ADVERTISEMENT

‘ಇನ್ನು ಮದುವೆ ಆಗ್ಬಿಡ್ತೀನಪ್ಪಾ...’

ಬಿಗ್‌ಬಾಸ್‌

ರೋಹಿಣಿ ಮುಂಡಾಜೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
‘ಇನ್ನು ಮದುವೆ ಆಗ್ಬಿಡ್ತೀನಪ್ಪಾ...’
‘ಇನ್ನು ಮದುವೆ ಆಗ್ಬಿಡ್ತೀನಪ್ಪಾ...’   

‘ನಖಶಿಖಾಂತ ಕೋಪ, ಕಿಂಚಿತ್ತೇ ತಾಳ್ಮೆ, ಕೋಪದಲ್ಲಿ ಏನೋ ಮಾತು, ಪ್ರತಿಕ್ರಿಯೆ, ಅಷ್ಟೇ ಶೀಘ್ರವಾಗಿ ತಪ್ಪಿನ ಮನವರಿಕೆ, ವಿಷಾದ... ‘ಬಿಗ್‌ಬಾಸ್‌’ಗೆ ಹೋಗುವುದಕ್ಕೂ ಮೊದಲ ನಾನು ಇದ್ದುದು ಹೀಗೆ. ಈಗ ತಿದ್ದಿತೀಡಿ ಹೊಸ ವ್ಯಕ್ತಿತ್ವ ರೂಪಿಸಿಕೊಂಡು ಬಂದಿದ್ದೇನೆ.

ಬದಲಾಗಿರುವ ಈ ನಿರಂಜನ ಒಬ್ಬ ಒಳ್ಳೆ ಪತಿ, ಮಗ, ಸ್ನೇಹಿತ, ತಾಳ್ಮೆಯ ಕೆಲಸಗಾರನಾಗುತ್ತಾನೆ. ನನ್ನನ್ನು ಹಾಗೆಯೇ ಸ್ವೀಕರಿಸಬೇಕು ಎಂಬುದು ನನ್ನ ಮನವಿ’.‘ಬಿಗ್‌ಬಾಸ್‌’ ಮನೆಯಲ್ಲಿ ಎಂಟು ವಾರ ಕಳೆದು ಎಲಿಮಿನೇಟ್‌ ಆಗಿ ಹೊರಬಂದ ನಿರಂಜನ ದೇಶಪಾಂಡೆ ಅವರು ತಮ್ಮ ಬದಲಾದ ವ್ಯಕ್ತಿತ್ವಕ್ಕೆ ನೀಡಿದ ಹೊಸ ವ್ಯಾಖ್ಯಾನವಿದು.

ಎಫ್‌ಎಂನಲ್ಲಿ ಆರ್‌ಜೆಯಾಗಿ, ಟೀವಿ ಕಾರ್ಯಕ್ರಮಗಳು ಮತ್ತು ವಿವಿಧ ವೇದಿಕೆಗಳಲ್ಲಿ ನಿರೂಪಕರಾಗಿ ಹೆಸರು ಪಡೆದಿದ್ದ ನಿರಂಜನ್‌, ‘ಬಾಂಬೆ ಮಿಠಾಯಿ’ (2015) ಸಿನಿಮಾ ಕ್ಷೇತ್ರದಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ.

* ‘ಬಿಗ್‌ಬಾಸ್‌’ನ ಎಂಟು ವಾರಗಳ ಅನುಭವದಿಂದ ಕಲಿತದ್ದೇನು?
ಬದುಕಿಗೆ ಸಾಕಾಗುವಷ್ಟು ಕಲಿತುಬಂದಿದ್ದೇನೆ. ‘ಬಿಗ್‌ಬಾಸ್‌’ಗೆ ಹೋದುದು ಪಟ್ಟ ಪಡೆಯಲೂ ಅಲ್ಲ, ದುಡ್ಡು ಮಾಡಲೂ ಅಲ್ಲ. ನನ್ನಲ್ಲಿದ್ದ ಕೆಲವು ಅವಗುಣಗಳನ್ನು ತಿದ್ದಿಕೊಂಡು ಹೊಸ ವ್ಯಕ್ತಿಯಾಗಿ ರೂಪುಗೊಳ್ಳಲು ಇದಕ್ಕಿಂತ ದೊಡ್ಡ ಅವಕಾಶವಾಗಲಿ, ವೇದಿಕೆಯಾಗಲಿ ಇನ್ನೊಂದಿಲ್ಲ ಎಂಬ ಕಾರಣಕ್ಕೆ ಹೋದೆ. ಹೋದ ಉದ್ದೇಶ ಈಡೇರಿದೆ. ಹೆಮ್ಮೆಯಿಂದ ಹೊರಬಂದಿದ್ದೇನೆ.

* ಭಾವನೆ, ಸಂಬಂಧ ಮತ್ತು ವ್ಯಕ್ತಿತ್ವಕ್ಕೆ ಅಲ್ಲಿ ಎಷ್ಟು ಬೆಲೆಯಿದೆ?
ಒಂದು ಹಂತದವರೆಗೆ ಎಲ್ಲರಿಗೂ ಎಲ್ಲವೂ ನೆನಪಿರುತ್ತದೆ. ಯಾವಾಗ ತಾವು    ಕೇಂದ್ರಬಿಂದುವಾಗಬೇಕು, ಗೆಲುವೇ ತಮ್ಮ ಗುರಿ ಎಂಬುದು ನೆನಪಾಗುತ್ತದೋ ಆಗ ಬೇರೆ ಎಲ್ಲವೂ ಗೌಣವಾಗುತ್ತದೆ.

