ADVERTISEMENT

ಇವರೇ ಗ್ರಾಮಾಫೋನ್ ಮೂರ್ತಿ...

ಅನಿತಾ ಈ.
Published 27 ನವೆಂಬರ್ 2015, 19:30 IST
Last Updated 27 ನವೆಂಬರ್ 2015, 19:30 IST

ಸದಾ ಗಲಾಟೆಯಿಂದ ಕೂಡಿರುವ ಅವೆನ್ಯೂ ರಸ್ತೆಯಲ್ಲಿರುವ ಕಟ್ಟಡವೊಂದರಿಂದ ಆಗಾಗ ಪಿ.ಬಿ.ಶ್ರೀನಿವಾಸ್, ಪಿ. ಕಾಳಿಂಗರಾವ್‌, ಕಿಶೋರ್‌ ಕುಮಾರ್‌ ಅವರ ಹಾಡುಗಳು ಸಣ್ಣದಾಗಿ ಕೇಳಿ ಬರುತ್ತಿರುತ್ತವೆ. ಅವೆನ್ಯೂ ರಸ್ತೆಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಎದುರಿನ ರಸ್ತೆಯ ಎಡಬದಿಗಿರುವ ಕಟ್ಟಡದಿಂದ ತೇಲಿ ಬರುವ ಗೀತೆಗಳು ಸಂಗೀತ ಪ್ರಿಯರನ್ನು ಸೆಳೆಯುತ್ತವೆ. ಈ ಹಾಡುಗಳ ಜಾಡು  ಹಿಡಿದು ಹೊರಟರೆ ಸಿಗುವುದೇ ಸೀತಾಫೋನ್‌ ಕಂಪೆನಿ.

ಶ್ರೀನಿವಾಸಮೂರ್ತಿ ಅವರ ತಂದೆ ಸೀತಾರಾಮ ಶೆಟ್ಟಿ ಗ್ರಾಮಾಫೋನ್‌ ಮಾರಲೆಂದೇ 1924ರಲ್ಲಿ ಪ್ರಾರಂಭಿಸಿದ ಈ ಮಳಿಗೆಗೆ ಈಗ 91 ವರ್ಷ. ಆಗ ವಿದೇಶಗಳಲ್ಲಿ ಮನೋರಂಜನೆಯ ಮಾಧ್ಯಮವಾಗಿದ್ದ ಗ್ರಾಮಾಫೋನ್‌ ಇನ್ನೂ ನಮ್ಮ ದೇಶದಲ್ಲಿ ನೆಲೆ ಕಂಡುಕೊಂಡಿರಲಿಲ್ಲ. ಹೀಗಾಗಿ ಉಳ್ಳವರು ಆಗ ವಿದೇಶಗಳಿಂದ ಗ್ರಾಮಾಫೋನ್‌ ಹಾಗೂ ಡಿಸ್ಕ್‌ಗಳನ್ನು ತರಿಸಿಕೊಳ್ಳುತ್ತಿದ್ದರು.

ಕಂಪೆನಿ ಹುಟ್ಟು
ಸೀತಾರಾಮ ಶೆಟ್ಟಿ ಅವರ ಸ್ನೇಹಿತರೊಬ್ಬರು ಅವರಿಗೆ ಗ್ರಾಮಾಫೋನ್‌ ಒಂದನ್ನು ನೀಡಿದ್ದರು. ಅದನ್ನು ಮನೆಗೆ ತಂದ ಶೆಟ್ಟರು ನಿತ್ಯ ಬೆಳಿಗ್ಗೆ ಮನೆಯ ಬಾಗಿಲಿನಲ್ಲಿ ಇಟ್ಟು ಅದರಲ್ಲಿ ಹಾಡನ್ನು ಕೇಳಲು ಪ್ರಾರಂಭಿಸಿದ್ದರು. ಹೀಗೆ ಒಮ್ಮೆ ಹಾಡು ಕೇಳುವಾಗ ದಾರಿಹೋಕರೊಬ್ಬರು ಅದನ್ನು ಮಾರುವಂತೆ ಕೇಳಿದ್ದರು. ಮೊದಲ ಬಾರಿಗೆ ಅದನ್ನು ಮಾರಿದ ಸೀತಾರಾಮ ಶೆಟ್ಟರು ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿ, ಗ್ರಾಮಫೋನ್‌ ಮತ್ತು ಡಿಸ್ಕ್‌ಗಳನ್ನು ತರಿಸಿ ಜನರಿಗೆ ಮಾರಲು ಪ್ರಾರಂಭಿಸಿದರು. ಜಾತ್ರೆ, ಸಂತೆ ಹಾಗೂ ಮಾರುಕಟ್ಟೆಗಳಿಗೆ ಹೋಗಿ ಅಲ್ಲಿ ಗ್ರಾಮಾಫೋನ್‌ಗಳಲ್ಲಿ ಹಾಡು ಕೇಳಿಸಿ ಮಾರಾಟ ಮಾಡುತ್ತಿದ್ದರು. 

ನಂತರ ತಮ್ಮ ಅಭಿರುಚಿಗೆ ತಕ್ಕಂತೆ ವ್ಯಾಪಾರ ಪ್ರಾರಂಭಿಸುವುದು ಒಳಿತು ಎಂದು ಅರಿತ ಅವರು, 1924ರಲ್ಲಿ ‘ಹಿಂದೂಸ್ಥಾನ್‌ ಮ್ಯೂಸಿಕಲ್‌ ಮಾರ್ಟ್‌’ ಎಂಬ ಹೆಸರಿನಲ್ಲಿ ವ್ಯಾಪಾರ ಪ್ರಾರಂಭಿಸಿದರು. ಆಗ ‘ಹಿಸ್‌ ಮಾಸ್ಟರ್ಸ್‌ ವಾಯ್ಸ್‌’ (ಎಚ್‌ಎಂವಿ) ಹಾಗೂ ಜರ್ಮನಿಯ ಓಡೆನ್‌ ರೆಕಾರ್ಡಿಂಗ್‌ ಸಂಸ್ಥೆಗಳ ಗ್ರಾಮಾಫೋನ್‌ ಮಾರುಕಟ್ಟೆಯಲ್ಲಿ ಇದ್ದವು. ಹೀಗಾಗಿ ಮೊದಲು ಎಚ್‌ಎಂವಿ ಸಂಸ್ಥೆಯ ಗ್ರಾಮಾಫೋನ್‌ ಮಾತ್ರ ಮಾರಾಟ ಮಾಡುತ್ತಿದ್ದ ಸೀತಾರಾಮ ಶೆಟ್ಟಿ, ನಂತರದಲ್ಲಿ ಓಡೆನ್‌ ರೆಕಾರ್ಡಿಂಗ್‌ ಸಂಸ್ಥೆಯ ಗ್ರಾಮಾಫೋನನ್ನೂ ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು.

1930ರಲ್ಲಿ ನಗರದಲ್ಲಿ ಬೇರೆ ಬೇರೆ ಅಂಗಡಿಗಳವರು ಗ್ರಾಮಾಫೋನ್‌ ಮಾರಾಟ ಮಾಡಲು ಪ್ರಾರಂಭಿಸಿದಾಗ ಸೀತಾರಾಮ ಶೆಟ್ಟಿ ತಮ್ಮದೇ ಆದ ಒಂದು ಬ್ರಾಂಡ್‌ ಹುಟ್ಟು ಹಾಕುವ ಸಾಹಸಕ್ಕೆ ಕೈ ಹಾಕಿ, ಯು.ಕೆ ಮತ್ತು ಸ್ವಿಟ್ಜರ್ಲೆಂಡ್‌ನಿಂದ ಸ್ಪಿಂಗ್‌ ಮೋಟರ್‌ ಹಾಗೂ ಹ್ಯಾಂಡ್‌ ವೈಂಡಿಂಗ್‌ ತರಿಸಿ ಗ್ರಾಮಾಫೋನ್‌ ಸಿದ್ಧಪಡಿಸಿ, ₹37ಕ್ಕೆ ಮಾರಾಟ ಮಾಡುತ್ತಿದ್ದರು. ಸೀತಾರಾಮ ಶೆಟ್ಟಿ ಅವರ ಮಗ ಶ್ರೀನಿವಾಸಮೂರ್ತಿ ತಮ್ಮ ಶಾಲಾ ದಿನಗಳಲ್ಲಿಯೇ ತಂದೆಯೊಂದಿಗೆ ಸೀತಾ ಕಂಪೆನಿಯನ್ನು ನೋಡಿಕೊಳ್ಳುತ್ತಿದ್ದರು. ಹೀಗಾಗಿ ಮೂರ್ತಿ ಅವರಿಗೆ ಗ್ರಾಮಾಫೋನ್‌ ಕೇವಲ ವ್ಯವಹಾರವಾಗಿರಲಿಲ್ಲ. ಅದರೊಂದಿಗೆ ಒಂದು ರೀತಿಯ ಅವಿನಾಭಾವ ಸಂಬಂಧ ಬೆಳೆದುಹೋಗಿತ್ತು.

‘ನಾನು ನನ್ನ ಜೀವನದಲ್ಲಿ ಎಂದೂ ಮರೆಯಲಾದ ವರ್ಷ 1963. ಅದೇ ವರ್ಷ ನಾನು ಬಿಕಾಂನಲ್ಲಿ ಉತ್ತೀರ್ಣನಾದೆ. ನನಗೆ ವಿವಾಹವಾಯಿತು. ಆದರೆ ನನ್ನ ಪ್ರೀತಿಯ ತಂದೆಯನ್ನೂ ಕಳೆದುಕೊಂಡೆ. ಆಗಿನಿಂದ ಅಧಿಕೃತವಾಗಿ ಸೀತಾ ಗ್ರಾಮಾಫೋನ್‌ ಕಂಪೆನಿಯ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು. 1970ರ ದಶಕದವರೆಗೆ ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಹಾರ್ನ್‌ ಹಾಗೂ ಪೋರ್ಟಬಲ್‌ ಮಾದರಿ ಗ್ರಾಮಾಫೋನ್‌ಗಳನ್ನು ಇಲ್ಲೇ ಸಿದ್ಧಪಡಿಸಿ ಮಾರುತ್ತಿದ್ದೆ. ಆದರೆ ತಂತ್ರಜ್ಞಾನ ಬದಲಾಗುತ್ತಿದ್ದಂತೆ ಗ್ರಾಮಾಫೋನ್‌ ಮಾರಾಟಗಾರರು ಸ್ಪೀಕರ್‌ಗಳ ಮಾರಾಟಕ್ಕೆ ಮುಂದಾದರು. ಇದರಿಂದ ವ್ಯವಹಾರ ನೆಲಕಚ್ಚಿತ್ತು. ಆದರೂ ನಾನು ಅದನ್ನು ಮುಂದುವರೆಸಿದೆ.

1995ರಲ್ಲಿ ನೆಲಮಹಡಿಯಲ್ಲಿದ್ದ ಗ್ರಾಮಾಫೋನ್‌ ಕಂಪೆನಿಯನ್ನು ಮೊದಲನೇ ಮಹಡಿಗೆ ಸ್ಥಳಾಂತರಿಸಿ ಅಲ್ಲಿ ತಾಮ್ರದ ವಿಗ್ರಹಗಳ ಮಾರಾಟವನ್ನು ಪ್ರಾರಂಭಿಸಿದೆ. ಆದರೆ ಗ್ರಾಮಾಫೋನ್‌ ತಯಾರಿಕೆಯನ್ನು ಮಾತ್ರ ನಿಲ್ಲಿಸಲಿಲ್ಲ. ಯಾರಾದರೂ ಕೇಳಿದರೆ ಹಾರ್ನ್‌ ಮಾದರಿ ಗ್ರಾಮಾಫೋನ್‌ ಅನ್ನು ಇಂದಿಗೂ ಮಾಡಿಕೊಡುತ್ತೇನೆ. ಆದರೆ ಇದರಲ್ಲಿ  ಬಳಸುವ 78 ಸ್ಟ್ಯಾಂಡರ್ಡ್‌ ಆರ್‌ಪಿಎಂ ರೆಕಾರ್ಡ್‌ ಡಿಸ್ಕ್‌ಗಳ ಉತ್ಪಾದನೆ ಈಗ ಸಂಪೂರ್ಣವಾಗಿ ನಿಂತಿದೆ. ಹೀಗಾಗಿಯೇ ಇರುವ ಹಳೇ ಡಿಸ್ಕ್‌ಗಳನ್ನು ಹುಡುಕಿ ತರಿಸಿ ಮಾರಾಟ ಮಾಡುತ್ತೇನೆ’ ಎಂದು ತಮ್ಮ ಪಯಣವನ್ನು ವಿವರಿಸುತ್ತಾರೆ ಶ್ರೀನಿವಾಸ ಮೂರ್ತಿ.

‘ಹಿಂದೆ ನೂರಾರು ಕಂಪೆನಿಗಳು ಗ್ರಾಮಾಫೋನ್‌ಗಳನ್ನು ತಯಾರಿಸುತ್ತಿದ್ದವು. ಹೀಗಾಗಿ 250ಕ್ಕೂ ಹೆಚ್ಚು ವಿಧದ ಗ್ರಾಮಾಫೋನ್‌ಗಳು ದೊರೆಯುತ್ತಿದ್ದವು. ಅವುಗಳಲ್ಲಿ ಹಾರ್ನ್‌ ಮಾದರಿ ಹಾಗೂ ಪೋರ್ಟಬಲ್‌ ಸೂಟ್‌ಕೇಸ್‌ ಮಾದರಿ ಗ್ರಾಮಾಫೋನ್‌ಗಳು ಹೆಚ್ಚು ಬಳಕೆಯಲ್ಲಿದ್ದವು. ಪ್ರಯಾಣದ ವೇಳೆ ತೆಗೆದುಕೊಂಡು ಹೋಗಬಹುದಾದ ಕ್ಯಾಮೆರಾ ಮಾದರಿಯ ಚಿಕ್ಕ ಗಾತ್ರದ ಪೋರ್ಟಬಲ್‌ ಗ್ರಾಮಾಫೋನ್‌ ಸಹ ಬಳಕೆಯಲ್ಲಿತ್ತು. ಹಾರ್ನ್‌ ಮಾದರಿ ಗ್ರಾಮಾಫೋನ್‌ನಲ್ಲಿ ಹಸಿರು, ಕೆಂಪು ಸೇರಿದಂತೆ ಹಲವು ಬಣ್ಣದ ಮೆಟಲ್‌ ಹಾರ್ನ್‌ಗಳು ಬರುತ್ತಿದ್ದವು. ಸಾಮಾನ್ಯ ಜನರು ತಾಮ್ರಕ್ಕಿಂತ ಹೆಚ್ಚಾಗಿ ಬಣ್ಣ ಬಣ್ಣದ ಮೆಟಲ್‌ನಿಂದ ಮಾಡಿದ ಹಾರ್ನ್‌ ಮಾದರಿ ಗ್ರಾಮಾಫೋನ್‌ಗಳನ್ನು ಖರೀದಿಸುತ್ತಿದ್ದರು.

ಹಿಂದೆ ಬರುತ್ತಿದ್ದ ತಾಮ್ರದ ಹಾರ್ನ್‌ಗಳ ಬೆಲೆ ಮೆಟಲ್‌ ಹಾರ್ನ್‌ಗಳಿಗಿಂತ  ₹50 ಹೆಚ್ಚಿರುತ್ತಿತ್ತು.  ನನ್ನ ತಂದೆ ಮಾರುವಾಗ ₹90ರಿಂದ 150ರವರೆಗೆ ಗ್ರಾಮಾಫೋನ್‌ಗಳನ್ನು ಮಾರುತ್ತಿದ್ದರು’ ಎನ್ನುತ್ತಾರೆ ಅವರು. ‘ಹಾರ್ನ್‌ ಮಾದರಿಗಿಂತ ಹೆಚ್ಚಾಗಿ ಪೋರ್ಟಬಲ್‌ ಗ್ರಾಮಾಫೋನ್‌ನಲ್ಲಿ ಹಾಡುಗಳು ತುಂಬಾ ಚೆನ್ನಾಗಿ ಕೇಳುತ್ತಿದ್ದವು. ಈಗ ಕೇವಲ ಹಾರ್ನ್‌ ಮಾದರಿ ಗ್ರಾಮಾಫೋನ್‌ ಮಾತ್ರ ದೊರೆಯುತ್ತದೆ. ಪೋರ್ಟಬಲ್‌ ಮಾದರಿ ಎಲ್ಲಾದರೂ ಮಾರಾಟಕ್ಕಿದ್ದರೆ ಮಾತ್ರ ತಂದು ಮಾರುತ್ತೇವೆ. ನನ್ನ ಮನೆಯಲ್ಲಿ 7 ರೀತಿಯ ಗ್ರಾಮಾಫೋನ್‌ಗಳಿವೆ. ದಿನದಲ್ಲಿ ಒಮ್ಮೆಯಾದರೂ ಗ್ರಾಮಾಫೋನ್‌ನಲ್ಲಿ ಹಾಡು ಕೇಳದೆ ನಿದ್ದೆ ಬರುವುದಿಲ್ಲ. ಆದರೆ ಟೀವಿ ಹಾವಳಿಯಿಂದಾಗಿ ಮಕ್ಕಳು ನನಗೆ ಹಾಡು ಕೇಳಲು ಬಿಡುವುದಿಲ್ಲ. ಅದಕ್ಕಾಗಿ ಅದನ್ನು ನೋಡಿಯೇ ತೃಪ್ತಿಪಡುತ್ತೇನೆ.

ಸಮಯ ಸಿಕ್ಕಾಗ ಕಿಶೋರ್ ಕುಮಾರ್‌, ಪಿ.ಬಿ.ಶ್ರೀನಿವಾಸ್, ಪಿ. ಕಾಳಿಂಗರಾವ್‌ ಅವರ ಹಾಡುಗಳನ್ನು ಕೇಳುತ್ತೇನೆ. ನನ್ನ ಬಳಿ ಕನ್ನಡ, ಇಂಗ್ಲಿಷ್‌, ತೆಲುಗು ಹಾಗೂ ತಮಿಳಿನ 300ಕ್ಕೂ ಹೆಚ್ಚು ಡಿಸ್ಕ್‌ಗಳ ಸಂಗ್ರಹವಿದೆ. ಅದನ್ನು ಯಾರಿಗೂ ಮಾರುವುದಿಲ್ಲ. ನಾನು ಇರುವವರೆಗೂ ಈ ವೃತ್ತಿಯನ್ನು ನಿಲ್ಲಿಸುವುದಿಲ್ಲ. ಆದರೆ ನನ್ನ ನಂತರ ಏನಾಗುವುದೋ ಗೊತ್ತಿಲ್ಲ. ನನ್ನ ಮಕ್ಕಳಿಗೆ ಇದರಲ್ಲಿ ಕೊಂಚವೂ ಆಸಕ್ತಿ ಇಲ್ಲ’ ಎಂದು ವಿಷಾದ ಬೆರೆತ ನಗೆ ಬೀರುತ್ತಾರೆ ಅವರು. 78 ಸ್ಟ್ಯಾಂಡರ್ಡ್‌ ಆರ್‌ಪಿಎಂ ರೆಕಾರ್ಡ್‌ ಮಾತ್ರ ಗ್ರಾಮಾಫೋನ್‌ನಲ್ಲಿ ಬಳಸುವ ಡಿಸ್ಕ್‌. ಈ ಡಿಸ್ಕ್‌ ಕೆಳಗೆ ಬಿದ್ದು ಒಡೆದರೆ ಅಥವಾ ಮುರಿದರೆ ಮಾತ್ರ ಹಾಳಾಗುತ್ತದೆ. ಅದರ ಮೇಲೆ ಗೆರೆ ಮೂಡಿದರೆ ಅಥವಾ ನೀರು ಬಿದ್ದರೆ ಹಾಳಾಗುವುದಿಲ್ಲ.

ಹೀಗಾಗಿ ಎಷ್ಟು ದಿನಗಳಾದರೂ ಇದರಲ್ಲಿರುವ ಹಾಡುಗಳು ಮಾಸುವುದಿಲ್ಲ. ಇಂತಹ ಡಿಸ್ಕ್‌ಗಳು ಎಲ್ಲೇ ಮಾರಾಟಕ್ಕಿದ್ದರೂ ಖುದ್ದು ತಾವೇ ಹೋಗಿ ಖರೀದಿಸುತ್ತಾರೆ. ಇತ್ತೀಚೆಗಷ್ಟೆ ಪುಣೆಯ ಕಿರ್ಕಿ ಎಂಬಲ್ಲಿ ಪಾರ್ಸಿ ವ್ಯಕ್ತಿಯೊಬ್ಬರ ಬಳಿಯಿಂದ 70ಕ್ಕೂ ಹೆಚ್ಚು ಇಂಗ್ಲಿಷ್‌  ಸಂಗೀತದ 78 ಸ್ಟ್ಯಾಂಡರ್ಡ್‌ ಆರ್‌ಪಿಎಂ ರೆಕಾರ್ಡ್‌ ಅನ್ನು ಖರೀದಿಸಿ ತಂದಿದ್ದಾರೆ. ಸದ್ಯ ತಿಂಗಳಿಗೆ ಹತ್ತರಿಂದ ಹದಿನೈದು ಗ್ರಾಮಾಫೋನ್‌ಗಳು ಇವರಲ್ಲಿ ಬಿಕರಿಯಾಗುತ್ತಿವೆ. ಗ್ರಾಹಕರಿಗೆ  ₹3250ರಿಂದ ₹3500 ರೂಪಾಯಿಗೆ ಮಾರಾಟ ಮಾಡುತ್ತಾರೆ. ಅದರ ಜೊತೆಗೆ ಒಂದು 78 ರೆಕಾರ್ಡರ್‌ ಹಾಗೂ ನೀಡಲ್‌ ಬಾಕ್ಸ್‌ ಉಚಿತವಾಗಿ ನೀಡುತ್ತಾರೆ.  ಇನ್ನು ಗ್ರಾಮಾಫೋನ್‌ ಮಾರುವವರಿಗೆ ಒಂದನ್ನು ₹2500ಕ್ಕೆ ಮಾರಾಟ ಮಾಡುತ್ತಾರೆ. ಹಲವೆಡೆಗಳಿಂದ ಬರುವ ದಲ್ಲಾಳಿಗಳು ಇವರ ಬಳಿ ಗ್ರಾಮಾಫೋನ್ ಖರೀದಿಸಿ ಜನರಿಗೆ ಮಾರಾಟ ಮಾಡುತ್ತಾರೆ.

ಸಿ.ವಿ.ರಾಮನ್‌  ಭೇಟಿ 
1960–65ರ ನಡುವೆ ಒಮ್ಮೆ ನಮ್ಮ ಶಾಪ್‌ಗೆ ಸಿ.ವಿ.ರಾಮನ್‌ ಅವರು ಭೇಟಿ ನೀಡಿದ್ದರು. ಆಗ ನಾನು ಇನ್ನೂ ಶಾಲೆಗೆ ಹೋಗುತ್ತಿದ್ದೆ. ಅಂದು ಶಾಪ್‌ನಲ್ಲಿ ನನ್ನ ತಂದೆ ಇರಲಿಲ್ಲ. ಆಗ ನಮ್ಮ ಶಾಪ್‌ಗೆ ಬಂದ ರಾಮನ್‌ ಅವರು ತಮ್ಮ ಶೋಧನೆಗೆ ಅಗತ್ಯ ಇದ್ದ ‘ವುಡ್‌ ಟ್ರಂಪೆಟ್‌ ಹಾರ್ನ್‌’, ‘ಮೆಟಲ್‌ ಟ್ರಂಪೆಟ್‌ ಹಾರ್ನ್‌’ ಬೇಕೆಂದು ನನ್ನ ಬಳಿ ಕೇಳಿದ್ದರು. ಅಂದು ನನ್ನ ತಂದೆ ಅಂಗಡಿಯಲ್ಲಿ ಇಲ್ಲದ ಕಾರಣ ಹಾರ್ನ್‌ಗಳನ್ನು ಖರೀದಿಸಿದ ಅನುಭವವನ್ನು ವಿಸಿಟರ್ಸ್‌ ಬುಕ್‌ನಲ್ಲಿ ನಮೂದಿಸುವಂತೆ ಅವರನ್ನು ಕೋರಿದ್ದೆ. ಅಂದು ಅವರು ಬರೆದಿರುವ ಅಭಿಪ್ರಾಯದ ಬುಕ್‌ ಇನ್ನೂ ನನ್ನ ಬಳಿ ಇದೆ. ಆದರೆ ಅಂದು ನಮ್ಮ ಅಂಗಡಿಗೆ ಬಂದವರು ಸಿ.ವಿ.ರಾಮನ್‌ ಅವರು ಎಂದು ನನಗೆ ತಿಳಿದೇ ಇರಲಿಲ್ಲ. ಅಷ್ಟೇ ಅಲ್ಲದೇ ನಿಜಲಿಂಗಪ್ಪ, ಕೆ.ಸಿ.ರೆಡ್ಡಿ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ನಮ್ಮ ಶಾಪ್‌ಗೆ ಭೇಟಿ ನೀಡಿದ್ದಾರೆ.
– ಶ್ರೀನಿವಾಸ ಮೂರ್ತಿ, ಮಾಲೀಕ, ಸೀತಾಫೋನ್‌ ಕಂಪೆನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.