ADVERTISEMENT

‘ಹೊರ ಮಂಗಳವಾರ’!

ಆಚಾರ ವಿಚಾರ

ಬೀರಣ್ಣ ನಾಯಕ ಮೊಗಟಾ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
ಹೊರಮಂಗಳವಾರದ ದಿನ ಬಿಕೋ ಎನ್ನುವ ಬೀದಿ
ಹೊರಮಂಗಳವಾರದ ದಿನ ಬಿಕೋ ಎನ್ನುವ ಬೀದಿ   

ದೇವಮ್ಮ ಮತ್ತು ದುರ್ಗಮ್ಮ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗ್ರಾಮದೇವತೆಗಳು. ಮೂರು ವರ್ಷಗಳಿಗೊಮ್ಮೆ ಒಂಬತ್ತು ದಿನಗಳ ಕಾಲ ಇಲ್ಲಿ ದೇವಿ ಜಾತ್ರೆ ನಡೆಯುತ್ತದೆ. ಇದು ನಾಡಿನ ದೊಡ್ಡ ಜಾತ್ರೆಗಳಲ್ಲಿ ಒಂದು.

ಸಾಮಾನ್ಯವಾಗಿ ಎಲ್ಲಾ ಕಡೆಯ ಜಾತ್ರೆಗಳಲ್ಲೂ ಒಂದೊಂದು ವಿಶೇಷತೆ ಇದ್ದೇ ಇರುತ್ತದೆ. ಹಾಗೆಯೇ ಯಲ್ಲಾಪುರ ಜಾತ್ರೆಯಲ್ಲೂ ಒಂದು ವಿಶೇಷತೆ ಇದೆ. ಅದು ‘ಹೊರ ಮಂಗಳವಾರ’ದ ಆಚರಣೆ. ಈ ಆಚರಣೆಯನ್ನು ಎಲ್ಲರೂ ಚಾಚೂ ತಪ್ಪದೆ ಆಚರಿಸುತ್ತಾರೆ. ಹಿಂದುಗಳಲ್ಲದೆ ಕೆಲ ಇತರೆ ಧರ್ಮೀಯರು ಈ ಆಚರಣೆ ಮಾಡುವುದು ಕೂಡ ಇದರ ವಿಶೇಷ. ಜಾತ್ರೆ ಪ್ರಾರಂಭದ ಮೊದಲಿನ ಮೂರು ಮಂಗಳವಾರಗಳನ್ನು ‘ಹೊರ ಮಂಗಳವಾರ’ ವೆಂದು ಆಚರಿಸಲಾಗುವುದು.

ಈ ಮಂಗಳವಾರಗಳಂದು ಊಟ ತಿಂಡಿಗಳನ್ನೆಲ್ಲ ತಯಾರಿ ಮಾಡಿಕೊಂಡು ಊರಜನರೆಲ್ಲ ಬೆಳಿಗ್ಗೆ ಒಂಬತ್ತು ಗಂಟೆಗೆ ಮನೆಗಳಿಗೆ ಬೀಗಹಾಕಿ ಊರಿಂದ ಹೊರಗೆ ಹೋಗಿ ಸಂಜೆ 5 ಗಂಟೆಯ ನಂತರವೇ ಮರಳಿ ಮನೆಗೆ ಬರುತ್ತಾರೆ. ಅಂದು ಯಾರಾದರೂ ಹೊರಮಂಗಳವಾರ ಎಂಬುದನ್ನು ಅರಿಯದೇ ಯಲ್ಲಾಪುರಕ್ಕೆ ಬಂದರೆ ಆಶ್ಚರ್ಯವಾಗದೇ ಇರದು. ಅವರು ಬೀಗ ಹಾಕಿದ ಮನೆಗಳನ್ನು ಹಾಗೂ ನಿರ್ಜನ ಬೀದಿಗಳನ್ನೇ ನೋಡಬೇಕು.

ಎಲ್ಲ ಆಚರಣೆಗಳಿಗೂ ಒಂದು ಕಾರಣ ಇರಲೇಬೇಕಲ್ಲವೇ? ಹಾಗೆಯೇ ಈ ‘ಹೊರ ಮಂಗಳವಾರ’ಕ್ಕೂ ಕಾರಣ ಇದೆ. ಅದೇನೆಂದರೆ ಮಂಗಳವಾರಗಳಂದು ದೇವಿಯರ ಗಣಗಳು ಊರನ್ನು ಸುತ್ತುತ್ತವಂತೆ. ಆದ್ದರಿಂದ ಗಣಗಳು ಊರಿನಲ್ಲಿ ಇರುವಾಗ ಜನರು ಇರಬಾರದು ಎಂಬ ಪ್ರತೀತಿ ಎನ್ನುತ್ತಾರೆ ಹಿರಿಯರು. ಈಗಲೂ ಅದು ಮುಂದುವರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.