ADVERTISEMENT

ವರುಣನ ಸ್ವಾಗತಿಸುವ ಗೊಗ್ಗವ್ವ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2017, 19:30 IST
Last Updated 28 ಆಗಸ್ಟ್ 2017, 19:30 IST
ವರುಣನ ಸ್ವಾಗತಿಸುವ ಗೊಗ್ಗವ್ವ
ವರುಣನ ಸ್ವಾಗತಿಸುವ ಗೊಗ್ಗವ್ವ   

ವರುಣನ ಕೃಪೆಗಾಗಿ ನಾಡಿನಲ್ಲಿ ಏನೆಲ್ಲ ಆಚರಣೆ, ಪದ್ಧತಿಗಳು ನಡೆಯುತ್ತವೆ. ಕಪ್ಪೆ, ಕತ್ತೆಗಳ ಮದುವೆ ಮಾಡಿ ಮಳೆಗಾಗಿ ದೇವರಿಗೆ ಮೊರೆ ಇಡುವ ಸಂಪ್ರದಾಯಗಳಿವೆ. ‘ಗೊಗ್ಗವ್ವ’ ಆಚರಣೆ ಕೂಡ ಅವುಗಳಲ್ಲಿ ಒಂದಾಗಿದೆ. ಉತ್ತರ ಕರ್ನಾಟಕದ ಗ್ರಾಮೀಣ ಪರಿಸರದಲ್ಲಿ ಗೋಚರಿಸುವ ಈ ಸಂಪ್ರದಾಯ ಬಹಳ ವಿಶಿಷ್ಟವಾಗಿದೆ.

ಗ್ರಾಮೀಣ ಭಾಗದಲ್ಲಿ ಮಂಗಳವಾರ ದಿನ ಈ ಆಚರಣೆ ಕಂಡುಬರುತ್ತದೆ. ಗೊಗ್ಗವ್ವ ಮಣ್ಣಿನಿಂದ ಸಿದ್ಧವಾಗುತ್ತಾಳೆ. ಮಣ್ಣನ್ನು ಮೊದಲು ಚೆನ್ನಾಗಿ ಕಲೆಸಿಕೊಂಡು ಹದ ಮಾಡಲಾಗುತ್ತದೆ. ಬಳಿಕ ಮಣ್ಣಿನ ಮೂರ್ತಿಗೆ ಕಣ್ಣು, ಮೂಗು, ಕಿವಿ, ಬಾಯಿ ಮಾಡಿ ಸುಂದರ ಮೂರ್ತಿ ತಯಾರಿಸುತ್ತಾರೆ. ಕಣ್ಣುಗಳಿಗೆ ಗುಲಗಂಜಿ, ಬಾಯಿಗೆ ಹಲ್ಲುಗಳಾಗಿ ಕುಸುಬೆ ಬೀಜ, ತಲೆಗೆ ಕೂದಲಾಗಿ ಹತ್ತಿ, ಕಿವಿಗೆ ಓಲೆಯಾಗಿ ಕಡಲೆ ಬೇಳೆ, ಮೂಗಿಗೆ ಮೂಗುತಿಯಾಗಿ (ನತ್ತು) ಮೆಣಸಿನಕಾಯಿ ಹೀಗೆ ಹಲವು ದವಸ ಧಾನ್ಯಗಳನ್ನು ಬಳಸಿ ಮಣ್ಣಿನ ಮೂರ್ತಿಗೆ ಅಜ್ಜಿಯ ಜೀವಕಳೆ ಕೊಡುವುದುಂಟು. ಆಗ ಥೇಟ್ ಅಜ್ಜಿಯ ಮುಖ ಹೋಲುವಂತೆ ಮೂರ್ತಿ ಸಿದ್ಧವಾಗುತ್ತದೆ. ಗೊಗ್ಗವ್ವ ಸಿದ್ಧಳಾಗುವ ಬಗೆಯನ್ನು ಓಣಿಯ ಮಕ್ಕಳೆಲ್ಲ ಬಲು ಕುತೂಹಲದಿಂದ ನಿಂತು ನೋಡುತ್ತಾರೆ.

