ADVERTISEMENT

ಹನ್ನೊಂದು ಮನೆಗಳ ಹೆಮ್ಮೆಯ ಹಳ್ಳಿ

ಕೆ.ವಾಸುದೇವ
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಮೇಕನಗದ್ದೆ ಗ್ರಾಮದ ನೋಟ
ಮೇಕನಗದ್ದೆ ಗ್ರಾಮದ ನೋಟ   

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಗ್ರಾಮೀಣ ಶಾಲೆಗಳಲ್ಲಿ ಪಾಠ ಮಾಡುವವರೆಂದರೆ ಹಳ್ಳಿಮೇಷ್ಟ್ರು ಎಂಬ ಮೂದಲಿಕೆ ಬೇರೆ. ಆದರೆ, ಅದೇ ಹಳ್ಳಿಮೇಷ್ಟ್ರು ಮನಸ್ಸು ಮಾಡಿದರೆ ಇಡೀ ಗ್ರಾಮವನ್ನೇ ಬದಲಾಯಿಸಿ ಬಿಡಬಹುದು ಎಂಬುದಕ್ಕೆ ಮಲೆನಾಡಿನ ಮಡಿಲಿನಲ್ಲಿರುವ ಮೇಕನಗದ್ದೆ ಗ್ರಾಮವೇ ಸಾಕ್ಷಿ.

ಮೇಕನಗದ್ದೆಯು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಿಂದ 30 ಕಿ.ಮೀ. ದೂರದಲ್ಲಿರುವ ಒಂದು ಕುಗ್ರಾಮ. ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಈ ಗಡಿಗ್ರಾಮದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿಯೇ ಶಿಕ್ಷಕರಾಗಿ ಶಾಲೆ ತೆರೆದ ಎಂ.ಬಿ. ಸಿದ್ದಯ್ಯ ಎಂಬ ಪರಿಶಿಷ್ಟ ಜಾತಿಯ ಯುವಕ ಗ್ರಾಮದಲ್ಲಿರುವ ಪರಿಶಿಷ್ಟ ಸಮುದಾಯದವರ ಬದುಕನ್ನೇ ಬದಲಾಯಿಸಿ, ಇಡೀ ರಾಜ್ಯವೇ ಗ್ರಾಮವನ್ನು ಗಮನಿಸುವಂತೆ ಮಾಡಿದ್ದಾರೆ.

ಮೇಕನಗದ್ದೆ ಗ್ರಾಮದ 11 ಮನೆಗಳಲ್ಲಿ 8 ಮಂದಿ ಖಾಸಗಿ ಕಂಪನಿಗಳಲ್ಲೂ, 23 ಮಂದಿ ಸರ್ಕಾರಿ ಇಲಾಖೆಗಳಲ್ಲೂ ನೌಕರಿ ಗಿಟ್ಟಿಸಿದ್ದಾರೆ. ಒಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎಲ್ಲವೂ ಸರ್ಕಾರಿ ಶಾಲೆಯ ಕೊಡುಗೆ. ಸಿದ್ದಯ್ಯ ಅವರನ್ನು ಇಲ್ಲಿನ ಜನ ಅನುದಿನವೂ ನೆನೆಯುತ್ತಾರೆ.

ADVERTISEMENT

ಸಿದ್ದಯ್ಯ ಅವರ ಮಗಳು ಭಾಗೀರಥಿ ಮೂಡಿಗೆರೆಯ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರೆ, ಅಳಿಯ ಬಿಳಿಯಪ್ಪ ಕಂದಾಯ ಇಲಾಖೆಯಲ್ಲಿ ರಾಜಸ್ವ ನಿರೀಕ್ಷಕರಾಗಿ ನಿವೃತ್ತರಾಗಿದ್ದಾರೆ. ಮಗ ಎಸ್‌. ಸುಂದ್ರೇಶ್‌ ಚಿಕ್ಕಮಗಳೂರಿನ ಐಡಿಎಸ್‌ಸಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು, ಅವರ ಪತ್ನಿ ಕೆ. ಮಂಜುಳ ಮೂಡಿಗೆರೆಯ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರು. ಮತ್ತೊಬ್ಬ ಮಗಳು ಸುಶೀಲ ಬಿ.ಎ. ಪದವೀಧರರಾಗಿ ಶಿಕ್ಷಕಿಯಾಗಿ ಹಾಸನದಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಇನ್ನೊಬ್ಬ ಮಗಳು ಸುಜಾತ ಪ್ರೌಢಶಾಲಾ ಶಿಕ್ಷಕಿಯಾಗಿದ್ದಾರೆ. ಸಿದ್ದಯ್ಯ ಅವರ ತಮ್ಮನ ಮಕ್ಕಳಾದ ಬಸವರಾಜ್‌ ಶಿಕ್ಷಕರಾಗಿಯೂ, ಅವರ ಪತ್ನಿ ರಾಧಮ್ಮ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.


