ADVERTISEMENT

ವಿಸ್ಮಯವೀ ವಿಕ್ಟೋರಿಯಾ...

ಮಹಮ್ಮದ್ ನೂಮಾನ್
Published 19 ನವೆಂಬರ್ 2016, 19:30 IST
Last Updated 19 ನವೆಂಬರ್ 2016, 19:30 IST
ಮೆಲ್ಬರ್ನ್‌ ನಗರದ ಸುಂದರ ನೋಟ
ಮೆಲ್ಬರ್ನ್‌ ನಗರದ ಸುಂದರ ನೋಟ   
ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಸೌಂದರ್ಯದೊಂದಿಗೆ ಮಿಳಿತಗೊಂಡಿರುವ ವಿಕ್ಟೋರಿಯಾ ರಾಜ್ಯ ಆಸ್ಟ್ರೇಲಿಯಾದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. ಪ್ರಕೃತಿಯ ರಮ್ಯತೆಯನ್ನು ಮಡಿಲಲ್ಲಿ ತುಂಬಿಕೊಂಡಿರುವ ಇದು ಪ್ರವಾಸಿಗರ ಪಾಲಿಗೆ ಸ್ವರ್ಗ. ದೇಶದ ಆಗ್ನೇಯ ಭಾಗದಲ್ಲಿರುವ ವಿಕ್ಟೋರಿಯಾ ಭೌಗೋಳಿಕವಾಗಿ ಅತ್ಯಂತ ಸಣ್ಣ ಮತ್ತು ಜನಸಂಖ್ಯೆಯಲ್ಲಿ ಎರಡನೇ ಅತಿದೊಡ್ಡ ರಾಜ್ಯ.
 
ಈ ರಾಜ್ಯದ ಹೆಚ್ಚಿನ ಜನರು ಪೋರ್ಟ್‌ ಫಿಲಿಪ್‌ ಬೇ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಪ್ರವಾಸೋದ್ಯಮವೇ ವಿಕ್ಟೋರಿಯಾದ ಜೀವಾಳ. 2,000 ಕಿ.ಮೀ. ಉದ್ದದ ಸಮುದ್ರತೀರ ಮತ್ತು ನೂರಾರು ಬೀಚ್‌ಗಳು ಈ ರಾಜ್ಯದ ಸೊಬಗನ್ನು ಹೆಚ್ಚಿಸಿವೆ. ರಾಜಧಾನಿ ಮೆಲ್ಬರ್ನ್‌ ಸೇರಿದಂತೆ ವಿಕ್ಟೋರಿಯಾದ ಸೌಂದರ್ಯ ಸವಿಯುವುದು ಅದೇನೋ ಖುಷಿ ಕೊಡುತ್ತದೆ.
 
ಮೋಹಕ ನಗರಿ ಮೆಲ್ಬರ್ನ್‌
ಆಸ್ಟ್ರೇಲಿಯಾದ ಎರಡನೇ ಅತಿದೊಡ್ಡ ನಗರ ಮೆಲ್ಬರ್ನ್‌ ಆಧುನಿಕತೆಯನ್ನು ಮೇಳೈಸಿಕೊಂಡು ಗಮನ ಸೆಳೆಯುತ್ತದೆ. ಈ ನಗರಕ್ಕೆ  ಭವ್ಯ ಸಂಸ್ಕೃತಿಯ ಹಿನ್ನೆಲೆಯಿಲ್ಲ. ಇತರ ದೇಶಗಳ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ತನ್ನಲ್ಲಿ ಮೈಗೂಡಿಸಿಕೊಂಡು ಬೆಳೆದಿದೆ. 
 
ರೆಸ್ಟೋರೆಂಟ್, ಹೋಟೆಲ್, ಬಾರ್‌ ಮತ್ತು ನೈಟ್‌ ಕ್ಲಬ್‌ಗಳಿಗೆ ಇಲ್ಲಿ ಕೊರತೆಯಿಲ್ಲ. ಗಗನಚುಂಬಿ ಕಟ್ಟಡಗಳು, ಸಾಲು ಸಾಲು ಅಪಾರ್ಟ್‌ಮೆಂಟ್‌ಗಳು ಈ ನಗರಕ್ಕೆ ಐಷಾರಾಮಿ ಆಯಾಮವನ್ನು ನೀಡಿವೆ. ಶ್ರೀಮಂತರು, ಸಮಾಜದ ಉನ್ನತ ಸ್ಥರದ ಜನರು ವಾಸಿಸುವ ಮತ್ತು ರಜಾದಿನಗಳನ್ನು ಕಳೆಯುವ ‘ವೈಭವ ನಗರಿ’ ಎಂದು ಮೆಲ್ಬರ್ನ್‌ ಅನ್ನು ಕರೆಯಬಹುದು. 
 
(ಫಿಲಿಪ್ ದ್ವೀಪದಲ್ಲಿ ಪೆರೇಡ್‌ ನಡೆಸುತ್ತಿರುವ ಪೆಂಗ್ವಿನ್‌ಗಳು)
ವಾರದ ಐದು ದಿನ ಕಷ್ಟಪಟ್ಟು ದುಡಿದು ವಾರಾಂತ್ಯದ ಎರಡು ದಿನ ಕುಟುಂಬದ ಸದಸ್ಯರು ಮತ್ತು ಗೆಳೆಯರ ಜತೆ ಪಾನ ಪಾರ್ಟಿ ನಡೆಸಿ ಮಜಾ ಅನುಭವಿಸುವ ಮನೋಭಾವ ಇಲ್ಲಿನ ಜನರಲ್ಲಿ ಕಾಣಬಹುದು. ಅತ್ಯುತ್ತಮ ಸಾರಿಗೆ ವ್ಯವಸ್ಥೆ ಮೆಲ್ಬರ್ನ್‌ನಲ್ಲಿ ಸಂಚಾರವನ್ನು ಸುಲಭವಾಗಿಸುತ್ತದೆ. ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಟ್ರ್ಯಾಮ್‌ಗಳಲ್ಲಿ ಎಲ್ಲರಿಗೂ ಉಚಿತ ಪ್ರಯಾಣ. ಭೂಗತ ಮೆಟ್ರೊ ರೈಲು ಮತ್ತು ವಿಶಾಲ ರಸ್ತೆಗಳಿರುವುದರಿಂದ ಟ್ರಾಫಿಕ್ ಜಾಮ್‌ನ ಕಿರಿಕಿರಿ ಅಷ್ಟೊಂದಿಲ್ಲ.
 
ಅಚ್ಚುಕಟ್ಟಾದ ರಸ್ತೆಗಳು, ವಿಶಾಲ ಫುಟ್‌ಪಾತ್‌, ಟ್ರಾಫಿಕ್‌ ನಿಯಮ ಉಲ್ಲಂಘಿಸದೆ ಸಾಗುವ ವಾಹನಗಳು... ಮೆಲ್ಬರ್ನ್‌ನಲ್ಲಿ ಎಲ್ಲವೂ ಶಿಸ್ತುಬದ್ಧ. ಈ ನಗರದಲ್ಲಿ ಮೂರು ದಿನ ತಂಗಿದ್ದರೂ ವಾಹನದ ಹಾರ್ನ್‌ ನನ್ನ ಕಿವಿಗೆ ಬೀಳಲಿಲ್ಲ! ಪ್ರತಿಯೊಬ್ಬರೂ ಟ್ರಾಫಿಕ್‌ ನಿಯಮ ಕಟ್ಟುನಿಟ್ಟಾಗಿ ಪಾಲಿಸುವುದು ಇದಕ್ಕೆ ಕಾರಣವಿರಬಹುದು. 
 
ಕಂಡಕಂಡಲ್ಲಿ ಉಗುಳುವುದು, ತಿಂದು–ಕುಡಿದು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ಇಲ್ಲಿ ಕಾಣಲು ಸಾಧ್ಯವೇ ಇಲ್ಲ. ನಗರದ ಮಧ್ಯಭಾಗದಲ್ಲಿ ಹರಿಯುವ ಯಾರ್ರಾ ನದಿಯ ನೀರು ಕಲುಷಿತಗೊಂಡಿಲ್ಲ. ನದಿ ದಡದಲ್ಲಿ ಸಾಲು ಸಾಲು ರೆಸ್ಟೋರೆಂಟ್‌ಗಳಿವೆ. ಇಳಿ ಸಂಜೆಯಾಗುತ್ತಿದ್ದಂತೆಯೇ ಇಲ್ಲಿ ಹಬ್ಬದ ವಾತಾವರಣ ಕಂಡುಬರುತ್ತದೆ. 
 
ಮೆಲ್ಬರ್ನ್‌ನಲ್ಲಿ 88 ಮಹಡಿಗಳ ‘ಯುರೇಕಾ ಸ್ಕೈಡೆಕ್’ ಕಟ್ಟಡವಿದೆ. ಅದರ ಮೇಲೆ ಹತ್ತಿ ನಗರದ ಸೌಂದರ್ಯ ಸವಿಯಬಹುದು.  ಕಟ್ಟಡದ ತುತ್ತತುದಿಯಲ್ಲಿ ಗಾಜಿನ ಸಣ್ಣ ಕೊಠಡಿಯಿದೆ. ಕಟ್ಟಡದಿಂದ ಹೊರಭಾಗಕ್ಕೆ ಚಾಚಿರುವ ಆ ಕೊಠಡಿಯಲ್ಲಿ ನಿಂತಾಗ ಹೊಟ್ಟೆಯಲ್ಲಿ ಕಚಗುಳಿ ಇಟ್ಟಂತಾಗುತ್ತದೆ. ಸದರ್ನ್‌ ಹೆಮಿಸ್ಪಿಯರ್‌ನ (ದಕ್ಷಿಣಾರ್ಧ ಗೋಳ) ಅತಿದೊಡ್ಡ ಅಪಾರ್ಟ್‌ಮೆಂಟ್‌ ಕಟ್ಟಡ ಇದು.
 
‘ಮೆಲ್ಬರ್ನ್‌  ಸೀಲೈಫ್ ಅಕ್ವೇರಿಯಂ’ ಇಲ್ಲಿನ ಮತ್ತೊಂದು ಅದ್ಭುತ. ಶಾರ್ಕ್‌, ಸ್ಟಿಂಗ್‌ ರೇ, ಭಾರಿ ಗಾತ್ರದ ಮೀನುಗಳು, ಆಮೆ, ಪೆಂಗ್ವಿನ್‌ಗಳು ಇಲ್ಲಿವೆ. ಈ ಅಕ್ವೇರಿಯಂ ಪ್ರವೇಶಿಸುವಾಗ ಸಮುದ್ರದಾಳಕ್ಕೆ ಇಳಿದ ಅನುಭವ ಉಂಟಾಗದೇ ಇರದು.  ವಿಶ್ವಪ್ರಸಿದ್ಧ ಕ್ರೀಡಾಂಗಣಗಳಾದ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ ಮತ್ತು ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ಸ್ಲಾಮ್‌ ಟೆನಿಸ್‌ ಟೂರ್ನಿ ನಡೆಯುವ ಮೆಲ್ಬರ್ನ್‌ ಪಾರ್ಕ್‌ ಈ ನಗರದಲ್ಲಿ ಹೆಮ್ಮೆಯಿಂದ ಕುಳಿತಿವೆ. 
 
ಕ್ವೀನ್ ವಿಕ್ಟೋರಿಯಾ ಮಾರುಕಟ್ಟೆ
ಮಾರುಕಟ್ಟೆ ಹೇಗಿರಬೇಕು ಎನ್ನುವುದಕ್ಕೆ ಈ ನಗರದ ಹೃದಯ ಭಾಗದಲ್ಲಿರುವ ‘ಕ್ವೀನ್‌ ವಿಕ್ಟೋರಿಯಾ ಮಾರುಕಟ್ಟೆ’ ಉತ್ತಮ ಉದಾಹರಣೆ. ಮಾರುಕಟ್ಟೆ ಬಗ್ಗೆ ಭಾರತೀಯರು ಹೊಂದಿರುವ ಕಲ್ಪನೆ ಇಲ್ಲಿಗೆ ಭೇಟಿ ನೀಡಿದ ತಕ್ಷಣ ಹೊರಟುಹೋಗುತ್ತದೆ. ಮೀನು, ಮಾಂಸ, ತರಕಾರಿ, ಹಣ್ಣು ಸೇರಿದಂತೆ ಎಲ್ಲ ವಸ್ತುಗಳು ಒಂದೇ ಸ್ಥಳದಲ್ಲಿ ದೊರೆಯುತ್ತವೆಯಾದರೂ ಕೆಟ್ಟ ವಾಸನೆ ಮೂಗಿಗೆ ಬಡಿಯದು. ಕಸದ ತುಣುಕು ಕಣ್ಣಿಗೆ ಬೀಳದು.  
 
ಮಾರುಕಟ್ಟೆ ಎಂದರೆ ಅಲ್ಲಿ ಗದ್ದಲ ಇರಬೇಕು ಎಂಬ ‘ಅಲಿಖಿತ ನಿಯಮ’ ನಮ್ಮಲ್ಲಿದೆ. ಆದರೆ ವಿಕ್ಟೋರಿಯಾ ಮಾರುಕಟ್ಟೆಯ ಪರಿಸರ ತೀರಾ ಭಿನ್ನ.  ಚೌಕಾಸಿಯ ಮಾತು ಇಲ್ಲವೇ ಇಲ್ಲ. ಗ್ರಾಹಕರು ನಿಗದಿತ ಹಣ ತೆತ್ತು ಖರೀದಿ ಮಾಡುತ್ತಾರೆ. 
 
ಮಾರುಕಟ್ಟೆಯಲ್ಲಿ ಹಲವು ರೆಸ್ಟೋರೆಂಟ್ ಮತ್ತು ಕೆಫೆಗಳಿವೆ. ಅಗತ್ಯ ಸಾಮಗ್ರಿ ಖರೀದಿಸಲು ಇಲ್ಲಿಗೆ ಬರುವವರು ಭಿನ್ನ ಖಾದ್ಯಗಳನ್ನು ಸವಿಯಬಹುದು. ಇಟಲಿ, ಜರ್ಮನಿ, ಗ್ರೀಸ್‌ ಸೇರಿದಂತೆ ವಿದೇಶದ ಮಂದಿ ಕೂಡಾ ಇಲ್ಲಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದಾರೆ. 1878ರಲ್ಲಿ ಆರಂಭವಾದ ಈ ಮಾರುಕಟ್ಟೆ ಇಂದು ಸದರ್ನ್‌ ಹೆಮಿಸ್ಪಿಯರ್‌ನ (ದಕ್ಷಿಣಾರ್ಧ ಗೋಳ) ಅತಿದೊಡ್ಡ ‘ಓಪನ್ ಮಾರ್ಕೆಟ್‌’ ಎಂಬ ಗೌರವ ಹೊಂದಿದೆ.  
 
ಟ್ರ್ಯಾಮ್‌ನಲ್ಲಿ ಭೋಜನ
‘ಕಲೋನಿಯಲ್ ಟ್ರ್ಯಾಮ್ ಕಾರ್ ರೆಸ್ಟೋರೆಂಟ್‌’ನಲ್ಲಿ ಕುಳಿತು ರಾತ್ರಿಯ ಭೋಜನ ಸವಿಯದಿದ್ದರೆ ಮೆಲ್ಬರ್ನ್‌ ಭೇಟಿ ಅಪೂರ್ಣ ಎನ್ನಬಹುದು. ಒಂದು ನಿರ್ದಿಷ್ಟ ನಿಲ್ದಾಣದಲ್ಲಿ ಟ್ರ್ಯಾಮ್ ಏರಬೇಕು. ರೆಸ್ಟೋರೆಂಟ್‌ ರೀತಿಯಲ್ಲಿ ಟ್ರ್ಯಾಮ್‌ನ ಒಳಾಂಗಣ ವಿನ್ಯಾಸ ಮಾಡಲಾಗಿದೆ. 
 
ರಾತ್ರಿ 8.30ಕ್ಕೆ ಪ್ರಯಾಣ ಆರಂಭಿಸುವ ಟ್ರ್ಯಾಮ್‌ ಸುಮಾರು ಮೂರು ಗಂಟೆ ಕಾಲ ಮೆಲ್ಬರ್ನ್‌ ಹಾಗೂ ಹೊರವಲಯದಲ್ಲಿ ಸುತ್ತು ಹಾಕುತ್ತದೆ. ಟ್ರ್ಯಾಮ್‌ನಲ್ಲಿ ದೊರೆಯುವ ಆಸ್ಟ್ರೇಲಿಯಾದ ವಿವಿಧ ಖಾದ್ಯಗಳನ್ನು ಸೇವಿಸುವ ಜತೆಗೆ ರಾತ್ರಿಯಲ್ಲಿ ನಗರದ ಸೌಂದರ್ಯ ಸವಿಯಬಹುದು. 
 
ಟ್ರ್ಯಾಮ್ ಕಾರ್ ರೆಸ್ಟೋರೆಂಟ್‌ನಲ್ಲಿ ವಾರಾಂತ್ಯದಲ್ಲಿ ಸೀಟು ಸಿಗುವುದು ಕಷ್ಟ. ಒಂದು ತಿಂಗಳು ಮುಂಚಿತವಾಗಿಯೇ ಬುಕ್‌ ಮಾಡಬೇಕು. ಇಂತಹ ಎರಡು ಟ್ರ್ಯಾಮ್ ರೆಸ್ಟೋರೆಂಟ್‌ಗಳಿವೆ. 
 
ಕಡಿಮೆ ಜನಸಂಖ್ಯೆ
ಭಾರತದಲ್ಲಿ ಜನಸಂಖ್ಯೆ ನಿಯಂತ್ರಣದ ಚಿಂತೆಯಾದರೆ ಕಾಂಗರೂ ನಾಡಿನವರಿಗೆ ಕಡಿಮೆ ಜನಸಂಖ್ಯೆಯ ಚಿಂತೆ. ವಿಸ್ತೀರ್ಣದಲ್ಲಿ ಭಾರತಕ್ಕಿಂತ ದೊಡ್ಡದಿರುವ ಆಸ್ಟ್ರೇಲಿಯಾದ ಜನಸಂಖ್ಯೆ ಕೇವಲ 2 ಕೋಟಿ 42 ಲಕ್ಷ (2016ರ ಜನಗಣತಿ ಪ್ರಕಾರ). 
 
ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ಜನಸಾಂದ್ರತೆ ಇರುವ ರಾಜ್ಯ ವಿಕ್ಟೋರಿಯಾ. ಆದರೆ ಇಲ್ಲಿಗೆ ಭೇಟಿ ನೀಡುವ ಭಾರತೀಯರಿಗೆ ಇಲ್ಲಿನ ಜನಸಂಖ್ಯೆ ನೋಡಿ ಅಚ್ಚರಿ ಉಂಟಾಗದೇ ಇರದು. 
 
ಮೆಲ್ಬರ್ನ್‌ ನಗರ ವ್ಯಾಪ್ತಿ ಬಿಟ್ಟು ಹೊರಹೋದರೆ ಒಬ್ಬನೇ ಒಬ್ಬ ಮನುಷ್ಯ ಕಣ್ಣಿಗೆ ಬೀಳುವುದಿಲ್ಲ. ಹೆದ್ದಾರಿಯಲ್ಲಿ ಸುಮಾರು 150ರಿಂದ 200 ಕಿ.ಮೀ ಕ್ರಮಿಸಿ ಇನ್ನೊಂದು ಪಟ್ಟಣ ಸೇರುವವರೆಗೆ ನರಪಿಳ್ಳೆಯೂ ಕಾಣುವುದಿಲ್ಲ. ವಿಶಾಲ ಹುಲ್ಲುಗಾವಲಿನಲ್ಲಿ ಜಾನುವಾರುಗಳು ಮೇಯುತ್ತಿರುವುದು ಮಾತ್ರ ಕಾಣಿಸುತ್ತದೆ.
 
ಸಾವರಿನ್ ಹಿಲ್ 
ಮೆಲ್ಬರ್ನ್‌ ಅಲ್ಲದೆ ವಿಕ್ಟೋರಿಯಾ ರಾಜ್ಯದಲ್ಲಿ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ನಗರದಿಂದ 120 ಕಿ.ಮೀ. ದೂರದಲ್ಲಿ ಸಾವರಿನ್ ಹಿಲ್ ಇದೆ. ಕಾರಿನಲ್ಲಿ 90 ನಿಮಿಷಗಳಲ್ಲಿ ಇಲ್ಲಿಗೆ ತಲುಪಬಹುದು. ಬ್ಯಾಲರಟ್ ಪಟ್ಟಣದ ಹೊರವಲಯದಲ್ಲಿರುವ ಇದು ಸಾಧಾರಣ ಬೆಟ್ಟ ಅಲ್ಲ. ಒಂದು ಕಾಲದಲ್ಲಿ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿತ್ತು. 1850ರಲ್ಲಿ ‘ವಿಕ್ಟೋರಿಯಾ ಗೋಲ್ಡ್ ರಶ್’ ನಡೆದ ಸ್ಥಳವಿದು. ಚಿನ್ನದ ಗಣಿಗಾರಿಕೆಯಿಂದಾಗಿ ಮೆಲ್ಬರ್ನ್‌ 19ನೇ ಶತಮಾನದ ಆರಂಭದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ನಗರಗಳಲ್ಲಿ ಒಂದೆನಿಸಿಕೊಂಡಿತ್ತು. ಚೀನಾದಿಂದ ಬಂದ ಗಣಿ ಕಾರ್ಮಿಕರು ಇಲ್ಲಿನ ಚಿನ್ನದ ಗಣಿಯಲ್ಲಿ ದುಡಿದಿದ್ದರು. 
 
ಸಾವರಿನ್ ಹಿಲ್‌ಗೆ ಭೇಟಿ ನೀಡಿದಾಗ ಒಂದೂವರೆ ಶತಮಾನದಷ್ಟು ಹಿಂದಕ್ಕೆ ಹೋದ ಅನುಭವ ಉಂಟಾಗುತ್ತದೆ. 1850ರಲ್ಲಿ  ಇಲ್ಲಿನ ಪರಿಸರ ಹೇಗಿತ್ತೋ, ಅದನ್ನು ಪುನರ್‌ನಿರ್ಮಾಣ  ಮಾಡಿ ಈ ಬೆಟ್ಟವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗಿದೆ.  
 
ಪ್ರವಾಸಿಗರಿಗೆ ಇಲ್ಲಿ ಚಿನ್ನದ ‘ಗಣಿಗಾರಿಕೆ’ಗೆ ಅವಕಾಶವಿದೆ. ಒಂದು ಪುಟ್ಟ ಹಳ್ಳ ಇಲ್ಲಿ ಹರಿಯುತ್ತಿದೆ. ಅಲ್ಲಿಂದ ಒಂದಷ್ಟು ಮರಳು ಮಿಶ್ರಿತ ಮಣ್ಣು ಪಾತ್ರೆಗೆ ಹಾಕಬೇಕು. ಆ ಪಾತ್ರೆಯನ್ನು ನೀರಿನಲ್ಲಿ ಮುಳುಗಿಸುತ್ತಾ ಮಣ್ಣು ಹಾಗೂ ಮರಳನ್ನು ಮೆಲ್ಲಮೆಲ್ಲನೆ ಖಾಲಿ ಮಾಡಬೇಕು. ಪಾತ್ರೆಯ ತಳದಲ್ಲಿ ಚಿನ್ನದ ತುಣುಕುಗಳು ಉಳಿಯುತ್ತವೆ. ಸಾವರಿನ್‌ ಹಿಲ್‌ಗೆ ಭೇಟಿ ನೀಡಿದ ನೆನಪಿಗೆ ಆ ಚಿನ್ನವನ್ನು ನೀವು ಕೊಂಡೊಯ್ಯಬಹುದು.  
 
ಇಲ್ಲಿಗೆ ಭೇಟಿ ನೀಡುವವರನ್ನು ಟ್ರ್ಯಾಮ್‌ನಲ್ಲಿ ಗಣಿಯ ಆಳಕ್ಕೆ ಕರೆದೊಯ್ಯುವರು. ಸುಮಾರು 30 ಮಂದಿ ಕುಳಿತುಕೊಳ್ಳಬಹುದಾದ ಟ್ರ್ಯಾಮ್‌ ಕತ್ತಲನ್ನು ಸೀಳಿಕೊಂಡು ಗಣಿಯೊಳಕ್ಕೆ ಇಳಿಯುವಾಗ ಕುತೂಹಲದ ಜೊತೆ ಭಯವೂ ಆಗುತ್ತದೆ. ಸುರಂಗದ ಕೊನೆಯಲ್ಲಿ ದೀಪದ ಬೆಳಕು ಕಾಣುವವರೆಗೆ ಎಲ್ಲರೂ ಉಸಿರು ಬಿಗಿಹಿಡಿದು ಕುಳಿತುಕೊಳ್ಳುವರು. ಗಣಿಯ ಆಳದಲ್ಲಿ  ಸುರಂಗದಲ್ಲಿ ನಡೆದಾಡುವಾಗ ಗಣಿ ಕಾರ್ಮಿಕರು ಎಷ್ಟು ಕಷ್ಟ ಪಟ್ಟಿರಬಹುದು ಎಂಬುದು ಮನವರಿಕೆಯಾಗುತ್ತದೆ.
 
