ADVERTISEMENT

ಕೋಣಕುಂಟ್ಲದ ಬೆಟ್ಟವೂ ಕೊಳವೂ

ಸುತ್ತಾಣ

​ಪ್ರಜಾವಾಣಿ ವಾರ್ತೆ
Published 5 ಜೂನ್ 2015, 19:30 IST
Last Updated 5 ಜೂನ್ 2015, 19:30 IST
ಬೆಟ್ಟದ ಮೇಲಿರುವ ಕೊಳ
ಬೆಟ್ಟದ ಮೇಲಿರುವ ಕೊಳ   

ಸುತ್ತಲೂ ಬೆಟ್ಟಗಳ ರಾಶಿ, ಬೆಟ್ಟದ ಮೇಲಿಂದ ವೀಕ್ಷಿಸಿದರೆ ಕಣ್ಮನ ಸೆಳೆಯುವ  ಹಚ್ಚ ಹಸಿರಿನಿಂದ ಕೂಡಿದ ಬೆಟ್ಟದ ಒಡಲು, ತಂಪೆರೆಯುವ ತಂಗಾಳಿ...
ಒಮ್ಮೆ ಕೋಣಕುಂಟ್ಲು ಬೆಟ್ಟ ಏರಿದವರ ಮನದಲ್ಲಿ ಅಚ್ಚಳಿಯದೆ ಉಳಿಯುವ ಅನುಭವಗಳು ಇವು.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಕೋಣಕುಂಟ್ಲು ಬೆಟ್ಟದಲ್ಲಿರುವ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ದರ್ಶನಕ್ಕೆ ರಾಜ್ಯ  ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶದಿಂದೂ ಭಕ್ತರು ಬರುತ್ತಾರೆ.

ಪ್ರತಿವರ್ಷ ಇಲ್ಲಿ ನಡೆಯುವ ಬ್ರಹ್ಮ ರಥೋತ್ಸವ ಹಾಗೂ ರಾಸುಗಳ ಜಾತ್ರೆ  ಪ್ರಮುಖ ಆಕರ್ಷಣೆಯಾಗಿದೆ. ಜಾತ್ರೆಯಲ್ಲಿ ಭಾಗವಹಿಸುವ ವ್ಯಾಪಾರಿಗಳು ಗ್ರಾಹಕರಿಗೆ ಮೋಸ ಮಾಡದೆ ನ್ಯಾಯಯುತವಾದ ವಹಿವಾಟು ನಡೆಸುತ್ತಾರೆ ಎಂಬ ಹೆಗ್ಗಳಿಕೆ ಇದೆ.

ದೇವರ ದರ್ಶನ ಮಾಡಿದ ನಂತರ ದೇವಾಲಯದ ಹಿಂದಿರುವ ಬೆಟ್ಟವನ್ನು ಏರದೇ ಹಿಂತಿರುಗಲು ಮನಸ್ಸು ಬರುವುದಿಲ್ಲ. ಕೋಣಕುಂಟ್ಲು ಬೆಟ್ಟ ಚಾರಣಕ್ಕೂ

ಹೇಳಿ ಮಾಡಿಸಿದಂತಿದೆ.

ಕಡಿದಾದ ಬೆಟ್ಟ ಇದಾಗಿರುವುದರಿಂದ ಬೆಟ್ಟ ಏರುವಾಗ ಹೆಚ್ಚು ಜಾಗ್ರತೆ ವಹಿಸಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚು ಬಿಸಿಲು ಇರುವ ಕಾರಣ ಅಗತ್ಯ ವಸ್ತುಗಳನ್ನು ಕೊಂಡೊಯ್ಯುವುದು ಸೂಕ್ತ.

ಬೆಟ್ಟ ಏರಿದ ಮೇಲೆ ಪ್ರಾಚೀನ ಕಾಲದ ಒಂದು ಸಣ್ಣ ದೇವಸ್ಥಾನ ಸ್ವಾಗತಿಸುತ್ತದೆ. ಅಲ್ಲದೇ,‌‌ಬೆಟ್ಟ ಹತ್ತಿ ದಣಿದು ಬಂದವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸಣ್ಣ ಕೊಳವಿದೆ. ಕೊಳದಲ್ಲಿನ ನೀರು ನಿಮ್ಮ ಆಯಾಸವನ್ನು ದೂರ ಮಾಡುತ್ತದೆ.

ಕೊಳದ ನೀರು ಸುಡುವ ಬಿಸಿಲಿನಲ್ಲಿಯೂ ತಂಪಾಗಿರುವುದು ಇಲ್ಲಿನ ವಿಶೇಷ. ಕೊಳ ಮೇಲ್ನೋಟಕ್ಕೆ ಅಳವಿಲ್ಲದಂತೆ ಕಂಡರೂ ಹೆಚ್ಚು ಅಳವಿರುವುದರಿಂದ ಈಜಿಗಾಗಿ ನೀರಿಗಿಳಿಯುವವರು ಎಚ್ಚರ ವಹಿಸಬೇಕು. ಬಂಡೆಗಳಿಂದ ಜಿನುಗುವ ಹಾಗೂ ಮಳೆಯ ನೀರು ಕೊಳದಲ್ಲಿ ಸಂಗ್ರಹವಾಗಿದ್ದು,  ಈ ನೀರನ್ನು ಕುಡಿದರೆ ರೋಗ ರುಜಿನಗಳು ಬರುವುದಿಲ್ಲ ಎಂದು ಇಲ್ಲಿನವರು ಹೇಳುತ್ತಾರೆ.

ಅಲ್ಲಿಂದ ಮುಂದೆ ಹೋದರೆ ಭಾರೀ ಗಾತ್ರದ ಬಂಡೆಗಳು ಸೃಷ್ಟಿಸಿರುವ ಗುಹೆಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹದು. ಗುಹೆಗಳನ್ನು ಪ್ರವೇಶಿಸುವಾಗಿ ಎಚ್ಚರಿಕೆಯಿಂದ ಇರುವುದು ಒಳಿತು.

ವಿಶ್ರಾಂತಿಯನ್ನು ಪಡೆಯಲು ಬಂಡೆಗಳು ನಿಮಗೆ ಉಪಯೋಗವಾಗುತ್ತವೆ. ಬಿರು ಬಿಸಿಲಿನಲ್ಲಿಯೂ ಬಂಡೆಗಳ ನಿಮಗೆ ತಣ್ಣಗೆಯ ಅನುಭವವಾಗುತ್ತದೆ.

ಕೊಳದ ಪಕ್ಕದಲ್ಲಿ ಪುರಾತನ ಕಾಲದ ಮಣ್ಣಿನಿಂದ ನಿರ್ಮಿಸಿದ ದೇವಾಲಯವಿದ್ದು, ದೇವಾಲಯದ ಒಳಗೂ ವಿಶ್ರಾಂತಿ ಪಡೆಯಬಹುದು. ಈ ದೇವಾಲಯದ ಮೇಲಿನ ವಾಸ್ತುಶಿಲ್ಪ ಹೊಯ್ಸಳರ ಹಾಗೂ ಚೋಳರ ಕಾಲದ ವಾಸ್ತುಶಿಲ್ಪವನ್ನು ಹೊಲುವಂತಿರುವುದು ವಿಶೇಷ.
ಬೆಟ್ಟವನ್ನು ಹತ್ತಿ ಇಳಿಯಲು ಸುಮಾರು ನಾಲ್ಕು ತಾಸು ಬೇಕಾಗುತ್ತದೆ. ಸೂರ್ಯ ತಲೆ ಮೇಲೆ ಬರುವ ಮೊದಲು ನೀವು ಬೆಟ್ಟ ಸೇರಬೇಕು. ಈ ಪ್ರದೇಶದಲ್ಲಿ ಯಾವುದೇ ಹೋಟೆಲ್‌ ಇನ್ನಿತರ ಅಂಗಡಿಗಳು ಇಲ್ಲದಿರುವುದರಿಂದ ತಮಗೆ ಬೇಕಾದವುಗಳನ್ನು ತೆಗೆದುಕೊಂಡು ಹೋಗಬೇಕು.

ಇಲ್ಲಿ ಜನರ ಓಡಾಟ ಕಡಿಮೆ ಇರುವುದರಿಂದ ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವುದು ಸುರಕ್ಷಿತ.
ನಗರದಿಂದ ಸುಮಾರು 104 ಕಿ.ಮೀ ದೂರವಿದೆ. ಈ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಇದ್ದು, ಮೂರು ಗಂಟೆಗಳ ಒಳಗೆ ನೀವು ಕೋಣಕುಂಟ್ಲು ತಲುಪಬಹುದು.

ಹಿಂತಿರುಗುವಾಗ ಚಿಂತಾಮಣಿಯ  ಇತಿಹಾಸ ಪ್ರಸಿದ್ಧ ಶಿವನ ದೇವಾಲಯಕ್ಕೆ ಭೇಟಿ ನೀಡುವಷ್ಟು ಸಮಯ ನಿಮ್ಮಲ್ಲಿರುತ್ತದೆ.

ಮದುವೆಗಳ ಮಂಟಪ
ಕೋಣಕುಂಟ್ಲು ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ನೂರಾರು ಮದುವೆಗಳು ನಡೆಯುತ್ತವೆ. ಇಲ್ಲಿ ಹಸೆಮಣೆ ಏರುವ ದಂಪತಿಗಳ ಸಂಸಾರ ಸುಖವಾಗಿರುತ್ತದೆ ಎಂದು ಇಲ್ಲಿನ ಜನರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT