ADVERTISEMENT

ಸುವರ್ಣ ವಿದ್ಯುದಾಗಾರ

ಚಂದ್ರಹಾಸ ಹಿರೇಮಳಲಿ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST
ಚಿತ್ರಗಳು: ವಿ.ಸಂತೋಷ್‌ಕುಮಾರ್‌
ಚಿತ್ರಗಳು: ವಿ.ಸಂತೋಷ್‌ಕುಮಾರ್‌   

ವಾಟ್‌ ಎ ವೇಸ್ಟ್... ಇದು ವಿಶ್ವ ಪ್ರಸಿದ್ಧ ಜೋಗ ಜಲಪಾತ ವೀಕ್ಷಿಸಿದ್ದ ವಿಶ್ವ ಖ್ಯಾತಿಯ ಎಂಜಿನಿಯರ್ ವಿಶ್ವೇಶ್ವರಯ್ಯ
ಉದ್ಗರಿಸಿದ ಮಾತು. ಅದು 1916ನೇ ಇಸವಿ. ಅಂದು ವಿಶ್ವೇಶ್ವರಯ್ಯನವರ ಈ ಮಾತುಮುಂದೆ ನಾಡಿಗೆ ಬೆಳಕು ನೀಡಲು ಪ್ರೇರಣೆಯಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಪ್ರಾಂತ್ಯವನ್ನು ಆಳಿದ ಮೈಸೂರು ಮಹಾರಾಜರು ಅಭಿವೃದ್ಧಿ ವಿಚಾರದಲ್ಲಿ ದೇಶದ ಇತರೆ ಪ್ರಾಂತ್ಯಗಳಿಗಿಂತ ಹೇಗೆ ಭಿನ್ನವಾಗಿ ನಿಲ್ಲುತ್ತಾರೆ ಎನ್ನುವುದಕ್ಕೆ ಜೋಗದ ಬಳಿ ಆರಂಭವಾದ ವಿದ್ಯುತ್‌ ಉತ್ಪಾದನಾ ಕೇಂದ್ರಗಳೇ ಸಾಕ್ಷಿ.

ಹೆಚ್ಚಿದ ವಿದ್ಯುತ್‌ ಬೇಡಿಕೆ: ಶರಾವತಿ ಸ್ಥಾಪನೆ 
ಅಂದು ನಾಲ್ವಡಿ ಕೃಷ್ಣರಾಜ ಒಡೆಯರ್‌, ಜಯಚಾಮರಾಜ ಒಡೆಯರ್ ಅವರ ಸಹಕಾರದಿಂದ ಶರಾವತಿ ನದಿ ನೀರು ಬಳಸಿಕೊಂಡು ಮಹಾತ್ಮಗಾಂಧಿ ವಿದ್ಯುದಾಗಾರ ನಿರ್ಮಿಸಲಾಯಿತು. 1947ರಿಂದ ಕಾರ್ಯ ಆರಂಭ ಮಾಡಿದ ಈ ವಿದ್ಯುದಾಗಾರ 139.8 ಮೆಗಾವ್ಯಾಟ್‌ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ನಂತರ ಹೆಚ್ಚಾದ ವಿದ್ಯುತ್‌ ಬೇಡಿಕೆ ಪೂರೈಸಲು ಶರಾವತಿ ವಿದ್ಯುದಾಗಾರ ಸ್ಥಾಪಿಸಲಾಯಿತು. 10 ಘಟಕಗಳ ಮೂಲಕ 1035 ಮೆಗಾವ್ಯಾಟ್‌ ಉತ್ಪಾದಿಸುವ ಸಾಮರ್ಥ್ಯದ ಈ ವಿದ್ಯುದಾಗಾರ ಕಾರ್ಯಾರಂಭ ಮಾಡಿದ್ದು ನವೆಂಬರ್ 1964ರಲ್ಲಿ. ರಾಜ್ಯದ ಬೆಳಕಿನ ಕಾಮಧೇನು ಎಂದೇ ಪ್ರಸಿದ್ಧವಾಗಿರುವ ವಿದ್ಯುದಾಗಾರಕ್ಕೆ ಈಗ ಸುವರ್ಣ ಸಂಭ್ರಮ.

