ADVERTISEMENT

‘ಅವರ’ ನೆಲೆ

ರಾಹುಲ ಬೆಳಗಲಿ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಯಾವುದಾದರೂ ಕಾರ್ಯಕ್ರಮ ನಡೆದರೆ, ಅವರ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದಂತೆ ಅತಿಥಿಗಳಿಂದ ಹತ್ತಾರು ಮಾತುಗಳು ಕೇಳಿಬರುತ್ತವೆ. ಕಾರ್ಯಕ್ರಮ ಮುಗಿಯುತ್ತಿದ್ದಂತೇ, ಮಾತುಗಳೂ ಮೌನವಾಗುತ್ತವೆ.

ಆದರೆ ಚಿಕ್ಕಬಳ್ಳಾಪುರದ ಚಿತ್ರಣ ವಿಭಿನ್ನ. ಇಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ, ಆರ್ಥಿಕವಾಗಿ ಮುಂದುವರಿಯಲು ಆಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ನಿಸರ್ಗ ಸೊಸೈಟಿ ಸಂಸ್ಥೆ ಆಶ್ರಯದಲ್ಲಿ ಈ ಕಾರ್ಯ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿದೆ. ಸಮಾಜದಲ್ಲಿನ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಮತ್ತು ಸರ್ಕಾರಿ ಯೋಜನೆ ಉಪಯೋಗಿಸಿಕೊಂಡು ಎಲ್ಲರಂತೆ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ಇಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಸಲಹೆ, ಸೂಚನೆ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಲಾಗುತ್ತದೆ.

ಅವರಿಗೆ ಮಾರ್ಗದರ್ಶನ ತೋರಿ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಆಗಾಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಚಿಕ್ಕಬಳ್ಳಾ ಪುರದ ಕೆನರಾ ಬ್ಯಾಂಕ್‌ ಸ್ವಯಂ–ಉದ್ಯೋಗ ಕೇಂದ್ರದಲ್ಲಿ ಆಗಾಗ್ಗೆ ಜರುಗುವ ಕಾರ್ಯಕ್ರಮದಲ್ಲಿ ಇವರು ಆಲಂಕಾರಿಕ ವಸ್ತುಗಳನ್ನು ತಯಾರಿಸುವ ಕುರಿತು ವಸತಿ ಸಹಿತ ತರಬೇತಿ ಪಡೆಯುತ್ತಾರೆ. ಪರಿಣಿತರಿಂದ ಎಲ್ಲವನ್ನೂ ಕಲಿತು ಆರ್ಥಿಕ ನೆರವಿನಿಂದ ಸ್ವಯಂ–ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಾರೆ.

ವಿವಿಧೆಡೆಯ ತಜ್ಞರು
‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 835 ಮಂದಿ ಲೈಂಗಿಕ ಅಲ್ಪಸಂಖ್ಯಾತರಿದ್ದು, ಕೋಲಾರ, ರಾಯಚೂರು ಬಳಿಕ ಇಲ್ಲಿ ನಿಯಮಿತವಾಗಿ ತರಬೇತಿ ಶಿಬಿರ ನಡೆಸುತ್ತಿದ್ದೇವೆ. ಶಿಬಿರಾರ್ಥಿಗಳಿಗೆ ತರಬೇತಿ ನೀಡಲೆಂದೇ ಬೆಂಗಳೂರಿನಿಂದ ಆಲಂಕಾರಿಕ ವಸ್ತುಗಳ ತಜ್ಞರು ಮತ್ತು ತಯಾರಕರು ಬರುತ್ತಾರೆ. ಅವರು ಮಡಿಕೆ, ಆಟಿಕೆ ವಸ್ತು, ಪೇಪರ್‌ಬ್ಯಾಗು, ಲಕೋಟೆ, ಮೇಣದ ಬತ್ತಿ, ಗೃಹೋಪಯೋಗಿ, ರಾಸಾಯನಿಕ ವಸ್ತುಗಳ ತಯಾರಿಕೆ ಕುರಿತು ತರಬೇತಿ ನೀಡುತ್ತಾರೆ. ಆಸಕ್ತಿಯಿಂದ ಕಲಿಯುವ ಅಲ್ಪಸಂಖ್ಯಾತರು ನಂತರ ಸ್ವಯಂ–ಉದ್ಯೋಗ ಕಂಡುಕೊಳ್ಳುತ್ತಾರೆ’ ಎಂದು ನಿಸರ್ಗ ಸೊಸೈಟಿ ಸಂಸ್ಥೆ ಅಧ್ಯಕ್ಷ ರಾಜು ಹೇಳುತ್ತಾರೆ.

‘ಇಲ್ಲಿ ತರಬೇತಿ ಪಡೆದುಕೊಂಡವರು ಸ್ವಯಂ ಉದ್ಯೋಗಾವಕಾಶ ಕಂಡುಕೊಳ್ಳಲೆಂದೇ ಅವರಿಗೆ ತಲಾ 20 ಸಾವಿರ ರೂಪಾಯಿ ನೆರವು ಹಾಗೂ ಪ್ರಮಾಣಪತ್ರ ನೀಡುತ್ತೇವೆ. ಸರ್ಕಾರದ ಆರ್ಥಿಕ ನೆರವನ್ನು ಸದ್ಬಳಕೆ ಮಾಡಿಕೊಂಡು ಅವರು ಸ್ವಯಂ–ಉದ್ಯೋಗ ಕಂಡುಕೊಳ್ಳಬಹುದು. ಸಮಾಜದ ಭಾಗವಾದ ಅವರಿಗೆ ಸ್ವಾವಲಂಬನೆ ಮತ್ತು ಸ್ವಾಭಿಮಾನದಿಂದ ಬದುಕಲು ಅವಕಾಶ ದೊರೆಯಬೇಕು’ ಎನ್ನುತ್ತಾರೆ ಸಂಸ್ಥೆ ಸಂಚಾಲಕಿ ಉಷಾ ಕಿರಣ್‌.

ಅನುದಾನದ ಸದ್ಬಳಕೆ
ಬೇರೆ ಬೇರೆ ಯೋಜನೆಗಳಿಗೆ ಸರ್ಕಾರಿ ಅನುದಾನವು ಬಳಕೆಯಾಗುತ್ತ ಇರುತ್ತದೆ. ಸಮಾಜದ ಬಗ್ಗೆ ಕಾಳಜಿ, ಕಳಕಳಿ ಹೊಂದಿರುವ ಮತ್ತು ಮುಖ್ಯವಾಹಿನಿಗೆ ಬರಲು ಬಯಸುವವರಿಗೆ ಸರ್ಕಾರ ಅನುದಾನ ಸದ್ಬಳಕೆಯಾದರೆ, ಇದಕ್ಕಿಂತ ಸಂತೋಷದ ಸಂಗತಿ ಇನ್ನೊಂದಿಲ್ಲ. ಚಿಕ್ಕಬಳ್ಳಾಪುರ ದಲ್ಲಿ ವೇಗವಾಗಿ ಯಶಸ್ವಿಯಿಂದ ಈ ರೀತಿಯ ಕಾರ್ಯ ನಡೆಯುತ್ತಿದ್ದು, ಇಡೀ ರಾಜ್ಯದಲ್ಲಿ ಜಾರಿಯಾಗುತ್ತಿದೆ ಎಂಬ ಸಂತಸದ ನುಡಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುರೇಖಾ ವಿಜಯಪ್ರಕಾಶ್‌ ಅವರದ್ದು.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸ್ತ್ರೀಶಕ್ತಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ನೆರವಿನಿಂದ ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ಸಿಕ್ಕಿದೆ. ಸ್ತ್ರೀಶಕ್ತಿ ಸಂಘಗಳ ಆರ್ಥಿಕ ನೆರವಿನಿಂದ ಅವರಿಗೆ ವೇತನ ನೀಡುತ್ತೇವೆ. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಜನರಿಗೆ ಇರುವ ಪೂರ್ವಗ್ರಹ ಹೋಗಲಾಡಿಸುವ ಉದ್ದೇಶದಿಂದ ಇಂತಹ ಕ್ರಮ ಕೈಗೊಂಡಿದ್ದೇವೆ.

