ADVERTISEMENT

ಇಂದಿನಿಂದ ಮತ್ತೆ ‘ಸೂಪರ್‌ ಮಿನಿಟ್‌’

ರೋಹಿಣಿ ಮುಂಡಾಜೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಗಣೇಶ್‌
ಗಣೇಶ್‌   

‘ಗೋಲ್ಡನ್‌ ಸ್ಟಾರ್‌’ ಗಣೇಶ್‌ ಏರುದನಿಯಲ್ಲಿ ಹೇಳುತ್ತಾರೆ, ‘ನೀಲಾಂಬರಿ, ಆಟದ ನೀಲಿ ನಕ್ಷೆ ಪ್ಲೀಸ್‌’.  ಟಿವಿ ಪರದೆಯಲ್ಲಿ ಅನಿಮೇಷನ್‌ ಆಟಗಾರ ಆ ಆಟವನ್ನು ಆಡಿ ತೋರಿಸುತ್ತಾನೆ. ಗಣೇಶ್‌ ಚಪ್ಪಾಳೆ ತಟ್ಟುತ್ತಾರೆ. ಸ್ಪರ್ಧಿಗಳು ಆಟಕ್ಕೆ ಸಜ್ಜಾಗುತ್ತಾರೆ. ‘ಪೀಂ...’ ಅಂತ ಸೈರನ್‌ನ ಬೆನ್ನಲ್ಲಿ ಎರಡು ಕಣಗಳಲ್ಲಿ ಸೆಲೆಬ್ರಿಟಿಗಳು ಸಮಯದೊಂದಿಗೆ ಸ್ಪರ್ಧೆಗಿಳಿಯುತ್ತಾರೆ.

ಸ್ಪರ್ಧಿಗಳನ್ನು ಗಣೇಶ್‌ ಹುರಿದುಂಬಿಸುತ್ತಾರೆ. ಎರಡು ತಂಡಗಳ ನಡುವಿನ ಜಿದ್ದಾಜಿದ್ದಿ ಇನ್ನಷ್ಟು ಬಿರುಸುಗೊಳ್ಳುತ್ತದೆ... ಗೆದ್ದವರಿಗೆ ಯುದ್ಧ  ಗೆದ್ದ ಸಂಭ್ರಮ, ಸೋತವರಿಗೆ ಮುಂದಿನ ಆಟದಲ್ಲಿ ಗೆದ್ದು ತೋರಿಸಬೇಕು ಎಂಬ ಹಠ... ಮುಂದಿನ ಟಾಸ್ಕ್‌ನಲ್ಲಿ ಮತ್ತೆ ಅದೇ ಜಿದ್ದಾಜಿದ್ದಿ...

ಇದು ಯಾವ ಕಾರ್ಯಕ್ರಮದ ದೃಶ್ಯ ಎಂದು ಇಷ್ಟುಹೊತ್ತಿಗೆ ನಿಮಗೆ ಅರ್ಥವಾಗಿರುತ್ತೆ ಅಲ್ವಾ? ನಿಮ್ಮ ಊಹೆ ಸರಿ. ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ಶೋ ‘ಸೂಪರ್‌ ಮಿನಿಟ್‌’ನ ಕುತೂಹಲಕಾರಿ ಕದನದ ನೋಟವಿದು. ಸೂಪರ್‌ ಮಿನಿಟ್‌ನ ಮೂರನೇ ಸೀಸನ್‌ ಫೆ.18ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ  9ಕ್ಕೆ ಪ್ರಸಾರವಾಗಲಿದೆ.

‘ಈ ಬಾರಿ ‘ಬಿಗ್‌ಬಾಸ್‌’ ಸೀಸನ್‌ ನಾಲ್ಕರ ಐವರು ಸ್ಪರ್ಧಿಗಳು ಈಟಿವಿ ನ್ಯೂಸ್‌ ತಂಡದ ಮೊದಲ ಸಂಚಿಕೆಯಲ್ಲಿ ಆಟವಾಡಲಿದ್ದಾರೆ. ಮುಂದಿನ ಸಂಚಿಕೆಗಳಲ್ಲಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಕಲಾವಿದರು ಆಡಲಿದ್ದಾರೆ. ಈಗಿನ ಅಂದಾಜಿನಂತೆ ಈ ಬಾರಿ ಒಟ್ಟು 16 ಸಂಚಿಕೆಗಳು ಪ್ರಸಾರವಾಗಲಿವೆ. 

130ಕ್ಕೂ ಹೆಚ್ಚು ಕ್ಷಿಪ್ರಗತಿಯ ಆಟಗಳನ್ನು  ‘ನೀಲಾಂಬರಿ’ ಸ್ಪರ್ಧಿಗಳಿಗೆ ನೀಡಲಿದ್ದಾಳೆ.  ಹಿಂದಿನ ಸೀಸನ್‌ಗಳಂತೆ ಸೆಮಿಫೈನಲ್‌ ಮತ್ತು ಫೈನಲ್‌ ಇರುತ್ತದೆ’ ಎಂದು ಮಾಹಿತಿ ನೀಡುತ್ತಾರೆ, ವಾಹಿನಿಯ ಬಿಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌.

ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮ, ರಿಯಾಲಿಟಿ ಶೋಗಳ ಯಶಸ್ಸಿನಲ್ಲಿ ಕಾರ್ಯಕ್ರಮ ನಿರೂಪಕರ ಪಾತ್ರವೂ ಮಹತ್ವದ್ದು. ಸೂಪರ್ ಮಿನಿಟ್‌ನಂತಹ ಶೋದಲ್ಲಿ ಸ್ಪರ್ಧಿಗಳು ಸಮಯದೆದುರು ಆಟವಾಡುವ ಕಾರಣ  ಒತ್ತಡದಲ್ಲಿರುತ್ತಾರೆ. ಮಾನಸಿಕ ನಿಯಂತ್ರಣ ಕಳೆದುಕೊಂಡರೆ ಆಟದ ಹದ ಕಳೆದುಕೊಂಡಂತೆ. ಹಾಗೆ ತುರುಸಿನ ಸ್ಪರ್ಧೆ ಎದುರಾಗುತ್ತಿದ್ದಂತೆ ಗಣೇಶ್‌ ಅವರ ಉಲ್ಲಾಸದ ಮಾತುಗಳು, ಲಘು ಹಾಸ್ಯ ಹೊಸ ಹೊಸ ಚೈತನ್ಯ ತುಂಬುತ್ತದೆ. 

‘ಗಣೇಶ್‌ ಅವರ ಹಾಸ್ಯಲೇಪಿತ ಮಾತುಗಳು ಪ್ರೇಕ್ಷಕರ ಮನಗೆದ್ದಿವೆ. ಸೂಪರ್ ಮಿನಿಟ್‌ನ ಕಳೆದ ಎರಡು ಸೀಸನ್‌ಗಳ ಯಶಸ್ಸಿನಲ್ಲಿ ನಟ ಗಣೇಶ್‌ ಅವರ ಪಾತ್ರವೂ ದೊಡ್ಡದು’ ಎಂದು ಹೇಳುತ್ತಾರೆ, ಗುಂಡ್ಕಲ್‌.

ಸೂಪರ್‌ ಮಿನಿಟ್‌ನಲ್ಲಿ ಆಟವಾಡುವ  ಸೆಲೆಬ್ರಿಟಿಗಳು ಗೆದ್ದ ಮೊತ್ತವನ್ನು ಆಯ್ದ ಫಲಾನುಭವಿಯ ವೈದ್ಯಕೀಯ ನೆರವಿಗೆ ನೀಡುವ ಮಹತ್ವದ ಕೆಲಸವನ್ನು ವಾಹಿನಿ ಮಾಡುತ್ತಿದೆ. ಇದು ವೀಕ್ಷಕರ ಮೆಚ್ಚುಗೆಗೂ ಪಾತ್ರವಾಗಿದೆ. ಎರಡನೇ ಸೀಸನ್‌ನಲ್ಲಿ ಸ್ಪರ್ಧಿಗಳು ಇದೇ ಉದ್ದೇಶವಿಟ್ಟುಕೊಂಡು ಆಟವಾಡಿದ್ದರು. 

ಕ್ಯಾನ್ಸರ್‌ನಿಂದ ಬಳಲುತ್ತಿರುವ, ಬೆಂಗಳೂರಿನ ಪೀಯೂಷ್‌ ಎಂಬ ಪುಟ್ಟ ಬಾಲಕನ ಚಿಕಿತ್ಸೆಗಾಗಿ ಈ ಬಾರಿ ಸೆಲೆಬ್ರಿಟಿಗಳು ಆಡಲಿದ್ದಾರೆ. ಅಂದಾಜು
₹ 10ರಿಂದ ₹14 ಲಕ್ಷದವರೆಗೂ ಆರ್ಥಿಕ ನೆರವು ಬಾಲಕನಿಗೆ ಸಿಗಲಿದೆ.

ಬೂಟ್‌ ಕ್ಯಾಂಪ್‌ನಲ್ಲಿ ಸ್ಪರ್ಧಿಗಳು ಸಾಕಷ್ಟು ಪೂರ್ವತಯಾರಿ ನಡೆಸಿ ವೇದಿಕೆಗೆ ಬರುತ್ತಾರೆ. ಬೂಟ್‌ ಕ್ಯಾಂಪ್‌ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದವರು ಶೋನಲ್ಲಿ ಸೋಲುವುದಿದೆ. ಅಲ್ಲಿ ಕಳಪೆ ನಿರ್ವಹಣೆ ತೋರಿದವರು ಶೋನಲ್ಲಿ ಕ್ಷಣಮಾತ್ರದಲ್ಲಿ ಆಟ ಗೆದ್ದು ತಾವೇ ಅಚ್ಚರಿಗೊಳ್ಳುವುದೂ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT