ADVERTISEMENT

ಹಲ್‌ ಬೇಕೇನ್ರೀ ಹಲ್ಲು...

ಪೀರ್‌ ಪಾಶ, ಬೆಂಗಳೂರು
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಚಿತ್ರಗಳು: ಸತೀಶ್‌ ಬಡಿಗೇರ್‌
ಚಿತ್ರಗಳು: ಸತೀಶ್‌ ಬಡಿಗೇರ್‌   

ಬಂಗಾರದ ಅಂಗಡಿಯಲ್ಲಿ ಆಭರಣ ಜೋಡಿಸಿಡುವಂತೆ ನೂರಾರು ಹಲ್ಲುಗಳನ್ನು ಅಲ್ಲಿ ಚಿಕ್ಕಗಾಜಿನ ಪೆಟ್ಟಿಗೆಗಳಲ್ಲಿ ಜೋಡಿಸಿಡಲಾಗಿದೆ. ಪಕ್ಕದಲ್ಲೇ ಚಮಚ, ಕತ್ತರಿ, ಕನ್ನಡಿ, ಅರ, ಚಿಕ್ಕ ಇಕ್ಕಳಗಳಿವೆ. ಅವುಗಳ ಬದಿ ಕುಳಿತಿರುವ ಶೇಕ್‌ ಅನ್ವರ್‌, ‘ಹಲ್‌ ಕಟ್ಟಿಸ್‌ಬೇಕಾ, ಬನ್ರೀ, ಗಟ್ಟಿ ಹಲ್‌ ಹಾಕ್ಕಳ್ಳಿ. ಬಾಯಿತುಂಬಾ ಹಲ್‌ ಇದ್ರೆ ಚೆಂದ, ಬೊಕ್ಕಬಾಯಿ ಇದ್ರೆ ಕೆಡುತ್ತೆ ಮುಖದ ಅಂದ’ ಎಂದು ದಾರಿಹೋಕರನ್ನು ಕೈಬೀಸಿ ಕರೆಯುತ್ತಿರುತ್ತಾರೆ.

ಬೆಂಗಳೂರಿನ ಕೆ.ಆರ್‌. ಮಾರುಕಟ್ಟೆಯಲ್ಲಿ ಮೇಲ್ಸೇತುವೆ ಕೆಳಗೆ ಮತ್ತು ಜಾಮಿಯಾ ಮಸೀದಿ ಪಕ್ಕದಲ್ಲಿ ಕುಳಿತುಕೊಳ್ಳುವ ಹಲ್ಲಿನ ಚಿಕಿತ್ಸಕರು ಹಾಕುವ ಸಾಮಾನ್ಯ ಕೂಗಿದು.
ಹಲ್ಲು ಬಿದ್ದಿರುವ ಬಾಯಿಗೆ ದಾಳಿಂಬೆ ಬೀಜದ ಬಿಳುಪಿನ ಹಲ್ಲುಗಳನ್ನು ಜೋಡಿಸುವುದು ಮತ್ತು ಅಲುಗಾಡುವ ಹಲ್ಲುಗಳ ಸುತ್ತ ಎಂತದ್ದೋ ಚೂರ್ಣ ಹಾಕಿ ಮಜೂಬೂತು ಮಾಡುವುದು ಇವರ ಕೆಲಸ. ವೃದ್ಧರು, ಹಲ್ಲಿಲ್ಲದವರು ಹಾಗೂ ಗುಟ್ಕಾ, ಪಾನ್‌ಪರಾಗ್‌, ತಂಬಾಕು, ಎಲೆಅಡಿಕೆ ಅಗಿಯುವವರು ಬಿದ್ದಿರುವ ತಮ್ಮ ಹಲ್ಲುಗಳನ್ನು ಹಾಕಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಅನಸ್ತೇಷಿಯಾ ನೀಡದೆ, ಚಮಚ ಮತ್ತು ಚಿಕ್ಕ ಅರದಂತಿರುವ ಉಪಕರಣದಿಂದ ದಂತಪಂಕ್ತಿಯ ಭೋಜನ ಕೂಟದಿಂದ ಎದ್ದುಹೋಗಿರುವ ಹಲ್ಲಿನ ಸ್ಥಾನದಲ್ಲಿ ಹೊಸ ಅತಿಥಿಯನ್ನು ಕೂರಿಸುತ್ತಾರೆ. ‘ಈ ಹಲ್ಲುಗಳು ನಾಲ್ಕಾರು ವರ್ಷಗಳವರೆಗೆ ಬಾಳಿಕೆ ಬರ್ತವೆ. ಅವುಗಳನ್ನು ಪಂಕ್ತಿಯಿಂದ ಎದ್ದೇಳಿಸಲು ಇಕ್ಕಳವೇ ಬೇಕು’ ಎನ್ನುತ್ತಾರೆ ಹಲ್ಲು ಕೂಡಿಸುವ ಅಲ್ಲಾ ಭಕ್ಷ್.