* ‘ಗಳಸ್ಯ ಕಂಠಸ್ಯ’ ಎಂಬಂತಿದ್ದ ಕೀರ್ತಿಕುಮಾರ್‌, ಶಾಲಿನಿ ಮತ್ತು ನೀವು ದೂರಾದ ಕಾರಣವೂ ಇದೇನಾ?
ಅವರು ಗೆಲ್ಲೋದಕ್ಕಂತಲೇ ಈ ಷೋಗೆ ಬಂದಿದ್ದಾರೆ. ಅದಕ್ಕಾಗಿ ಅವರು ಏನು ಮಾಡಲೂ ಹಿಂದೇಟು ಹಾಕುವುದಿಲ್ಲ. ಇದು ಸಾಕಷ್ಟು ಟಾಸ್ಕ್‌ಗಳ ವೇಳೆ, ಮಾತುಕತೆ ವೇಳೆ ಸಾಬೀತಾಗಿದೆ. ಆದರೆ ಅವನ್ನೆಲ್ಲಾ ಮರೆಸುವಂತೆ ಮಾತನಾಡುವುದೂ ಅವರಿಗೆ ಗೊತ್ತು. ನಾನು ‘ಅಂತಹ ಆಟ’ಗಳನ್ನು ಆಡದೆ ಟಾಸ್ಕ್‌ಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಅವರು ಗೆಳೆತನವನ್ನೂ ಮರೆತು ನನ್ನ ಬಗ್ಗೆಯೂ ಹಗುರವಾಗಿ ಮಾತನಾಡಿದ್ದು ಗೊತ್ತಾದ ಮೇಲೆ ನಿಧಾನವಾಗಿ ದೂರವಾದೆ.

* ‘ಬಿಗ್‌ಬಾಸ್‌’ ಪಟ್ಟ ಮತ್ತು  ₹ 50 ಲಕ್ಷದ ಮೇಲೆ ಕಣ್ಣಿಡದೆ ಆಡುತ್ತಿರುವವರು ಯಾರು?
ರೇಖಾ, ಸಂಜನಾ ಮತ್ತ ಶೀತಲ್‌. ಅವರೂ ಟೀಕೆ ಟಿಪ್ಪಣಿ ಮಾಡುತ್ತಾರೆ. ಆದರೆ ಯಾರನ್ನೂ ಬಗ್ಗುಬಡಿಯಬೇಕು, ದುರ್ಬಲ ಎಂದು ತೋರಿಸಿಕೊಡಬೇಕು ಎಂದು ಟಾರ್ಗೆಟ್‌ ಮಾಡುವುದಿಲ್ಲ.

* ಸ್ಪರ್ಧಿಗಳ ಪೈಕಿ ಯಾರನ್ನು ನಂಬಬಹುದು?
ಪ್ರಥಮನನ್ನು. ಅವನು ಅತಿಯಾಗಿ ಮಾತನಾಡುತ್ತಾನೆ ಆದರೆ ಅದರಲ್ಲಿ ಸತ್ಯಾಂಶ ಇರುತ್ತದೆ. ಬೇರೆಯವರು ಏನು ಗೇಮ್‌ಪ್ಲಾನ್‌ ಮಾಡುತ್ತಾರೆ, ತಲೆಯೊಳಗೆ ಏನು ಓಡುತ್ತಿದೆ ಎಂಬ ಸುಳಿವೇ ಕೊಡದೆ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಅವನೊಳಗಿನ ಒಳ್ಳೆಯತನವನ್ನು ಗಮನಿಸಿಯೇ ಇತ್ತೀಚೆಗೆ ಅವನೊಂದಿಗೆ ಹೆಚ್ಚು ಬೆರೆಯುತ್ತಿದ್ದೆ.

* ಮದುವೆ, ಮುಂದಿನ ಬದುಕಿನ ಬಗ್ಗೆ...
ಕಳೆದ ಅಕ್ಟೋಬರ್‌ 20ರಂದು ನನ್ನ ಮದುವೆಯಾಗಬೇಕಿತ್ತು. ಆದರೆ ಈ ಆಫರ್‌ ಬಂದ ಕಾರಣ ನನ್ನ ಭಾವಿ ಪತ್ನಿ ಯಶಸ್ವಿನಿ ಅವರನ್ನು ಮತ್ತು ಅವರ ಮೂಲಕ ಅವರ ಮನೆಯವರನ್ನು ಒಪ್ಪಿಸಿ ಬಿಗ್‌ಬಾಸ್‌ಗೆ ಹೋಗಿದ್ದೆ. ಈಗ ಹೊರಬಂದಿದ್ದೇನೆ. ಪುರೋಹಿತರು ಎಷ್ಟು ಬೇಗ ದಿನ ನಿಗದಿ ಮಾಡುತ್ತಾರೋ ಅಷ್ಟು ಬೇಗ ತಾಳಿ ಕಟ್ಟಿ ಒಳ್ಳೆ ಗಂಡನಾಗಿ ಬಾಳುತ್ತೇನೆ. ಉಳಿದಂತೆ, ನನ್ನಲ್ಲಿರುವ ಬಹುಮುಖಿ ಕಲಾವಿದನನ್ನು ದುಡಿಸಿಕೊಳ್ಳುವ ಯಾವುದೇ ಅವಕಾಶಗಳನ್ನು ಸಮರ್ಥವಾಗಿ ನಿಭಾಯಿಸಿ ವೃತ್ತಿಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.