ADVERTISEMENT

ಮಂಡ್ಯಕ್ಕೆ 75ರ ಹರೆಯ

ಬಲ್ಲೇನಹಳ್ಳಿ ಮಂಜುನಾಥ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST

ಸಕ್ಕರೆ ಸೀಮೆ ಮಂಡ್ಯ ಜಿಲ್ಲೆಗೀಗ 75ರ ಸಂಭ್ರಮ. ಮೈಸೂರು ಜಿಲ್ಲೆಯ ಭಾಗವಾಗಿದ್ದ ಮಂಡ್ಯ ಜಿಲ್ಲೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ವಿಭಜನೆಗೊಳಿಸಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿ ಇದೀಗ ಏಳೂವರೆ ದಶಕ ಸಂದಿದೆ. 1939ರ ಆಗಸ್ಟ್ ತಿಂಗಳಿನಲ್ಲಿ ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಕೃಷ್ಣರಾಜ ಪೇಟೆ, ನಾಗಮಂಗಲ, ಮದ್ದೂರು ಮತ್ತು ಮಳವಳ್ಳಿ ಸೇರಿ ಏಳು ತಾಲ್ಲೂಕುಗಳನ್ನೊಳಗೊಂಡು ಮಂಡ್ಯ ಜಿಲ್ಲೆಯಾಗಿ ರೂಪುಗೊಂಡಿತು.

ಕಾವೇರಿ, ಹೇಮಾವತಿ, ಶಿಂಷಾ, ಲೋಕಪಾವನಿ, ವೀರವೈಷ್ಣವಿ ಸೇರಿ ಪಂಚ ನದಿಗಳ ಹರಿಯುವಿಕೆಯಿಂದ ಜಿಲ್ಲೆ ಶ್ರೀಮಂತವಾಗಿ, ವ್ಯವಸಾಯಕ್ಕೆ ಹೆಸರುವಾಸಿಯಾಗುವ ಮೂಲಕ ‘ಸಕ್ಕರೆ ಸೀಮೆ’, ‘ಭತ್ತದ ಕಣಜ’ ಎಂಬ ಅನ್ವರ್ಥನಾಮಗಳಿಂ ದಲೂ ಹೆಸರುವಾಸಿ. ಬರದ ಬೆಂಗಾಡೆಂದು ಹೆಸರಾಗಿದ್ದ ಮಂಡ್ಯ ಜಿಲ್ಲೆಯಲ್ಲಿ, ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಅಣೆಕಟ್ಟು ಕಟ್ಟಿಸುವ ಮೂಲಕ ಸಂಪದ್ಭರಿತ ಮಾಡಿ ಹಸಿರಿನ ಸಿರಿ ಹರಿಸಿದ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಅವರಿಗೆ ನೆರವಿತ್ತ ನಾಲ್ವಡಿ ಕೃಷ್ಣರಾಜ ಒಡೆಯರ್‌ ಈ ಭಾಗದ ಜನರ ಭಾಗ್ಯತಾರೆ.

ಇತಿಹಾಸ ಹೀಗಿದೆ...
ಜಿಲ್ಲೆಯ ಇತಿಹಾಸ ಕೃತಯುಗದಿಂದ ಆರಂಭವಾಗುತ್ತದೆ. ದಟ್ಟಾರಣ್ಯದಿಂದ ಕೂಡಿದ್ದ ಈ ಪ್ರದೇಶದಲ್ಲಿ ತಪಸ್ಸು ಮಾಡುತ್ತಿದ್ದ ಮಾಂಡವ್ಯ ಋಷಿಗಳು ಪ್ರಾಣಿಗಳಿಗೂ ಗೀತೋಪದೇಶ ನೀಡುತ್ತಿದ್ದುದರಿಂದ ಈ ಪ್ರದೇಶಕ್ಕೆ ವೇದಾರಣ್ಯ ಎಂದು ಹೆಸರು ಬಂತು. ಮಾಂಡವ್ಯ ಮುನಿಗಳಿಂದಾಗಿಯೇ ‘ಮಂಡೆಯ’ ಆಯಿತೆಂದೂ ಹೇಳಲಾಗಿದೆ. ಮಂಡ್ಯ ಪಟ್ಟಣದಲ್ಲಿರುವ ಪುರಾಣ ಪ್ರಸಿದ್ಧ ಜನಾರ್ದನಸ್ವಾಮಿ ದೇವಸ್ಥಾನವನ್ನೂ ಮಾಂಡವ್ಯ ಋಷಿಗಳೇ ಕಟ್ಟಿಸಿದರೆಂಬುದು ಇತಿಹಾಸ. ಆದ್ದರಿಂದ ಮಂಡ್ಯ ಎಂಬ ಹೆಸರು ಬಂದಿತೆಂದು ಹೇಳಲಾಗಿದೆ.