ಕುಗ್ರಾಮದ ಮಕ್ಕಳಿಗೆ ಶಿಕ್ಷಣ ನೀಡಿದ ಶಾಲೆ

ಈ ಗ್ರಾಮದ ಮತ್ತೊಂದು ವಿಶೇಷವೆಂದರೆ ಶಿಕ್ಷಕ, ಶಾಸಕ ಎಂ.ಪಿ. ಕುಮಾರಸ್ವಾಮಿ. ಸಿದ್ದಯ್ಯನವರ ಅಣ್ಣ ಪುಟ್ಟಯ್ಯ ಅವರ ಮಗನಾದ ಕುಮಾರಸ್ವಾಮಿ ಇದೇ ಕುಗ್ರಾಮದಲ್ಲಿ ಬೆಳೆದವರು. ಇಲ್ಲಿನ ಬಹುತೇಕರು ಪದವೀಧರರಾಗಿರುವುದು ಗ್ರಾಮದ ಮತ್ತೊಂದು ಹಿರಿಮೆ. ಕೆಲಸದಲ್ಲಿರುವ ಎಲ್ಲರೂ ಮೇಕನಗದ್ದೆ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಓದಿದವರಾಗಿದ್ದು, ಅಂದು ಅವರು ಓದಿದ ಶಾಲೆಯೀಗ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಪಕ್ಕದಲ್ಲಿಯೇ ಸುಸಜ್ಜಿತ ಕಟ್ಟಡ ನಿರ್ಮಿಸಿ ಇಂದಿಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಎಲ್ಲಾ ಪದವೀಧರರು ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಇದ್ದುಕೊಂಡು ವ್ಯಾಸಂಗ ಮುಂದುವರೆಸಿದ್ದು, ವಿದ್ಯಾರ್ಥಿ ನಿಲಯಗಳು ಸ್ಥಳೀಯರ ಪಾಲಿಗೆ ಸರಸ್ವತಿ ಮಂದಿರಗಳಾಗಿ ಬದುಕು ನೀಡಿವೆ. ಅಲ್ಲದೇ ಅದೇ ಶಿಕ್ಷಕರ ಕಾಲಘಟ್ಟದಲ್ಲಿ ಸಮಾನ ಮನಸ್ಕರಿಂದ ಸ್ಥಾಪನೆಯಾಗಿರುವ ಗ್ರಾಮದ ಮಾರಿಗುಡಿಯು ಕೇವಲ ಮಂದಿರ ಮಾತ್ರವಲ್ಲದೇ, ಮಾರಿಗುಡಿಯ ಪಕ್ಕದಲ್ಲಿ ಸತ್ಯದ ಕಲ್ಲನ್ನು ಸ್ಥಾಪಿಸಿದ್ದು, ಯಾರೇ ತಪ್ಪು ಮಾಡಿದರೂ ಈ ಕಲ್ಲನ್ನು ಮುಟ್ಟಿ ಪ್ರಮಾಣ ಮಾಡಬೇಕು ಎಂಬುದು ಗ್ರಾಮದಲ್ಲಿ ಅಂದಿನ ಕಾಲದ ನಿಯಮವಾಗಿತ್ತು. ಅಂದಿನಿಂದ ಇಂದಿಗೂ ಆ ಕಲ್ಲು ಸತ್ಯದ ಕಲ್ಲಾಗಿಯೇ ಉಳಿದಿರುವುದು ವಿಶೇಷವಾಗಿದೆ.