ಸಾಮಾನ್ಯ ಕೆಲಸಗಾರರಿಗಿಂತ ಹೆಚ್ಚಿನ ಶ್ರದ್ಧೆ, ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ದುಡಿಯುವ ಅವರು ಈಗ ಬೇರೆಯವರಿಗೆ ಪ್ರೇರಣೆಯಾಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರೆಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ಅವರೀಗ ಹೆಮ್ಮೆ ಮತ್ತು ಸ್ವಾಭಿಮಾನದಿಂದ ಗುರುತಿಸಿಕೊಳ್ಳುತ್ತಾರೆ. ತಾವು ಯಾರಿಗಿಂತಲೂ ಕಡಿಮೆಯಿಲ್ಲವೆಂದು ಸಾಬೀತುಪಡಿಸುವ ತವಕದಲ್ಲಿದ್ದಾರೆ’ ಎನ್ನುತ್ತಾರೆ ಸುರೇಖಾ.

ADVERTISEMENT

ಬದುಕಲು ಅವಕಾಶ ಕೊಡಿ
ತಮ್ಮ ಹಕ್ಕು, ಬೇಡಿಕೆ ಮತ್ತು ಅಸ್ತಿತ್ವಕ್ಕಾಗಿ ನಿರಂತರ ಹೋರಾಟ ನಡೆಸುವ ಲೈಂಗಿಕ ಅಲ್ಪಸಂಖ್ಯಾತರು ಸರ್ಕಾರಿ ಕಚೇರಿಯಲ್ಲಿ ಉದ್ಯೋಗ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವರು ಸ್ವಯಂ ಉದ್ಯೋಗ ಕಂಡುಕೊಂಡು ಬದುಕು ಕಟ್ಟಿಕೊಂಡಿದ್ದರೆ, ಇನ್ನೂ ಕೆಲವರು ಸರ್ಕಾರಿ ಕಚೇರಿಗಳಲ್ಲಿಯೇ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಯೊಂದರಲ್ಲೇ 11 ಮಂದಿ ಲೈಂಗಿಕ ಅಲ್ಪಸಂಖ್ಯಾತರು ಗುತ್ತಿಗೆಯಾಧಾರದಲ್ಲಿ ಕಚೇರಿ ಆವರಣದ ಸ್ವಚ್ಛತೆ, ಶೌಚಾಲಯದ ಶುಚಿತ್ವ, ವಾಹನಗಳ ನಿಲುಗಡೆ ಸೇರಿದಂತೆ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದಾರೆ.

ತಮ್ಮ ತಮ್ಮ ಜೀವನಶೈಲಿ, ವರ್ತನೆಯಿಂದ ಜನ ಬೇರೆಯದ್ದೇ ಕಲ್ಪನೆ ಮತ್ತು ಭಾವನೆ ಹೊಂದಿರುತ್ತಾರೆ. ಆದರೆ ತಾವು ಕೂಡ ಮನುಷ್ಯರು. ತಮಗೂ ಬದುಕಲು ಅವಕಾಶ  ಬೇಕು ಎನ್ನುತ್ತಾರೆ ಈ ಅಲ್ಪಸಂಖ್ಯಾತರು.

ಉದ್ಯೋಗಾವಕಾಶ
‘ನಮಗೆ ವಸತಿ, ಪಡಿತರ ಚೀಟಿ, ಆರೋಗ್ಯ, ಪಿಂಚಣಿ, ತರಬೇತಿ ಮತ್ತು ಸಾಲ ಸೌಲಭ್ಯ ಕೊಡುವುದರ ಬಗ್ಗೆ ಸರ್ಕಾರಿ ಆದೇಶವಿದ್ದು, ಉದ್ಯೋಗಾವಕಾಶ ಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡೆವು. ಇದರ ಪರಿಣಾಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗಿದೆ.

ಪ್ರತಿ ದಿನ ನಾವು 11 ಮಂದಿ ಕೆಲಸಕ್ಕೆ ಹಾಜರಾಗುತ್ತೇವೆ. ಬೆಳಗಿನ ಕೆಲಸಕ್ಕೆ ರೂ 3,500 ಮತ್ತು ಇಡೀ ದಿನದ ಕೆಲಸಕ್ಕೆ ರೂ 4,000 ವೇತನ ನಮಗೆ ದೊರಕುತ್ತಿದೆ’ ಎನ್ನುತ್ತಾರೆ ಲೈಂಗಿಕ ಅಲ್ಪಸಂಖ್ಯಾತರ ನಿಸರ್ಗ ಸಂಸ್ಥೆಯ ಅಧ್ಯಕ್ಷ ರಾಜು.
ಹೆಚ್ಚಿನ ಮಾಹಿತಿಗೆ 9972203841.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.