ಶೇ 22.34 ವಿದ್ಯುತ್ ಪೂರೈಕೆ
1979 ರಿಂದ 55 ಮೆಗಾವ್ಯಾಟ್‌ ಸಾಮರ್ಥ್ಯದ ಲಿಂಗನಮಕ್ಕಿ ವಿದ್ಯುದಾಗಾರ,  2001ರಿಂದ 240 ಮೆಗಾವ್ಯಾಟ್‌ ಸಾಮರ್ಥ್ಯದ ಗೇರುಸೊಪ್ಪ ವಿದ್ಯುದಾಗಾರ ಕಾರ್ಯಾರಂಭ ಮಾಡಿವೆ. ಇಲ್ಲಿರುವ 4 ವಿದ್ಯುದಾಗಾರಗಳಿಂದ ಕರ್ನಾಟಕ ವಿದ್ಯುತ್‌ ನಿಗಮ 1469.8 ಮೆಗಾವ್ಯಾಟ್‌ ಹಾಗೂ ಖಾಸಗಿ ಕಂಪೆನಿ 22 ಮೆಗಾವ್ಯಾಟ್‌ ಉತ್ಪಾದಿಸಲಾಗುತ್ತದೆ. ರಾಜ್ಯದ ಬೇಡಿಕೆಯ ಶೇ 22.34ರಷ್ಟು ವಿದ್ಯುತ್ ಇಲ್ಲಿಂದ ಪೂರೈಕೆಯಾಗುತ್ತದೆ. ಶರಾವತಿ ವಿದ್ಯುದಾಗಾರ ಕಾರ್ಯಕ್ಷಮತೆಗೆ ರಾಷ್ಟ್ರಮಟ್ಟದ ಮನ್ನಣೆ ಗಳಿಸಿದ್ದು, ಇಲ್ಲಿ ಉತ್ಪಾದನೆಯಾಗುವ ಪ್ರತಿ ಯೂನಿಟ್‌ ವಿದ್ಯುತ್‌ಗೆ ತಗಲುವ ವೆಚ್ಚ ಕೇವಲ ರೂ 24.18

ಅಣೆಕಟ್ಟೆಗಳು ಮತ್ತು ನೀರು ಬಳಕೆಯ ಜಾಲ
ಶರಾವತಿ ನದಿಗೆ ಮೊದಲು 1948ರಲ್ಲಿ ಹಿರೇ ಭಾಸ್ಕರ ಮತ್ತು ಕಾರ್ಗಲ್‌ನಲ್ಲಿ ಅಣೆಕಟ್ಟು ನಿರ್ಮಿಸಲಾಯಿತು. ಇಲ್ಲಿಂದ ಮಹಾತ್ಮ ಗಾಂಧಿ ವಿದ್ಯುದಾಗಾರಕ್ಕೆ ನೀರು ಬಳಸಿಕೊಳ್ಳಲಾಗುತ್ತಿತ್ತು. ವಿದ್ಯುತ್ ಬೇಡಿಕೆ ಹೆಚ್ಚಿದ ಕಾರಣ 1964ರಲ್ಲಿ 59.13ಮೀ ಎತ್ತರ, 2,749 ಮೀ ಉದ್ದ ಇರುವ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಿಸಲಾಯಿತು. 1,992 ಚದರ ಕಿ.ಮೀ ಜಲಾನಯನ ಪ್ರದೇಶ ಹೊಂದಿರುವ ಈ ಜಲಾಶಯ 4,435ದಶಲಕ್ಷ ಘನ ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.

ಲಿಂಗನಮಕ್ಕಿ ವಿದ್ಯುದಾಗಾರದಲ್ಲಿ ವಿದ್ಯುತ್ ಉತ್ಪಾದಿಸಿದ ನಂತರ ಹೊರ ನೀರು ಮಳಲಿ ಸುರಂಗ ಮತ್ತು ಹೆಚ್ಚುವರಿ ನೀರು ವಾಹಕ ವ್ಯವಸ್ಥೆ ಮೂಲಕ ತಳಕಳಲೆ ಅಣೆಕಟ್ಟೆ ತಲುಪುತ್ತದೆ. ಅಲ್ಲಿಂದ ಎರಡು ಸುರಂಗ ಮಾರ್ಗಗಳಿಂದ ಸಜರ್್ ಟ್ಯಾಂಕ್‌ಗೆ, ಅಲ್ಲಿಂದ 10 ಕೊಳವೆ ಮೂಲಕ ಶರಾವತಿ ವಿದ್ಯುದಾಗಾರಕ್ಕೆ ನೀರು ಪೂರೈಕೆಯಾಗುತ್ತದೆ.

ಲಿಂಗನಮಕ್ಕಿ ಜಲಾಶಯದಿಂದ ಸ್ವಲ್ಪ ನೀರು ನಾಲೆ ಮೂಲಕ ಕಾರ್ಗಲ್ ಅಣೆಕಟ್ಟೆ ತಲುಪುತ್ತದೆ. ಅಲ್ಲಿಂದ ಶಿರೂರು ಕೆರೆ ತಲುಪಿ, ನಂತರ ಮಹಾತ್ಮಾಗಾಂಧಿ ವಿದ್ಯುದಾಗಾರಕ್ಕೆ ಸಾಗುತ್ತದೆ. ಮಹಾತ್ಮಗಾಂಧಿ ವಿದ್ಯುದಾಗಾರ ಹಾಗೂ ಶರಾವತಿ ವಿದ್ಯುದಾಗರದಲ್ಲಿ ವಿದ್ಯುತ್ ಉತ್ಪಾದಿಸಿ ಹೊರಬಂದ ನೀರು ಗೇರುಸೊಪ್ಪ ಅಣೆಕಟ್ಟೆ ಮೂಲಕ ಗೇರುಸೊಪ್ಪ ವಿದ್ಯುದಾಗಾರಕ್ಕೆ ಪೂರೈಕೆಯಾಗುತ್ತದೆ. ಹೀಗೆ ಶರಾವತಿ ನದಿಯ ಹನಿ ನೀರೂ ವ್ಯರ್ಥವಾಗದಂತೆ ವಿದ್ಯುತ್‌ ಉತ್ಪಾದನೆಯ ಜಾಲ ಬೆಸೆಯಲಾಗಿದೆ.

ADVERTISEMENT

ಮಹಾತ್ಮನ ಸ್ಮರಣೆ
ಜೋಗದ ಬಳಿ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಿಸಲು ಚಾಲನೆ ನೀಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್‌. ನಂತರ ಜಯಚಾಮರಾಜ

ಒಡೆಯರ್‌ ಅದನ್ನು ಪೂರ್ಣಗೊಳಿಸಿದರು. ಹಿರೇಭಾಸ್ಕರ ಮತ್ತು ಕಾರ್ಗಲ್‌ನಲ್ಲಿ ಶರಾವತಿ ನದಿಗೆ ಅಣೆಕಟ್ಟು ನಿರ್ಮಿಸಿ ಆ ಮೂಲಕ ಹರಿಸಿದ ನೀರನ್ನು ವಿದ್ಯುತ್‌ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿತ್ತು. ಅಂದು ಮೊದಲ ಘಟಕ ಆರಂಭವಾದಾಗ ಅದಕ್ಕೆ ಕೃಷ್ಣರಾಜ ಒಡೆಯರ್‌ ಅವರ ಹೆಸರು ಇಡಲು ಬಹುತೇಕ ಜನರು ಒಲವು ತೋರಿದ್ದರು. ಆದರೆ, ಜಯಚಾಮರಾಜ ಒಡೆಯರ್‌ ಅಂದು ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧೀಜಿ ಅವರ ಹೆಸರು ಇಡಲು ಸೂಚಿಸಿದ್ದರು. ಅಂದಿನಿಂದ ಅದು ಮಹಾತ್ಮಗಾಂಧಿ ವಿದ್ಯುದಾಗಾರ ಎಂದು ಪ್ರಸಿದ್ಧಿಯಾಯಿತು.

ಪುರಾಣ ಪ್ರಸಿದ್ಧ ಶರಾವತಿ...
ಶರಾವತಿ ನದಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಉಗಮವಾಗುತ್ತದೆ. ವನವಾಸಕ್ಕೆ ಬಂದಾಗ ಸೀತೆ ಬಾಯಾರಿಕೆ ನೀಗಿಸಲು ಶ್ರೀರಾಮ ನೆಲಕ್ಕೆ ಬಾಣ ಹೊಡೆದಾಗ ಚಿಮ್ಮಿದ ನೀರು ಶರಾವತಿ ನದಿಯಾಗಿ ಹರಿಯಿತು ಎಂಬ ನಂಬಿಕೆ ಇದೆ. ‘ಶರ’- ಎಂದರೆ ಬಾಣ, ವತಿ ಎಂದರೆ ಮಹಿಳೆ. ಅಂಬುತೀರ್ಥ ಎಂದರೆ ಬಾಣದಿಂದ ಚಿಮ್ಮಿದ ನೀರು ಎಂದರ್ಥ. ನಂತರ ರಾಮ ಅಲ್ಲಿ ರಾಮೇಶ್ವರ ಪ್ರತಿಷ್ಠಾಪಿಸಿದ ಎಂಬ ನಂಬಿಕೆ ಇದೆ.  

ಶರಾವತಿಯ ಜೋಗ ವೈಭವ
ಅಂಬುತೀರ್ಥದಲ್ಲಿ ಹುಟ್ಟುವ ಈ ನದಿ ಪಶ್ಚಿಮಾಭಿಮುಖವಾಗಿ ಒಟ್ಟು 80 ಕಿ.ಮೀ ಹರಿಯುತ್ತದೆ. ಸಾಗುವ ಹಾದಿಯಲ್ಲಿ ಗೇರುಸೊಪ್ಪದ ಬಳಿ 293 ಮೀಟರ್ ಎತ್ತರದಿಂದ ಧುಮುಕುತ್ತದೆ. ರಾಜಾ, ರಾಣಿ, ರೋರರ್, ರಾಕೇಟ್  ಎಂದು ಕರೆಯಲಾಗುವ 4 ಕವಲುಗಳಾಗಿ ಧುಮುಕುವ ವೈಭವ ನೋಡಲು ಎರಡು ಕಣ್ಣು ಸಾಲದು. ಅಲ್ಲಿಂದ ನಂತರ ಗೇರುಸೊಪ್ಪ ತಲುಪಿ, ಅರಬ್ಬಿ ಸಮುದ್ರದಲ್ಲಿ ಶರಾವತಿ ಲೀನವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.