ಈ ಅಂಶಗಳಿಗೆ ಆಧಾರವಾಗಿ ಮಂಡ್ಯಕ್ಕೆ 8 ಕಿ.ಮೀ. ಸಮೀಪದ ಬೂದನೂರು ಗ್ರಾಮದ ಪದ್ಮನಾಭ ದೇವಸ್ಥಾನದ 1276ರ ಶಾಸನ ಆಧಾರ ನೀಡುತ್ತದೆ.  1940ರ ದಶಕದಲ್ಲಿ ಮಂಡ್ಯದಲ್ಲಿ ಸರ್ಕಾರಿ ಸ್ವಾಮ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ಸ್ಥಾಪನೆಗೊಂಡಿತು. ಬ್ರಿಟಿಷರ ಆಡಳಿತದಲ್ಲಿ ಕೃಷಿ ವಿಜ್ಞಾನಿಯಾಗಿ ಕರ್ನಾಟಕ ದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆನಡಾ ಮೂಲದ ಕೋಲ್ಮನ್‌ರವರ ಮುಂದಾಲೋಚನೆ ಫಲವಾಗಿ ಈ ಸಕ್ಕರೆ ಕಾರ್ಖಾನೆ ಅಸ್ತಿತ್ವಕ್ಕೆ ಬಂತು. ಅಲ್ಲಿಂದ ಇದು ‘ಸಕ್ಕರೆ ನಾಡು’ ಎಂದು ಖ್ಯಾತಿ ಪಡೆಯಿತು.

ಭೌಗೋಳಿಕ ಹಿನ್ನೆಲೆ ಮತ್ತು ಜನಸಂಖ್ಯೆ
ಜಿಲ್ಲೆಯ ಒಟ್ಟು ವಿಸ್ತೀರ್ಣ 4961 ಚದರ ಕಿ.ಮೀ. 2011ರ ಜನಗಣತಿ ಪ್ರಕಾರ ಇಲ್ಲಿಯ ಜನಸಂಖ್ಯೆ 18,08,680. 2161 ಪ್ರಾಥಮಿಕ, 423 ಪ್ರೌಢಶಾಲೆ, 123 ಪ.ಪೂ. ಕಾಲೇಜು, 29 ಪದವಿ ಕಾಲೇಜು, 170 ಗ್ರಂಥಾಲಯ, 2 ವೈದ್ಯಕೀಯ, 3 ಎಂಜಿನಿಯರಿಂಗ್ ಕಾಲೇಜುಗಳಿವೆ. 12 ರೈಲು ನಿಲ್ದಾಣಗಳು, 365 ಅಂಚೆ ಕಚೇರಿ, 103 ವಾಣಿಜ್ಯ, 25 ಗ್ರಾಮೀಣ ಬ್ಯಾಂಕ್‌ಗಳಿವೆ. 127 ಪ್ರಾಥಮಿಕ ಆರೋಗ್ಯ ಕೇಂದ್ರ, 3 ಸಮುದಾಯ ಕೇಂದ್ರಗಳಿವೆ.

ADVERTISEMENT

ಜಿಲ್ಲೆಯಲ್ಲಿ ಶಿಕ್ಷಣ
ಸ್ವಾತಂತ್ರ್ಯ ಪೂರ್ವದಲ್ಲಿ ಜಿಲ್ಲೆಯಾದ್ಯಂತ ಅತ್ಯಂತ ದುರ್ಬಲವಾಗಿದ್ದ ಶಿಕ್ಷಣ ಕ್ಷೇತ್ರ ನಂತರವೂ ಅಂತಹ ಪ್ರಗತಿಯನ್ನೇನೂ ಹೊಂದಿರಲಿಲ್ಲ. ಏಷ್ಯಾ ಖಂಡದಲ್ಲಿಯೇ ಮೊದಲ ಬಾರಿಗೆ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಕ್ರಾಂತಿಯನ್ನು ಮೊಳಗಿಸಿದ ಹಿರಿಯ ಧೀಮಂತ ರಾಜಕಾರಣಿ ಕೆ.ವಿ.ಶಂಕರೇಗೌಡರು, ಶಿಕ್ಷಣ ಕ್ಷೇತ್ರದಲ್ಲೂ ಅಂಥದ್ದೇ ಕ್ರಾಂತಿಯನ್ನು ಮೊಳಗಿಸಿದರು. ಅಂದು ಅವರು ಕಟ್ಟಿ ಬೆಳೆಸಿದ ಜನತಾ ಶಿಕ್ಷಣ ಸಂಸ್ಥೆ ಇಂದು ಪೀಪಲ್ ಎಜುಕೇಷನ್ ಟ್ರಸ್ಟ್ ಆಗಿ ರಾಜ್ಯದಲ್ಲೇ ಹೆಸರು ಮಾಡಿದೆ. ಆದ್ದರಿಂದಲೇ ಅವರನ್ನು ವಿದ್ಯಾಶಿಲ್ಪಿ ಎಂದೇ ಸ್ಮರಿಸಲಾಗುತ್ತದೆ. 