ಬ್ಯಾಲರಟ್ ವೈಲ್ಡ್‌ಲೈಫ್‌ ಪಾರ್ಕ್‌
ಮೆಲ್ಬರ್ನ್‌ನಿಂದ ಸಾವರಿನ್ ಹಿಲ್‌ಗೆ ತೆರಳುವ ಹಾದಿಯಲ್ಲಿ ಬ್ಯಾಲರಟ್ ಮೃಗಾಲಯ ಇದೆ. ಕಾಂಗರೂ, ಕೋಲಾ ಸೇರಿದಂತೆ ಆಸ್ಟ್ರೇಲಿಯಾದ ನೆಚ್ಚಿನ ಪ್ರಾಣಿಗಳ ಜತೆಗೆ ಅಳಿವಿನ ಅಂಚಿನಲ್ಲಿರುವ ಅಪರೂಪದ ಪ್ರಾಣಿಗಳು ಇಲ್ಲಿವೆ. ಕಾಂಗರೂಗಳ ಜತೆ ನಿಂತು ಫೋಟೊ ತೆಗೆಸಿಕೊಳ್ಳಬಹುದು. ಅವುಗಳಿಗೆ ಆಹಾರ ನೀಡಬಹುದು. ಬೃಹತ್ ಗಾತ್ರದ ಆಮೆಗಳು ಇಲ್ಲಿವೆ. ಅಲ್ಡಾಬ್ರ ಜಾತಿಗೆ ಸೇರಿದ ಗಂಡು ಆಮೆಗಳು ಗರಿಷ್ಠ 250 ಕೆ.ಜಿ ಮತ್ತು ಹೆಣ್ಣು ಆಮೆಗಳು 160 ಕೆ.ಜಿ. ತೂಗಬಲ್ಲದು.
 
ಫಿಲಿಪ್ ದ್ವೀಪದಲ್ಲಿ ಪೆಂಗ್ವಿನ್‌ ಪೆರೇಡ್‌
ವಿಕ್ಟೋರಿಯಾ ರಾಜ್ಯದ ಕರಾವಳಿಯಿಂದ ಸ್ವಲ್ಪ ದೂರದಲ್ಲಿ ಫಿಲಿಪ್ ದ್ವೀಪ ಇದೆ. ಈ ದ್ವೀಪ ತಲುಪಲು ಮೆಲ್ಬರ್ನ್‌ನಿಂದ ಆಗ್ನೇಯ ಭಾಗಕ್ಕೆ 140 ಕಿ.ಮೀ ಪ್ರಯಾಣಿಸಬೇಕು. 640 ಮೀ. ಉದ್ದದ ಸೇತುವೆ ಆಸ್ಟ್ರೇಲಿಯಾದ ಭೂಭಾಗದಿಂದ ಈ ದ್ವೀಪಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಪುಟ್ಟ ದ್ವೀಪ 26 ಕಿ.ಮೀ. ಉದ್ದ ಹಾಗೂ 9 ಕಿ.ಮೀ. ಅಗಲವಿದೆ. 97 ಕಿ.ಮೀ. ಸಮುದ್ರ ತೀರ ಹೊಂದಿರುವ ಈ ದ್ವೀಪ ಸರ್ಫಿಂಗ್‌ಗೆ ಹೇಳಿ ಮಾಡಿಸಿದೆ. 
 
‘ಸೀಲ್ ರಾಕ್’ ನೋಡಲು ಬೋಟ್‌ನಲ್ಲಿ ಪ್ರಯಾಣಿಸುವಾಗ ಮೈಜುಮ್ಮೆನ್ನುತ್ತದೆ. ನೀಲ ಸಾಗರದಲ್ಲಿ ಬೋಟ್‌ ಗಂಟೆಗೆ 45 ಕಿ.ಮೀ. ವೇಗದಲ್ಲಿ ಸಾಗುವಾಗ ಎದೆಬಡಿತ ಹೆಚ್ಚುತ್ತದೆ. ಬಲವಾಗಿ ಬೀಸುವ ತಂಗಾಳಿ, ನೀಲ ಆಗಸ, ಆಗೊಮ್ಮೆ ಈಗೊಮ್ಮೆ ದೇಹಕ್ಕೆ ಸಮುದ್ರ ನೀರಿನ ಸಿಂಚನ... ಆ ಅನುಭವ ವರ್ಣನಾತೀತ.
ಸಮುದ್ರದಲ್ಲಿ ಸುಮಾರು 14 ನಾಟಿಕಲ್ ಮೈಲು (25 ಕಿ.ಮೀ) ಕ್ರಮಿಸಿದರೆ ಸೀಲ್ ರಾಕ್ ದರ್ಶನವಾಗುತ್ತದೆ. ವಿಶಾಲವಾಗಿ ಹರಡಿರುವ ಬಂಡೆಕಲ್ಲಿನ ಮೇಲೆ ಸಾವಿರಾರು ಸೀಲ್‌ಗಳನ್ನು ನೋಡಬಹುದು. ಈ ಸಮುದ್ರಜೀವಿಯನ್ನು ನೋಡುವಾಗ ನಿಬ್ಬೆರಗಾಗುವುದು ಸಹಜ.  
 
