ADVERTISEMENT

ಆಸ್ಟ್ರೇಲಿಯಾದಲ್ಲಿ ‘ಅಶ್ವಿನಿ ನಕ್ಷತ್ರ’

ಸುಶೀಲಾ ಡೋಣೂರ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

*ಹೇಗಿತ್ತು ಆಸ್ಟ್ರೇಲಿಯಾ, ಹೇಗಿದೆ ಬೆಂಗಳೂರು?
ಕಾರ್ತಿಕ್: ಸ್ವರ್ಗ. ಆ ಶಿಸ್ತು, ಆ ಸಂಯಮ, ಆ ಶಾಂತಿ... ಅಬ್ಬಾ ಜನ ಹೀಗೂ ಬದುಕಬಹುದಲ್ಲ ಅನಿಸಿದ್ದು ಆಸ್ಟ್ರೇಲಿಯಾ ನೋಡಿದ ಮೇಲೆಯೇ. ನಾವ್ಯಾಕೆ ಇಷ್ಟೊಂದು ಒತ್ತಡದಲ್ಲಿ ಬದುಕ್ತಾ ಇದ್ದೀವಿ ಅಂಥನಿಸಿದ್ದೂ ಆಗಲೇ. ಸಿಗ್ನಲ್‌ನಲ್ಲಿ ರೆಡ್ ಲೈಟ್ ಇದೆ, ಗ್ರೀನ್ ಲೈಟ್ ಬರುವವರೆಗೂ ಮುಂದಿನವ ಮುಂದೆ ಹೋಗಲಾರ ಎನ್ನುವುದೂ ಗೊತ್ತು, ಆದರೂ ಹಾರ್ನ್ ಮಾಡುತ್ತೇವೆ. ಯಾವುದೋ ಕೆಲಸ ಅಂತ ರಸ್ತೆಯ ನಡುವೆ ಗುಂಡಿ ಅಗಿಯುತ್ತಾರೆ. ಕೆಲಸ ಮುಗಿದ ಕೂಡಲೇ ಅದನ್ನು ಮತ್ತೆ ಮುಚ್ಚಬೇಕು ಎನ್ನುವುದು ಗೊತ್ತಿಲ್ಲ. ಆಸ್ಟ್ರೇಲಿಯಾದಲ್ಲಿ ಹೆಜ್ಜೆ ಹೆಜ್ಜೆಗೂ ಇದೆಲ್ಲ ನೆನಪಾಗುತ್ತಿತ್ತು. ಐದು ದಿನ ಶೂಟಿಂಗ್ ಮಾಡಿದೆವು. ಪ್ರಮುಖ ರಸ್ತೆಯ ಮೇಲೆ ನಾನು ಕಾರು ಓಡಿಸಿದೆ. ಒಂದು ಕಡೆಯೂ ಅನಗತ್ಯ ಹಾರ್ನ್ ಕೇಳಿಬರಲಿಲ್ಲ.

ಮಯೂರಿ: ಆ ರಸ್ತೆಗಳ ಸೊಗಸುಗಾರಿಕೆಯೇ ಬೇರೆ. ಕಸ ಕಡ್ಡಿಯನ್ನು ನೋಡಬೇಕೆಂದರೂ ಕಾಣಲಿಲ್ಲ. ಅಲ್ಲಿನ ಜನರೂ ಅಷ್ಟೇ, ಶಾಂತ ಸ್ವಭಾವದವರು. ಹಾಗೆ ಬದುಕುವುದನ್ನು ಕಲಿತರೆ ಬಹುಶಃ ನಾವೂ ಬಿ.ಪಿ/ಶುಗರ್‌ನಿಂದ ಪಾರಾಗಬಹುದು.

*ಇಡ್ಲಿ, ದೋಸೆಗಾಗಿ ಹುಡುಕಾಟ ನಡೆದಿರಬೇಕಲ್ಲ?
ಕಾರ್ತಿಕ್: ಇಲ್ಲ, ನನಗೆ ಸೀ–ಫುಡ್ ಇಷ್ಟ. ಅಲ್ಲಿ ಬಗೆ ಬಗೆಯ ಸೀ–ಫುಡ್ ಸಿಗುತ್ತೆ. ಸಾಕಷ್ಟು ಇಂಡಿಯನ್ ಹೋಟೆಲ್‌ಗಳೂ ಇವೆ. ಅಲ್ಲಿನ ಜನರು ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ.
ಮಯೂರಿ: ಮೊದಲ ದಿನ ಸ್ವಲ್ಪ ಕಷ್ಟ ಆಯ್ತು, ಎಲ್ಲಿ ನೋಡಿದರೂ ಸೀ–ಫುಡ್, ಸೀ–ಫುಡ್... ಏಡಿ, ಸೀಗಡಿ, ಮೀನುಗಳನ್ನು ನೋಡಿ ಗಾಬರಿಯಾಯ್ತು. ಆದರೆ ಮಾರನೇ ದಿನವೇ ಹತ್ತಿರದಲ್ಲೊಂದು ಭಾರತೀಯ ಹೋಟೆಲ್ ಸಿಕ್ತು. ಇಡ್ಲಿ, ದೋಸೆ, ಅನ್ನ–ಚಪಾತಿ... ಇಷ್ಟು ಸಾಕಲ್ವೇ?

*ಆಸ್ಟ್ರೇಲಿಯಾಕ್ಕೆ ಹೋಗುವುದೆಂದು ಮೊದಲೇ ನಿರ್ಧಾರವಾಗಿತ್ತಾ?
ಕಾರ್ತಿಕ್: ಅಶ್ವಿನಿ ನಕ್ಷತ್ರದ ಕಥೆ ಗೊತ್ತಲ್ವ? ಅಶ್ವಿನಿ ಕಿಡ್ನಾಪ್ ಆಗಿ ಬಹಳ ಬಳಲಿದ್ದಳು. ಮಾನಸಿಕವಾಗಿ ಕುಸಿದು ಹೋಗಿದ್ದಳು. ಅವಳನ್ನು ಖುಷಿಯಾಗಿಡಲು ಏನಾದರೂ ಮಾಡಬೇಕು ಎನ್ನುವ ಪತಿ ಜಯಕೃಷ್ಣ. ಆದರೆ ಎಲ್ಲಿಗೆ ಹೋಗುವುದು ಎನ್ನುವ ಬಗ್ಗೆ ತಂಡ ಸುಳಿವು ನೀಡಿರಲಿಲ್ಲ. ಕೊನೆಯ ಗಳಿಗೆಯಲ್ಲಿಯೇ ನಾವು ಎಲ್ಲಿಗೆ ಹೊರಟಿದ್ದೇವೆ ಎನ್ನುವುದು ಗೊತ್ತಾಗಿದ್ದು.
ಮಯೂರಿ: ನಾನಂತೂ ತುಂಬಾನೇ ಉತ್ಸುಕಳಾಗಿದ್ದೆ. ಫೋನ್ ಮಾಡಿ ಪಾಸ್‌ಪೋರ್ಟ್ ಕೇಳಿದರು. ನನ್ನ ಬಳಿ ಇಲ್ಲ ಎಂದೆ. ಅವರೇ ಪಾಸ್‌ಪೋರ್ಟ್‌ ತಯಾರಿ ನಡೆಸಿದರು. ಇಲ್ಲೇ ಯಾವುದಾದರೂ ಹತ್ತಿರದ ದೇಶಕ್ಕೆ ಹೋಗಬಹುದೇನೋ ಅಂದುಕೊಂಡಿದ್ದೆ. ಆದರೆ ಆಸ್ಟ್ರೇಲಿಯಾ ಅಂತ ಗೊತ್ತಾದ ಮೇಲೆ ನಿದ್ದೆಯೇ ಬರಲಿಲ್ಲ.

*ಜೊತೆಗೆ ಮನೆಯಿಂದ ಯಾರಾದರೂ ಬಂದಿದ್ರಾ?
ಮಯೂರಿ: ಒಂದು ವರ್ಷ ಮುಗಿತಲ್ವಾ? ಒಟ್ಟಿಗೇ ಕೆಲಸ ಮಾಡ್ತಾ ಮಾಡ್ತಾ ನಾವೆಲ್ಲ ಒಂದೇ ಕುಟುಂಬದವರಾಗಿದ್ದೀವಿ. ಜೊತೆಗೆ ಮನೆಯವರು ಯಾರೂ ಇಲ್ಲ ಎನ್ನುವ ಕೊರತೆಯೇ ಕಾಣಲಿಲ್ಲ.

*ಅಲ್ಲಿ ಕಷ್ಟ ಅನಿಸಿದ್ದೇನು?
ಮಯೂರಿ: ಲೆಕ್ಕದಲ್ಲಿ ನಾನು ಯಾವಾಗ್ಲೂ ವೀಕು. ಶಾಪಿಂಗ್ ಮಾಡಿ ದುಡ್ಡು ಕೊಡುವಾಗ ಆಸ್ಟ್ರೇಲಿಯನ್ ಡಾಲರ್‌ ಲೆಕ್ಕ ಮಾಡುವುದು ಕಷ್ಟ ಆಯ್ತು.
 
*ಆಸ್ಟ್ರೇಲಿಯಾ ದೃಶ್ಯಗಳಿಂದ ಪ್ರೇಕ್ಷಕರು ಏನೇನು ನಿರೀಕ್ಷಿಸಬಹುದು?
ಕಾರ್ತಿಕ್: ನಾವು ಖುದ್ದು ಆಸ್ಟ್ರೇಲಿಯಾ ನೋಡಿ ಬಂದ್ವಿ. ನೀವು ಮನೆಯಲ್ಲಿಯೇ ಕುಳಿತು ಆಸ್ಟ್ರೇಲಿಯಾ ನೋಡಬಹುದು. ಅಲ್ಲಿರುವ ಅದ್ಭುತಗಳನ್ನು ನಿಮಗಾಗಿ ಶೂಟ್ ಮಾಡಿ ತಂದಿದ್ದೇವೆ. ಬ್ರಿಸ್‌ಬೇನ್ ಹಾಗೂ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ವಿಶೇಷತೆಗಳೆಲ್ಲ ನಿಮ್ಮ ಸ್ಕ್ರೀನ್ ಮೇಲೆ ಬರಲಿವೆ. ಟೈಗರ್ ಪಾರ್ಕ್, ಜೂ, ಡಿಲೆನ್ಸಿ ಪಾರ್ಕ್‌ನಂತಹ ಮಹತ್ವದ ಸ್ಥಳಗಳನ್ನು ನೀವು ನೋಡಲಿದ್ದೀರಿ. ಕಾಂಗರೂ, ಕ್ವಾಲಾ ತರಹದ ವಿಶಿಷ್ಟ ಪ್ರಾಣಿಗಳನ್ನು ನೋಡಬಹುದು.  

*ಅಲ್ಲಿ ಕಳೆದ ಮರೆಯಲಾಗದ ಕ್ಷಣ?
ಕಾರ್ತಿಕ್: ಅಲ್ಲಿ ಕಳೆದ ಪ್ರತಿ ಕ್ಷಣವೂ ಮರೆಯಲಾಗದ ಕ್ಷಣವೇ. ಅದರಲ್ಲೂ ಭೂಮಿಯಿಂದ 300 ಅಡಿ ಮೇಲೆ ಹೋಗಿ ಕೆಳಗೆ ನೋಡುವ ಖುಷಿಯನ್ನು ಹೇಗೆ ವಿವರಿಸುವುದೋ ಗೊತ್ತಿಲ್ಲ. ಬಲೂನ್‌ನಲ್ಲಿ ಕುಳಿತು ಅಶ್ವಿನಿಗೆ ನಮ್ಮ ಕೆಳಗಿರುವ ಭೂಮಿಯನ್ನು ತೋರಿಸುವ ದೃಶ್ಯವೊಂದಿದೆ...
ಮಯೂರಿ: ಆ ದೃಶ್ಯದಲ್ಲಿ ನಾನು ಭಯ ಪಟ್ಟಿದ್ದೇ ಹೆಚ್ಚು...
ಕಾರ್ತಿಕ್: ಅದರಲ್ಲೂ ವಾಟರ್ ಕೇನ್ ಅನ್ನುವ ಆ ಅಪಾಯದಾಟ ಮಜವಾಗಿತ್ತು. ಅದಕ್ಕಾಗಿ ಕನಿಷ್ಠ ಆರು ತಿಂಗಳು ತರಬೇತಿ ಪಡೆಯಬೇಕಂತೆ. ನಾನು ಕೇವಲ ನಾಲ್ಕು ಗಂಟೆ ತರಬೇತಿ ಪಡೆದು ಅದನ್ನು ಪಳಗಿಸಬೇಕಿತ್ತು. ಆ ಅಪಾಯದಲ್ಲೂ ಅದೆಂಥ ಖುಷಿ ಇತ್ತು ಗೊತ್ತಾ? ಅದನ್ನು ಬ್ಯಾಲನ್ಸ್ ಮಾಡುವುದು ತುಂಬ ಕಷ್ಟ. ಆದರೂ ಶೂಟ್ ಮುಗಿಯುವವರೆಗೂ ಜೋಶ್‌ನಲ್ಲಿ ಮಾಡಿದೆ. ನಂತರ ಜ್ವರ ಬಂತು. ಜ್ವರ ಅಂತ ರೆಸ್ಟ್‌ ಮಾಡುವ ಹಾಗೂ ಇರಲಿಲ್ಲ. ಕೇವಲ ಐದು ದಿನಗಳಲ್ಲಿ 40 ದೃಶ್ಯಗಳನ್ನು ಶೂಟ್ ಮಾಡಬೇಕಿತ್ತು. 
ಮಯೂರಿ: ರಾತ್ರಿಯಾಗುತ್ತಿದ್ದಂತೆ ರಂಗೇರುವ ಕ್ವಿನ್ಸ್‌ಲ್ಯಾಂಡ್‌ನ ನೈಟ್ ಮಾರ್ಕೆಟ್ ಬಗ್ಗೆ ಹೇಳಲೇ ಬೇಕಲ್ವೇ? ಹೆಣ್ಮಕ್ಕಳು ಭಯವಿಲ್ಲದೇ ರಾತ್ರಿ ಓಡಾಡಬಹುದು. ಇಡೀ ಮಾರುಕಟ್ಟೆ ಬಣ್ಣದಲ್ಲಿ ಮುಳುಗಿ ಎದ್ದಂತೆ ಅನಿಸುತ್ತಿತ್ತು. ಬಿಂದಾಸ್ ಆಗಿ ಓಡಾಡಿದೆ. ತುಂಬಾ ಎಂಜಾಯ್ ಮಾಡಿದೆ.

*ಆಸ್ಟ್ರೇಲಿಯಾದಲ್ಲಿ ಜೆಕೆ/ಅಶ್ವಿನಿಯ ಹೊಸ ಅವತಾರದ ಬಗ್ಗೆ ಹೇಳಿ.
ಕಾರ್ತಿಕ್: ಜೆ.ಕೆ. ಬೆಂಗಳೂರಿನಲ್ಲಿ ಹೇಗಿದ್ದನೋ ಅಲ್ಲೂ ಹಾಗೇ ಇದ್ದ. ಆದರೆ ಅಶ್ವಿನಿ ಬದಲಾಗಿದ್ದಳು. ನಾನಂತೂ ಈ ಮೊದಲು ಅವಳನ್ನು ಹಾಗೆ ನೋಡಿದ್ದಿಲ್ಲ.
ಮಯೂರಿ: ನಿಜ. ಆಸ್ಟ್ರೇಲಿಯಾದ ದೃಶ್ಯಗಳಲ್ಲಿ ನೀವು ಅಶ್ವಿನಿಯನ್ನು ವಿಭಿನ್ನ ರೂಪದಲ್ಲಿ ನೋಡುತ್ತೀರಿ. ವೆಸ್ಟರ್ನ್ ಡ್ರೆಸ್ ಅಂದ್ರೆ ನನಗಿಷ್ಟ. ಆಸ್ಟ್ರೇಲಿಯಾದಲ್ಲಿ ನಾನು ನಿಜಕ್ಕೂ ಖುಷಿ ಪಡುವ ಕಾಸ್ಟೂಮ್ಸ್ ಕೈಗೆ ಸಿಕ್ಕವು. ಸ್ಕರ್ಟ್, ಶಾರ್ಟ್ಸ್, ಜೀನ್ಸ್, ಟೈಟ್ಸ್‌ಗಳಲ್ಲಿ ಅಶ್ವಿನಿ ಕಾಣಿಸಿಕೊಳ್ಳಲಿದ್ದಾಳೆ. ಕಿರುತೆರೆಯಲ್ಲಿ ಇದು ಹೊಸ ಪ್ರಯತ್ನ ಅಂತಲೇ ಹೇಳಬಹುದು.

*ಅಶ್ವಿನಿಯ ಖುಷಿಗಾಗಿ ಆಸ್ಟ್ರೇಲಿಯಾ ಪ್ರವಾಸ ಆಯ್ತು. ಅಶ್ವಿನಿಗೆ ನಿಜಕ್ಕೂ ಖುಷಿ ಆಯ್ತಾ?
ಕಾರ್ತಿಕ್: ಅಶ್ವಿನಿ ಖುಷ್ ಹುವಾ. ಅವಳು ಆಸ್ಟ್ರೇಲಿಯಾದ ದೃಶ್ಯಗಳಲ್ಲಿ ಅಭಿನಯಿಸಿದ್ದು ಕಡಿಮೆ. ಅನುಭವಿಸಿದ್ದೇ ಹೆಚ್ಚು. 
ಮಯೂರಿ: ನಿಜ. ಆ ಖುಷಿ, ಆ ನಗು, ಆ ಸಂತೋಷ ಎಲ್ಲವೂ ಅಸಲಿ, ಯಾವುದೂ ನಾಟಕೀಯ ಅಲ್ಲ. ಆಸ್ಟ್ರೇಲಿಯಾದ ದೃಶ್ಯಗಳು ಆರಂಭವಾದ ಮೇಲೆ ನಿಮಗೂ ಅದು ಫೀಲ್ ಆಗುತ್ತದೆ.

***
‘ಅಶ್ವಿನಿ ನಕ್ಷತ್ರ’ ಎಂದರೆ ಕೇವಲ ಅಶ್ವಿನಿ ಮತ್ತು ಜೆಕೆ ಮಾತ್ರವಲ್ಲ. ನೂರಾರು ಜನರು ತೆರೆಯ ಹಿಂದೆ ದುಡಿಯುತ್ತಾರೆ. ‘ಈ ಟಿವಿ’ಯ ಸಮಗ್ರ ತಂಡದ ಒಟ್ಟು ಶ್ರಮದ ಒಂದು ರೂಪವಿದು. ಆಸ್ಟ್ರೇಲಿಯಾಕ್ಕೆ 10–11 ಜನರ ತಂಡ ಹೋಗಿದ್ವಿ. ಪರಮ್, ಚಿತ್ರಶ್ರೀ, ಜಯದೇವ್, ಮಾನಸ ಎಲ್ಲರೂ ತುಂಬ ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ. ಅದರಲ್ಲೂ ಅರುಣ್ ಕ್ಯಾಮೆರಾ ಕೈ ಚಳಕ ಏನು ಎನ್ನುವುದು ಆ ದೃಶ್ಯಗಳು ತೆರೆಯ ಮೇಲೆ ಮೂಡಿದ ನಂತರವೇ ನಿಮಗೆ ತಿಳಿಯುತ್ತದೆ.
-–ಕಾರ್ತಿಕ್ ಜಯರಾಂ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.