‘ಐದು ದಶಕಗಳ ಹಿಂದೆ ನಮಗೆಲ್ಲಾ ಶಿಕ್ಷಣ ಪಡೆಯಲು ದಿವಂಗತರಾಗಿರುವ ನಮ್ಮ ತಂದೆ ಶಿಕ್ಷಕ ಸಿದ್ದಯ್ಯ ಪ್ರೇರಣೆಯಾದರು. ಅವರ ಪ್ರೇರಣೆಯಿಂದ ಇಡೀ ಗ್ರಾಮದ ಚಿತ್ರಣವೇ ಬದಲಾಗಿದೆ. ಪರಿಶಿಷ್ಟರ ಕಾಲೊನಿಗಳೆಂದರೆ ಹಂದಿ, ಕೋಳಿ, ಕುರಿಗಳ ಗೊಡ್ಡುವಾಸನೆಯಿರುವ ತಾಣ ಎಂಬುದನ್ನು ಸುಳ್ಳಾಗಿಸಿ, ನಮಗೂ ಜ್ಞಾನವಂತರಾಗಲು ಸಾಧ್ಯವಿದೆ ಎಂಬುದನ್ನು ಸಮಾಜಕ್ಕೆ ತೋರಿಸಿದ್ದೇವೆ’ ಎನ್ನುತ್ತಾರೆ ಐಡಿಎಸ್‌ಜಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಎಸ್‌. ಸುಂದ್ರೇಶ್‌.

‘ಮೂಲಸೌಲಭ್ಯಗಳಿಲ್ಲದಿದ್ದರೂ ಶಿಕ್ಷಣವನ್ನು ಪಡೆದು ನಾಗರಿಕತೆಗೆ ನಮ್ಮನ್ನು ಒಡ್ಡಿಕೊಂಡಿದ್ದೇವೆ. ಯಾವುದೇ ಗ್ರಾಮವಾದರೂ ಸವಲತ್ತುಗಳಿಲ್ಲ ಎಂದು ಅವಕಾಶಕ್ಕಾಗಿ ಕಾದು ಕುಳಿತುಕೊಳ್ಳದೇ, ಅವಕಾಶಗಳನ್ನು ಸೃಷ್ಟಿಸಿಕೊಂಡು ಸಮಾಜದ ಮುಖ್ಯವಾಹಿನಿಯ ಮುಖ ನೋಡಬೇಕು. ಇದಕ್ಕೆ ಶಿಕ್ಷಣ ಪ್ರೇರಣೆ ನೀಡಬೇಕು’ ಎಂದು ಅವರು ಹೇಳುತ್ತಾರೆ.

ಸರ್ಕಾರಿ ಕೆಲಸದ ನಿಮಿತ್ತ ತಾಲ್ಲೂಕು ಕೇಂದ್ರ ಸೇರಿದಂತೆ ಬೇರೆ ಬೇರೆ ಗ್ರಾಮಗಳಲ್ಲಿ ನೆಲೆಸಿರುವ ಗ್ರಾಮಸ್ಥರು, ಪ್ರತಿ ಬೇಸಿಗೆಯ ರಜೆಯಲ್ಲೂ ಇಂದಿಗೂ ಕುಗ್ರಾಮವಾಗಿ ಉಳಿದಿರುವ ಮೇಕನಗದ್ದೆ ಗ್ರಾಮಕ್ಕೆ ಬಂದು ದಯ್ಯಕ್ಕೆ ಇಕ್ಕುವ ಹಬ್ಬವನ್ನು ಸವಿಯುತ್ತ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಕೆಸ, ಕಳುಲೆ, ಏಡಿಗಳನ್ನು ಹಿಡಿದು ತಿಂದ ಬಾಲ್ಯದ ನೆನಪು ಇಂದಿಗೂ ಹಳ್ಳಿಯನ್ನು ಮರೆಯದಂತೆ ಮಾಡಿದೆ. 


ಮಾರಿಗುಡಿಯಲ್ಲಿರುವ ಪ್ರಮಾಣ ಮಾಡುವ ಕಲ್ಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.