ADVERTISEMENT

ಬಳೆಮಂಟಪದ ಶಿಲ್ಪ ಸೊಬಗು

ಸುತ್ತಾಣ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST
ಬಳೆಮಂಟಪದ ಶಿಲ್ಪ ಸೊಬಗು
ಬಳೆಮಂಟಪದ ಶಿಲ್ಪ ಸೊಬಗು   

ಯಳಂದೂರು ಪಟ್ಟಣದ ಗೌರೀಶ್ವರ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಮಂಟಪವೇ ಬಳೆಮಂಟಪ. ಮಂಟಪದ ಸುತ್ತಲೂ ಅಲಂಕಾರಕ್ಕಾಗಿ ಕಲ್ಲಿನಲ್ಲೇ ಬಳೆಗಳನ್ನು ಕೆತ್ತಿದ್ದಾರೆ ಅಂದಿನ ಶಿಲ್ಪಿಗಳು. ದೇವಾಲಯದ ನಾಲ್ಕೂ ಮೂಲೆಗಳಲ್ಲಿ ಹಾಗೂ ನಾಲ್ಕೂ ಮುಖಗಳಲ್ಲಿ ಕಲ್ಲಿನಲ್ಲಿ ಕೆತ್ತಿರುವ ಬಳೆಗಳಿವೆ. ಏಕಶಿಲೆಯಲ್ಲಿ ಎರಡು– ಮೂರು ಬಳೆಗಳು ಒಂದರೊಳಗೊಂದು ಸೇರಿರುವಂತೆ ಕೆತ್ತಿರುವ ಅಂದಿನ ಶಿಲ್ಪಿಗಳ ಶಿಲ್ಪ ಸೊಬಗು ಬೆರಗು ಹುಟ್ಟಿಸುತ್ತದೆ.

ಗೌರೀಶ್ವರ ದೇವಾಲಯವನ್ನು ದೇವಭೂಪನ ಆಳ್ವಿಕೆಯಲ್ಲಿ ಕ್ರಿ. ಶ 1550ರಲ್ಲಿ ನಿರ್ಮಿಸಲಾಯಿತು. 1654ರಲ್ಲಿ ದೇವಭೂಪನ ಮೊಮ್ಮಗ ಮುದ್ದಭೂಪ ಎಂಬುವನು ದೇವಾಲಯವನ್ನು ಮರು ನಿರ್ಮಾಣ ಮಾಡಿಸಿದ ಎನ್ನುತ್ತದೆ ಇತಿಹಾಸ.

ಬಳೆಮಂಟಪದ ಪ್ರಮುಖ ಆಕರ್ಷಣೆ ಇಲ್ಲಿನ ಕಲ್ಲಿನ ಬಳೆಗಳಾದರೂ ಈ ಮಂಟಪದ ಶಿಲ್ಪವೈವಿಧ್ಯ ಅಂದಿನ ಶಿಲ್ಪಿಗಳ ಕಲಾಪ್ರೇಮವನ್ನು ಸಾರುತ್ತದೆ. ಮಂಟಪದ ಹೊರ ಮತ್ತು ಒಳಭಾಗದಲ್ಲಿ ಪೌರಾಣಿಕ ಕಥನದ ಶಿಲ್ಪಗಳನ್ನು ಕೆತ್ತಲಾಗಿದೆ. ಮಂಟಪದ ಹೊರಭಾಗದಲ್ಲಿ ದೇವರ ಮೂರ್ತಿಗಳು ಹಾಗೂ ಶಿಲಾಬಾಲೆಯರ ಶಿಲ್ಪಗಳಿವೆ. ಇನ್ನು ಒಳಭಾಗದಲ್ಲಿ ಗಣೇಶ, ದುರ್ಗೆಯರ ಮೂರ್ತಿಗಳಿವೆ.

ಬಳೆಮಂಟಪದ ಸೊಬಗನ್ನು ನೋಡಿ ಸವಿದು ಮುಂದೆ ಬಂದರೆ ಸಿಗುವುದು ಗೌರೀಶ್ವರ ದೇವಾಲಯ. ನೆಲಮಟ್ಟಕ್ಕಿಂತ ಕೆಳಭಾಗದಲ್ಲಿ ಈಶ್ವರ ಪೂಜೆಗೊಳ್ಳುವುದು ಇಲ್ಲಿನ ವಿಶೇಷ. ಗೌರೀಶ್ವರ ದೇವಾಲಯ ವಿಶಾಲವಾಗಿದ್ದರೂ ಹೇಳಿಕೊಳ್ಳುವಂಥ ಸೂಕ್ಷ್ಮ ಕೆತ್ತನೆಗಳಿಂದ ಕೂಡಿಲ್ಲ. ಶಿಲ್ಪಿಗಳು ತಮ್ಮ ಕಲಾನೈಪುಣ್ಯವನ್ನೆಲ್ಲಾ ಬಳೆಮಂಟಪಕ್ಕೇ ಧಾರೆ ಎರೆದು ಬಳಿಕ ಈ ದೇವಾಲಯ ನಿರ್ಮಿಸಿದಂತಿದೆ!

ದೇವಾಲಯ ಹಳೆಯದಾಗಿದ್ದು ಕಾಲನ ಹೊಡೆತಕ್ಕೆ ಸಿಕ್ಕು ನಲುಗಿದೆಯೇ ಹೊರತು ಬೇರಾವ ದಾಳಿಕೋರರೂ ಇಲ್ಲಿಗೆ ನುಗ್ಗಿದಂತೆ

ಕಾಣುವುದಿಲ್ಲ. ದೇವಾಲಯದಲ್ಲಿ ಈಗಲೂ ಗೌರೀಶ್ವರನಿಗೆ ನಿತ್ಯ ಪೂಜೆ ಸಲ್ಲುತ್ತದೆ. ಹಬ್ಬದ ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆದರೆ, ಗೌರೀಶ್ವರನ ದರ್ಶನಕ್ಕೆಂದು ಇಲ್ಲಿಗೆ ಬರುವವರಿಗಿಂತ ಬಳೆಮಂಟಪದ ದರ್ಶನಕ್ಕೆ ಬರುವವರೇ ಹೆಚ್ಚು.

ಬೆಂಗಳೂರಿನಿಂದ ಸುಮಾರು 175 ಕಿ.ಮೀ. ದೂರದಲ್ಲಿರುವ ಯಳಂದೂರಿಗೆ ಒಂದು ದಿನದಲ್ಲಿ ಹೋಗಿ ಬರಬಹುದು. ಬೆಂಗಳೂರಿನಿಂದ ಹೊರಟು ಮದ್ದೂರು, ಬನ್ನೂರು,  ಟಿ.ನರಸೀಪುರ ಮಾರ್ಗವಾಗಿ ಯಳಂದೂರು ತಲುಪಬಹುದು.

ಬೆಂಗಳೂರಿನಿಂದ ಸಾಕಷ್ಟು ಬಸ್‌ಗಳು ನೇರವಾಗಿ ಯಳಂದೂರಿಗೆ ಹೋಗುತ್ತವೆ. ಬೆಂಗಳೂರಿನಿಂದ ಚಾಮರಾಜ ನಗರಕ್ಕೆ ರೈಲಿನಲ್ಲಿ ಹೋಗಿ ಅಲ್ಲಿಂದ ಯಳಂದೂರಿಗೆ ಬಸ್‌ನಲ್ಲಿಯೂ ಬರಬಹುದು.

ಬಳೆಮಂಟಪದ ಶಿಲ್ಪ ಸೊಬಗನ್ನೆಲ್ಲಾ ಸೂರೆಗೊಂಡು ಇನ್ನೂ ಸಮಯ ಉಳಿದಿದ್ದರೆ ಬಿಳಿಗಿರಿರಂಗನಬೆಟ್ಟಕ್ಕೂ ಹೋಗಿ ಬರಬಹುದು. ಸ್ವಂತ ವಾಹನವಿದ್ದರೆ ಸಮೀಪದಲ್ಲೇ ಇರುವ ಶಿವನಸಮುದ್ರವನ್ನೂ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT