ADVERTISEMENT

ವನ್ಯಮೃಗಗಳಿಗೆ ರಕ್ಷಾ ಕವಚ

ಎಂ.ಆರ್.ಮಂಜುನಾಥ
Published 29 ಜೂನ್ 2015, 19:30 IST
Last Updated 29 ಜೂನ್ 2015, 19:30 IST

ಮುಂಗಾರಿನ ಮೊದಲ ಸಿಂಚನದಿಂದ ಬಂಡೀಪುರ ಅರಣ್ಯ ಹಸಿರು ಹೊದಿಕೆಯಿಂದ ಮೈಮನಗಳನ್ನು ತಣಿಸುತ್ತಿವೆ. ಹುಲಿ, ಚಿರತೆ, ಕಾಡುನಾಯಿಯಂಥ ಮಾಂಸಾಹಾರಿ ಪ್ರಾಣಿಗಳ ಸಂತಾನ ವೃದ್ಧಿಯಾಗಿದೆ. ಇವುಗಳ ನೈಸರ್ಗಿಕ ಆಹಾರಗಳಾದ ಜಿಂಕೆ, ಕಡವೆ, ಕಾಡುಕುರಿ, ಕಾಡೆಮ್ಮೆ ಸಂಖ್ಯೆಯೂ ಹೆಚ್ಚಿದೆ. ಮನುಷ್ಯರಿಂದ ಈ ಪ್ರಾಣಿಗಳನ್ನು ರಕ್ಷಿಸುವ ಸಲುವಾಗಿ ಅರಣ್ಯ ಇಲಾಖೆ ಕೈಗೊಂಡಿರುವ ಸುರಕ್ಷತಾ ಕ್ರಮಗಳಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇವುಗಳ ಸಂಖ್ಯೆ ಹೆಚ್ಚಾಗಿದೆ.

ಇದರ ಹೊರತಾಗಿಯೂ ಕಿಡಿಕೇಡಿಗಳ ಕುಕೃತ್ಯಕ್ಕೆ ಕೊನೆ ಇಲ್ಲ. ವನ್ಯಮೃಗಗಳ ದಾಳಿಯಿಂದ ಬೆಳೆ ಹಾನಿಗೊಂಡೋ, ಅರಣ್ಯ ಸಂಪತ್ತನ್ನು ಲೂಟಿ ಮಾಡುವ ಉದ್ದೇಶದಿಂದಲೋ ಇಲ್ಲವೇ ಸುಖಾಸುಮ್ಮನೆ ಕಾಡಿಗೆ ಬೆಂಕಿ ಹಚ್ಚುವ ಪರಿಪಾಠ ಇನ್ನೂ ಮುಂದುವರಿದಿದೆ. ಇದೇ ಕಾರಣಕ್ಕೆ ಇಂಥವರನ್ನು ಹತ್ತಿಕ್ಕಲು ಈಗ ಅರಣ್ಯ ಇಲಾಖೆ ‘ದ್ರೋಣ’ನ ನೆರವು ಪಡೆಯುತ್ತಿದ್ದಾರೆ!

ಏನಿದು ದ್ರೋಣ್‌
ದ್ರೋಣ್ ಅರಣ್ಯ ಇಲಾಖೆಯ ಹೊಸ ಆವಿಷ್ಕಾರಿಕ ಯಂತ್ರ. 600 ಮೀಟರ್‌ ಎತ್ತರ ಹಾರಿ 2ರಿಂದ 3 ಗಂಟೆಗಳ ಕಾಲ ಉತ್ತಮ ಗುಣಮಟ್ಟದ ಚಿತ್ರ ಹಾಗೂ ವಿಡಿಯೊ ಕ್ಲಿಪ್ಪಿಂಗ್ ಸಂಗ್ರಹಿಸುತ್ತದೆ. ಈ ಮೂಲಕ ಕಿಡಿಗೇಡಿಗಳನ್ನು ಸುಲಭದಲ್ಲಿ ಗುರುತಿಸಲು ನೆರವಾಗುತ್ತದೆ. ‘ದ್ರೋಣ್‌ ದಿಂದಾಗಿ ಈ ಬಾರಿ ಬೆಂಕಿ  ಅನಾಹುತ ಕಾಡಿನಲ್ಲಿ ಸಂಭವಿಸಿಲ್ಲ. ಇದರಿಂದ ವನ್ಯಮೃಗಗಳು ನಿಶ್ಚಿಂತೆಯಾಗಿ ವಿಹರಿಸಿಕೊಂಡಿವೆ.  ನಮ್ಮ ಅರಣ್ಯದಲ್ಲಿ 13 ವಿಭಾಗಗಳನ್ನು ಮಾಡಲಾಗಿದೆ. ಒಂದೊಂದು ವಿಭಾಗಕ್ಕೂ ಈ ದ್ರೋಣ್ ಬಳಸಲಾಗುತ್ತದೆ. ಇದರ ಸಹಾಯದಿಂದ ಅನಾಹುತಗಳನ್ನು ತಡೆಗಟ್ಟುವುದು ಮಾತ್ರವಲ್ಲದೇ ಅರಣ್ಯದಲ್ಲಿ ಇರುವ ಪ್ರಾಣಿಸಂಕುಲಗಳನ್ನೂ ಗುರುತಿಸಬಹುದು’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಪ್ರಾಣಿ ರಕ್ಷಣೆಗೆ ವಿವಿಧ ಪ್ರಯೋಗ
‘ದ್ರೋಣ್‌’ ಮಾತ್ರವಲ್ಲದೇ ಪ್ರಾಣಿಗಳ ಸಂರಕ್ಷಣೆಗೆ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದೇ ಪ್ರಥಮ ಬಾರಿಗೆ ತುರ್ತು ಚಿಕಿತ್ಸಾ ವಾಹನ ಬಂಡೀಪುರ ಅರಣ್ಯದಲ್ಲಿ ಸಂಚರಿಸುತ್ತಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಒಡಿಶಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇರುವ ಈ ಚಿಕಿತ್ಸಾ ವಾಹನವನ್ನು ‘ವೈಲ್ಡ್ ಟ್ರಸ್ಟ್ ಆಫ್ ಇಂಡಿಯಾ’ ವತಿಯಿಂದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಪರಿಚಯಿಸಲಾಗಿದೆ.  ಇದರ ಜೊತೆಗೆ ಕಾಡುಪ್ರಾಣಿಗಳಿಗೆ ಸಣ್ಣ ಪುಟ್ಟ ಗಾಯಗಳಾದರೆ ತುರ್ತು ಚಿಕಿತ್ಸೆ ನೀಡುವುದರ ಸಲುವಾಗಿ ಮೊಬೈಲ್ ಆಂಬ್ಯುಲೆನ್ಸ್ ಕೂಡ ಪರಿಚಯಿಸಲಾಗಿದೆ. ಇದರಲ್ಲಿ ಒಬ್ಬರು ಪಶುವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಇರುತ್ತಾರೆ.

ಬಂಡೀಪುರದ ಅರಣ್ಯದಲ್ಲಿರುವ ಮೇಳಕ್ಕಮನಹಳ್ಳಿ ಗ್ರಾಮದಲ್ಲಿ ‘ವಿಶೇಷ ಹುಲಿ ಸಂರಕ್ಷಣಾ ದಳ’ ಪಡೆಗಳ ಹತ್ತಿರ ಈ ವಾಹನವು 24 ಗಂಟೆಗಳು ಸಿದ್ಧವಿರುತ್ತದೆ. ಈ ತುರ್ತು ಚಿಕಿತ್ಸಾ ವಾಹನವು ಬಂಡೀಪುರ ಅರಣ್ಯ ಮಾತ್ರವಲ್ಲದೆ ಸುತ್ತಮುತ್ತಲಿನ ಅರಣ್ಯಗಳಿಗೂ ಲಭ್ಯ. 08762111704 ಅಥವಾ 0822926043 ಸಂಖ್ಯೆಗೆ ಕರೆ ಮಾಡಿದರೆ ಸಾಕು, ಚಿಕಿತ್ಸಾ ವಾಹನ ಹಾಜರಾಗುತ್ತದೆ. ಪ್ರಾಣಿಗಳು ಕಾಡಂಚಿನಲ್ಲಿರುವ ರೈತರಿಗೆ ತೊಂದರೆ ಉಂಟು ಮಾಡಿದರೆ ಅವರು ಕರೆ ಮಾಡಿದರೆ ಸಾಕು, ತಕ್ಷಣವೇ ಈ ವಾಹನ ಹಾಜರಾಗಿ ತುರ್ತು ಚಿಕಿತ್ಸೆ ನೀಡುತ್ತದೆ. ಕಾಡಿನ ಒಟ್ಟು ವಿಸ್ತೀರ್ಣ 1,28,239 ಚದರ ಕಿಲೋಮೀಟರ್ ಇದ್ದು, ಇದರಲ್ಲಿ ಪ್ರವಾಸಿಗರಿಗೆ 82 ಚದರ ಕಿಲೋಮೀಟರ್ ಪ್ರದೇಶದಲ್ಲಿ ಮಾತ್ರ ಸುತ್ತಾಡಲು ಅವಕಾಶ ಕಲ್ಪಿಸಲಾಗಿದೆ.

‘ರಾಷ್ಟ್ರೀಯ ಉದ್ಯಾನದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಆನೆಗಳು ಯಾವುದೇ ಕಾರಣಕ್ಕೆ ಜನವಸತಿ ಪ್ರದೇಶಗಳಿಗೆ ನುಗ್ಗಿ ರೈತರ ಬೆಳೆ ಹಾಳು ಮಾಡುವುದನ್ನು ತಡೆಯಲು ಈಚೆಗೆ ರೈಲು ಕಂಬಿಗಳನ್ನು ಬಳಸಿ ಕೆಲವು ಜಾಗದಲ್ಲಿ ಮಾತ್ರ 10 ಅಡಿ ಎತ್ತರದ ಬೇಲಿಗಳನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಆನೆ ಕಂದಕ, ಸೋಲಾರ್ ಫೆನ್ಸ್ ಅಳವಡಿಸಲಾಗಿದೆ’ ಎನ್ನುತ್ತಾರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎ. ಮರಡಿಮನಿ.

ವನ್ಯ ಜೀವಿಗಳ ಉಳಿವಿಗೆ ಅರಣ್ಯ ಸಂರಕ್ಷಣೆ ಮಾಡದೇ ಅನ್ಯ ಮಾರ್ಗವಿಲ್ಲ.  ಜನಸಂಖ್ಯೆ ಹೆಚ್ಚುತ್ತಿರುವುದರಿಂದ  ಅರಣ್ಯ ಸಂಪತ್ತಿನ ಲೂಟಿಯೂ ಹೆಚ್ಚಿರುವ ಇಂದಿನ ದಿನಗಳಲ್ಲಿ ಕೆಲವಾದರೂ ಆಯ್ದ ಕಾಡುಗಳ ವ್ಯವಸ್ಥಿತ ರಕ್ಷಣೆಗೆ ಕ್ರಮ ಕೈಗೊಳ್ಳದಿದ್ದರೆ ಅಮೂಲ್ಯ ಅರಣ್ಯ ಸಂಪತ್ತು ಸಂಪೂರ್ಣ ನಾಶವಾಗುವಲ್ಲಿ ಸಂದೇಹವೇ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಳ್ಳುವ ಈ ಪರಿಯ ಮುಂಜಾಗ್ರತಾ ಕ್ರಮಗಳಿಂದ ಅರಣ್ಯ ಸಂಪತ್ತು ಉಳಿಯುತ್ತಿರುವುದು ಶ್ಲಾಘನಾರ್ಹ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.