದೆ. ಮಲ್ಪೆ ಕಡಲ ತೀರದಲ್ಲಿರುವ ಒಡಬಾಂಡೇಶ್ವರ ದೇವಸ್ಥಾನದಿಂದಾಗಿ ಬಂದಿದೆಯೆಂದು ನಂಬಲಾಗಿದೆ.  

ವಿಜಾಪುರ: ಮೂಲ ಹೆಸರು ವಿಜಯಪುರ, ಬಿಜ್ಜನ ಹಳ್ಳಿ ಮುಂದೆ ವಿಜಾಪುರ ಆಯಿತು. 

ಹಾಸನ: ಮೂಲ ಹೆಸರು ಸಿಂಹಾಸನಪುರ ಹಾಗೂ ಹಾಸನಾಂಬ ದೇವಾಲಯವಿದ್ದುದರಿಂದ ಮುಂದೆ ಹಾಸನವಾಯಿತು.

ಮಡಿಕೇರಿ: ಮೂಲ ಹೆಸರು ಮುದ್ದುರಾಜನ ಕೇರಿ, ಮುಂದೆ ಮಡಿಕೇರಿಯಾಯಿತು.

ದಾವಣಗೆರೆ: ಮೂಲ ಹೆಸರು ದವನಗಿರಿ. ಕ್ರಮೇಣ ದಾವಣಗೆರೆ ಆಯಿತು.

ಗದಗ: ಮೂಲ ಹೆಸರು ಕೃತುಕ, ಕೃತುಪುರ, ಕರಡುಗು ನಂತರ ಗಲದುಗು, ಗದುಗು ಮತ್ತು ಈಗ ಗದಗ ಎಂದಾಗಿದೆ.

ಗುಲ್ಬರ್ಗ: ಮೂಲ ಹೆಸರು ಕಲ್ಬುರ್ಗಿ.

ಕೋಲಾರ: ಮೂಲ ಹೆಸರು ಕುವಲಾಲಪುರ.  

ಕೊಪ್ಪಳ: ಮೂಲ ಹೆಸರು ಕೋಪಣ ನಗರ. ಇದರ ಬಗ್ಗೆ ಕವಿರಾಜ ಮಾರ್ಗದಲ್ಲಿ ಉಲ್ಲೇಖವಿದೆ.

ಮಂಡ್ಯ: ಮಾಂಡವ್ಯ ಋಷಿಯಿಂದ ಮಂಡ್ಯ ಹೆಸರು ಬಂದಿತು.

ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಪರಶುರಾಮರು ಕೊಡಲಿಯನ್ನು ತೊಳೆದ ಕಾರಣ ಈ ಸ್ಥಳಕ್ಕೆ ‘ತೀರ್ಥ’ಹಳ್ಳಿ ಎಂಬ ಹೆಸರು ಬಂತು ಎನ್ನುವ ಪ್ರತೀತಿ. 

ಬಾದಾಮಿ: ಮೂಲ ಹೆಸರು ವಾತಾಪಿ, ಮುಂದೆ ಬಾದಾಮಿ ಆಯಿತು.

ಹಳೇಬೀಡು: ಮೂಲ ಹೆಸರು ದ್ವಾರ ಸಮುದ್ರ, ರಾಷ್ಟ್ರಕೂಟರ ದೊರೆ ದೋರನು 1200 ಎಕರೆಗೂ ದೊಡ್ಡದಾದ ಕೆರೆ ಕಟ್ಟಿಸಿ, ಕೆರೆಗೆ ಯಗಚಿ ನೀರನ್ನು ನೀರುಣಿಸುತ್ತಿದ್ದನು. ಕೆರೆ ತುಂಬಿದಾಗ ಅದು ಸಮುದ್ರದಂತೆ ಗೋಚರಿಸುತ್ತಿತ್ತು. ಅದೇ ಮುಂದೆ ದೋರ ಸಮುದ್ರ, ದ್ವಾರ ಸಮುದ್ರ, ಹಳೇಬೀಡು ಆಯಿತು.  

ಬ್ರಹ್ಮಾವರ: ಈ ನಗರವನ್ನು ರಾಜರು ಬ್ರಾಹ್ಮಣರಿಗೆ ಉಡುಗೊರೆಯಾಗಿ ಕೊಟ್ಟಿದ್ದರಿಂದ ಬ್ರಹ್ಮಾವರವೆಂಬ ಹೆಸರು ಪಡೆಯಿತು.

ಮೂಡುಬಿದಿರೆ: ಮೂಲ ಹೆಸರು ವೇಣುಪುರ. ಹಿಂದೆ ಈ ನಗರದಲ್ಲಿ ಬಿದಿರು ಹೆಚ್ಚಾಗಿ ಪೂರ್ವ ದಿಕ್ಕಿಗೆ ಬೆಳೆಯುತ್ತಿತ್ತು. ಆದ್ದರಿಂದ ಮೂಡುಬಿದಿರೆ ಹೆಸರು ಬಂತು.

ಶಿಕಾರಿಪುರ: ಟಿಪ್ಪು ಶಿಕಾರಿಗೆ ಆಯ್ಕೆ ಮಾಡಿಕೊಂಡ ಪ್ರದೇಶವಿದು. ಹೀಗಾಗಿ ಶಿಕಾರಿಪುರವೆಂಬ ಹೆಸರು ಬಂತು.

ಶ್ರೀರಂಗಪಟ್ಟಣ: ಶ್ರೀ ರಂಗನಾಥ ಸ್ವಾಮಿಯ ದೇವಸ್ಥಾನವಿದ್ದುದರಿಂದ ಮುಂದೆ ಶ್ರೀರಂಗಪಟ್ಟಣ ಆಯಿತು.

ಬೇಲೂರು: ಮೂಲ ಹೆಸರು ವೇಲಾಪುರಿ ಮುಂದೆ ಬೇಲೂರು ಆಯಿತು.

ಹಂಪೆ: ಮೂಲ ಹೆಸರು ಪಂಪ. ವಿದ್ಯಾರಣ್ಯ ಗುರುಗಳು ಇಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಮುಂದೆ ‘ವಿಜಯನಗರ’ ಮತ್ತು ‘ವಿರುಪಾಕ್ಷಪುರ’  ಕಡೆಗೆ ಹಂಪೆಯಾಯಿತು.

ಹುಬ್ಬಳ್ಳಿ: ಮೂಲ ಹೆಸರು ಪುರ್ಬಲ್ಲಿ, ಪುರ್ಬಲ್ಲಿ ಅಂದರೆ ಹೂಬಿಡುವ ಬಳ್ಳಿ. ಮುಂದೆ ಹುಬ್ಬಳ್ಳಿ ಆಯಿತು. 

ಗೋಕರ್ಣ: ಭೂಮಿಗೆ ಮೊದಲು ಬಂದ ಸಂಜ್ಞೆ ಎಂದರೆ ‘ ಗೋ’ ಅದು ಕರ್ಣವಾಗಿದ್ದ ಸ್ಥಳವು ಗೋಕರ್ಣವೆಂದು ಪ್ರಖ್ಯಾತಿ ಪಡೆಯಿತು. ಗ್ರಹಗಳಿಗೆ ಅಧಿಪತಿಯಾದ ಅಂಗಾರಕನು ಶಿವನ ಸಂಯೋಗದಿಂದ ಹುಟ್ಟುತ್ತಾನೆ. ಭೂಮಿ ಹಾಗೂ ಅಂಗಾರಕರ ಕೂಡುವಿಕೆಯೇ ‘ಗೋಕರ್ಣ’ ಎಂದು ಪ್ರಖ್ಯಾತಿ ಪಡೆಯಿತು. 

ಮರುನಾಮಕರಣವನ್ನು ಕೆಲವರು ಸ್ವಾಗತಿಸಿದರೆ, ಮತ್ತೆ ಕೆಲವರು ವಿರೋಧಿಸಿದ್ದಾರೆ. ಅದರಲ್ಲೂ ಬೆಳಗಾವಿಗೆ ಮರಾಠಿಗರು ವಿರೋಧ ವ್ಯಕ್ತಪಡಿಸಿದರೆ, ಗುಲ್ಬರ್ಗ ಹೆಸರಿಗೆ ಧರ್ಮದ ಬಣ್ಣ ಬಳಿಯಲಾಗಿದೆ. ಮಂಗಳೂರಿಗರು ಕುಡ್ಲ ಅಂತ ಇಟ್ಟಿದ್ದರೆ ಚೆನ್ನ ಅಂತ ಹೇಳಿದರೆ, ವಿಜಾಪುರದವರು ವಿಜಯಪುರವೋ, ವಿಜಯಾಪುರವೋ ಅಂತ ಗೊಂದಲದಲ್ಲಿದ್ದಾರೆ. ಪರ ವಿರೋಧಗಳು ಏನೇ ಇದ್ದರೂ ರಾಜಕೀಯ ಪಕ್ಷಗಳು ರಾಜಕೀಯ ಅವಕಾಶಕ್ಕಾಗಿ ಬಳಸಿಕೊಳ್ಳದೆ ಸಾರ್ವಜನಿಕರ ಹಿತ ಕಾಪಾಡುವತ್ತ ಚಿತ್ತ ಹರಿಸಬೇಕಷ್ಟೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT