ADVERTISEMENT

ಅಪರಾಧಿಗಳು ನಾವಲ್ಲ...

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST

ದಿನಾಂಕ- ಸೆಪ್ಟೆಂಬರ್‌ 17. ಸ್ಥಳ- ದೀಪಾಂಜಲಿ ನಗರ ಮೆಟ್ರೊ ನಿಲ್ದಾಣ.

ಭಾನುವಾರವಾದ್ದರಿಂದ ಜನ ಸ್ವಲ್ಪ ಕಮ್ಮಿಯೇ ಇದ್ದರು. ಕಿವಿಗೆ ಇಯರ್‌ಫೋನ್‌ ಸಿಕ್ಕಿಸಿಕೊಂಡ ಹುಡುಗಿಯೊಬ್ಬಳು ಎಂ.ಜಿ.ರಸ್ತೆ ಕಡೆಗೆ ಹೊರಡುವ ಮೆಟ್ರೊ ಪ್ರವೇಶಿಸಿದಳು. ‘ದಯವಿಟ್ಟು ಬಾಗಿಲಿನಿಂದ ದೂರ ನಿಲ್ಲಿ’ ಎಂಬ ಎಂಬ ಶಬ್ದ ಅವಳಿಗೆ ಕೇಳಿಸಿದಂತಿರಲಿಲ್ಲ. ಮೊಬೈಲ್‌ ಸ್ಕ್ರೀನ್‌ನಲ್ಲಿ ಕಣ್ಣು ನೆಟ್ಟಿದ್ದವಳಿಗೆ ತಾನು ಬಾಗಿಲಿಗೆ ಅಡ್ಡವಾಗಿ ನಿಂತಿರುವುದರ ಪರಿವೆಯೂ ಇದ್ದಂತಿರಲಿಲ್ಲ. ಬಾಗಿಲು ಇನ್ನೇನು ಹಾಕಿಕೊಳ್ಳಬೇಕು. ಹಿರಿಯರೊಬ್ಬರು ಆ ಹುಡುಗಿಯನ್ನು ಈ ಕಡೆಗೆ ಎಳೆದರು. ಹುಡುಗಿ ಅಸಹನೆಯಿಂದೆ ಲೊಚಗುಟ್ಟಿ ಅವರನ್ನು ಕೆಕ್ಕರಿಸಿ ನೋಡಿ ಮತ್ತೆ ಮೊಬೈಲಲ್ಲಿ ಮಗ್ನಳಾದಳು. ಪಾಪ, ಆ ಹಿರಿಯರು ಹುಡುಗಿಯ ಲೊಚಗುಟ್ಟುವಿಕೆಯಿಂದ ಆದ ಅವಮಾನದಿಂದ ಅಲ್ಲಿ ತಲೆತಗ್ಗಿಸಿದವರು, ಮೆಜೆಸ್ಟಿಕ್‌ನಲ್ಲಿ ಇಳಿದುಹೋಗುವವರೆಗೂ ತಲೆಯೆತ್ತಲೇ ಇಲ್ಲ.

***

ADVERTISEMENT

ಸೆ.22ರಂದು ಮೆಟ್ರೊ ಪುರವಣಿಯಲ್ಲಿ ಸುಕೃತಾ ಎಸ್‌. ಅವರು ಬರೆದಿರುವ ‘ಮುಜುಗರ ತರುವ ಪಯಣ’ ಲೇಖನ ಓದಿದಾಗ ಥಟ್ಟನೆ ಈ ಪ್ರಸಂಗ ನೆನಪಾಯ್ತು. ನಾವು ಯಾವುದೇ ವಿಷಯವನ್ನು ವಸ್ತುನಿಷ್ಠವಾಗಿ ನೋಡಬೇಕು. ಸಮಸ್ಯೆಯನ್ನು ಸಮಸ್ಯೆಯಾಗಿಯಷ್ಟೇ ನೋಡಬೇಕು. ಅದಕ್ಕೆ ತಾವು ನಂಬಿದ ಸಿದ್ಧಾಂತಗಳನ್ನು ಪ್ರಯತ್ನಪೂರ್ವಕವಾಗಿ ಅನ್ವಯಿಸಹೊರಟರೆ ಸಹಜವಾಗಿದ್ದು ಕೃತಕವಾಗುತ್ತದೆ. ನಿಜವಾದದ್ದು ಹುಸಿಯಾಗುತ್ತದೆ. ನನ್ನ ಪ್ರಕಾರ ಸುಕೃತ ಅವರ ಲೇಖನದಲ್ಲಿ ಆದದ್ದೂ ಇದೇ.

ನಾನು ಮೆಟ್ರೊದ ಕಾಯಂ ಪ್ರಯಾಣಿಗ. ಪ್ರತಿದಿನ ಮೆಜೆಸ್ಟಿಕ್‌ನಲ್ಲಿ ಕ್ಯೂ ನಿಂತು ಮೆಟ್ರೊ ಹತ್ತಿದಾಗಲೂ ಒಂದೋ ಎರಡೂ ಕೈಗಳನ್ನೂ (ಸೆರೆಂಡರ್‌ ಆದ ಕಳ್ಳರು ಎತ್ತಿಕೊಳ್ಳುತ್ತಾರಲ್ಲಾ ಹಾಗೆ) ಎತ್ತಿ ಮೇಲೆಯೇ ಹಿಡಿದುಕೊಂಡಿರುತ್ತೇನೆ. ಹಾಗೆ ಹಿಡಿದುಕೊಂಡ ಸ್ವಲ್ಪ ಹೊತ್ತಿನಲ್ಲಿಯೇ ಕೈ ಜೋಮು ಶುರುವಾಗುತ್ತದೆ. ಅನಿವಾರ್ಯವಾಗಿ ಕೆಳಗಿಳಿಸಲೇಬೇಕು. ಆಗ ಕೈಯನ್ನು ಕೆಳಗೆ ಪ್ಯಾಂಟಿನ ಜೇಬಿನಲ್ಲಿರಿಸಿಕೊಳ್ಳುತ್ತೇನೆ. ಇದಕ್ಕೆ ಕಾರಣ ನಿಂತುಕೊಳ್ಳಲು ಅನುಕೂಲ ಅಂತಲ್ಲ ಅಥವಾ ನಿಮ್ಮಂಥ ಹೆಣ್ಣುಮಕ್ಕಳಿಗೆ ಕಾಟ ಕೊಡಬೇಕು ಅಂತಲೂ ಅಲ್ಲ. ಬದಲಿಗೆ ಎಲ್ಲಿ ಅಪ್ಪಿತಪ್ಪಿ ಕೈ ತಾಗಿ ಹೆಣ್ಣುಮಕ್ಕಳು ತಪ್ಪು ತಿಳಿದುಕೊಳ್ಳುತ್ತಾರೋ ಎಂಬ ಭಯ.

ನಿಮಗೆ ಅದ್ಯಾಕೆ ಗಂಡಸು ಪ್ಯಾಂಟಿನ ಜೇಬಿನಲ್ಲಿ ಕೈ ಇಟ್ಟುಕೊಳ್ಳುವುದು ಸಮರ್ಥಿಸಿಕೊಳ್ಳಲಾಗದ ಮಹಾಪರಾಧ ಅಥವಾ ಅಸಭ್ಯ ವರ್ತನೆ ಅನಿಸಿತೋ ಗೊತ್ತಾಗಲಿಲ್ಲ.

ಹಾಗೆಯೇ ಸಂದಣಿಯಲ್ಲಿ ರೈಲು ಹತ್ತುವ ಭರದಲ್ಲಿ ಮೈಮೇಲೆ ಬೀಳಲು ಹಾತೊರೆಯುತ್ತಾರೆ ಎಂದು ಬರೆದಿದ್ದೀರಿ. ನಿಮಗೊಂದು ಸಣ್ಣ ಸವಾಲು. ಒಂದು ದಿನ ಒಮ್ಮೆ, ನೀವು ಮೆಜೆಸ್ಟಿಕ್‌ನಲ್ಲಿ ನೀವಾಗಿಯೇ ಯಾವ ಪುರುಷನ ಮೈಯನ್ನೂ ಸೋಕದೆ ಮೆಟ್ರೊ ಹತ್ತಿ ತೋರಿಸಿ. ಅದು ನೀವು ಆರೋಪಿಸಿದ ಪುಂಡು ಪೋಕರಿಗಳಿಗೆ ಆದರ್ಶವಾಗಲಿ.

ತೆವಲು, ಚಟ ಇವೆಲ್ಲವೂ ಗಂಡಸರಿಗೆ ಮಾತ್ರ ಸೀಮಿತ ಎಂದು ನಿಮಗೆ ಎನಿಸುತ್ತದೆ ಎಂಬುದೇ ಅಚ್ಚರಿಯ ವಿಷಯ. ಎಷ್ಟೋ ಹುಡುಗರು ಮೆಟ್ರೊದಲ್ಲಿ ಅಕ್ಕಪ‍ಕ್ಕ ಹೆಂಗಸರಿದ್ದರೆ ಎಷ್ಟು ಮುಜುಗರದಲ್ಲಿ ಮುದುಡಿಕೊಂಡು ನಿಂತಿರುತ್ತಾರೆ. ಸ್ವತಃ ಅನುಭವಿಸುತ್ತಿರುತ್ತೇನೆ. ಅದೇ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಆರಾಮವಾಗಿ ಅಲ್ಲಿ ಇಲ್ಲಿ ಒರಗಿಕೊಂಡು, ಮೊಬೈಲಲ್ಲಿ ಏನೋ ನೋಡುತ್ತಾ, ಹಾಡು ಕೇಳಿಸಿಕೊಳ್ಳುತ್ತಾ ನಿಂತಿರುವುದನ್ನೂ ನೋಡುತ್ತೇನೆ. ಗಾಡಿ ಹೊರಡುವಾಗ ಹೆಣ್ಣುಮಕ್ಕಳೂ ಜೋಲಿ ಹೊಡೆದು ಪಕ್ಕದಲ್ಲಿ ಗಂಡಸರಿದ್ದರೆ ಅವರ ಮೇಲೆ ಒರಗುತ್ತಾರೆ. ಅದನ್ನು ನಾನು ತೆವಲು ಎಂದು ಕರೆಯುವುದಿಲ್ಲ.

ಹಾ, ನೀವು ಹೇಳಿದ ಹಾಗೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಬೋಗಿ ಮಾಡುವದು ತುಂಬ ಒಳ್ಳೆಯ ಯೋಚನೆಯೇ. ಇದರಿಂದ ಮಹಿಳೆಯರಿಗೆ ಎಷ್ಟು ಉಪಯೋಗವಾಗುತ್ತದೋ ಗೊತ್ತಿಲ್ಲ. ಆದರೆ ಪುರುಷರಂತೂ ನಿರಾಳವಾಗಿ ನಿಂತು ಪ್ರಯಾಣ ಮಾಡಬಹುದು. ಈ ಕಾರಣಕ್ಕಾದರೂ ನಿಮ್ಮ ಆಸೆ ನೆರವೇರಲಿ ಎಂದು ನಾನೂ ಪ್ರಾರ್ಥಿಸುತ್ತೇನೆ.

‘ಮೆಟ್ರೊದಿಂದ ಮಹಿಳೆಯರಿಗೆ ದಿನಕ್ಕೆ ಒಂದು ತಾಸು ಉಳಿಯುತ್ತದೆ. ಈ ಅವಧಿಯನ್ನು ಅವರು ತಮ್ಮ ಮಕ್ಕಳು ಅಥವಾ ಕುಟುಂಬದವರೊಂದಿಗೆ ಕಳೆಯಲು ವಿನಿಯೋಗಿಸುತ್ತಾರೆ’ ಎಂದು ಸರ್ವೇ ಮಾಡಿ ಬರೆದಿದ್ದೀರಿ. ಹಾಗೆ ಮಕ್ಕಳು ಅಥವಾ ಕುಟುಂಬ ಎಂಬುದನ್ನು ಪ್ರತ್ಯೇಕಿಸಿ ನೋಡಬೇಡಿ. ಮಕ್ಕಳು ಕುಟುಂಬದ ಭಾಗ. ಹಾಗೆ ಸಮಯ ಉಳಿತಾಯ ಆದಾಗ ಕುಟುಂಬದವರೊಂದಿಗೆ ಕಳೆಯಬೇಕು ಎಂದರೆ ಅವರ ಕುಟುಂಬದವರೂ ಮೆಟ್ರೊವನ್ನು ಬಳಸುತ್ತಿರಬೇಕು. ಪುರುಷರೂ ಹಾಗೆ ಮನೆಯಲ್ಲಿ ತಮಗಾಗಿ ಕಾಯುತ್ತಿರುವ ಮಹಿಳೆಯನ್ನು ಕಾಣುವ ದಾವಂತದಲ್ಲಿಯೇ ಇರಬಹುದು ಅಲ್ಲವೇ? ಪುರುಷರಿಗೆ ಬರೀ ತೆವಲಷ್ಟೇ ಅಲ್ಲ, ಕುಟುಂಬವೂ ಇರುತ್ತದೆ. ಮರ್ಯಾದೆ ಬರೀ ಮಹಿಳೆಯರ ಸ್ವತ್ತಲ್ಲ.

ಮತ್ತೆ ನಾವೂ ನೀವೂ ಒಮ್ಮೆ ಮೆಟ್ರೊದಲ್ಲಿ ಸಿಗೋಣ. ಪ್ಯಾಂಟಿನ ಜೋಬಿನಲ್ಲಿ ಕೈ ಹಾಕಿಕೊಂಡಿರುವುದು ಅಥವಾ ಎರಡೂ ಕೈ ಮೇಲಕ್ಕೆ ಎತ್ತಿಕೊಂಡಿರುವುದು ನನ್ನ ಗುರುತು. ನನ್ನನ್ನು ಕೆಕ್ಕರಿಸಿಕೊಂಡು ನೋಡಿದರೆ ನಿಮ್ಮ ಗುರುತನ್ನು ನಾನು ಹಿಡಿಯಬಲ್ಲೆ.

-ರಾಜೀವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.