ಫಿಲಿಪ್ ದ್ವೀಪದ ಪ್ರಧಾನ ಆಕರ್ಷಣೆ ಪೆಂಗ್ವಿನ್ ಪೆರೇಡ್. ಸೂರ್ಯಾಸ್ತದ ಬಳಿಕ ಕೆಲವು ನಿಮಿಷಗಳಲ್ಲಿ ಪೆಂಗ್ವಿನ್‌ಗಳ ದಂಡು ಸಮುದ್ರದಿಂದ ಎದ್ದು ಬರುತ್ತದೆ. ಪುಟ್ಟ ಗಾತ್ರದ ನೂರಾರು ಪೆಂಗ್ವಿನ್‌ಗಳು ಗುಂಪು ಗುಂಪಾಗಿ ದಡಕ್ಕೆ ಬರುವುದನ್ನು ನೋಡಲು ಬಲು ಚೆಂದ.
 
ಪೆಂಗ್ವಿನ್‌ಗಳಿಗೆ ವಿಶ್ರಾಂತಿ ಪಡೆಯಲು ತೀರ ಪ್ರದೇಶದಲ್ಲಿ ಸಣ್ಣ ಗೂಡುಗಳನ್ನು ನಿರ್ಮಿಸಿಟ್ಟಿದ್ದಾರೆ. ಈ ಗೂಡುಗಳಲ್ಲಿ ರಾತ್ರಿ ವಿಶ್ರಾಂತಿ ಪಡೆಯುವ ಪೆಂಗ್ವಿನ್‌ಗಳು ಸೂರ್ಯೋದಯಕ್ಕೆ ಮುನ್ನ ಮತ್ತೆ ಸಮುದ್ರಕ್ಕೆ ಇಳಿಯುತ್ತವೆ. ನಿತ್ಯವೂ ಈ ಪ್ರಕ್ರಿಯೆ ನಡೆಯುತ್ತದೆ. ಪೆಂಗ್ವಿನ್‌ಗಳು ಯಾವ ಹೊತ್ತಿಗೆ ದಡಕ್ಕೆ ಬರುತ್ತವೆ ಎಂಬುದನ್ನು ಮೊದಲೇ ಅಂದಾಜು ಮಾಡಿ ಆ ಸಮಯವನ್ನು ತಿಳಿಸುತ್ತಾರೆ. 
 
ಈ ದ್ವೀಪವನ್ನು ಇನ್ನಷ್ಟು ಆಕರ್ಷಕಣೀಯ ಮಾಡಲು ವಿಕ್ಟೋರಿಯಾ ಪ್ರವಾಸೋದ್ಯಮ ಇಲಾಖೆ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಮೆಲ್ಬರ್ನ್‌ಗೆ ಭೇಟಿ ನೀಡಿದರೆ ಫಿಲಿಪ್ ದ್ವೀಪಕ್ಕೆ ಒಂದು ದಿನದ ಟ್ರಿಪ್ ಹೋಗಲು ಮರೆಯದಿರಿ. 
 
(ಲೇಖಕರು ‘ಟೂರಿಸಂ ಆಸ್ಟ್ರೇಲಿಯಾ’ ಮತ್ತು ‘ವಿಸಿಟ್‌ ವಿಕ್ಟೋರಿಯಾ’ ಆಹ್ವಾನದ ಮೇರೆಗೆ ಮೆಲ್ಬರ್ನ್‌ಗೆ ಭೇಟಿ ನೀಡಿದ್ದರು) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.