ADVERTISEMENT

ಬೆಟ್ಟದಾ ಮೇಲೊಂದು ಊರ ಮಾಡಿ...

ಜಯಸಿಂಹ ಆರ್.
Published 29 ಸೆಪ್ಟೆಂಬರ್ 2014, 19:30 IST
Last Updated 29 ಸೆಪ್ಟೆಂಬರ್ 2014, 19:30 IST

ಈ ಕಥೆ ಕೇಳಿದರೆ, ಬೆಟ್ಟದಾ ಮೇಲೊಂದು ಊರ ಮಾಡಿ ಬದುಕಿಗೆ ಅಂಜಿದಡೆಂತಯ್ಯ ಎನ್ನಬಹುದೇನೊ. ಅಂದ ಹಾಗೆ ಈ ಊರಿರುವುದು ಬೆಂಗಳೂರಿನಿಂದ 70 ಕಿ.ಮೀ ದೂರವಷ್ಟೆ. ಬೆಂಗಳೂರಿನಿಂದ ಪಶ್ಚಿಮಕ್ಕಿರುವ ಮಾಗಡಿ ಪಟ್ಟಣದಿಂದ 12 ಕಿ.ಮೀ ಕ್ರಮಿಸಿದರೆ ಈ ಊರು ಮುಟ್ಟಬಹುದು. ಅಂದ ಹಾಗೆ ಈ ಊರಿನ ಬಗ್ಗೆ ಮಾತಾಡಲು ಒಂದು ಕಾರಣವಿದೆ. ಇದು ಎಲ್ಲ ಊರುಗಳಂತಲ್ಲ.

ಬೆಟ್ಟದ ಮಡಿಲಲ್ಲಿ ತನ್ನ ಇರುವನ್ನು ಉಳಿಸಿಕೊಂಡಿರುವ ವಿಶೇಷ ತಾಣವಿದು. ಇದರ ಹೆಸರು ಹುತ್ರಿ ಬೆಟ್ಟ. ಹುತ್ರಿ ದುರ್ಗದ ಕೋಟೆಯೊಳಗೆ ಬೆಚ್ಚಗೆ ಕುಳಿತಿರುವ ಈ ಊರಿನ ಚರಿತ್ರೆ ಆರಂಭವಾಗುವುದು ಕ್ರಿ.ಶ.1600ರ ಸುಮಾರಿನಲ್ಲಿ.

ಮುಮ್ಮಡಿ ಕೆಂಪೇಗೌಡ ಅಥವಾ ಮಾಗಡಿ ಕೆಂಪೇಗೌಡ ಎಂಬ ಪಾಳೇಗಾರ ಕಟ್ಟಿಸಿದ್ದ ಹಲವು ಕೋಟೆಗಳಲ್ಲಿ ಈ ಹುತ್ರಿ ದುರ್ಗವೂ ಒಂದು. ಹತ್ತಾರು ಕಿ.ಮೀ ಸುತ್ತಳತೆಯ ವಿಶಾಲವಾದ ಬೆಟ್ಟದ ಮೇಲೆ ಕಟ್ಟಿರುವ ಕೋಟೆಯಿದು. ಆ ಕೋಟೆಯೊಳಗೂ ಒಂದು ಊರು, ಏಳು ಸುತ್ತಿನ ಕೋಟೆಗಳಿಂದ ಆವೃತ್ತವಾದ ಅರಸೊತ್ತಿಗೆಯ ಒಂದು ನಗರ ಹಾಗೂ ಊರನ್ನು ಬಳಸುವ ಕೋಟೆಯಿಂದ  ಹೊರಗಿರುವ ನಾಲ್ಕು ಸುತ್ತಿನ ಕೋಟೆಯ ಬಸವದುರ್ಗ. ಇವೆಲ್ಲವನ್ನೂ ಒಳಗೊಂಡ, ಬೆಟ್ಟದ ಮೇಲೆ ಅಭೇದ್ಯವಾದ ಹುತ್ರಿ ದುರ್ಗ ನಿರ್ಮಿಸಿದ್ದ ಮಾಗಡಿ ಕೆಂಪೇಗೌಡ. ಕೋಟೆ ಬಾಗಿಲುಗಳ ಹೊರತಾಗಿ ಒಳಹೊಕ್ಕಲು ಸಾಧ್ಯವೇ ಇಲ್ಲದಂತಹ ದುರ್ಗವಿದು.

