ADVERTISEMENT

ಹುಬ್ಬೇರಿಸಿ ಹೆಬ್ಬೆ ನೋಡಿ...

ಸುತ್ತಾಣ

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST
ಕೆಮ್ಮಣ್ಣಗುಂಡಿಯ ಝಡ್‌ ಪಾಯಿಂಟ್‌ನ  ನೋಟ
ಕೆಮ್ಮಣ್ಣಗುಂಡಿಯ ಝಡ್‌ ಪಾಯಿಂಟ್‌ನ ನೋಟ   

ರಾಜ್ಯದ ಪ್ರಮುಖ ಜಲಪಾತಗಳಲ್ಲಿ ಒಂದಾಗಿರುವ ‘ಹೆಬ್ಬೆ’ ಕೆಮ್ಮಣ್ಣುಗುಂಡಿ ಬಳಿ ಇದೆ. ಕೆಮ್ಮಣ್ಣುಗುಂಡಿ ಬೆಂಗಳೂರಿನಿಂದ ಸುಮಾರು 258 ಕಿ.ಮೀ ದೂರವಿದೆ. ಹೆಬ್ಬೆ ನೋಡಲು ನಂತರ 13 ಕಿ.ಮೀ ಕ್ರಮಿಸಬೇಕು.

ಕಲ್ಹತ್ತಿಪುರದಿಂದ ಕೆಮ್ಮಣ್ಣುಗುಂಡಿಗೆ ಹೋಗುವ ದಾರಿಯಲ್ಲೇ, ಕೆಮ್ಮಣ್ಣುಗುಂಡಿ ಗಿರಿಧಾಮದ ಪ್ರವೇಶದಲ್ಲಿಯೇ ಭದ್ರ ಅಭಯಾರಣ್ಯದ ಪ್ರವೇಶ ದ್ವಾರ ಸಿಗುತ್ತದೆ. ಅಲ್ಲಿಂದ ಹೆಬ್ಬೆ ಕಡೆಗಿನ ಪಯಣ ಶುರು. ಇವೆಲ್ಲಾ ಒಣ ವಿವರವಾಯಿತು. ಆದರೆ ಹೆಬ್ಬೆ ಕಡೆಗಿನ ಪಯಣದ ಅನುಭವವೇ ಬೇರೆ.

ಅಭಯಾರಣ್ಯದ ಪ್ರವೇಶದ್ವಾರದಲ್ಲಿಯೇ ಒಂದು ಕೊಠಡಿ ಇದೆ. ಆ ಕೊಠಡಿಯ ಗೋಡೆಗಳ ಮೇಲೆ ಹಲವಾರು ಸೂಚನಾ ಬರಹಗಳಿವೆ. ಅಲ್ಲಿನ ಸಿಬ್ಬಂದಿ ತಕ್ಷಣವೇ ನಿಮ್ಮ ಕಣ್ಣಿಗೆ ಬೀಳುವುದು ಕಡಿಮೆ.

ಸಿಬ್ಬಂದಿ ಹತ್ತಿರದಲ್ಲೇ ಇರುವ ಬೇರೆ ಬೇರೆ ಚೆಕ್‌ಪೋಸ್ಟ್‌ಗಳಿಗೆ ಹೋಗಿರುತ್ತರೆ. ಇಲ್ಲವೆ ನಿಮಗಿಂತ ಮೊದಲೇ ಬಂದಿರುವ ಪ್ರವಾಸಿಗರಿಗೆ ಹೆಬ್ಬೆಯ ದಾರಿ ತೋರಿಸಲು ಹೋಗಿರುತ್ತಾರೆ. ಅಲ್ಲೇ ಮಲೆನಾಡು ಗಿಡ್ಡ ದನಗಳನ್ನು ಮೇಯಿಸುತ್ತಾ ಇರುವವರ ಬಳಿ ಸಿಬ್ಬಂದಿ ನಂಬರ್‌ ಇರುತ್ತದೆ. ಆ ನಂಬರ್‌ಗೆ ಕರೆ ಮಾಡಿದರೆ ಅರಣ್ಯ ಪಾಲಕರು ಬರುತ್ತಾರೆ. ಒಂದು ವಿಚಾರ, ಆ ಪ್ರದೇಶದಲ್ಲಿ ಕೆಲಸಕ್ಕೆ ಬರುವುದು ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಮಾತ್ರ.

ಗಾಡಿಗಳನ್ನು ಗೇಟಿನಿಂದ ಹೊರಗೇ ನಿಲ್ಲಿಸಿ ಒಂದೆರಡು ಹೆಜ್ಜೆ ಅತ್ತಿತ್ತ ಓಡಾಡಿದರಾಯಿತು. ಗೇಟಿನಿಂದ ಒಳಗೂ ಹೋಗಬಹುದು. ಅಲ್ಲೆಲ್ಲೋ ನೀರು ಕೊರಕಲುಗಳಲ್ಲಿ ನುಸುಳಿ ಹೋಗುವ, ಬಂಡೆಗಲ್ಲಿನಿಂದ ತೊಟ್ಟಿಕ್ಕುವ ಸದ್ದು ಕಿವಿಗೆ ಬೀಳುತ್ತದೆ. ಮತ್ತೊಂದು ಕ್ಷಣ ಕಾಡಿನ ಮರಗಳ ಎಲೆಗಳ ನಡುವೆ ಸುಯ್ಯುತ್ತ ಹುಯಿಲಿಡುವ ಗಾಳಿ ತೂರಿ ಬರುತ್ತದೆ.

ಅಲ್ಲೆಲ್ಲೊ ಒಂದೆರಡು ಪಕ್ಷಿಗಳು ಪಟಪಟನೆ ರೆಕ್ಕೆ ಬಡಿದು ಕಾಡಿನಲ್ಲಿ ಮಾಯವಾಗುತ್ತವೆ. ಇನ್ನು ಏನೇನು ಕಾಣಬಹುದು ಅಷ್ಟೇ ರೋಮಾಂಚಿತರಾಗಿ ಅತ್ತಿತ್ತ ನೋಡುವಾಗ ಅವ ಕಣ್ಣಿಗೆ ಬೀಳುತ್ತಾನೆ. ಕೊಠಡಿಯ ಹಿಂದೆಯೇ ಅವನಿದ್ದಾನೆ. ಅವನನ್ನು ನೋಡಿದ ತಕ್ಷಣ ಎದೆ ಧಸಕ್ಕೆನ್ನುತ್ತದೆ.

ವ್ಯಾಘ್ರ ಎಂಬುದಕ್ಕೆ ತದ್ರೂಪವಾದ ಅನುಭವವನ್ನು ಕೊಡುತ್ತಾನೆ. ಆದರೆ ಅವನು ಚಲಿಸುವುದಿಲ್ಲ. ಫಲಕದ ಮೇಲೇ ನಿಂತು ನಿಮ್ಮನ್ನು ದಿಟ್ಟಿಸಿ ನೋಡುತ್ತಿರುತ್ತಾನೆ. (ಈ ಹುಲಿಯ ಚಿತ್ರ ನೋಡಿದವರ ಹಲವರ ಅನುಭವ ಇದು). ಅವನ ದೃಷ್ಟಿಯಿಂದ ತಪ್ಪಿಸಿಕೊಂಡು ಸುಧಾರಿಸಿಕೊಳ್ಳುವಷ್ಟರಲ್ಲಿ ಸಿಬ್ಬಂದಿ ಬಂದಿರುತ್ತಾರೆ.

ಅವರಿಗೆ ನಿಮ್ಮ ವಿಳಾಸ ಮತ್ತು ಗಾಡಿಗಳ ಮಾಹಿತಿ ನೀಡಬೇಕು. ನಂತರ ಹೆಬ್ಬೆಗೆ ಹೋಗುವುದಾದರೆ ತಲೆಗೆ ₹ 200ರಂತೆ ಶುಲ್ಕ ಕಟ್ಟಿ ರಸೀದಿ ಪಡೆದು ಮುನ್ನಡೆಯಬೇಕು. ಈ ಪ್ರವೇಶದ್ವಾರದಿಂದ ಒಂದು ಕಿ.ಮೀ ಕ್ರಮಿಸಿದ ನಂತರ ಹೆಬ್ಬೆಗೆ ಹೋಗುವ ಜಾಗ ಸಿಗುತ್ತದೆ. ಇಲ್ಲಿಂದ ಶುರು ಹೆಬ್ಬೆಯ ಪಯಣ.

ಮುಳ್ಳುತಂತಿ, ಸರಳಿನ ಗೇಟ್‌ನಿಂದ ಅಲ್ಲಿಗೆ ಪ್ರವೇಶ ನಿರ್ಬಂಧಿಸಲಾಗಿರುತ್ತದೆ. ಸಿಬ್ಬಂದಿ ಗೇಟ್‌ ತೆರೆದು ನಿಮ್ಮನ್ನು ಒಳಗೆ ಬಿಡುತ್ತಾರೆ. ತಿಂಡಿ ಮತ್ತು ನೀರು ಇರುವ ಬ್ಯಾಗ್‌ಗಳನ್ನು ಹೊತ್ತು ಮುಂದೆ ಹೊರಡಬೇಕು.

ಪಕ್ಕದಲ್ಲಿ ಟಾರಿನ ರಸ್ತೆ ಕಾಣುತ್ತದೆ. ಅದು ಕೆಮ್ಮಣ್ಣುಗುಂಡಿಯಲ್ಲಿ ಕಬ್ಬಿಣದ ಅದಿರು ಗಣಿ ನಡೆಯುತ್ತಿದ್ದಾಗ ನಿರ್ಮಿಸಿದ್ದ ರಸ್ತೆ. ಅದಿರಿಗಾಗಿ ಅಗೆದು ಗುಡ್ಡೆ ಸುರಿದಿರುವ ಮಣ್ಣಿನ ಮೇಲೆ ಈಗ ಹುಲ್ಲು ಹಸನಾಗಿ ಬೆಳೆದಿದೆ. ಇಲ್ಲಿಂದ ಸುಮಾರು 9 ಕಿ.ಮೀ ಚಾರಣ ಶುರು.

ಈ ಹಾದಿಯಲ್ಲಿ ಸುಮಾರು ಏಳೆಂಟು ಕವಲು ದಾರಿ ಸಿಗುತ್ತದೆ. ಅಷ್ಟೂ ಕವಲುಗಳಲ್ಲಿ ಎಡಕ್ಕೇ ತಿರುಗಬೇಕು. ಬಲಕ್ಕೆ ತಿರುಗಿದರೆ ಭದ್ರ ಅಭಯಾರಣ್ಯದ ಮಧ್ಯಕ್ಕೆ ಎಲ್ಲೋ ಹೋಗಿ, ಬಫರ್‌ ಜೋನ್‌ನಲ್ಲಿರುವ ಯಾವುದೋ ಎಸ್ಟೇಟ್‌ನಲ್ಲಿ ಸಿಲುಕುತ್ತೀರಿ. ಹೀಗಾಗಿ ಎಲ್ಲ ಕವಲಿನಲ್ಲಿ ಕಡ್ಡಾಯವಾಗಿ ಎಡದಾರಿಯನ್ನು ಹಿಡಿಯಬೇಕು.

ಎರಡು ಕಿ.ಮೀ ಕ್ರಮಿಸಿದ ನಂತರ ಸಣ್ಣಗುಡ್ಡವೊಂದನ್ನು ಏರಬೇಕು. ನಂತರ ಅದು ಇಳಿಯುತ್ತಾ ಹೋಗುತ್ತದೆ. ಈ ಗುಡ್ಡ ಇಳಿಯುವಾಗ ಎಲ್ಲೆಡೆ ಶೋಲಾ ಕಾಡು ಕಾಣುತ್ತದೆ. ಸೂಕ್ಷ್ಮವಾಗಿ ಕಣ್ಣು ಹಾಯಿಸಿದರೆ, ಅಲ್ಲೆಲ್ಲೋ ದೂರದ ಗುಡ್ಡದ ಮೇಲೆ ಮೇಯುತ್ತಿರುವ ಸಾರಂಗಗಳು ಕಣ್ಣಿಗೆ ಬೀಳುತ್ತವೆ. ಆ ನೋಟವನ್ನು ಸವಿಯುತ್ತಾ ಗುಡ್ಡದ ತಳ ತಲುಪಿರುತ್ತೀರಿ.

ಇಲ್ಲಿ ದಾರಿ ನಮ್ಮ ಹಳ್ಳಿಯ ಮಣ್ಣಿನ ದಾರಿಯಂತೆಯೇ ಇದೆ. ಆದರೆ ರಸ್ತೆ ಮಧ್ಯದಲ್ಲೇ ನೀರು ಹರಿಯುತ್ತಿರುತ್ತದೆ, ನಿಂತಿರುತ್ತದೆ. ನೀರಿನಡಿ ಇರುವ ಸಾಸಿವೆ ಗಾತ್ರದ ಕಲ್ಲೂ ಸ್ಪಷ್ಟವಾಗಿ ಕಾಣುವಷ್ಟು ಆ ನೀರು ಶುಭ್ರವಾಗಿರುತ್ತದೆ.

ಬೊಗಸೆಯಲ್ಲಿ ಮೊಗೆದು ಆ ನೀರನ್ನು ಕುಡಿದು ಮುಂದಡಿ ಇಟ್ಟರಾಯಿತು. ಮತ್ತೆ ಸಣ್ಣ ಏರುದಾರಿ. ಅದನ್ನು ಇಳಿದ ನಂತರ ಸುಮಾರು 6.5 ಕಿ.ಮೀ ಇಳಿಯುತ್ತಲೇ ಇರಬೇಕು.

ಇಳಿಯುವುದೂ  ಕಷ್ಟ ಎನ್ನುವುದು ಗೊತ್ತಾಗುವುದೇ ಇಲ್ಲಿ. ಹೇಳಲು ಮರೆತಿದ್ದೆ. ಚಾರಣ ಆರಂಭವಾಗುವ ಮುನ್ನ ಸಿಬ್ಬಂದಿ ಪ್ರತಿಯೊಬ್ಬರಿಗೂ ಒಂದೊಂದು ಕೋಲು ನೀಡಿರುತ್ತಾರೆ. ಆ ಕೋಲುಗಳನ್ನು ನೆಲಕ್ಕೆ ಊರುತ್ತಾ, ನೀವಿಳಿಯುವ ವೇಗವನ್ನು ನಿಯಂತ್ರಿಸಬೇಕು.

ಹಾದಿ ಮಧ್ಯದಲ್ಲಿ ಮೂರ್ನಾಲ್ಕು ಎಸ್ಟೇಟ್‌ಗಳು ಸಿಗುತ್ತವೆ. ಅಲ್ಲಿ ಕೆಲಸ ಮಾಡುತ್ತಿರುವವರು ನಿಮ್ಮನ್ನು ತಿರುಗಿಯೂ ನೋಡುವುದಿಲ್ಲ. ಆದರೆ ಅಲ್ಲೆಲ್ಲೊ ಪೊದೆಯಲ್ಲಿ ಮಲಗಿರುವ ನಾಯಿಗಳು ಬೊಗಳುತ್ತವೆ. ನಂತರ ಊಳಿಡಲು ಆರಂಭಿಸುತ್ತವೆ. ಅದನ್ನು ಅಲಕ್ಷಿಸಿ ಮುಂದೆ ನಡೆದರೆ ಏಳು ಕಿ.ಮೀ ಕ್ರಮಿಸುವ ವೇಳೆಗೆ ಕೊನೆಯ ಎಸ್ಟೇಟ್ ಸಿಗುತ್ತದೆ.

ಎಸ್ಟೇಟ್‌ಗೂ ಮುನ್ನ ದಾರಿ ಮಧ್ಯೆ ಹತ್ತಾರು ಹಲಸಿನ ಮರಗಳಿವೆ. ಜತೆಗೆ ಎಸ್ಟೇಟ್‌ನಲ್ಲಿ ಗಜಗಾತ್ರದ ಚಕ್ಕೋತ ಹಣ್ಣುಗಳನ್ನು ಕಾಣಬಹುದು. ಇಲ್ಲಿಯವರೆಗೂ ಜೀಪ್‌ ದಾರಿ ಇದೆ. ಆದರೆ ಅಲ್ಲಿಗೆ ಬಫರ್‌ಝೋನ್ ಮುಗಿಯುತ್ತದೆ. ಜತೆಗೆ ಜೀಪುಗಳಿಗೂ ಕ್ರಮಿಸುವುದು ಕಷ್ಟವೆನಿಸುವ ದಾರಿ ಸಿಗುತ್ತದೆ. ಹೀಗಾಗಿ ಅಲ್ಲಿ ಒಂದು ಗೇಟ್‌ ಹಾಕಲಾಗಿದೆ.

ಅದೇ ಜಾಗದಿಂದ ದಟ್ಟಾರಣ್ಯವೂ ಶುರುವಾಗುತ್ತದೆ. ಎತ್ತರದಲ್ಲಿ ಹುಲ್ಲುಗಾವಲು ಕಣಿವೆಯಲ್ಲಿ ದಟ್ಟಾರಣ್ಯ. ಜಲಪಾತ ಧುಮ್ಮಿಕ್ಕುವ ಸದ್ದು ಆಗೊಮ್ಮೆ ಈಗೊಮ್ಮೆ ಕಿವಿಗೆ ಬೀಳುತ್ತಿರುತ್ತದೆ. ಮುಂದೆ ಒಂದೆಡೆ ಹೊಳೆ ಅಡ್ಡವಾಗುತ್ತದೆ. ಅದಕ್ಕೆ ಅಡ್ಡವಾಗಿ ನಿರ್ಮಿಸಿರುವ ಕಲ್ಲು ಸಂಕದ ಮೇಲೆ ಒಂದೊಂದೇ ಹೆಜ್ಜೆ ಇರಿಸಿ ಹಳ್ಳ ದಾಟಬೇಕು.

ಸಿಬ್ಬಂದಿ ಕೊಟ್ಟ ಕಡ್ಡಿ ಇಲ್ಲೂ ಉಪಯೋಗಕ್ಕೆ ಬರುತ್ತದೆ. ಮುಂದೆ ಮತ್ತೆ ಹಳ್ಳ ಎದುರಾಗುತ್ತದೆ. ಅದನ್ನೂ ದಾಟಿ ಕೊರಕಲುಗಳ ಮಧ್ಯೆ ಸಾಗಿದರೆ ಹೆಬ್ಬೆ ಸಿಗುತ್ತದೆ.

ಸುಮಾರು 550 ಅಡಿ ಎತ್ತರದಿಂದ ಹೆಬ್ಬೆ ಎರಡು ಹಂತದಲ್ಲಿ ಧುಮ್ಮಿಕ್ಕುತ್ತದೆ. ಒಂದು ಚಿಕ್ಕ ಹೆಬ್ಬೆ, ಇನ್ನೊಂದು ದೊಡ್ಡ ಹೆಬ್ಬೆ. ಜಲಪಾತದ ತಳದಲ್ಲಿರುವ ಮಡುವಿನ ಆಳ ಹೆಚ್ಚು. ಜತೆಗೆ ಅಲ್ಲಿ ಜಿಗಣೆಗಳ ಕಾಟವೂ ಹೆಚ್ಚು. ಹೀಗಾಗಿ ನೀರಿಗೆ ಇಳಿಯದಿರುವುದೇ ಒಳಿತು.

