ADVERTISEMENT

ಸಾವಯವ ಹೈನೋದ್ಯಮ

ಹಳ್ಳಿ ಸುರೇಶ
Published 9 ಮಾರ್ಚ್ 2015, 19:30 IST
Last Updated 9 ಮಾರ್ಚ್ 2015, 19:30 IST

ರಾಸಾಯನಿಕ ಗೊಬ್ಬರ, ರಾಸಾಯನಿಕ ಕೀಟನಾಶಕ ಬಳಸಿ ಬೆಳೆದ ಕೃಷಿ ಉತ್ಪನ್ನಗಳಿಗೆ ಕಳಂಕ ಹೆಚ್ಚುತ್ತಿದ್ದಂತೆಯೇ ಪಾರಂಪರಿಕ, ನೈಸರ್ಗಿಕ, ಸಾವಯವ ಕೃಷಿ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಎಲ್ಲವೂ ಸಾವಯವ ಆಗುತ್ತಿರುವ ಇಂಥ ಹೊತ್ತಿನಲ್ಲಿ ಹಾಲು ಮಾತ್ರ ಸಾವಯವ ಯಾಕಾಗಬಾರದೆಂದು ಯೋಚಿಸಿದ್ದರ ಫಲವೇ ‘ಅಕ್ಷಯ ಕಲ್ಪ’.

ಹುಲ್ಲು ತಿಂದೇ ತಾನೇ ಹಸು ಹಾಲು ನೀಡುವುದು. ಹಾಗಿದ್ದ ಮೇಲೂ ಹಾಲಿಗೇಕೆ ಸಾವಯವದ ಪಟ್ಟ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ವಾಸ್ತವ ಇದಲ್ಲ. ಎಲ್ಲ ಹಸುಗಳೂ ಹುಲ್ಲನ್ನಷ್ಟೇ ತಿನ್ನುತ್ತಿಲ್ಲ. ಮಿಶ್ರ ತಳಿ ಹಸುಗಳ ಸಾಕಣೆಯಲ್ಲಿ ರೈತರು ಹುಲ್ಲಿಗಿಂತ ಬೂಸಾದಂತಹ ಕೃತಕ ಆಹಾರವನ್ನೇ ಅವಲಂಬಿಸಿದ್ದಾರೆ.

ಹೆಚ್ಚು ಹಾಲು ಕರೆಯುವ ಮಾನದಂಡದಿಂದ ಕ್ಯಾಲ್ಸಿಯಂ, ಖನಿಜಾಂಶಗಳನ್ನು ಟಾನಿಕ್ ರೂಪದಲ್ಲಿ ರಾಸುಗಳಿಗೆ ನೀಡಲಾಗುತ್ತಿದೆ. ಇಂಜೆಕ್ಷನ್‌ಗಳ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಮೇವು ಬೆಳೆಯಲು ಯಥೇಚ್ಛ ರಾಸಾಯನಿಕ ಗೊಬ್ಬರ ಬಳಸಲಾಗುತ್ತಿದೆ. ಇದನ್ನೇ ತಿನ್ನುವ ಹಸುವಿನ ಹಾಲು ರಾಸಾಯನಿಕವೇ ತಾನೆ? ಇದು ಅಕ್ಷಯ ಕಲ್ಪ ರೂವಾರಿ ಡಾ. ಜಿ.ಎನ್.ಎಸ್. ರೆಡ್ಡಿ ಅವರ ವಾದ.

ಕರ್ನಾಟಕದ ಹೈನುಗಾರಿಕೆಗೆ ಅಪೂರ್ವ ಕೊಡುಗೆ ನೀಡಿರುವ ‘ಬೈಫ್‌’ ಸಂಸ್ಥೆಯಲ್ಲಿ ಸುದೀರ್ಘ ಕಾಲ ದುಡಿದಿದ್ದ ಡಾ. ರೆಡ್ಡಿ ಅವರ ಪರಿಕಲ್ಪನೆಯ ಅಕ್ಷಯ ಕಲ್ಪ, ಹೈನು ಉದ್ಯಮಶೀಲತೆಗೆ ಸ್ಪಷ್ಟತೆ ನೀಡುವ ಹಾದಿಯಲ್ಲಿದೆ. ಸಾವಯವ, ಶುದ್ಧತೆ ಮತ್ತು ಶ್ರೇಷ್ಠತೆಯೇ ಅಕ್ಷಯ ಕಲ್ಪದ ಗುರಿ. ಗ್ರಾಹಕರ ದೃಷ್ಟಿಯಿಂದ ಮಾತ್ರ ಈ ಸಂಘ ಹುಟ್ಟಿದ್ದಲ್ಲ.

