ADVERTISEMENT

ಎನ್.ಸಿ.ಸಿ. ಹೆಜ್ಜೆಗುರುತುಗಳು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST

ನ್ಯಾಷನಲ್ ಕೆಡೆಟ್ ಕೋರ್ (ಎನ್.ಸಿ.ಸಿ) ನಮ್ಮ ದೇಶದ ಒಂದು ಪ್ರಮುಖ ಯುವ ಸಂಘಟನೆ. ಇದನ್ನು ಸೆಕೆಂಡ್ ಲೈನ್ ಆಫ್ ಡಿಫೆನ್ಸ್ ಎಂದೇ ಪರಿಗಣಿಸಲಾಗಿದೆ. ಇಂದು ದೇಶದಾದ್ಯಂತ ಅಸ್ತಿತ್ವದಲ್ಲಿರುವ ಈ ಸಂಘಟನೆಗೆ ಐದು ದಶಕಗಳಿಗೂ ಹೆಚ್ಚಿನ ಇತಿಹಾಸವಿದೆ.

1947ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಆಗಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರು ನಮ್ಮ ದೇಶದ ಯುವಜನಾಂಗದ ವ್ಯಕ್ತಿತ್ವವನ್ನು ರೂಪಿಸುವ, ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಒಂದು ಯುವ ಸಂಘಟನೆಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಅದಕ್ಕಾಗಿ ಆಗಿನ ಪ್ರಸಿದ್ಧ ಶಿಕ್ಷಣ ತಜ್ಞರಾಗಿದ್ದ ಡಾ.ಎಚ್.ಎನ್. ಕುಂಜ್ರು ಅವರ ನೇತೃತ್ವದಲ್ಲಿ ಒಂದು ಸಮಿತಿ ನೇಮಿಸಿದರು.

ಈ ಸಮಿತಿಯು ನಮ್ಮ ದೇಶದ ಯುವಕರಲ್ಲಿ ಶಿಸ್ತುಬದ್ಧ ಜೀವನವನ್ನು ರೂಪಿಸಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ಅವರನ್ನು ಭಾರತೀಯ ಸೈನ್ಯಕ್ಕೆ ಸೇರಲು ಸಿದ್ಧಗೊಳಿಸಲು ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಬೇಕಿತ್ತು. ಅದಕ್ಕೆ ಅನುಗುಣವಾಗಿ ಈ ಸಮಿತಿಯು 1948ರ ಮಾರ್ಚ್‌ನಲ್ಲಿ ಒಪ್ಪಿಸಿದ ವರದಿಯನ್ನು ಭಾರತ ಸರ್ಕಾರ ಒಪ್ಪಿತು. ಅದೇ ವರ್ಷ ಪಾರ್ಲಿಮೆಂಟಿನಲ್ಲಿ ಎನ್‌.ಸಿ.ಸಿ. ಕಾಯ್ದೆ ಮತ್ತು ನಿಯಾಮಾವಳಿಗಳಿಗೆ ಒಪ್ಪಿಗೆ ನೀಡಲಾಯಿತು. 1948ರ ಜುಲೈ 15ರಂದು 38,305 ಕೆಡೆಟ್‌ಗಳೊಂದಿಗೆ ಎನ್.ಸಿ.ಸಿ. ಕಾರ್ಯಾರಂಭ ಮಾಡಿತು.

1946ರಲ್ಲಿ, ಮಹಿಳೆಯರಿಗೂ ಮಿಲಿಟರಿಯ ಕೆಲವು ಮೂಲಭೂತ ತರಬೇತಿ ನೀಡುವ ಸಲುವಾಗಿ WOMEN’s AUXILIARY CORPS OF INDIA ಎಂಬ ಸಂಘಟನೆಯನ್ನು ಪ್ರಾರಂಭ ಮಾಡಲಾಗಿತ್ತು. ಎನ್‌.ಸಿ.ಸಿ. ತರಬೇತಿ ಇದಕ್ಕೆ ಪೂರಕವಾಗಿತ್ತಾದ್ದರಿಂದ ವಿದ್ಯಾರ್ಥಿನಿಯರು ಎನ್‌.ಸಿ.ಸಿ. ಸೇರಲು ಹೆಚ್ಚು ಉತ್ಸಾಹ ತೋರಿದರು. ಹೀಗಾಗಿ 1949ರಲ್ಲಿ ಮಹಿಳಾ ಕಾಲೇಜುಗಳಲ್ಲಿ ಬೋಧಕ ವರ್ಗದ ಮಹಿಳೆಯರನ್ನು ಆಯ್ಕೆ ಮಾಡಿ, ಅವರಿಗೆ ತರಬೇತಿ ನೀಡಿ ಎನ್.ಸಿ.ಸಿ ಮಹಿಳಾ ವಿಭಾಗವನ್ನು ಪ್ರಾರಂಭಿಸಲಾಯಿತು. ಎನ್.ಸಿ.ಸಿ.ಯಿಂದ ಭಾರತದ ಸೇನೆಯ ಇತರ ವಿಭಾಗಗಳಿಗೂ ಸೂಕ್ತ ಅಭ್ಯರ್ಥಿಗಳು ದೊರಕಲು ನೆರವಾಗುವಂತೆ 1950ರಲ್ಲಿ ವಾಯುಪಡೆ ವಿಭಾಗವನ್ನು  1952ರಲ್ಲಿ ನೌಕಾಪಡೆ ವಿಭಾಗವನ್ನೂ ಸೇರಿಸಲಾಯಿತು.

ಎನ್.ಸಿ.ಸಿ.ಯ ಶಿಸ್ತಿನ ನಾಲ್ಕು ನಿಯಮಗಳು
1)ಮುಗುಳ್ನಗೆಯೊಂದಿಗೆ ವಿಧೇಯನಾಗಿರು
2)ಸಮಯಪ್ರಜ್ಞೆ ಇರಲಿ
3)ಗೊಣಗದೆ ಕರ್ತವ್ಯ ನಿರ್ವಹಿಸು
4)ನೆಪಗಳನ್ನಾಗಲಿ, ಸುಳ್ಳನ್ನಾಗಲಿ ಹೇಳಬೇಡ

ಎನ್.ಸಿ.ಸಿ.ಯ ಆಡಳಿತ ವ್ಯವಸ್ಥೆ
ಆಡಳಿತದ ದೃಷ್ಟಿಯಿಂದ ಭಾರತದ ಎಲ್ಲ ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನೂ ಒಟ್ಟುಗೂಡಿಸಿ ಹದಿನಾರು ಡೈರೆಕ್ಟೊರೇಟ್‌ಗಳನ್ನಾಗಿ ಮಾಡಲಾಗಿದ್ದು, ಅವೆಲ್ಲವೂ ದೆಹಲಿಯಲ್ಲಿರುವ ಡೈರೆಕ್ಟರ್ ಜನರಲ್ ಅವರ ಆಡಳಿತ ವ್ಯಾಪ್ತಿಗೆ ಒಳಪಡುತ್ತವೆ. ಸಾಮಾನ್ಯವಾಗಿ ಏರ್ ಕಮಾಂಡರ್ ಅಥವಾ ಬ್ರಿಗೇಡಿಯರ್‌ ರ್‍್ಯಾಂಕ್‌ನ ಸೇನಾಧಿಕಾರಿಗಳು ಡೈರೆಕ್ಟೊರೇಟಿನ ಮುಖ್ಯಸ್ಥರಾಗಿರುತ್ತಾರೆ.

ಕರ್ನಾಟಕ ಮತ್ತು ಗೋವಾದಲ್ಲಿರುವ ಡೈರೆಕ್ಟೊರೇಟ್ ಹದಿನಾರು ಡೈರೆಕ್ಟೊರೇಟ್‌ಗಳ ಪೈಕಿ ಒಂದು. ಈಗ ಇದರ ಕೇಂದ್ರ ಕಚೇರಿ ಇರುವುದು ಬೆಂಗಳೂರಿನ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿ.

ಜನವರಿ 26ರಂದು ದೆಹಲಿಯ ರಾಜಪಥ್ ಮಾರ್ಗದಲ್ಲಿ ನಡೆಯುವ ‘ರಿಪಬ್ಲಿಕ್ ಡೇ ಪರೇಡ್‌’ನಲ್ಲಿ ಭಾಗವಹಿಸುವುದು ಬಹುತೇಕ ಎನ್‌.ಸಿ.ಸಿ. ಕೆಡೆಟ್‌ಗಳ ಕನಸು. ಇದಕ್ಕೆ ವಿಶೇಷವಾಗಿ ಆರ್.ಡಿ. ಕ್ಯಾಂಪ್‌ಗಳೆಂಬ ಶಿಬಿರವನ್ನು ನಡೆಸುತ್ತಾರೆ.

ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಎನ್.ಸಿ.ಸಿ. ದಿನವನ್ನು ಆಚರಿಸಲಾಗುತ್ತದೆ. ಬೆಂಗಳೂರಿನಲ್ಲಿ ಪ್ರತಿವರ್ಷವೂ ಸಾಮಾನ್ಯವಾಗಿ ಈ ಕಾರ್ಯಕ್ರಮವು ಎಂ.ಜಿ.ರಸ್ತೆ ಬದಿಗಿರುವ ಮಾಣೇಕ್ ಷಾ ಪರೇಡ್ ಮೈದಾನದಲ್ಲಿ ನಡೆಯುತ್ತದೆ.

ರಾಷ್ಟ್ರಧ್ವಜದಂತೆ ಎನ್‌.ಸಿ.ಸಿ.ಧ್ವಜವೂ ಮೂರು ವರ್ಣಗಳಿಂದ ಕೂಡಿರುತ್ತದೆ. ಇದರಲ್ಲಿ ಕೆಂಪು ಬಣ್ಣವು ಭೂಪಡೆಯನ್ನು ದಟ್ಟನೀಲಿಯು ನೌಕಾಪಡೆಯನ್ನು, ತೆಳು ನೀಲಿಯೂ ವಾಯುಪಡೆಯನ್ನು ಪ್ರತಿನಿಧಿಸುತ್ತದೆ. ನಡುವಿನಲ್ಲಿರುವ ಹೂಗುಚ್ಛದಲ್ಲಿ ಎಡ ಹಾಗೂ ಬಲಕ್ಕೆ ಎಂಟೆಂಟು ಹೂಗಳಿದ್ದು, ಅವು ಹದಿನಾರು ಡೈರೆಕ್ಟೊರೇಟುಗಳನ್ನು ಪ್ರತಿನಿಧಿಸುತ್ತವೆ. ಎನ್.ಸಿ.ಸಿ ಚಿಹ್ನೆಯಲ್ಲಿ ಇದರ ಕೆಳಗೆ ‘ಏಕ್ತಾ ಔರ್ ಅನುಶಾಸನ’ ಎಂಬ ಧ್ಯೇಯವಾಕ್ಯವೂ ಇರುತ್ತದೆ. ‘ಹಮ್ ಸಬ್ ಭಾರತೀಯ ಹೇ’ ಎಂಬುದು ಎನ್‌.ಸಿ.ಸಿ. ಗೀತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.