'ನನ್ನ ಅಪ್ಪನ ಕಾಲದಲ್ಲಿ ನಮ್ಮೂರಿಗೆ ಬರಬೇಕಿದ್ದರೆ, ಕೋಟೆಗಿದ್ದ 2 ಬಾಗಿಲಿನ ಮೂಲಕವೇ ಬರಬೇಕಿತ್ತಂತೆ. ನಾನು ಸಣ್ಣವನಿದ್ದಾಗಲೂ ಸಂಜೆ ಹೊತ್ತು ಎರಡೂ ಬಾಗಿಲುಗಳನ್ನು ಮುಚ್ಚಿ ಭದ್ರ ಪಡಿಸಲಾಗುತ್ತಿತ್ತು. ಈಗ ಊರಿಗೆ ಟಾರು ರಸ್ತೆ ಬಂದಿದೆ. ಕೋಟೆ ಬಾಗಿಲು­ಗಳೂ ಇಲ್ಲ. ಯಾರು ಬೇಕಾದರೂ ನುಗ್ಗುತ್ತಾರೆ' ಎನ್ನುವ ಗಂಗಣ್ಣ ಬೆಟ್ಟದ ತಪ್ಪಲಿನಲ್ಲಿ ನಡೆಯುತ್ತಿರುವ ಗ್ರಾನೇಟ್ ಕ್ವಾರಿ ತೋರಿಸುತ್ತಾರೆ.

ಕಾಲಾನಂತರ ಹಲವರ ದಾಳಿಗೆ ತುತ್ತಾದ ಬೆಟ್ಟದ ತುದಿಯಲ್ಲಿದ್ದ ನಗರ ನಾಶವಾಗಿ ಶತಮಾನಗಳೇ ಕಳೆದಿವೆ. ನಿಧಿ ಆಸೆಗೆ ಕಳ್ಳರು ಈಗಲೂ ಅಳಿದುಳಿದ ಮದ್ದಿನ ಮನೆ, ದೇವಾಲಯ, ಮಂಟಪಗಳನ್ನು ಕೆಡವುತ್ತಲೇ ಇದ್ದಾರೆ. ಬಸವನದುರ್ಗ­ದಲ್ಲೂ ಕೋಟೆ ಗೋಡೆಗಳ ಹೊರತಾಗಿ ವಸತಿಯ ಕುರುಹೂ ಇಲ್ಲ. ಆದರೆ, ಅಂದಿನಿಂದ ಇಂದಿನವರೆಗೂ ಊರು ಮಾತ್ರ ಉಳಿದು ಬಂದಿದೆ. ಹಿಂದೆ ಅದಕ್ಕೆ ಯಾವ ಹೆಸರಿತ್ತೋ ತಿಳಿದಿಲ್ಲ. ಬ್ರಿಟಿಷರ ಕಾಲದಲ್ಲಿ ಬೆಟ್ಟದ ಮೇಲಿದ್ದ ಊರಿಗೆ ಹುತ್ರಿ ಬೆಟ್ಟ ಎಂದು ಹೆಸರಾಯಿತು. ಊರೆಂದ ಮೇಲೆ ಮನೆಗಳಿಲ್ಲದಿದ್ದರೆ ಹೇಗೆ? 45 ಮನೆಗಳಿರುವ ಇಲ್ಲಿನ ಜನಸಂಖ್ಯೆ 500ಕ್ಕೂ ಹೆಚ್ಚು. ಅದರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಊರಿಗೆ ವಾರದ ಅತಿಥಿಗಳು. ಈ ಊರಿನಲ್ಲಿ ಒಂದು ಸರ್ಕಾರಿ ಪ್ರಾಥಮಿಕ ಶಾಲೆಯಿದೆ. ಅದಕ್ಕೆ ಸುಸಜ್ಜಿತ ಕಟ್ಟಡ, ಸ್ವಚ್ಟ ಅಡುಗೆ ಕೋಣೆ, ಸುಂದರ ಪ್ರಾಂಗಣ ಎಲ್ಲವೂ ಇದೆ. ಆದರೆ ವಿದ್ಯಾರ್ಥಿಗಳಿಲ್ಲ. ವರ್ಷದ ಹಿಂದೆ ಮಕ್ಕಳಿಲ್ಲ ಎಂದು ಸರ್ಕಾರ ಮುಚ್ಚಿದ ಕನ್ನಡ ಶಾಲೆಗಳಲ್ಲಿ ಇದೂ ಒಂದು. ‘ಬೆಟ್ಟದ ಮೇಲಿನ ಮಂದಿಗೆ ಕಾನ್ವೆಂಟ್ ಚಿಂತೆ’ ಎನ್ನುತ್ತಾರೆ ರಿಟೈರ್ಡ್ ಸ್ಕೂಲ್ ಮೇಷ್ಟ್ರು ಅರುವಯ್ಯ.