ಮೂರ್ತಿ ಪೂರ್ಣವಾದ ಬಳಿಕ ಅದನ್ನು ಒಂದು ಬಡಿಗೆಗೆ ಸಿಕ್ಕಿಸಿ ಗಡಿಗೆಯಲ್ಲಿ ಇಡಲಾಗುತ್ತದೆ. ಅಂದರೆ ಗೊಗ್ಗವ್ವ ತನ್ನ ಪೀಠದಲ್ಲಿ ಪ್ರತಿಷ್ಠಾಪನೆ ಆದಂತೆ. ಬಳಿಕ ಅವಳಿಗೆ ಕುಂಕುಮ, ಅರಿಷಿಣ ಹಚ್ಚಿ ನೈವೇದ್ಯ ಮಾಡಿ ಪೂಜಿಸಲಾಗುತ್ತದೆ. ಮಳೆ ಕರೆಯೇ ನಮ್ಮವ್ವ ಎಂದು ಬೇಡಿಕೊಳ್ಳಲಾಗುತ್ತದೆ.

ADVERTISEMENT

ಗೊಗ್ಗವ್ವಳ ಮೂರ್ತಿಯನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ಮನೆಯ ಬಾಗಿಲು ಮುಂದೆ ಇಡಲಾಗುತ್ತದೆ. ಈ ಸಂದರ್ಭದಲ್ಲಿ ಗೊಗ್ಗವ್ವಳ ಬಾಯಿ ಬಿರುಕು ಬಿಟ್ಟರೆ ಅಂದು ಇಳೆಗೆ ಮಳೆರಾಯನ ಆಗಮನ ನಿಶ್ಚಿತ ಎಂಬ ನಂಬಿಕೆ ಇದೆ. ಮುಂಜಾನೆ ಸಿದ್ಧವಾಗುವ ಗೊಗ್ಗವ್ವ ಸಂಜೆಯ ಹೊತ್ತಿಗೆ ವಿಸರ್ಜನೆಗೊಳ್ಳುತ್ತಾಳೆ. ನಂತರ ವಿಸರ್ಜಿತ ಮಣ್ಣನ್ನು ಗಿಡಕ್ಕೋ, ಮಾಳಿಗೆಗೋ ಹಾಕುವುದುಂಟು. ಮಳೆಗಾಗಿ ನಡೆಯುವ ಇಂತಹದ್ದೇ ಮತ್ತೊಂದು ವಿಶಿಷ್ಟ ಆಚರಣೆ ಗುರ್ಜಿಯದು.

‘ನನ್ನ ಅಜ್ಜ ಅನೇಕ ವರ್ಷಗಳಿಂದ ಇದನ್ನು ಮಾಡುತ್ತಿದ್ದರು. ನಾನು ಈಗ ಸುಮಾರು 30 ವರ್ಷಗಳಿಂದ ಈ ಗೊಗ್ಗವ್ವಳನ್ನು ಮಾಡಿ ಪೂಜಿಸುತ್ತಿದ್ದೇವೆ. ಸಾಕಷ್ಟು ಬಾರಿ ಆಚರಣೆಯ ಉದ್ದೇಶ ಈಡೇರಿದೆ ಎನ್ನುತ್ತಾರೆ ಗುಳೇದಗುಡ್ಡದ ಸಂಗಪ್ಪ ಹುನಗುಂದ.

‘ಮಳೆಯಾಗದ ಸಂದರ್ಭದಲ್ಲಿ ನಮ್ಮ ಹಿರಿಯರ ಕಾಲದಿಂದಲೂ ಈ ಗೊಗ್ಗವ್ವಳ ಮೂರ್ತಿ ಪ್ರತಿಷ್ಠಾಪಿಸಿ ವರುಣನನ್ನು ಸ್ವಾಗತಿಸುವ ಪದ್ಧತಿ ಇದೆ. ಅದನ್ನು ನಾವು ಕೂಡ ಮುಂದುವರೆಸಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ ಈ ಪೂಜೆಯನ್ನು ಸಂಘಟಿಸುವ ಶ್ರೀಕಾಂತ. ‘ನಮ್ಮ ಪೂಜೆಯ ಬಳಿಕ ಮಳೆ ಸುರಿದಿದ್ದೂ ಇದೆ. ಗೊಗ್ಗವ್ವ ಖಂಡಿತಾ ಮಳೆ ತರುತ್ತಾಳೆ’ ಎಂದು ಅವರು ವಿಶ್ವಾಸದಿಂದ ಹೇಳುತ್ತಾರೆ.

⇒ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.