ADVERTISEMENT

ಈ ಕಾಲಕ್ಕೂ ಸಂದ ಪೋಲ್ಕಾ ಡಾಟ್ಸ್

ಸುಶೀಲಾ ಡೋಣೂರ
Published 18 ಜನವರಿ 2015, 19:30 IST
Last Updated 18 ಜನವರಿ 2015, 19:30 IST
ಈ ಕಾಲಕ್ಕೂ ಸಂದ ಪೋಲ್ಕಾ ಡಾಟ್ಸ್
ಈ ಕಾಲಕ್ಕೂ ಸಂದ ಪೋಲ್ಕಾ ಡಾಟ್ಸ್   

80, 90ರ ದಶಕದಲ್ಲಿ ಫ್ಯಾಷನ್ ಜಗತ್ತಿನಲ್ಲಿ ಮಿಂಚಿಹೋದ ಕೆಲವು ಉಡುಪುಗಳು ಇದೀಗ ಮರುಹುಟ್ಟು ಪಡೆದು ಬಂದಿವೆ. ಅಂಥವುಗಳಲ್ಲಿ ಹೊಸ ಶೈಲಿಯೊಂದಿಗೆ ಹೊಸ ರೂಪ ಪಡೆದು ಬಂದಿರುವ ಪೋಲ್ಕಾ ಡಾಟ್ಸ್ ಉಡುಗೆಗಳೂ ಸೇರಿವೆ. 

ಚಕ್ಸ್ ಮತ್ತು ಚುಕ್ಕೆಗಳಿರುವ ವಿಶಿಷ್ಟ ಬಗೆಯ ಸೀರೆ, ಟಾಪ್, ಸ್ಕರ್ಟ್, ಶರ್ಟ್, ಜಾಕೆಟ್, ಲೆಗ್ಗಿನ್ಸ್ ಹಿಂದಿನ ಸಾಂಪ್ರದಾಯಿಕ ಮೆರುಗು ನೀಡುವ ಜೊತೆಗೆ ಇಂದಿನ ಹೊಸ ಲುಕ್ ಅನ್ನೂ ಪ್ರತಿನಿಧಿಸುತ್ತವೆ.

ಎಲ್ಲಾ ವರ್ಗದ, ವಯೋಮಾನದ ಮಹಿಳೆಯರನ್ನೂ ಹಿಡಿದಿಟ್ಟುಕೊಳ್ಳಬಹುದಾದ ಗುಣವಿರುವ ಈ ‘ಡಾಟ್’ ಪ್ಯಾಟರ್ನ್ 90ರ ದಶಕದ ಕಮ್‌ಬ್ಯಾಕ್ ಪಟ್ಟಿಗೆ ಲಗ್ಗೆ ಇಟ್ಟಿದೆ. ಸಿನಿಮಾ ತಾರೆಯರಿಂದ ಹಿಡಿದು, ಕಾಲೇಜು ಹುಡುಗಿಯರೂ, ಉದ್ಯೋಗಸ್ಥ ಮಹಿಳೆಯರೂ ಪೋಲ್ಕಾ ಡಾಟ್ ವಸ್ತ್ರಗಳತ್ತ ಮತ್ತೆ ಒಲವು ತೋರುತ್ತಿದ್ದಾರೆ. ಮಕ್ಕಳಿಗೂ ಇವು ಪ್ರಿಯ.

80–90ರ ದಶಕಗಳಲ್ಲಿ ಮ್ಯಾಕ್ಸಿ ಹಾಗೂ ಸೀರೆಗಳ ಮೇಲೆ ಮಾತ್ರ ಮೂಡಿದ್ದ ಪೋಲ್ಕಾ ಡಾಟ್ ಇದೀಗ ಸ್ಕರ್ಟ್, ಟಾಪ್, ಲೆಗ್ಗಿನ್ಸ್‌ಗಳ ಮೇಲೂ ಮೂಡಿ ಸೈ ಎನಿಸಿಕೊಂಡಿವೆ. ಮಾತ್ರವಲ್ಲ, ನೈಟ್‌ ಡ್ರೆಸ್‌ಗಳನ್ನೂ ಅಲಂಕರಿಸಿವೆ.

ಬಿ–ಟೌನ್ ನೆಚ್ಚಿನ ಪೋಲ್ಕಾ
ನಟಿ ವಿದ್ಯಾ ಬಾಲನ್ ತಮ್ಮ ಪಾಶ್ಚಾತ್ಯ ಉಡುಗೆಗಳ ಆಯ್ಕೆಯಲ್ಲಿ ಹಿಂದೆ ಬಿದ್ದ ಉದಾಹರಣೆಗಳು ಇರಬಹುದು. ಆದರೆ ಸಾಂಪ್ರದಾಯಿಕ ತೊಡುಗೆಗಳ ವಿಷಯಕ್ಕೆ ಬಂದಾಗ ಅವರದು ಉತ್ತಮ ಆಯ್ಕೆ. ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಪೋಲ್ಕಾ ಡಾಟ್ ಇರುವ ವಿಶಿಷ್ಟ ಬಗೆಯ ಸೀರೆ ತೊಟ್ಟು ಅವರು ಎಲ್ಲರ ಗಮನ ಸೆಳೆದಿದ್ದರು.