ವರ್ಷದ ತುತ್ತಿಗೆ ಒದಗಿ, ತುಸು ಹೆಚ್ಚೇ ಮಿಗುವಷ್ಟು ವ್ಯವಸಾಯದ ಜಮೀನು ಇಲ್ಲಿರುವ ಪ್ರತಿ ಕುಟುಂಬಕ್ಕೂ ಇದೆ. ಬಯಲು ಸೀಮೆಯ ಎಂದಿನ ಆಹಾರವಾದ ರಾಗಿ ಪ್ರಮುಖ ಬೆಳೆ. ಜತೆಗೆ ಭತ್ತ, ಹರಳು, ಜೋಳ ಮೊದ­ಲಾದವನ್ನು ಈಗಲೂ ಬೆಳೆಯ­ಲಾಗು­ತ್ತದೆ. ಬೆಟ್ಟದಲ್ಲಿ ನೀರಿನ ಸೆಲೆ ಚೆನ್ನಾಗೇ ಇರುವುದರಿಂದ ಬರಕ್ಕೆ ಈ ಮಂದಿ ಹೆಚ್ಚೇನೂ ಹೆದರುವುದಿಲ್ಲ. ಹೈನುಗಾರಿಕೆ ಪ್ರತೀ ಮನೆಯ ಒಲೆಯಲ್ಲಿ ಹಾಲು ಉಕ್ಕಿಸುತ್ತಲೇ ಇದೆ. ಪಾಳೆಗಾರಿಕೆಯ ಕಾಲದಲ್ಲಿ ಬೆಟ್ಟದ ತುದಿಯಲ್ಲಿದ್ದ ಸಣ್ಣ ನಗರಕ್ಕೆ ಈ ಊರಿನಿಂದಲೇ, ಧಾನ್ಯ, ಹಾಲು, ಮಾಂಸ ಪೂರೈಕೆಯಾಗುತ್ತಿದ್ದಿ­ರಬ­ಹುದು ಎನ್ನುತ್ತಾರೆ ತಿಳಿದವರು. ಆದರೆ ಈಗ, ಹೆಚ್ಚಿನ ದಿನಸಿಗಾಗಿ, ಬೆಂಕಿ ಪೊಟ್ಟಣ, ಬೀಡಿ ಸಿಗರೇಟು­ಗಳಿಗೆ ಬೆಟ್ಟದ ಕೆಳಗಿನ ಸಂತೆ ಪೇಟೆಗೆ ಇಳಿಯಬೇಕು. ಇಲ್ಲವೇ ತಲಾ 13 ಕಿ.ಮೀ ದೂರದಲ್ಲಿರುವ ಮಾಗಡಿ ಮತ್ತು ಕುಣಿಗಲ್ ತಾಲ್ಲೂಕು ಪಟ್ಟಣಗಳೇ ಅವನ್ನು ಈ ಊರಿಗೆ ಸರಬರಾಜು ಮಾಡಬೇಕು.

ಸರ್ಕಾರಕ್ಕೂ ಈ ಮಂದಿಯ ಬಗ್ಗೆ ತುಸು ಅಸಡ್ಡೆ. ಬೆಟ್ಟದ ಮೇಲಿನ ಮಂದಿ ಓಡಾಡುವುದು ಕಮ್ಮಿ, ಲಾಭ­ವಿಲ್ಲ ಎಂದು ಊರಿಗೊಂದು ಬಸ್ಸು ಬಿಡುವ ಬಗ್ಗೆ ಯೋಚಿಸಿಯೇ ಇಲ್ಲ. ಪದವಿ ಮೆಟ್ಟಿಲೇರಿದ ಬೆಟ್ಟದ ಹೈಕಳು ಕಾಲೇಜಿಗಾಗಿ ಮಾಗಡಿ ಅಥವಾ ಕುಣಿಗಲ್‍ ಅನ್ನೇ ಎಡತಾಕಬೇಕು. ಬೆಟ್ಟದ ಮೇಲಿನ ಊರಿನ ಎಲ್ಲಾ ಮನೆಯಲ್ಲೂ ಸ್ವಂತ ವಾಹನವಿಲ್ಲ.‘ಎಮರ್ಜೆನ್ಸಿ’ಯಲ್ಲೆಲ್ಲಾ ಸಂತೆ ಪೇಟೆಯ ಆಪತ್ಬಾಂಧವರಿಗೆ ಕರೆ ಮಾಡಲೇಬೇಕು.