‘ನಾವು ಹುಳುಕು ಹಿಡಿದ ಹಲ್ಲುಗಳನ್ನು ಕೀಳಲ್ಲ, ಬಾಯಿಯ ದುರ್ವಾಸನೆ ಹಾಗೂ ಹಲ್ಲು ನೋವಿಗೆ ಔಷಧಿ ಕೊಡಲ್ಲ’ ಎಂದು ಹೇಳುತ್ತಾರೆ.

ADVERTISEMENT

ಫೈಬರ್‌ನ ಕೃತಕ ಹಲ್ಲುಗಳು, ಅವುಗಳನ್ನು ಜೋಡಿಸಲು ಬೇಕಾದ ಪೌಡರ್‌, ಮುಲಾಮುಗಳನ್ನು ಮೆಡಿಕಲ್‌ ಶಾಪ್‌ಗಳಿಂದಲೇ ತರುತ್ತಾರೆ. ಆಶ್ಚರ್ಯ ಎಂದರೆ ಆ ಪೌಡರ್‌, ಟಾನಿಕ್‌ ಮತ್ತು ಮುಲಾಮುಗಳ ಹೆಸರೇ ಅವರಿಗೆ ತಿಳಿದಿಲ್ಲ. ಆದರೆ, ಹಲ್ಲನ್ನು ಗಟ್ಟಿಯಾಗಿ ಹಿಡಿದಿಡಲು ಅವುಗಳನ್ನು ಎಷ್ಟು ಪ್ರಮಾಣದಲ್ಲಿ ಮಿಶ್ರಣ ಮಾಡಬೇಕು. ಯಾವ ರೀತಿ ಲೇಪನ ಮಾಡಬೇಕು ಎಂಬ ಕಲೆ ಅವರಿಗೆ ಕರಗತವಾಗಿದೆ. ‘ಹಲ್ಲು ಜೋಡಿಸಲು ಬಳಸುವ ಪೇಸ್ಟ್‌ ಮೂರೇ ನಿಮಿಷಕ್ಕೆ ಒಣಗುತ್ತದೆ. ನಾಲ್ಕನೇ ನಿಮಿಷದಲ್ಲಿ, ಪಕ್ಕದಲ್ಲೇ ಇರೊ ಹೋಟೆಲ್‌ನಲ್ಲಿ ಬಿರಿಯಾನಿ ಮೂಳೆ ಕಡಿಯಬಹುದು’ ಎಂದು ಹೇಳುತ್ತಾರೆ ಹಲ್ಲು ಜೋಡಿಸುವ ಅಕ್ಬರ್‌.

ಕಾಲುಗಳಿಲ್ಲದ ಕುರ್ಚಿ ಚಿಕಿತ್ಸಕರ ಆಸನ. ರಸ್ತೆ ಬದಿಯಲ್ಲಿ ಒಂದು ಕಾಲದಲ್ಲಿ ಹಾಕಿದ್ದ ಬ್ಯಾನರ್‌ಗಳೇ ಗಿರಾಕಿಗಳು ಕೂರುವ ಚಾಪೆಗಳು.