ಚೆಕ್ಸ್ ಸೀರೆಗಳ ಮೋಹವಿರುವ ಕಾಜೋಲ್ ಹಾಗೂ ಮಾಧುರಿ ಸಹ ಅನೇಕ ಕಾರ್ಯಕ್ರಮಗಳಲ್ಲಿ ಪೋಲ್ಕಾ ಡಾಟ್ ಇರುವ ನೆಟೆಡ್ ಸೀರೆಯಲ್ಲಿ ಕಾಣಿಸಿಕೊಂಡಿದ್ದುಂಟು. ಅಲ್ಲದೇ ನಟಿ ತಮನ್ನಾ ಹಾಗೂ ಐಶ್ವರ್ಯ ಸಹ ಅನೇಕ ಕಡೆ ತಮ್ಮ ಡಾಟ್ ಪ್ರೀತಿ ತೋರಿಸಿಕೊಂಡಿದ್ದಿದೆ.

ಸಂಜೆಯ ಶಾಪಿಂಗ್‌ಗೆ
ವಿಶಾಲವಾದ ನಡುಪಟ್ಟಿ ಹೊಂದಿರುವ, ಮೊಳಕಾಲಿನವರೆಗೆ ಇರುವ ಫುಲ್ ಸ್ಕರ್ಟ್, ಒಂದು, ಎರಡು ಅಥವಾ ಮೂರು ಲೇಯರ್ ಇರುವ ಇಲಾಸ್ಟಿಕ್ ಸುತ್ತಳತೆಯ ಲಾಂಗ್ ಹಾಗೂ ಶಾರ್ಟ್ ಸ್ಕರ್ಟ್‌ ಸಂಜೆಯ ಶಾಪಿಂಗ್‌ಗೆ ಕೂಲ್‌ ಅನುಭವ ನೀಡುತ್ತವೆ. ಪ್ರಿಂಟೆಡ್, ನಯವಾದ ತೆಳ್ಳನೆಯ ಬಟ್ಟೆಯಿಂದ ತಯಾರಿಸಲಾಗಿರುವ ತೋಳಿಲ್ಲದ, ಕಾಲರ್ ಇರುವ ಮ್ಯಾಕ್ಸಿಗಳೂ ಸಂಜೆಯ ತಿರುಗಾಟಕ್ಕೆ ಹೆಚ್ಚು ಸೂಕ್ತ.

ಪೋಲ್ಕಾ ಡಾಟ್‌ ಜೊತೆ ಆಭರಣ– ಅಲಂಕಾರ
ಪೋಲ್ಕಾ ಡಾಟ್‌ ವಸ್ತ್ರಗಳನ್ನು ಧರಿಸಿದಾಗ ನೀವು ಮಾಡುವ ಅಲಂಕಾರ ಹಾಗೂ ಧರಿಸುವ ಆಭರಣಕ್ಕೆ ನಿಮ್ಮನ್ನು ಇತರರಿಗಿಂತ ಭಿನ್ನವಾಗಿ ಕಾಣುವಂತೆ ಮಾಡುವಲ್ಲಿ ಮುಖ್ಯ ಪಾತ್ರವಿದೆ.

ಪರಿಕರ: ನೀವು ಧರಿಸಿದ ಬಟ್ಟೆಯ ಒಳಗಿರುವ ಡಾಟ್ಗಳ ಬಣ್ಣಕ್ಕೆ ಹೊಂದುವಂತಹ ಪರಿಕರಗಳನ್ನು ಆಯ್ದುಕೊಳ್ಳುವುದು ಉತ್ತಮ. ಇದರಿಂದ ಏಕರೂಪತೆಯನ್ನು ಮುರಿಯಲು ಸಾಧ್ಯವಾಗುತ್ತದೆ. ಜೊತೆಗೆ ನಿಮ್ಮ ದಿಟ್ಟ ನಿಲುವನ್ನೂ ಇದು ಪ್ರತಿಪಾದಿಸುತ್ತದೆ.

ಬೇಡ ಭಾರೀ ಆಭರಣ: ಪೋಲ್ಕಾ ವಸ್ತ್ರಗಳ ಮಾದರಿಯಲ್ಲಿಯೇ ಒಂದು ರಿಚ್ ಲುಕ್ ಇರುವುದರಿಂದ ಇದಕ್ಕೆ ಭಾರೀ ಆಭರಣಗಳು ಹಾಗೂ ಅತೀ ಹೆಚ್ಚು ಅಲಂಕಾರ ಒಪ್ಪುವುದಿಲ್ಲ. ಆಭರಣಗಳು ಸಾಧ್ಯವಾದಷ್ಟೂ ಹಗುರವಾಗಿರಲಿ, ಅಲಂಕಾರ ಅಷ್ಟೇ ಸರಳವಾಗಿರಲಿ.

ಬೆಲ್ಟ್ ಅಥವಾ ಪಟ್ಟಿ: ಸ್ಕರ್ಟ್, ಮ್ಯಾಕ್ಸಿ, ಗೌನ್‌ ಅಥವಾ ಫ್ರಾಕ್‌ಗಳನ್ನು ಧರಿಸಿದಾಗ ಅದರ ಜೊತೆಗೆ ಸ್ಯಾಟಿನ್, ಲೇಸ್ ಅಥವಾ ವುಲನ್‌ನಿಂದ ತಯಾರಿಸಲಾಗಿರುವ ಫ್ಯಾನ್ಸಿ ಬೆಲ್ಟ್ ಅಥವಾ ನಡುಪಟ್ಟಿಗಳನ್ನ ಧರಿಸುವುದರಿಂದ ಮಾಡ್ ಲುಕ್ ಬರುವ ಜೊತೆಗೆ ಮೈಮಾಟದ ಅಂದ ಹೆಚ್ಚುತ್ತದೆ.

ಸ್ಕಾರ್ಫ್: ನಿಮಗೆ ಒಪ್ಪುವಂತಹ ಅತ್ಯುತ್ತಮ ಸ್ಕಾರ್ಫ್‌ನಿಂದ ಪೋಲ್ಕಾ ಡಾಟ್‌ ಬಟ್ಟೆಗೆ ಹೆಚ್ಚಿನ ಮೆರಗು ನೀಡಬಹುದು. ವಸ್ತ್ರದ ಒಳಗಿರುವ ಡಾಟ್‌ನ ಬಣ್ಣದ್ದೇ ಆಗಿರುವ ಪ್ಲೇನ್ ಸ್ಕಾರ್ಪ್ ಉತ್ತಮ.

ಜಾಕೆಟ್: ನಿಮಗೆ ಬೇಕೆನಿಸಿದರೆ ಸರಳವಾದ ಪ್ಲೇನ್ ಜಾಕೆಟ್‌ ಧರಿಸಬಹುದು. ಜೀನ್ಸ್ ಜಾಕೆಟ್‌ ಕೂಡ ಇದಕ್ಕೆ ಒಪ್ಪುತ್ತದೆ.

ಶೂ: ಸರಳವಾದ ಶೂ, ಹೀಲ್ಸ್, ಪ್ಲಿಪ್ ಪ್ಲಾಪ್, ಫ್ಲ್ಯಾಟ್ ಗಳು ಈ ಉಡುಗೆಯೊಂದಿಗೆ ಸರಿಹೊಂದುತ್ತವೆ.

ಮುತ್ತಿನ ಸರ: ಯಾವುದೇ ಲಾಕೆಟ್‌ ಇಲ್ಲದ, ಕುತ್ತಿಗೆಗೆ ಮಾತ್ರ ಬರುವ ಸರಳವಾದ ಒಂದೇ ಎಳೆಯ ಮುತ್ತಿನ ಸರವನ್ನು ಹಾಕಬಹುದು.
ಬ್ಲೌಸ್‌ ಆಯ್ಕೆ ಚೆಕ್ಸ್ ಅಥವಾ ಚುಕ್ಕೆಗಳಿರುವ ಸೀರೆ ತೊಟ್ಟಾಗ ತೆಳುವಾದ, ಉದ್ದ ತೋಳಿನ ಪ್ಲೇನ್ ಬ್ಲೌಸ್ ಅಥವಾ ಪ್ಲೇನ್ ಸೀರೆ ಉಟ್ಟಾಗ ಚುಕ್ಕೆಗಳಿರುವ ಅಥವಾ ಚೆಕ್ಸ್ ಬ್ಲೌಸ್‌ ಆಯ್ದುಕೊಳ್ಳಿ.

ಸುಂದರ ಕುಪ್ಪಸ ಮಿನಿ ಕಾಲರ್ ಮತ್ತು ಥ್ರೀ–ಫೋರ್ತ್ ತೋಳುಗಳುಳ್ಳ ಉಬ್ಬುಗೆರೆಗಳ ಫ್ಯಾಬ್ರಿಕ್ನಿಂದ ತಯಾರಿಸಲಾಗುವ ಬ್ಲೌಸ್‌ ಎಲ್ಲಾ ರೀತಿಯ ಸೀರೆಗಳಿಗೂ ಹೊಂದುವ ಜೊತೆಗೆ ಸಾಂಪ್ರದಾಯಿಕ, ಪಾಶ್ಚಾತ್ಯ ಎರಡೂ ಪ್ರಕಾರದ ಕಾರ್ಯಕ್ರಮಗಳಿಗೂ ಸಾಥ್ ನೀಡಬಲ್ಲವು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.