ಕಲೆ, ಸಾಹಿತ್ಯ ಸಂಸ್ಕೃತಿ
ಕಲೆ, ಸಾಹಿತ್ಯ, ರಂಗಭೂಮಿಯ ತವರು ನೆಲೆಯಾದ ಮಂಡ್ಯ ಜಿಲ್ಲೆ ಸಾಂಸ್ಕೃತಿಕ ನೆಲೆಬೀಡಾಗಿದೆ.  ಮೊದಲಿನಿಂದಲೂ ಜಿಲ್ಲೆಯ ಕಲೆ, ಸಂಸ್ಕೃತಿ, ಜನಪದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದೆ. ರಂಗಕಲೆಯಲ್ಲಂತೂ ರಾಜ್ಯದಲ್ಲೇ ಹೆಸರುವಾಸಿ. ಮಂಡ್ಯ ಜಲ್ಲೆಯಲ್ಲಿಯೇ ಕನ್ನಡದ ಮೊಟ್ಟ ಮೊದಲ ನಾಟಕ ರಚನೆಯಾದದ್ದು. ಆದ್ದರಿಂದ ಜಿಲ್ಲೆಯಾದ್ಯಂತ ಬಯಲು ನಾಟಕಗಳು ಪ್ರಸಿದ್ಧವಾಗಿದೆ.

ಕನ್ನಡ ಚಿತ್ರರಂಗಕ್ಕೂ ಜಿಲ್ಲೆಯ ಕೊಡುಗೆ ಅದ್ವಿತೀಯ. ಡಾ.ರಾಜ್‌ಕುಮಾರ್ ಚಿತ್ರ ರಂಗ ಪ್ರವೇಶಿಸಲು ಕಾರಣಿಪುರುಷರಾದ (ಬೇಡರ ಕಣ್ಣಪ್ಪ ನಿರ್ದೇಶಕ)  ಹೆಚ್.ಎಲ್.ಎನ್.ಸಿಂಹ, ಕನ್ನಡದ ಮೊದಲ ವರ್ಣಚಿತ್ರ ಅಮರಶಿಲ್ಪಿ ಜಕಣಾಚಾರಿ ನಿರ್ಮಿಸಿದ ಬಿ.ಎಸ್.ರಂಗ, ಕೆ.ವಿ.ಶಂಕರೇಗೌಡ, ಹೆಚ್.ವಿ.ಜಯರಾಂ. ಕೆ.ಎಸ್.ಸಚ್ಚಿದಾನಂದ, ಕೆ.ವಿ.ರಾಜು, ಜೋಸೈಮನ್, ವಿಷ್ಣುವರ್ಧನ್, ಅಂಬರೀಷ್, ಜಯಲಲಿತಾ, ನಾಗತಿಹಳ್ಳಿ ಚಂದ್ರಶೇಖರ್, ಪ್ರೇಮ್, ಮಂಡ್ಯ ರಮೇಶ್, ಜಿ.ಅರವಿಂದ್, ಸೇರಿದಂತೆ ನೂರಾರು ಸಿನಿಮಾ ಹಾಗೂ ಕಿರುತೆರೆ ಕಲಾವಿದರಿಗೆ ಜಿಲ್ಲೆ ತವರೂರಾಗಿದೆ.