‘ಹಲ್ಲು ಜೋಡಿಸುವ ಕಲೆ ನೀವ್ಹೇಗೆ ಕಲಿತಿರಿ’ ಎಂಬ ಪ್ರಶ್ನೆ ಕೇಳಿದರೆ, ‘ಸುಮಾರು 45 ವರ್ಷಗಳ ಹಿಂದೆ ಕೇರಳದವನೊಬ್ಬ ಇಲ್ಲಿಗೆ ಬಂದು ಹಲ್ಲಿನ ಚಿಕಿತ್ಸೆ ಶುರು ಮಾಡಿದ್ದನಂತೆ. ಆತನನ್ನು ನೋಡಿ ಇಲ್ಲಿದ್ದ ನಮ್ಮ ಹಿರಿಯರು ಕಲಿತ್ರು, ಹಿರಿಯರಿಂದ ನಾವು ಕಲಿತೆವು. ಈಗ ಇದೇ ನಮ್ಮ ಹೊಟ್ಟೆ ತುಂಬಿಸುವ ವೃತ್ತಿ’ ಎಂದು ಚಿಕಿತ್ಸಕ ಶೇಕ್‌ ಅನ್ವರ್‌ ಹೇಳುತ್ತಾರೆ.

ಪಕ್ಕದಲ್ಲೇ ಇರುವ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿನ ಗಿಜಿಗಿಡುವ ಧ್ವನಿಗಳು ದೊಡ್ಡ ಛತ್ರಿ ಕೆಳಗಿರುವ ಬಯಲು ಚಿಕಿತ್ಸಾಲಯಕ್ಕೆ ಪ್ರವೇಶ ಮಾಡುತ್ತಿಲ್ಲ ಎಂಬ ಭಾವದಲ್ಲೇ ಹಲ್ಲು ಜೋಡಿಸುವಲ್ಲಿ ಇವರು ನಿರತರಾಗಿರುತ್ತಾರೆ. ಹಿಂಬದಿಯಲ್ಲಿ ಹಾಕಿರುವ ಬ್ಯಾನರ್‌ಗಳೇ ಇವರ ವೈದ್ಯಕೀಯ ಸರ್ಟಿಫಿಕೇಟ್‌ಗಳು. ಅದರಲ್ಲಿ ಚಿಕಿತ್ಸೆಗೆ ಮೊದಲು ಹಲ್ಲಿನ ಸಾಲು ಹೇಗಿತ್ತು. ನಂತರ ಹೇಗೆ ಕಂಡಿತು ಎಂಬ ಚಿತ್ರಗಳ ಸರಣಿಯಿದೆ. ಸ್ಥಳೀಯ ಜನಪ್ರತಿನಿಧಿಗಳು ಓಟಿನ ಬೇಟೆಗೆಂದು ತಮ್ಮ ಕಾರ್ಯಸ್ಥಳಕ್ಕೆ ಬಂದಾಗ ಇವರು ಅವರೊಂದಿಗೆ ತೆಗೆಸಿಕೊಂಡ ಚಿತ್ರಗಳನ್ನು ನೇತುಹಾಕಿದ್ದಾರೆ.

‘ನಮ್ಮ ಕೆಲಸದ ಕುರಿತು ಗಿರಾಕಿಗಳ ನಂಬಿಕೆಯನ್ನು ಗಟ್ಟಿಗೊಳಿಸಲು ಈ ಚಿತ್ರಗಳು ಸಹಕಾರಿ’ ಎಂಬುದು ಚಿಕಿತ್ಸಕ ಅನ್ವರ್ ಅಭಿಮತ.

ಕೆ.ಆರ್‌.ಮಾರುಕಟ್ಟೆವರೆಗೂ ಬಂದು ಹಲ್ಲು ಜೋಡಿಸಿಕೊಳ್ಳಲಾಗದ ವೃದ್ಧರಿದ್ದರೆ ಅವರ ಮನೆ ಬಾಗಿಲಿಗೆ ಹೋಗಿ ಇವರು ಚಿಕಿತ್ಸೆ ನೀಡುತ್ತಾರೆ. ‘ಹಲ್ಲಿಗೆ ಚಿಕಿತ್ಸೆ ನೀಡುವವರು ವೈದ್ಯಕೀಯ ಮಂಡಳಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕಲ್ರೀ’ ಎಂದು ಕೇಳಿದರೆ, ‘ರೀ ಸ್ವಾಮಿ, ನಮಗೂ– ಎಂಬಿಬಿಎಸ್‌ ಡಾಕ್ಟ್ರುಗಳಿಗೂ ಏನ್ರೀ ಫರ್ಕು? ಅವರತ್ರ ಡಿಗ್ರಿ ಇದೆ. ನಮ್ಮತ್ರ ಇಲ್ಲ. ಅವರು ಐಷಾರಾಮಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡ್ತಾರೆ. ನಾವು ಫುಟ್‌ಪಾತ್‌ ಮೇಲೆ ನೀಡ್ತೀವಿ. ನಮ್ಮಲ್ಲಿ ಸ್ವಲ್ಪ ಕ್ಲೀನ್‌ಲಿನೆಸ್‌ ಕಡಿಮೆ ಇರ್‌ಬೌದು. ಅವರು ಒಂದು ಹಲ್ಲು ಜೋಡಿಸಲು ಬಿ.ಪಿ. ಚೆಕ್‌ ಮಾಡ್‌ಬೇಕು, ಎಕ್ಸ್‌ರೇ ತೆಗಿಸ್‌ಬೇಕು ಎಂದೆಲ್ಲ ಸಾವಿರಾರು ರೂಪಾಯಿ ಸುಲಿಗೆ ಮಾಡುತ್ತಾರೆ. ನಾವು ನೂರಿನ್ನೂರು ರೂಪಾಯಲ್ಲಿ ಹಲ್ಲು ಜೋಡಿಸ್ತೀವಿ. ನಮ್ದು ಒಂತರಾ ಸಮಾಜ ಸೇವೆ ಇದ್ಹಂಗೆ’ ಎಂದು ನಗುತ್ತಲೇ ಪ್ರತಿಕ್ರಿಯಿಸುತ್ತಾರೆ ಚಿಕಿತ್ಸಕ ಅಜೀಜ್‌.

ಇಲ್ಲಿರುವ ಎಲ್ಲ ಚಿಕಿತ್ಸಕರು ಆಕರ್ಷಕವಾಗಿರುವ ವಿಸಿಟಿಂಗ್‌ ಕಾರ್ಡ್‌ ಮಾಡಿಸಿಕೊಂಡಿದ್ದಾರೆ. ಹಲ್ಲು ರಿಪೇರಿಯ ಸ್ಥಳದಲ್ಲಿ ಅರೆಕ್ಷಣ ನಿಂತರೆ ಸಾಕು, ಆ ಕಾರ್ಡ್‌ ನಿಮ್ಮ ಕೈಯಲ್ಲಿರುತ್ತೆ. ‘ನಿಮ್ಮ ಹಲ್ಲುಗಳೀಗ ಗಟ್ಟಿಯಾಗಿವೆ, ನಿಜ. ಮುಂದೊಂದು ದಿನ ಈ ಕಾರ್ಡ್‌ ಕೆಲಸಕ್ಕೆ ಬರುತ್ತೆ. ಮನೆಯಲ್ಲಿ, ಸಂಬಂಧಿಕರಲ್ಲಿ, ಸ್ನೇಹಿತರ ಬಳಗದಲ್ಲಿ ಬೊಕ್ಕಬಾಯಿಯವರಿದ್ದರೆ ಅವರಿಗೆ ತಿಳಿಸಿ’ ಎಂದು ಅವರು ಸಲಹೆ ನೀಡುತ್ತಾರೆ.

ಕೆಲವು ವಿಸಿಟಿಂಗ್‌ ಕಾರ್ಡ್‌ಗಳಲ್ಲಿ ಡಬ್ಲೂ.ಡಿ. ಎಂಬ ಇನಿಷಿಯಲ್‌ ಇತ್ತು. ಇದರರ್ಥ ಏನ್ರೀ ಎಂದರೆ, ‘ಡಾಕ್ಟರ್‌ ವಿತೌಟ್‌ ಡಿಗ್ರಿ’ ಎಂಬ ಉತ್ತರ ಬಂದಾಗ ದಂಗಾದೆ. 