ಬೆಟ್ಟದ ಕೆಳಗೆ ಕೊರೆದಿರುವ ಕೊಳೆವೆ ಬಾವಿಯ ಪಂಪ್‍ ಬೆಟ್ಟದ ಮೇಲಿನ­ವರೆಗೂ ನೀರು ಪಂಪ್ ಮಾಡುತ್ತದೆ. ಆದರೆ ಊರ ಮಂದಿಗೆ ಕೆಂಪೇಗೌಡ ಕಟ್ಟಿಸಿದ ಬಾವಿಯ ಮೇಲೇ ಹೆಚ್ಚಿನ ಪ್ರೀತಿ. ಕುಡಿಯಲಿಕ್ಕೆ, ಅಡುಗೆಗೆ ಈ ಬಾವಿಯ ನೀರೇ ಆಗಬೇಕು. ಅದರದ್ದೋ, ಆಗಸದ ರಂಗನ್ನು ಯಥಾವತ್ ಪ್ರತಿಫಲಿಸುವಷ್ಟು ಶುಭ್ರ ನೀರು.

ಯಾರಿಗಿಲ್ಲದಿದ್ದರೇನಂತೆ, ಬೆಟ್ಟದೊ­ಳ­ಗಿನ ಕಾಡು ಪ್ರಾಣಿಗಳಿಗೆ ಊರಿನ ಮೇಲೆ ಬಲು ಪ್ರೀತಿ. ದಿನಕ್ಕೊಮ್ಮೆ ಊರಿಗೆ ಹಾಜರಿ ಹಾಕದಿದ್ದರೆ ಅವಕ್ಕೆ ಸಮಾ­ಧಾನವೇ ಇಲ್ಲ. ಚಿರತೆ, ಕಿರುಬಗಳಿಗೆ ಊರೊಳಗಿನ ಕುರಿ, ಮೇಕೆ ನಾಯಿಗಳ ಮೇಲೆ ಪ್ರೀತಿ. ಕರಡಿಗಳಿಗೋ ಊರ­ಲ್ಲೊಮ್ಮೆ ಪರೇಡ್ ನಡೆಸುವ ಆಸೆ.

ಊರವರಿಗೂ ಅವುಗಳಿಗೂ ಒಂದು ಒಪ್ಪಂದವಿದೆಯಂತೆ. ಇವರೂ ಅವುಗಳ ಮೇಲೆ ದಾಳಿ ಮಾಡುವಂತಿಲ್ಲ, ಅವು ಕೂಡ. ಈವರೆಗೂ ಒಪ್ಪಂದದ ಉಲ್ಲಂಘನೆಯಾಗಿಲ್ಲವಂತೆ. ನಾವು ಊರಲ್ಲಿ ಉಳಿದಿದ್ದ ರಾತ್ರಿಯೂ ಚಿರತೆಯೊಂದು ಊರ ಅಂಚಿನಲ್ಲಿದ್ದ ಮನೆಯ ಬಾಗಿಲಲ್ಲಿ ನಾಲ್ಕು ತಾಸಿಗೂ ಮೀರಿ ಕುಳಿತಿತ್ತು.

ಊರ ಮಂದಿಗೆ ಈ ಬಗ್ಗೆ ಬೇಸರ­ವೇನೂ ಇಲ್ಲ. ರಾತ್ರಿ ಹೊತ್ತು ಬೆಟ್ಟದ ಮೇಲೆ ನಿಂತು ಬೆಂಗಳೂರಿನ ದೀಪಗಳನ್ನು ನೋಡುತ್ತೇವೆ ಎಂದು ಮೀಸೆ ತಿರುವು­ತ್ತಾರೆ. ಆದರೂ ಈ ಮಂದಿ ಪ್ರತಿದಿನ 3 ಕಿ.ಮೀ ಬೆಟ್ಟ ಇಳಿದು ಹತ್ತುವುದನ್ನು ತಪ್ಪಿಸಲು ಸರ್ಕಾರ­ವೊಂದು ಮಿನಿ ಬಸ್ ಬಿಟ್ಟರಾಯಿತು. ಕೋಟೆ ನೋಡಲು ರಾಜಧಾನಿಯ ಮಂದಿಯೂ ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.