ರೈತ ಮತ್ತು ಹೈನುಗಾರಿಕೆ ಸ್ವಾಸ್ಥ್ಯ ಕಾಪಾಡುವುದಕ್ಕೆ ಆದ್ಯತೆ. ಕೃಷಿಕರನ್ನು ಉದ್ಯಮಶೀಲರನ್ನಾಗಿ ಮಾಡಿ ಗಳಿಕೆಯ ಸಾಮರ್ಥ್ಯ ಹೆಚ್ಚಿಸುವ ಜತೆಗೆ ಗ್ರಾಹಕರಿಗೂ ಶ್ರೇಷ್ಠ ಉತ್ಪನ್ನ ಮುಟ್ಟಿಸಬೇಕು ಎನ್ನುವುದು ರೆಡ್ಡಿ ಅವರ ಆಶಯ.

ಕಾರ್ಯ ನಿರ್ವಹಣೆ ಹೀಗಿದೆ
‘ಅಕ್ಷಯ’ದ ವತಿಯಿಂದ ಆಸಕ್ತ ರೈತರನ್ನು ಆರಿಸಿಕೊಳ್ಳಲಾಗುತ್ತದೆ. ಕನಿಷ್ಠ ಐದು ಎಕರೆ ಜಮೀನು ಉಳ್ಳ ರೈತರಿಗೆ ಬ್ಯಾಂಕ್‌ನಿಂದ ಸುಮಾರು 22 ಲಕ್ಷ ರೂಪಾಯಿ ಸಾಲ ಕೊಡಿಸಲಾಗುತ್ತದೆ. 25 ಮಿಶ್ರ ತಳಿ ಹಸುಗಳನ್ನು ಸಾಕಲು ಬೇಕಾದ ಸುಸಜ್ಜಿತ ಕೊಟ್ಟಿಗೆಯನ್ನು ಆಧುನಿಕ ರೀತಿಯಲ್ಲಿ ನಿರ್ಮಿಸಲಾಗುತ್ತದೆ. ಇಷ್ಟು ಹಸುಗಳನ್ನು ಕೇವಲ ಇಬ್ಬರು ನಿರ್ವಹಿಸುವಂತೆ ಆಧುನಿಕ ವ್ಯವಸ್ಥೆ ರೂಪಿಸಲಾಗಿದೆ.

ಮೇವಿಗಾಗಿ ಅದೇ ಭೂಮಿಯಲ್ಲಿ ಹಸಿರು ಹುಲ್ಲು ಬೆಳೆಯಲಾಗುತ್ತದೆ. ಮುಸುಕಿನ ಜೋಳ, ಸೆಣಬು, ಅಲಸಂದೆ ಸೇರಿದಂತೆ ವಿವಿಧ ರೀತಿಯ ಮೇವು ಬೆಳೆದು ಬಳಸಲಾಗುತ್ತದೆ. ಹಸುಗಳಿಗೆ ಪೌಷ್ಟಿಕಯುಕ್ತ ಅಜೊಲ್ಲಾವನ್ನೂ ಬೆಳೆಯಲಾಗುತ್ತದೆ. ಸಣ್ಣ ಕಸವೂ ಇಲ್ಲದಂತೆ ನಿರ್ವಹಿಸಬಹುದಾದ ಕೊಟ್ಟಿಗೆಯಲ್ಲಿ ಹಾಲಿಗೆ ಎಲ್ಲಿಯೂ ಕೊಳೆ, ಕಲ್ಮಶ ಸೇರಲು ಅವಕಾಶವೇ ಇಲ್ಲ.

ಹಾಲು ಕರೆಯಲು ಪ್ರತ್ಯೇಕ ವಿಭಾಗವೂ ಇದೆ. ಕೆಚ್ಚಲು ತೊಳೆದು ಹಾಲು ಕರೆಯುವ ಯಂತ್ರಗಳನ್ನು ಜೋಡಿಸಿದರೆ ನೇರವಾಗಿ ಅದು ಚಿಲ್ಲಿಂಗ್ ಸಿಲಿಂಡರ್‌ನಲ್ಲಿ ಸಂಗ್ರಹವಾಗುತ್ತದೆ. ಹಾಲು ಕರೆಯಲು ಅಥವಾ ಸಂಗ್ರಹಿಸಲು ಎಲ್ಲಿಯೂ ‘ಕೈ’ ತಾಗದೇ ಇರುವುದರಿಂದ ಶುದ್ಧತೆ ಕಾಯ್ದುಕೊಳ್ಳುವುದು ಸುಲಭ.

ಬಲೂನ್‌ ಮಾದರಿಯಲ್ಲಿ ವಿನ್ಯಾಸ‌
ಸೆಗಣಿ ಸಲೀಸಾಗಿ ಗೋಬರ್ ಗ್ಯಾಸ್ ಛೇಂಬರ್ ಸೇರುವಂತೆ ವಿನ್ಯಾಸಗೊಳಿಸಲಾಗಿದೆ. ಬಲೂನ್ ಮಾದರಿಯ ಗೋಬರ್ ಗ್ಯಾಸ್ ಪ್ಲಾಂಟ್‌ನಲ್ಲಿ ಉತ್ಪತ್ತಿಯಾದ ಗ್ಯಾಸ್ ಬಳಸಿ ಜನರೇಟರ್ ಓಡುವ ತಂತ್ರಜ್ಞಾನ ಬಳಸಲಾಗಿದೆ. ಶೇ 25 ರಷ್ಟು ಮಾತ್ರ ಡಿಸೇಲ್ ಬೇಕಾಗುತ್ತದೆ. ಇಲ್ಲಿ ಉತ್ಪತ್ತಿಯಾದ ವಿದ್ಯುತ್ ಕೊಟ್ಟಿಗೆಗೆ ಬೆಳಕು ಮತ್ತು ಹಾಲು ಕರೆಯುವ ಯಂತ್ರಕ್ಕಷ್ಟೇ ಅಲ್ಲದೆ ನೀರೆತ್ತುವ ಪಂಪ್‌ಸೆಟ್‌ಗೂ ಬಳಕೆಯಾಗುತ್ತದೆ.

ಮೇವಿನ ಬೆಳೆಗೆ ನೀರು ಬಳಸಲು ತ್ರೀಫೇಸ್ ಪಂಪ್‌ಸೆಟ್‌ಗಾಗಿ ಕೆಇಬಿ ವಿದ್ಯುತ್ ಪಡೆಯುವ ಅಗತ್ಯವಿಲ್ಲ. ಸಂಪೂರ್ಣ ಸ್ವಾಯತ್ತ ವ್ಯವಸ್ಥೆಯನ್ನು ಒಳಗೊಂಡಿದೆ. ಗೋಬರ್ ಗ್ಯಾಸ್ ಘಟಕದಿಂದ ಹೊರ ಬಂದ ಸೆಗಣಿ ಮೇವು ಬೆಳೆಗೆ ಗೊಬ್ಬರವಾಗುತ್ತದೆ.

ಆರೋಗ್ಯ ನಿರ್ವಹಣೆ ಹೀಗಿದೆ
ಹಸುಗಳ ಯೋಗಕ್ಷೇಮ ನೋಡಿಕೊಳ್ಳಲು ಅಕ್ಷಯ ಕಲ್ಪ ಕಂಪೆನಿಯೇ ಪಶು ವೈದ್ಯರನ್ನು ನೇಮಿಸಿದೆ. ನಿಯಮಿತ ಪರೀಕ್ಷೆ ಮೂಲಕ ಹಸುಗಳ ಆರೋಗ್ಯ ನೋಡಿಕೊಳ್ಳಲಾಗುತ್ತದೆ. ಮೇವು ಮತ್ತು ಕೊಟ್ಟಿಗೆ ಶುಭ್ರತೆ ಕಾಯ್ದುಕೊಂಡು ಹಸುಗಳಿಗೆ ರೋಗ ತಗುಲದಂತೆ ಮುಂಜಾಗ್ರತೆ ವಹಿಸಲಾಗುತ್ತದೆ. ಯಾವುದಾದರೂ ಹಸುವಿಗೆ ರೋಗ ಬಂದರೆ ಅದನ್ನು ಬೇರ್ಪಡಿಸಿ ಚಿಕಿತ್ಸೆ ನೀಡಲಾಗುತ್ತದೆ.

ಚಿಕಿತ್ಸೆ ನಂತರ ಹಾಲಿನಲ್ಲಿ ಔಷಧಿ ಅಂಶಗಳು ಇಲ್ಲದ್ದನ್ನು ಖಚಿತ ಪಡಿಸಿಕೊಂಡ ನಂತರವಷ್ಟೇ ಗ್ರಾಹಕ ಬಳಕೆಗೆ ಸಂಗ್ರಹಿಸಲಾಗುತ್ತದೆ. ಹಸುಗಳ ಮಾನಸಿಕ ಸ್ಥಿತಿಗತಿ ಮೇಲೂ ಹಾಲಿನ ಗುಣಮಟ್ಟ ನಿರ್ಧರಣೆ ಆಗುವುದರಿಂದ ಬಿಟ್ಟು ಮೇಯಿಸುವ ಸೌಕರ್ಯವನ್ನೂ ಮಾಡಿಕೊಳ್ಳಲಾಗಿದೆ. ಎಲ್ಲಾ ಹಂತದ ಎಚ್ಚರಿಕೆ ನಿರ್ವಹಣೆಯೊಂದಿಗೆ ರೈತರ ಘಟಕದಲ್ಲೇ ಚಿಲ್ಲಿಂಗ್ ಯಂತ್ರ ಸೇರುವ ಹಾಲನ್ನು ಕಂಪೆನಿಯವರು ಸಾಗಿಸುತ್ತಾರೆ.

ಲೀಟರ್ ಹಾಲಿಗೆ ಹಾಲು ಉತ್ಪಾದಕರ ಸಂಘ ಅಥವಾ ಖಾಸಗಿ ಕಂಪೆನಿಗಳು ಕೊಡುವ ದರಕ್ಕಿಂತ ಸುಮಾರು 5 ರಿಂದ 6 ರೂಪಾಯಿ ಹೆಚ್ಚು ದರವನ್ನು ರೈತರಿಗೆ ಕೊಡಲಾಗುತ್ತದೆ. ನಿರ್ವಹಣೆ ವೆಚ್ಚ ಕಡಿಮೆ ಇರುವುದರಿಂದ ರೈತರು ಆರ್ಥಿಕ ಸುಸ್ಥಿರತೆ ಕಾಯ್ದುಕೊಳ್ಳಲು ಈ ಮಾದರಿ ಹೆಚ್ಚು ಅನುಕೂಲ.

ಉತ್ತಮ ಮಾರುಕಟ್ಟೆ
ಮೊದಲ ಹಂತದಲ್ಲಿ ತಿಪಟೂರು ಸುತ್ತಮುತ್ತಲಿನ 25 ಕಿ.ಮೀ ವ್ಯಾಪ್ತಿಯ ಊರುಗಳ ರೈತರನ್ನು ಇದಕ್ಕಾಗಿ ಆಯ್ದುಕೊಳ್ಳಲಾಗಿದೆ. ಕ್ರಮೇಣ ರಾಜ್ಯಕ್ಕೆ ವಿಸ್ತರಿಸುವ ಉದ್ದೇಶ ಕಂಪೆನಿಗಿದೆ. ಸದ್ಯ ರೈತರ 40 ಘಟಕಗಳು ಹಾಲು ಉತ್ಪಾದನೆ ಆರಂಭಿಸಿವೆ. 100 ಘಟಕಗಳು ವಿವಿಧ ಹಂತದಲ್ಲಿವೆ. ಮೊದಲ ಹಂತದಲ್ಲಿ ಈ ಹಾಲಿನ ಮಾರಾಟಕ್ಕೆ ಬೆಂಗಳೂರನ್ನು ಕೇಂದ್ರೀಕರಿಸಲಾಗಿದೆ.

ಈಗ ನಿತ್ಯ 6000 ಲೀಟರ್ ಹಾಲು ಬೆಂಗಳೂರಿನಲ್ಲಿ ಮಾರಾಟವಾಗುತ್ತಿದೆ. ನಿರಂತರ ಬೇಡಿಕೆ ಹೆಚ್ಚುತ್ತಿದೆ. ಉಪ ಉತ್ಪನ್ನಗಳಿಗೂ ಬೇಡಿಕೆ ಬರುತ್ತಿದೆ. ಮೈಸೂರಿನಲ್ಲೂ ಪ್ರಾಯೋಗಿಕವಾಗಿ ಮಾರಾಟ ಆರಂಭಿಸಲಾಗಿದೆ. ಈ ಮಾದರಿಯ ಪರಿಕಲ್ಪನೆ ಐದಾರು ವರ್ಷಗಳಿಂದ ಪ್ರಯೋಗಕ್ಕೆ ಒಳಪಟ್ಟಿದೆ. ಈಗ ವಿಶ್ವಾಸದಿಂದ ಅನುಷ್ಠಾನ ಮಾಡಲಾಗುತ್ತಿದೆ’ ಎಂದು ರೆಡ್ಡಿ ವಿವರಿಸುತ್ತಾರೆ.

ಎಲ್ಲರಲ್ಲೂ ಸಂತಸ
‘ಯೋಜನೆಯಲ್ಲಿ ಕೈ ಜೋಡಿಸಿರುವ ರೈತರು ತಿಂಗಳಿಗೆ 30 ಸಾವಿರ ರೂಪಾಯಿಯಿಂದ ಒಂದು ಲಕ್ಷದವರೆಗೂ ಸಂಪಾದಿಸುತ್ತಿದ್ದಾರೆ. ಭಾಗೀದಾರರೆಲ್ಲರಿಗೂ ಲಾಭವಿದೆ. ಕೃಷಿಕರಿಗೆ ತಂತ್ರಜ್ಞಾನದ ಲಾಭ ದೊರಕಿಸಬೇಕೆಂಬ ಉದ್ದೇಶದಿಂದ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ಕೆಲಸ ಬಿಟ್ಟು ಬಂದು ಇಲ್ಲಿ ಸೇರಿದ್ದೇನೆ’ ಎನ್ನುತ್ತಾರೆ ಶಶಿಕುಮಾರ್‌.

‘ನಾಲ್ಕು ವರ್ಷದ ಹಿಂದೆಯೇ ಅಕ್ಷಯ ಕಲ್ಪ ಯೋಜನೆಯಲ್ಲಿ ಪಾಲ್ಗೊಂಡು ಡೈರಿ ಫಾರಂ ಮಾಡಿದ್ದೇನೆ. ಎಲ್ಲಾ ಸುಸೂತ್ರವಾಗಿ ಸಾಗಿದೆ. ಸದ್ಯ 20 ಹಸುಗಳಿವೆ. ಕೂಲಿ ಕಾರ್ಮಿಕರನ್ನು ಅವಲಂಬಿಸದೆ ಮನೆಯ ಇಬ್ಬರೇ ಎಲ್ಲವನ್ನೂ ನಿರ್ವಹಿಸುತ್ತೇವೆ. ಸಾಲದ ಕಂತನ್ನೂ ಸುಲಭವಾಗಿ ಕಟ್ಟುತ್ತಿದ್ದೇನೆ. ಎಲ್ಲಾ ಖರ್ಚು ಕಳೆದು ತಿಂಗಳಿಗೆ 30 ರಿಂದ 35 ಸಾವಿರ ರೂಪಾಯಿ ಉಳಿಯುತ್ತದೆ’ ಎನ್ನುತ್ತಾರೆ ಮೊಬ್ಬಲಾಪುರದ ವಸಂತಕುಮಾರ್‌.

ಪ್ಯಾಕಿಂಗ್ ಹೀಗಿದೆ
ರೈತರ ಘಟಕಗಳಿಂದ ಸಾಗಿಸಿದ ಹಾಲನ್ನು ದರಸೀಘಟ್ಟ ಬಳಿ ಕಂಪೆನಿ ನಿರ್ಮಿಸಿರುವ ಪ್ಲಾಂಟ್‌ನಲ್ಲಿ ಪ್ಯಾಂಕಿಗ್ ಮಾಡಿ ಗ್ರಾಹಕರಿಗೆ ಪೂರೈಸಲಾಗುತ್ತದೆ. ಹಾಲನ್ನು ಅನಗತ್ಯ ರಾಸಾಯನಿಕ ಸಂರಕ್ಷಣೆಗೆ ಒಳಪಡಿಸದೆ ಕರೆದ ಹಾಲನ್ನು ಕರೆದಂತೆಯೇ ಕೊಡುವ ಪದ್ಧತಿಯಲ್ಲಿ ತಾಜಾ ಹಾಲನ್ನು ಪ್ಯಾಕಿಂಗ್ ಮಾಡಿ ಗ್ರಾಹಕರಿಗೆ ವಿತರಿಸಲಾಗುತ್ತದೆ.

ಕೊಬ್ಬಿನಂಶ ಕಡಿಮೆ ಇರಲಿ ಎನ್ನುವವರಿಗಾಗಿ ಮಾತ್ರ ಪ್ರಮಾಣೀಕರಿಸಿ ಪ್ರತ್ಯೇಕ ಪ್ಯಾಕಿಂಗ್ ಮಾಡಲಾಗುತ್ತದೆ. ಬೇಡಿಕೆಗೆ ತಕ್ಕಂತೆ ಮೊಸರು, ಬೆಣ್ಣೆ, ತುಪ್ಪ, ಪನೀರ್, ಕೋವಾ ಕೂಡ ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತದೆ. ಹಾಲಿನ ಅಂಶ ಮತ್ತು ಗುಣ ಕೆಡದಂತೆ ‘ಚಿಲ್ಲಿಂಗ್’ ಮೂಲಕ ಎಲ್ಲಾ ಪ್ರಕ್ರಿಯೆ ನಡೆಯುವುದು.

ಬ್ಯಾಂಕ್‌ಗಳು ಮುಂದೆ ಬಂದರೆ...
ಉತ್ಪನ್ನಗಳನ್ನು ರೈತರೇ ಮೌಲ್ಯವರ್ಧನೆ ಮಾಡಿ ಸೂಕ್ತ ಮಾರಾಟ ವ್ಯವಸ್ಥೆ ಕಂಡುಕೊಂಡರೆ ನಷ್ಟ ತಪ್ಪುತ್ತದೆ. ಈ ನಿಟ್ಟಿನಲ್ಲಿ ರೈತರನ್ನು ಬಲಗೊಳಿಸುವ ಬದಲು ಜೀವನ ನಿರ್ವಹಣೆಗಾಗಿ ಸಾಲಕ್ಕೆ ಕೈಚಾಚುವಂತೆ ಮಾಡಲಾಗಿದೆ. ಕೃಷಿ ಉದ್ದಿಮೆಗೆ ಬೇಕಾದ ಬಂಡವಾಳ ನೀಡಿ, ತಂತ್ರಜ್ಞಾನ ತಿಳಿಸಿದರೆ ರೈತರು ಪ್ರಗತಿ ಸಾಧಿಸಬಲ್ಲರು. ಈ ಚಿಂತನೆ ಕ್ರಮದಲ್ಲಿ ‘ಅಕ್ಷಯ ಕಲ್ಪ’ ಮುಂದಡಿ ಇಟ್ಟಿದೆ. ಕೃಷಿಕರಲ್ಲಿ ಉದ್ಯಮಶೀಲತೆ ರೂಪಿಸುವುದೇ ಮುಖ್ಯ ಉದ್ದೇಶವಾಗಿದೆ.

ಆದರೆ ಬ್ಯಾಂಕ್‌ಗಳು ರೈತರಿಗೆ ಬಂಡವಾಳ ನೀಡಲು ಹಿಂಜರಿಯುತ್ತಿವೆ. ಇದೊಂದು ತೊಡಕು ನಿವಾರಣೆಯಾದರೆ ಇಡೀ ಯೋಜನೆ ಫಲಪ್ರದವಾಗುತ್ತದೆ. ಕೇವಲ ಐದು ಎಕರೆ ಜಮೀನು ಹೊಂದಿದ ರೈತರಿಗಷ್ಟೇ ಇದು ಸೀಮಿತವಲ್ಲ. ತಲಾ ಒಂದೊಂದು ಎಕರೆ ಭೂಮಿ ಹೊಂದಿರುವ ರೈತರು ಒಗ್ಗೂಡಿ ಹಂಚಿಕೆ ಮೂಲಕ ಹಾಲು ಉತ್ಪಾದನೆ ಘಟಕಗಳನ್ನು ನಿರ್ವಹಿಸಬಹುದು. ರೇಷ್ಮೆ ಸೊಪ್ಪು ಬೆಳೆದು ಹುಳು ಸಾಕುವವರಿಗೆ ಮಾರುವಂತೆ ಸಣ್ಣ ರೈತರು ಕೂಡ ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದು.
-ಡಾ. ಜಿ.ಎನ್. ಎಸ್. ರೆಡ್ಡಿ

***
ಡಾ. ರೆಡ್ಡಿ ಅವರ ಸಂಪರ್ಕಕ್ಕೆ: 9535388122.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.