**

‘ಠಾಕ್‌ಠೀಕ್‌ ಬಂದವರಿಗೆ ಜಾಸ್ತಿ ರೇಟು’
ಒಬ್ಬೊಬ್ಬ ಚಿಕಿತ್ಸಕರ ಬಳಿ ದಿನಾಲು 15ರಿಂದ 20 ಜನ ಹಲ್ಲು ಹಾಕಿಸುತ್ತಾರೆ. ಅಕ್ಬರ್‌ ಅಂತೂ ತಮ್ಮ ಗಿರಾಕಿಗಳ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ಸಂಗ್ರಹಿಸಿದ್ದಾರೆ. ಕಾಯಂ ಗಿರಾಕಿಗಳ ಯಾವ ಹಲ್ಲು ಎಷ್ಟು ತಿಂಗಳಲ್ಲಿ ಉದುರಲಿದೆ ಎಂಬುದನ್ನು ಅವರು ಗ್ರಹಿಸಬಲ್ಲರು.

ಹಳೆ ಗಿರಾಕಿಯ ಪರಿಚಯದಿಂದ ಹೊಸ ಗಿರಾಕಿಗಳನ್ನು ಹುಡುಕುತ್ತಾರೆ. ಪುನಃ ತಮ್ಮ ಚಿಕಿತ್ಸಾಲಯಕ್ಕೆ ಬರಲು ಶುಲ್ಕದಲ್ಲಿ ರಿಯಾಯಿತಿಯನ್ನೂ ನೀಡುತ್ತಾರೆ. ‘ನಾವೇನೂ ಇಷ್ಟೇ ಫೀಸು ಅಂತ ಫಿಕ್ಸ್‌ ಮಾಡಿಲ್ಲ. ಬಡವರಿಗೆ ಕಮ್ಮಿ ರೇಟ್‌ ಹೇಳ್ತೀವಿ. ಠಾಕ್‌ಠೀಕ್‌ ಇದ್ರೆ ಸ್ವಲ್ಪ ಜಾಸ್ತಿ ರೇಟ್‌ ಹೇಳ್ತೀವಿ. ಕಡುಬಡವರಾಗಿದ್ದರೆ ಕೆಲವೊಮ್ಮೆ ಉಚಿತವಾಗಿ ಹಲ್ಲು ಹಾಕಿ ಕಳಿಸ್ತೀವಿ’ ಎನ್ನುತ್ತಾರೆ ಸೈಯದ್‌ ಅಸ್ಲಮ್‌.

‘ನಮ್ಮಲ್ಲಿಗೆ ಬಂದು ಪೊಲೀಸ್ನೋರು ಮತ್ತು ಬಸ್‌ ಡ್ರೈವರ್‌ಗಳು, ಕಂಡಕ್ಟರ್‌ಗಳು ಹಲ್ಲು ಕಟ್ಟಿಸಿಕೊಂಡಿದ್ದಾರೆ. ಮಾರುಕಟ್ಟೆ ಪ್ರದೇಶದಲ್ಲಿ ಕೆಲಸ ಮಾಡುವ ಬಹುತೇಕರ ಬಾಯಲ್ಲಿ ನಾನೇ ಹಾಕಿದ ಹಲ್ಲುಗಳಿವೆ’ ಎಂದು ಅನ್ವರ್‌ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತಮ್ಮ ಹಲ್ಲು ಚಿಕಿತ್ಸಾ ಕಲೆಯನ್ನು ಮಗನಿಗೂ ಧಾರೆ ಎರೆದಿದ್ದಾರೆ. ಅವರು ಬಿಡುವು ಮಾಡಿಕೊಂಡು ಅಂಗಡಿ ಬದಿ ಕೂತು ಬೀಡಿ ಎಳೆಯುವಾಗ, ಮಗ ಹಲ್ಲು ಜೋಡಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.