ಮಂಡ್ಯ ರಾಜಕಾರಣ
ರಾಷ್ಟ್ರ  ಹಾಗೂ ರಾಜಕಾರಣದ ಹಲವು ಆಗು-ಹೋಗುಗಳಲ್ಲಿ ಮಂಡ್ಯ ರಾಜಕಾರಣ ಸ್ವಾತಂತ್ರ್ಯ ಪೂರ್ವದಿಂದಲೂ ಬಹುಮುಖ ಪಾತ್ರ ವಹಿಸುತ್ತಾ ಬಂದಿದೆ. ಇಲ್ಲಿಯವರೇ ಆದ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾರೆ. ಸಾಹುಕಾರ್ ಚನ್ನಯ್ಯ, ಎಸ್.ಸಿ.ಮಲ್ಲಯ್ಯ, ಹೆಚ್.ಕೆ. ವೀರಣ್ಣಗೌಡ, ಅಂಬರೀಷ್, ಆತ್ಮಾನಂದ, ಚೆಲುವರಾಯಸ್ವಾಮಿ, ಸಿ.ಎಸ್.ಪುಟ್ಟರಾಜು ಸೇರಿದಂತೆ ಅನೇಕರು ಮಂಡ್ಯ ರಾಜಕಾರಣದ ಪ್ರಭಾವಿ ಮುಖಂಡರಾಗಿ ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿದ್ದಾರೆ.

ಪ್ರೇಕ್ಷಣೀಯ ಸ್ಥಳಗಳು
ಬಸರಾಳಿನ ನಕ್ಷತ್ರಾಕಾರದ ಪ್ರಸಿದ್ಧ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ವಿಶ್ವೇಶ್ವರಯ್ಯ ನಾಲೆಗೆ ಹುಲಿಕೆರೆ ಬಳಿ ತೆರೆಯಲಾಗಿರುವ 2800 ಮೀಟರ್ ಉದ್ದ, 375 ಮೀ. ಅಗಲ, 4.5 ಮೀಟರ್ ಎತ್ತರದ ಕಮಾನು ಹೊಂದಿರುವ ಸುರಂಗ, ಶ್ರೀರಂಗಪಟ್ಟಣ ರಂಗನಾಥಸ್ವಾಮಿ ದೇವಾಲಯ, ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ, ದರಿಯಾದೌಲತ್, ರಂಗನತಿಟ್ಟು, ಬೃಂದಾವನ, ಕೊಕ್ಕರೆ ಬೆಳ್ಳೂರು ಪಕ್ಷಿಧಾಮ, ಗಗನಚುಕ್ಕಿ ಶಿವನಸಮುದ್ರ ಜಲವಿದ್ಯುತ್ ಕೇಂದ್ರ, ಹೇಮಗಿರಿ ಸೇರಿದಂತೆ ವಿಖ್ಯಾತಿ ಪಡೆದಿರುವ ಕೋಟೆ- ಕೊತ್ತಲ, ನಿಸರ್ಗ ತಾಣ, ದೇವಾಲಯಗಳನ್ನು ನೀಡಿರುವ ನಾಡು ಈ ಜಿಲ್ಲೆ.

ಆದರೂ ಕೊರಗು...
ಇಷ್ಟೆಲ್ಲಾ ವೈಭೋವೋಪೇತ ಮಂಡ್ಯ ಜಿಲ್ಲೆ ಇಂದು ಹತ್ತು ಹಲವು ಸಮಸ್ಯೆಗಳ ಬೀಡಾಗಿಯೂ ಇದೆ. ಸಕ್ಕರೆ ಕಾರ್ಖಾನೆಗಳು ರೋಗಗ್ರಸ್ತವಾಗುತ್ತಿದ್ದು, ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಜಿಲ್ಲೆಯ ಕಾರ್ಖಾನೆಗಳು ಬಹುತೇಕ ಮುಚ್ಚಿರುವುದರಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾವೇರಿ ನ್ಯಾಯಾಧೀಕರಣ ತೀರ್ಪಿನಿಂದ ಕಾವೇರಿ ನೀರನ್ನು ಹೆಚ್ಚು ಬಳಸಿಕೊಂಡು ಅಚ್ಚುಕಟ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.  ಮುಂಗಾರು ಕೈ ಕೊಡುವುದರಿಂದ ಕೃಷಿ ಕಾರ್ಯ ದುಬಾರಿಯಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಮಂಡ್ಯ ಜಿಲ್ಲೆ ತನ್ನ ಸೊಗಡು- ಸಂಸ್ಕೃತಿಯನ್ನು ಕಳೆದುಕೊಳ್ಳದಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.