ಜಲಪಾತವನ್ನು ಸವಿದು ಹಿಂತಿರುಗುವಷ್ಟರಲ್ಲಿ ಸಂಜೆ ಆಗಿರುತ್ತದೆ.  ಮತ್ತೆ 10 ಕಿ.ಮೀ ಚಾರಣ (ಅದರಲ್ಲಿ 8 ಕಿ.ಮೀ ಏರುತ್ತಿರಬೇಕು) ಮಾಡುವುದು ಕಷ್ಟ ಎನಿಸಿದರೆ ಎಸ್ಟೇಟ್‌ ಬಳಿ ಕಾಯಬೇಕು. ಕೂಲಿ ಆಳುಗಳನ್ನು ಕರೆದೊಯ್ಯಲು ಬರುವ ಜೀಪ್‌ಗಳಲ್ಲಿ ಕೆಮ್ಮಣ್ಣುಗುಂಡಿ ತಲುಪಬಹುದು. ಆದರೆ ಶುಲ್ಕ ಮಾತ್ರ ದುಬಾರಿ. ಆದರೆ ಅದರ ಅನುಭವವೂ ಬೇರೆ.

ಬೆಳಿಗ್ಗೆ ನಿಮ್ಮೆಡೆ ತಿರುಗಿಯೂ ನೋಡದ ಕೂಲಿ ಆಳುಗಳು ತಾವು ಕಾಡಿನಿಂದ ತಂದಿರುವ ಕಾಡುಹಣ್ಣುಗಳನ್ನು ಸುಲಿದು ಕೊಡುತ್ತಾರೆ. ಕತ್ತಲಾಗುವ ಮುನ್ನ ಕೆಮ್ಮಣ್ಣುಗುಂಡಿಗೆ ಹಿಂತಿರುಗುವುದು ಒಳಿತು.

ಹೆಬ್ಬೆ ಪ್ರದೇಶದಲ್ಲಿ ಹುಲಿ ಸಂಚಾರವಿದೆ. ಇದು ಚಿರತೆಗಳ ನೆಲೆಯೂ ಹೌದು. ಕಳೆದ ವರ್ಷ ಚಿಕ್ಕಮಗಳೂರು ತಾಲ್ಲೂಕು ಪಂಡರವಳ್ಳಿಯಲ್ಲಿ ಸೆರೆ ಹಿಡಿದ ಹುಲಿ ಓಡಾಡುತ್ತಿದ್ದ ಜಾಗಗಳಲ್ಲಿ ಹೆಬ್ಬೆ ಜಲಪಾತವೂ ಇತ್ತು.

ಕೆಮ್ಮಣ್ಣುಗುಂಡಿ ಮತ್ತು ಝಡ್‌ ಪಾಯಿಂಟ್ ನಡುವೆ ಇರುವ ಶಾಂತಿಫಾಲ್ಸ್‌ ಬಳಿ ನಮಗೆ ಚಿರತೆ ಹೆಜ್ಜೆ ಗುರುತುಗಳು ಸಿಕ್ಕಿದ್ದವು. ಅಂದು ಬೆಳಿಗ್ಗೆ ಚಿರತೆ ಕಾಡುಕುರಿಯೊಂದನ್ನು ಹಿಡಿದುಕೊಂಡು ಹೋಗಿದ್ದನ್ನು ನೋಡಿದೆವು ಎಂದು ಸಿಬ್ಬಂದಿ ತಿಳಿಸಿದ್ದರು.

ಹೀಗಾಗಿ ಅಲ್ಲೆಲ್ಲೂ ಟೆಂಟ್ ಹೊಡೆಯುವ ಸಾಹಸ ಮಾಡದೆ ಉಳಿದುಕೊಳ್ಳಲು ಕಲ್ಹತ್ತಿಪುರದ ಸಮೀಪ ಇರುವ ಹೋಂಸ್ಟೇ, ಕಲ್ಹತ್ತಗಿರಿ ಜಲಪಾತದ ಬಳಿ ಇರುವ ತೋಟಗಾರಿಕಾ ಇಲಾಖೆಯ ಅತಿಥಿ ಗೃಹ ಅಥವಾ ಕೆಮ್ಮಣ್ಣುಗುಂಡಿಯನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.

ಬೆಂಗಳೂರಿನಿಂದ ಹೆಬ್ಬೆ ಜಲಪಾತಕ್ಕೆ 270 ಕಿ.ಮೀ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.